ಬುಧವಾರ, ಜೂನ್ 16, 2021
21 °C

ಇ– ಟೆಂಡರ್‌ಗೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಇ– ಟೆಂಡರ್‌ ಪದ್ಧತಿಯನ್ನು ವಿರೋಧಿಸಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಾಲ್ಲೂಕಿನ ತೆಂಗು ಬೆಳೆಗಾರರು ಹಾಗೂ ವರ್ತಕರು ಮಂಗಳವಾರ ಪ್ರತಿಭಟನೆ ನಡೆಸಿ ಮೊದಲಿನ ಪದ್ಧತಿಯನ್ನೇ ಮುಂದುವರಿಸುವಂತೆ ಆಗ್ರಹಿಸಿದರು.ಸರ್ಕಾರ ನೂತನವಾಗಿ ತಂದಿರುವ ಕೃಷಿ ಮಾರಾಟ ನೀತಿ– 2013 ಇ– ಪದ್ಧತಿಯಂತೆ ರೈತರು ಕೊಬ್ಬರಿ ಹರಾಜಿನಲ್ಲಿ ಭಾಗವಹಿಸಲು ಆಗುವುದಿಲ್ಲ. ಏಕೆಂದರೆ, ರೈತರು ಇನ್ನೂ ಆರ್ಥಿಕ ಸಬಲೀಕರಣ ಹೊಂದಿಲ್ಲ. ನಮ್ಮಲ್ಲಿ ಇನ್ನೂ ಬಡ ರೈತರಿದ್ದಾರೆ. ಸಣ್ಣ– ಪುಟ್ಟ ರೈತರು ಇ– ಟೆಂಡರ್‌ ಪದ್ಧತಿಯಲ್ಲಿ ಕೊಬ್ಬರಿ ಮಾರಾಟ ಮಾಡಲು ಆಗುವುದಿಲ್ಲ. ಹರಾಜು ಇಲ್ಲದಿದ್ದರೆ ಆ ರೈತ ಕೊಬ್ಬರಿಯನ್ನು ಯಾರಿಗೆ ಮಾರಾಟ ಮಾಡಬೇಕು ಎಂದು ರೈತರು ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಎಪಿಎಂಸಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ವರ್ತಕರಾದ ಜಿವಿಟಿ ಬಸವರಾಜು, ಜಿ.ವಿ. ಬಸವರಾಜು, ಮಹಾವೀರ್‌ ಮಾತನಾಡಿ, ರೈತರು ಬೆಳೆದ ಬೆಳೆಗೆ ಹಾಗೂ ಕೊಬ್ಬರಿಗೆ ಸರ್ಕಾರ ವೈಜ್ಞಾನಿಕ ಬೆಲೆ ನೀಡಿದರೆ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಿ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗುತ್ತದೆ . ಅಲ್ಲದೆ, ವರ್ತಕರು ಮತ್ತು ರೈತರ ನಡುವೆ ಉತ್ತಮ ವ್ಯವಹಾರ ಸಂಬಂಧ ಇದ್ದು ಸಾಲ– ಸೌಲಭ್ಯ ದೊರಕುತ್ತಿತ್ತು. ಆದರೆ ನೂತನ ಪದ್ಧತಿಯಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ದೂರಿದರು.ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಮತ್ತು ಕಾರ್ಯದರ್ಶಿ ಪಿ.ಆರ್‌. ಮಂಜುನಾಥ್‌ ಮಾತನಾಡಿ, ನಾವು ಇ– ಟೆಂಡರ್‌ ಪದ್ಧತಿಯನ್ನು ನಿಲ್ಲಿಸಲು ಬರುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.ಇದಕ್ಕೆ ಒಪ್ಪದ ರೈತರು ಇ– ಟೆಂಡರ್‌ ನಮಗೆ ಬೇಡವೇ ಬೇಡ, ಇದು ರೈತರಿಗೆ ಮಾರಕ ಎಂದು ಜೋರಾಗಿ ಕೂಗುತ್ತ ಮಾರುಕಟ್ಟೆ ಆವರಣದಿಂದ ಹೊರ ನಡೆದರು. ವರ್ತಕರಾದ ಕೆ.ವಿ. ನಿರ್ವಾಣಸ್ವಾಮಿ, ಕೆ. ರಮೇಶ್‌, ಟಿ.ಎಸ್‌.  ರುದ್ರಯ್ಯ, ರೈತರಾದ ಡಿ.ಪಿ. ಮಲ್ಲಪ್ಪ, ಮಲ್ಲಿಕಾರ್ಜುನಪ್ಪ, ಮಾಗೇನಹಳ್ಳಿ ಶಿವಮೂರ್ತಿ, ಬಸವರಾಜು, ಚಂದ್ರಪ್ಪ, ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.