ಕಬ್ಬಿಣ ಮತ್ತಿತರ ಖನಿಜಗಳ ಗಣಿಗಾರಿಕೆಯಂತೆ ಕಲ್ಲಿನ ಗಣಿಗಾರಿಕೆಯೂ ಜನಜೀವನ ಮತ್ತು ಪರಿಸರದ ಮೇಲೆ ತೀವ್ರ ಹಾನಿ ಮಾಡುತ್ತಿರುವ ವರದಿಗಳು ಚಿಕ್ಕಬಳ್ಳಾಪುರ ತಾಲೂಕಿನಿಂದ ಬಂದಿವೆ. ಕಲ್ಲು ಗಣಿಗಾರಿಕೆ ನಡೆಸುವಾಗ ಸಿಡಿಮದ್ದಿನ ಸ್ಫೋಟ, ಹರಡುವ ದೂಳು, ಸಾಗಣೆ ಲಾರಿಗಳಿಂದ ರಸ್ತೆಗಳ ಮೇಲೆ ಬೀಳುವ ಒತ್ತಡ, ಸುತ್ತ ಹರಡುವ ಕಲ್ಲಿನ ಪುಡಿ ಇತ್ಯಾದಿ ಸಮಸ್ಯೆಗಳು ತಾಲೂಕಿನ ಮೂವತ್ತಕ್ಕೂ ಹೆಚ್ಚಿನ ಹಳ್ಳಿಗಳ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಸಂಗತಿ ನಿರ್ಲಕ್ಷಿಸುವಂಥದ್ದಲ್ಲ. ಕಟ್ಟಡ ನಿರ್ಮಾಣಕ್ಕೆ ವಿವಿಧ ರೂಪಗಳಲ್ಲಿ ಬೇಕಾಗಿರುವ ಕಲ್ಲು ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಲಭ್ಯವಿದೆ. ಮನೆಗಳ ಅಡಿಪಾಯವೂ ಸೇರಿದಂತೆ ನಿರ್ಮಾಣದ ಹಲವು ಹಂತಗಳಲ್ಲಿ ಕಲ್ಲಿನ ಬಳಕೆ ಇರುವುದರಿಂದ ಬಂಡೆಗಳಿಂದ ಬೇರ್ಪಡಿಸಿ, ದಿಂಡು, ಚಪ್ಪಡಿ, ಜೆಲ್ಲಿ, ಪುಡಿ ಜೆಲ್ಲಿ ಮೊದಲಾಗಿ ವಿವಿಧ ಆಕಾರ, ಗಾತ್ರದಲ್ಲಿ ಕಲ್ಲನ್ನು ಸಂಸ್ಕರಿಸಿಕೊಳ್ಳುವ ಚಟುವಟಿಕೆಗಳಿಂದ ಸುತ್ತಲಿನ ಪರಿಸರ ಕಲ್ಲಿನ ದೂಳಿನಿಂದ ಕಲುಷಿತಗೊಳ್ಳುವುದು ಸಹಜ. ನಿರ್ದಿಷ್ಟ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೂ ಅದರಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿರುತ್ತದೆ. ಉದ್ಯಮಿಗಳ ಲಾಭಕ್ಕಾಗಿ ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲ ಜನರ ಬದುಕು ಅಸ್ತವ್ಯಸ್ತಗೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡಬಾರದು. ಜನ ಮತ್ತು ಕೃಷಿ ಭೂಮಿಗೆ ಹಾನಿಯಾಗುವ ಕಡೆ ಗಣಿಗಾರಿಕೆಯನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು.

ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವಾಗ ಅದರಿಂದ ಜನತೆಯ ಮೇಲೆ ಆಗುವ ಪರಿಣಾಮವನ್ನು ಲಕ್ಷಿಸಿದಂತೆ ತೋರುತ್ತಿಲ್ಲ. ಹೈಕೋರ್ಟ್ ಆದೇಶಕ್ಕೂ ಅದು ಬೆಲೆ ಕೊಡುವುದಿಲ್ಲ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ತನ್ನ ಆದೇಶವಿದ್ದರೂ ಅದನ್ನು ಲಕ್ಷಿಸದೆ ಜೆಲ್ಲಿ ಕಲ್ಲು ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದ ಸರ್ಕಾರದ ನಿರ್ಧಾರಕ್ಕೆ ಈಚೆಗೆ ಹೈಕೋರ್ಟ್ ವಿಭಾಗೀಯ ಪೀಠ ತೀವ್ರವಾಗಿ ಆಕ್ಷೇಪಿಸಿದ್ದು ಇದಕ್ಕೆ ನಿದರ್ಶನ. ಕಲ್ಲು ಗಣಿಗಾರಿಕೆಯಲ್ಲಿ ಯಂತ್ರಗಳ ಬಳಕೆಯೇನೋ ಬಂದಿದೆ. ಅವು ಮಾಲಿನ್ಯ ತಡೆಗೆ ನೆರವಾಗುವಂಥವಲ್ಲ. ಇದಕ್ಕೆ ಪರಿಹಾರವೆಂದರೆ ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಿರುವುದು. ಸಿಡಿಮದ್ದಿನ ಸ್ಫೋಟದಿಂದ ಮನೆಗಳಿಗೆ ಹಾನಿಯಾದರೆ ಅದಕ್ಕೆ ಗಣಿ ಉದ್ಯಮಿಗಳಿಂದ ಪರಿಹಾರವನ್ನು ಕೊಡಿಸುವಂತೆ ಮಾಡುವುದು. ಅದಿರು ಗಣಿಗಾರಿಕೆಯಿಂದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪರಿಸರದ ಮೇಲೆ ಆಗಿರುವ ಹಾನಿ ಸುಪ್ರೀಂ ಕೋರ್ಟ್ನ ಗಮನಕ್ಕೆ ಬಂದಿದ್ದರೂ ಅದು ರಾಜ್ಯ ಸರ್ಕಾರಕ್ಕೆ ತಲುಪಿದಂತಿಲ್ಲ; ಬಂದಿದ್ದರೆ, ಅದು ಗಣಿಗಾರಿಕೆ ನಡೆಸಿದ ಕಂಪೆನಿಗಳಿಂದ ದಂಡ ಪಡೆದು ಅರಣ್ಯ ಬೆಳೆಸುವ ಪ್ರಕ್ರಿಯೆಯನ್ನು ಆರಂಭಿಸಬೇಕಿತ್ತು. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ 16ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದ್ದನ್ನು ಎತ್ತಿ ಹೇಳಿದ ಲೋಕಾಯುಕ್ತ ವರದಿಯನ್ನೇ ಮೂಲೆಗುಂಪು ಮಾಡುವ ಹುನ್ನಾರದಲ್ಲಿರುವ ರಾಜ್ಯ ಸರ್ಕಾರಕ್ಕೆ, ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಹಾನಿಯ ಅರಿವು ಮೂಡುವುದೆಂದು ನಿರೀಕ್ಷಿಸಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.