ಭಾನುವಾರ, ಮೇ 22, 2022
22 °C

ಈಗ ಶಾಲೆಯ ನಂತರವೂ ಶಾಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಎಸ್.ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ನಗರದ ಶಾಹೀನ್ ಪದಪೂರ್ವ ಕಾಲೇಜು ‘ಶಾಲೆಯ ನಂತರ ಶಾಲೆ’ ಎಂಬ ನೂತನ ಯೋಜನೆ ಜಾರಿಗೆ ತರುವ ಮೂಲಕ ಗಮನ ಸೆಳೆದಿದೆ.ಕಳೆದ ಕೆಲ ವರ್ಷಗಳಿಂದ ಜಿಲ್ಲೆ ಕಾಯಂ ಕೊನೆಯ ಸ್ಥಾನ ಗಳಿಸುತ್ತಿದ್ದರಿಂದ ಫಲಿತಾಂಶ ಪ್ರಕಟವಾದಾಗಲೆಲ್ಲ ಮೇಲಿನಿಂದ ಕೆಳಕ್ಕೆ ಹೋಗುವ ಬದಲು ಕೆಳಗಿನಿಂದ ಮೇಲಕ್ಕೆ ಹುಡುಕುತ್ತ ಹೋಗುವ ಸ್ಥಿತಿ ಇದೆ.ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶ ಕುಸಿತ ಆಗುತ್ತಿರುವುದು ಜಿಲ್ಲೆಯ ನಾಗರಿಕರಲ್ಲಿ ಕಳವಳ ಮೂಡಿಸಿದೆ. ಜಿಲ್ಲಾಡಳಿತ ಜನರ ಭಾವನೆಗಳಿಗೆ ಸ್ಪಂದಿಸಿ ಕಳೆದ ಎರಡ್ಮೂರು ವರ್ಷಗಳಿಂದ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಂಡಿದೆ. ಅದರ ಪರಿಣಾಮ ಫಲಿತಾಂಶದಲ್ಲಿ ತುಸು ಏರಿಕೆ ಆಗಿದೆ. ಆದರೆ, ನಿರೀಕ್ಷಿತ ಬದಲಾವಣೆ ಆಗಿಲ್ಲ.ಎಸ್.ಎಸ್.ಎಲ್.ಸಿ. ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ರಾತ್ರಿ ತರಗತಿ ನಡೆಸಲಾಗುತ್ತಿದೆ. ಈ ವರ್ಷ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಇದಕ್ಕಾಗಿಯೇ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಹೆಚ್ಚಿನ ಒತ್ತು ನೀಡಿದ್ದಾರೆ.ಫಲಿತಾಂಶ ಸುಧಾರಣೆಗೆ ನಡೆಯುತ್ತಿರುವ ಪ್ರಯತ್ನಗಳಿಗೆ ಸಮಾನ ಮನಸ್ಕರೊಂದಿಗೆ ಶಾಹೀನ್ ಶಿಕ್ಷಣ ಸಂಸ್ಥೆಯು ‘ಶಾಲೆಯ ನಂತರ ಶಾಲೆ’ ಯೋಜನೆ ಮೂಲಕ ಕೈಜೋಡಿಸಿದೆ. ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರು ಸಮಾನ ಮನಸ್ಕರ ಸಹಯೋಗದೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಯೋಜನೆ ರೂಪಿಸಿ ಕಳೆದ ಮೂರು ತಿಂಗಳಿಂದ ಅನುಷ್ಠಾನಕ್ಕೆ ತಂದಿದ್ದಾರೆ.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ಓದುತ್ತಿರುವ ಮಕ್ಕಳನ್ನು ಆಯ್ಕೆ ಮಾಡಿ ಸಂಜೆ 6.30 ರಿಂದ 9 ರವರೆಗೆ ಉಚಿತವಾಗಿ ಕನ್ನಡ, ಇಂಗ್ಲೀಷ್, ಗಣಿತ ಹಾಗೂ ಉರ್ದು ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.ಆಯಾ ಶಾಲೆಗಳಲ್ಲಿ ಪ್ರತಿ ವಿಷಯಗಳ ಕಿರುಪರೀಕ್ಷೆ ನಡೆಸಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಯೋಜನೆಗೆ ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸುತ್ತಾರೆ ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್.ತರಬೇತಿಗಾಗಿ ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ. ಬೀದರ್‌ನಲ್ಲಿ ಮೂರು ಕೇಂದ್ರಗಳಲ್ಲಿ ಹಾಗೂ ಬಗದಲ್ ಮತ್ತು ಕಮಠಾಣದಲ್ಲಿ ತಲಾ ಒಂದು ಕೇಂದ್ರಗಳನ್ನು ಆರಂಭಿಸಿ ಒಟ್ಟು 500 ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿದೆ. 8ನೇ ತರಗತಿಯಿಂದಲೇ ಮಕ್ಕಳನ್ನು ಎಲ್ಲ ವಿಷಯಗಳಲ್ಲಿ ಪರಿಪೂರ್ಣಗೊಳಿಸಿದರೆ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳುತ್ತಾರೆ.ಜಿಲ್ಲೆಯಲ್ಲಿ 42 ಉರ್ದು ಹಾಗೂ 47 ಮರಾಠಿ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳ ಶೇ. 60 ರಷ್ಟು ಮಕ್ಕಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇವರನ್ನು ಕನ್ನಡದಲ್ಲಿ ಪರಿಪೂರ್ಣಗೊಳಿಸಿದರೆ ಫಲಿತಾಂಶ ಸುಧಾರಣೆಗೆ ನೆರವಾಗುತ್ತದೆ ಎಂದು ಶಿಕ್ಷಕಿ ಇಂದುಮತಿ ತಿಳಿಸುತ್ತಾರೆ.ರಾತ್ರಿ ವೇಳೆ ವಿಶೇಷ ತರಗತಿ ನಡೆಸುತ್ತಿದ್ದರಿಂದ ಕನ್ನಡ, ಇಂಗ್ಲೀಷ್, ಗಣಿತ ಹಾಗೂ ಉರ್ದು ವಿಷಯಗಳು ಮನನ ಆಗುತ್ತಿವೆ ಎಂದು ತರಬೇತಿ ವಿದ್ಯಾರ್ಥಿಗಳಾದ ಶೇಕ್ ಮೆಹರಾನ್, ಇರ್ಫಾನ್ ಬೇಗ್ ಅಭಿಪ್ರಾಯಪಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.