ಗುರುವಾರ , ಮೇ 26, 2022
28 °C

ಇಸ್ರೇಲ್ ವಿಜ್ಞಾನಿಗೆ ಉನ್ನತ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಮ್, (ಎಪಿ): ಈಗಾಗಲೇ ವೈದ್ಯಕೀಯ ಮತ್ತು ಭೌತಶಾಸ್ತ್ರ ಕ್ಷೇತ್ರಗಳ ವಿಜ್ಞಾನಿಗಳಿಗೆ ನೊಬೆಲ್ ಘೋಷಿಸಿರುವ ದಿ ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ಬುಧವಾರ ರಾಸಾಯನಿಕ ಶಾಸ್ತ್ರ ಕ್ಷೇತ್ರದ ಪ್ರಶಸ್ತಿ ಪ್ರಕಟಿಸಿದೆ. ಇಸ್ರೇಲ್‌ನ ವಿಜ್ಞಾನಿ ಡೇನಿಯಲ್ ಶೆಚಮನ್ ಅವರು ಪ್ರಸಕ್ತ ವರ್ಷದ ರಾಸಾಯನಿಕಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಈ ಮೊದಲು ಅಸಾಧ್ಯವೆಂದು ನಂಬಲಾಗಿದ್ದ ಸ್ಫಟಿಕದ ಪರಮಾಣು ರಚನೆ, ವಿನ್ಯಾಸದ ಕುರಿತು ನಡೆಸಿದ ಸಂಶೋಧನೆ ಅವರಿಗೆ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ತಂದುಕೊಟ್ಟಿದೆ. 1982ರಲ್ಲಿ ಡೇನಿಯಲ್ ಮಂಡಿಸಿದ್ದ ಇದೇ ವಿಷಯ ವಿಜ್ಞಾನ ಕ್ಷೇತ್ರದ ಹಲವರಿಂದ ವ್ಯಾಪಕ ಟೀಕೆಗೆ ಒಳಗಾಗಿತ್ತು. ಇನ್ನೂ ವಿಚಿತ್ರವೆಂದರೆ ಇದೇ ಕಾರಣಕ್ಕಾಗಿ ಅವರನ್ನು ಸಂಶೋಧನಾ ತಂಡದಿಂದ ಕೈಬಿಡಲಾಗಿತ್ತು.ಸ್ಫಟಿಕದಲ್ಲಿಯ ಪರಮಾಣುಗಳು ಒಂದೇ ರೀತಿ, ವಿನ್ಯಾಸದಲ್ಲಿರುತ್ತವೆ ಎಂಬ ಸ್ಥಾಪಿತ ವಾದವನ್ನು ಸುಳ್ಳು ಮಾಡಿದ ಡೇನಿಯಲ್ ಸ್ಫಟಿಕದಲ್ಲಿಯ ಪರಮಾಣು ರಚನೆ ಚದುರಿದಂತೆ ವಿಭಿನ್ನವಾಗಿರುತ್ತದೆ. ಅವುಗಳ ವಿನ್ಯಾಸ ಪುನಾರಾವರ್ತನೆಗೊಳ್ಳುವುದಿಲ್ಲ ಎಂದು ಕರಾರುವಕ್ಕಾಗಿ ವಾದ ಮಂಡಿಸಿದ್ದರು. ಇಸ್ರೇಲ್‌ನ ಹೈಫಾ ನಗರದ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಧ್ಯಾಪಕರಾಗಿರುವ ಅವರು ತಮಗೆ ನೊಬೆಲ್ ದೊರೆತಿರುವುದು ಒಂದು ಅದ್ಭುತ ಹಾಗೂ ವರ್ಣಿಸಲು ಅಸಾಧ್ಯವಾದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಅಲ್ಯೂಮಿನಿಯಂ ಮತ್ತು ಮ್ಯಾಂಗನೀಸ್ ಮಿಶ್ರಣದ ಪರಮಾಣು ರಚನೆ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅವರು ಮರಳಿನ ಕಣಗಳಂತೆ ಹರಡಿದ ಅಣುಗಳನ್ನು ಪತ್ತೆ ಹಚ್ಚಿದ್ದರು. ಆದರೆ, ಈ ವಾದವನ್ನು ಇತರ ವಿಜ್ಞಾನಿಗಳು ಒಪ್ಪಿರಲಿಲ್ಲ. ಬದಲಾಗಿ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಡ ಹೇರಿದ್ದರು. ಆದರೆ, ಇದಕ್ಕೆ ಮಣಿಯದ ಡೇನಿಯಲ್ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಪ್ರಯೋಗಶಾಲೆಯಲ್ಲಿಯೇ ಕೃತಕ ಕ್ವಾಸಿಕ್ರಿಸ್ಟಲ್ಸ್ (ಸ್ಫಟಿಕ) ತಯಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.