ಬುಧವಾರ, ಸೆಪ್ಟೆಂಬರ್ 30, 2020
26 °C

ಇವಳು ಬೆಂಗಳೂರಿನವಳು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಳು ಬೆಂಗಳೂರಿನವಳು...!

ಲಂಡನ್ (ಪಿಟಿಐ): ಯಾರಿವಳು...? ಎಂದು ಕೇಳಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಇವಳ ಹೆಸರು `ಮಧುರಾ ಹನಿ~ (ಮಧುರಾ ನಾಗೇಂದ್ರ) ಬೆಂಗಳೂರಿನವಳು!ಶುಕ್ರವಾರ ರಾತ್ರಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಸದಸ್ಯರ ಜತೆ ಪಥಸಂಚಲನದಲ್ಲಿ  ನಡೆದು ಅಚ್ಚರಿಗೆ ಕಾರಣವಾಗಿದ್ದ ಬೆಡಗಿ ಯಾರೆನ್ನುವುದು ಪತ್ತೆಯಾಗಿದೆ.

`ನಿಗೂಢ ಯುವತಿ~ ಎಂದೇ ಈವರೆಗೆ ಕರೆಸಿಕೊಂಡಿದ್ದವಳ ಹೆಸರು ಹಾಗೂ ಅವಳ ಮೂಲ ನೆಲೆಯ ವಿವರವೂ ಅವಳ ಸ್ನೇಹಿತರೊಬ್ಬರಿಂದ ಬಯಲಾಗಿದೆ.`ಅವಳು ನಮ್ಮ ಕಾಲೇಜು ಗೆಳತಿ. ಅಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಈಗ ಇಂಗ್ಲೆಂಡ್‌ನಲ್ಲಿ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಳೆ. ಅವಳ ಚಿತ್ರವನ್ನು ಕಂಡ ನಮ್ಮ ಎಲ್ಲ ಕಾಲೇಜು ಸ್ನೇಹಿತರು ಅಚ್ಚರಿಪಟ್ಟೆವು~ ಎಂದು ಮಧುರಾ ಸ್ನೇಹಿತರು ಹೇಳಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.ತಾನು ಒಲಿಂಪಿಕ್ ತಂಡದೊಂದಿಗೆ ಇದ್ದ ಚಿತ್ರಗಳನ್ನು ಸ್ವತಃ `ಮಧುರಾ ಹನಿ~ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಳು. ಆದರೆ ಭಾರತ ತಂಡದೊಂದಿಗೆ ಕಾಣಿಸಿಕೊಂಡ ಘಟನೆಯು ವಿವಾದದ ಸ್ವರೂಪ ಪಡೆದ ನಂತರ ಅವಳು ತನ್ನ ಫೇಸ್‌ಬುಕ್ ಅಕೌಂಟ್ ಅನ್ನು ಮುಚ್ಚಿಹಾಕಿದ್ದಾಳೆಂದು ಅವಳ ಸ್ನೇಹಿತರೇ ತಿಳಿಸಿದ್ದಾರೆ.ಇನ್ನೂ ಆಸಕ್ತಿಕರ ವಿಷಯವೆಂದರೆ ಮಧುರಾ ತಾನು ಪಡೆದಿದ್ದ ಒಲಿಂಪಿಕ್ ಪಾಸ್ ಚಿತ್ರವನ್ನು ಕೂಡ ಫೇಸ್‌ಬುಕ್ ವಾಲ್‌ನಲ್ಲಿ ಅಂಟಿಸಿದ್ದಳು. ಅವಳ ಬಗ್ಗೆ ಸದ್ಯಕ್ಕೆ ಇಷ್ಟು ವಿವರಗಳು ಲಭ್ಯವಾಗಿವೆ. ಆದರೆ ಭಾರತ ತಂಡದ ಜತೆಗಿದ್ದ ಯುವತಿ ಇವಳೇ ಎನ್ನುವುದನ್ನು ಸಂಘಟನಾ ಸಮಿತಿಯು ಖಚಿತ ಪಡಿಸಬೇಕಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ ತಂಡದ ಉಸ್ತುವಾರಿ ಚೆಫ್ ಡಿ ಮಿಷನ್ ಪಿ.ಕೆ.ಮುರಳೀಧರನ್ ರಾಜಾ ಅವರು `ನಮಗೂ ವಿಷಯ ಮಾಧ್ಯಮಗಳಿಂದ ತಿಳಿದಿದೆ. ಆದರೆ ನಾವು ಲಂಡನ್ ಒಲಿಂಪಿಕ್ ಸಂಘಟನಾ ಸಮಿತಿಯಿಂದ ಅಧಿಕೃತವಾಗಿ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ~ ಎಂದಿದ್ದಾರೆ.`ನಮಗೆ ಅದೊಂದು ಆಘಾತಕಾರಿ ಹಾಗೂ ಮುಜುಗರದ ಘಟನೆಯಾಗಿದೆ. ಆದ್ದರಿಂದಲೇ ಕಟುವಾದ ಪದಗಳಲ್ಲಿ ಸಂಘಟನಾ ಸಮಿತಿಗೆ ದೂರು ನೀಡಿದ್ದೇವೆ~ ಎಂದ ರಾಜಾ `ಮಾಧ್ಯಮಗಳಲ್ಲಿ ಆ ಯುವತಿಯ ಬಗ್ಗೆ ಬಂದಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಂಘಟನಾ ಸಮಿತಿಯಿಂದ ಖಚಿತವಾದ ಉತ್ತರ ಸಿಕ್ಕ ನಂತರವೇ ಆ ಕುರಿತು ಮಾತನಾಡುತ್ತೇನೆ~ ಎಂದು ಹೇಳಿದರು.ತಂಡದ ಸದಸ್ಯೆ ಅಲ್ಲದವಳು ಪಥಸಂಚಲನದಲ್ಲಿ ಕಾಣಿಸಿ ಕೊಂಡಿದ್ದರಿಂದ ಆ ಕ್ಷಣದ ಸೊಗಸು ಹದಗೆಟ್ಟು ಹೋಯಿತು ಎನ್ನುವುದು ಭಾರತ ತಂಡದ ಸದಸ್ಯರ ಅಭಿಪ್ರಾಯ. ದೇಶದ ಕ್ರೀಡಾಪಟುಗಳು ಮಿಂಚ ಬೇಕಾಗಿದ್ದ ಪಥಸಂಚಲನದ ಚಿತ್ರದಲ್ಲಿ ಯಾರೋ ಒಬ್ಬಳು ಮಹತ್ವ ಪಡೆಯುವಂತಾಗಿದ್ದು ಎಲ್ಲರಿಗೂ ಬೇಸರವಾಗುವಂತೆ ಮಾಡಿದೆ.`ನಮಗಂತೂ ಗೊತ್ತಿಲ್ಲ ಅವಳು ಯಾರೆಂದು. ಆ ಹುಡುಗಿಯು ದೇಶದ ಶ್ರೇಷ್ಠ ಕ್ರೀಡಾಪಟುಗಳ ಜೊತೆಗೆ ನಡೆದಳು ಎನ್ನುವುದೇ ದೊಡ್ಡ ಅವಮಾನ~ ಎಂದಿರುವ ರಾಜಾ `ವ್ಯವಸ್ಥಿತವಾಗಿ ರೂಪಿಸಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಥದೊಂದು ಘಟನೆ ನಡೆದಿದ್ದೇ ಅಚ್ಚರಿ. ಎಲ್ಲ ಪಾಸ್‌ಗಳ ಪರಿಶೀಲನೆ ನಂತರವೇ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಅವಕಾಶ ನೀಡಿದ್ದು.ಆದರೆ ಅದು ಹೇಗೆ ಅವಳು ನುಸುಳಿ ಬಂದಳು ಎನ್ನುವುದೇ ನಮ್ಮನ್ನೂ ಕಾಡುತ್ತಿರುವ ಪ್ರಶ್ನೆ~ ಎಂದು ನುಡಿದರು.

ಒಲಿಂಪಿಕ್ ಕೂಟವನ್ನು ವರದಿ ಮಾಡಲು ಭಾರತದಿಂದ ಬಂದಿರುವ ವರದಿಗಾರರು ಈ ಬಗ್ಗೆ ತಮಗೆ ಅದೇ ರಾತ್ರಿ ಪ್ರಶ್ನಿಸಿದ್ದರು. ಆಗ ತಮ್ಮಲ್ಲಿಯೂ ಉತ್ತರ ಇರಲಿಲ್ಲವೆಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.