ಗುರುವಾರ , ಜೂನ್ 4, 2020
27 °C

ಈಜಿಪ್ಟ್: ಚಳವಳಿ ತೀವ್ರ, ಗೋಲಿಬಾರ್‌ಗೆ 10 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜಿಪ್ಟ್: ಚಳವಳಿ ತೀವ್ರ, ಗೋಲಿಬಾರ್‌ಗೆ 10 ಬಲಿ

ಕೈರೊ (ಐಎಎನ್‌ಎಸ್): ಈಜಿಪ್ಟ್‌ನಲ್ಲಿ ಅಧ್ಯಕ್ಷ ಹೊಸ್ನಿ ಮುಬಾರಕ್ ಆಡಳಿತವನ್ನು ವಿರೋಧಿಸಿ ಜನಾಕ್ರೋಶ ತೀವ್ರಗೊಂಡಿದ್ದು, ಭಾನುವಾರ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಜನರನ್ನು ಚದುರಿಸಲು ನಡೆಸಿದ ಗೋಲಿಬಾರ್‌ಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.ಇಲ್ಲಿನ ಒಳಾಡಳಿತ ಸಚಿವಾಲಯ ಕಟ್ಟಡ ಸಂಕೀರ್ಣದ ಮುಂಭಾಗದಲ್ಲಿ ಈ ಸಾವು ನೋವು ಸಂಭವಿಸಿದೆ. ಸರ್ಕಾರ ವಿರೋಧಿ ಹೋರಾಟ ಇದೀಗ  ದರೋಡೆ, ದೊಂಬಿ, ಅರಾಜಕತೆಯತ್ತ ತಿರುಗಿದೆ.ಒಟ್ಟು 150 ಬಲಿ: ಸರ್ಕಾರದ ವಿರುದ್ಧ ಜನತೆಯ ಪ್ರತಿಭಟನೆ, ಹಿಂಸಾಚಾರ ಮಂಗಳವಾರದಿಂದ ಭುಗಿಲೆದ್ದ ಬಳಿ ಇದುವರೆಗೆ 150 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರದವರೆಗೆ 7, ಶುಕ್ರವಾರದಂದು 62, ಶನಿವಾರ 33 ಮಂದಿ ಹಿಂಸಾಚಾರ ಮತ್ತು ಘರ್ಷಣೆಗೆ ಬಲಿಯಾಗಿದ್ದಾರೆ.ನಗರ ಮಧ್ಯದಲ್ಲಿ ಇರುವ ಸಚಿವಾಲಯ ಕಟ್ಟಡಕ್ಕೆ ಭಾನುವಾರ ಬೆಳಗ್ಗೆ ಉದ್ವಿಗ್ನ ಜನರ ಗುಂಪು ಮುತ್ತಿಗೆ ಹಾಕಿತ್ತು. ಗುಂಪನ್ನು ಚದುರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಗುಂಡುಹಾರಿಸಿದ್ದರು. ಇದರಿಂದ 10 ಮಂದಿ ಸತ್ತರು ಎಂದು ‘ಅಲ್ ಜಜೀರಾ’ ಟಿವಿ ವರದಿ ಮಾಡಿದೆ.ರಾಜೀನಾಮೆಗೆ ಪಟ್ಟು: ಹೊಸ್ನಿ ಆಳ್ವಿಕೆ ವಿರುದ್ಧ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಜನರ ಪ್ರತಿಭಟನೆ ಮತ್ತಷ್ಟು ತೀವ್ರವಾಗಿದೆ. ಮೂರು ದಶಕಗಳಿಂದ ನಿರಂಕುಶ ಆಡಳಿತ ನಡೆಸುತ್ತಿರುವ ಹೊಸ್ನಿ ರಾಜೀನಾಮೆ ನೀಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.ಪೊಲೀಸರಿಂದಲೇ ಲೂಟಿ: ಜನರು ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿದ್ದರೆ, ಈ ಸಂದರ್ಭವನ್ನು ಹಣ, ಬೆಲೆಬಾಳುವ ಸಾಮಗ್ರಿಗಳನ್ನು ದೋಚಲು ದುಷ್ಕರ್ಮಿಗಳು ನಿರತರಾಗಿದ್ದಾರೆ. ಈ ಕಾರ್ಯದಲ್ಲಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಐಷಾರಾಮಿ ವಾಣಿಜ್ಯ ಸಂಕೀರ್ಣಗಳು, ಶಾಪಿಂಗ್ ಮಾಲ್‌ಗಳಲ್ಲಿ ವಸ್ತುಗಳನ್ನು ದೋಚುವ ಕಾರ್ಯ ರಾಜಧಾನಿ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಸಮವಸ್ತ್ರ ತ್ಯಜಿಸಿರುವ ಪೊಲೀಸ್ ಸಿಬ್ಬಂದಿ ಇಂತಹ ಕುಕೃತ್ಯಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.ಸರ್ಕಾರಿ ಭದ್ರತೆಯ ಮೇಲೆ ನಂಬಿಕೆ ಕಳೆದುಕೊಂಡಿರುವ ನಿವಾಸಿಗಳು ತಮ್ಮದೇ ಸಮಿತಿಗಳನ್ನು ರಚಿಸಿಕೊಂಡು, ಕೋವಿ, ದೊಣ್ಣೆ, ಕುಡುಗೋಲು ಹಿಡಿದು ಆಸ್ತಿಪಾಸ್ತಿ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ.ಹೊಸ ಪ್ರಧಾನಿ: ಈ ಮಧ್ಯೆ, ಜನರನ್ನು ಶಾಂತಗೊಳಿಸುವುದು ಮತ್ತು ಅಧಿಕಾರದಲ್ಲೇ ಮುಂದುವರಿಯುವ ಪ್ರಯತ್ನದಲ್ಲಿರುವ ಹೊಸ್ನಿ ಶನಿವಾರ ಆಡಳಿತ ಸುಧಾರಣೆಯ ಭರವಸೆ ನೀಡಿದ್ದಾರೆ.ಇದಕ್ಕೆ ಮುನ್ಸೂಚನೆ ಎಂಬಂತೆ ಸದ್ಯ ಇರುವ ಸರ್ಕಾರವನ್ನು ಬರ್ಕಾಸ್ತು ಮಾಡಿದ್ದಾರೆ. ಹೊಸ ಪ್ರಧಾನಿಯನ್ನಾಗಿ  ಮಾಜಿ ಸಚಿವ ಅಹ್ಮದ್ ಷಫಿ ಅವರನ್ನು ನೇಮಿಸಲಾಗಿದೆ. ಹೊಸ್ನಿ ಅವರ ಸಮರ್ಥ ಉತ್ತರಾಧಿಕಾರಿ ಎಂಬಂತೆ  ವಾಯುಪಡೆ ಮಾಜಿ ಅಧಿಕಾರಿ ಶಫೀಕ್ ಅವರಿಗೆ ಪ್ರಚಾರ ನೀಡಲಾಗುತ್ತಿದೆ.ಮೂವತ್ತು ವರ್ಷಗಳಲ್ಲಿ  ಇದೇ ಪ್ರಥಮ ಬಾರಿಗೆ ತನ್ನ ಬಲಗೈಬಂಟ ಉಮರ್ ಸುಲೈಮಾನ್ ಅವರನ್ನು ಉಪ-ಅಧ್ಯಕ್ಷರಾಗಿ ಹೊಸ್ನಿ ನೇಮಕ ಮಾಡಿದ್ದಾರೆ. . ಇತರ ಕೆಲವು ಪ್ರಮುಖ ಹುದ್ದೆಗಗೆ ಹೊಸ ನೇಮಕಾತಿ ಮಾಡಲಾಗಿದೆ.

ಜೈಲು ಅಧಿಕಾರಿ ಹತ್ಯೆ, ಕೈದಿಗಳು ಪರಾರಿ: ಫೈಯೂಮ್ ಗವರ್ನರೆಟ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಜೈಲಿಗೆ ಮುತ್ತಿಗೆ ಹಾಕಿ, ವರಿಷ್ಠಾಧಿಕಾರಿಯನ್ನು ಹತ್ಯೆಗೈದಿದ್ದಾರೆ.  ಫೈಯೂಮ್ ಗವರ್ನರೆಟ್, ಅಲೆಗ್ಸಾಂಡ್ರಿಯಾ, ಆಸ್ವಾನ್ ಸೇರಿದಂತೆ ಇತರ ಹಲವು ಜೈಲುಗಳಿಂದ ಸಾವಿರಾರು ಕೈದಿಗಳು ರಾತೋರಾತ್ರಿ ಪರಾರಿಯಾಗಿದ್ದಾರೆ.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.