ಶುಕ್ರವಾರ, ಜನವರಿ 24, 2020
16 °C

ಈ ಕ್ರಮ ಸಮರ್ಥನೀಯವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರ್ಶ ವಸತಿ ಹಗರಣ ಕುರಿತಾದ ನ್ಯಾಯಾಂಗ ಆಯೋಗ ವರದಿ ಕಾಂಗ್ರೆಸ್ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿದೆ. ಕಳೆದ ವಾರ, ನ್ಯಾಯ ಮೂರ್ತಿ ಜೆ.ಎ. ಪಾಟೀಲ್ ನೇತೃತ್ವದ ದ್ವಿಸದಸ್ಯ ಆಯೋಗದ ವರದಿ ಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ. ಈ ಹಗರಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಉನ್ನತ ನೇತಾರರ ವಿರುದ್ಧ  ಆರೋಪಗಳನ್ನು ಹೊರಿಸಲಾಗಿದೆ.ಈ ಪೈಕಿ ಕೇಂದ್ರದಲ್ಲಿ ಈಗ ಗೃಹ ಸಚಿವ­ರಾಗಿರುವ ಸುಶೀಲ್ ಕುಮಾರ್ ಶಿಂಧೆ ಅವರೂ ಸೇರಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದವರ ಕುಟುಂಬಗಳಿಗಾಗಿ ಮೀಸಲಿರಿಸಿದ್ದ ಮುಂಬೈ ಸಹಕಾರ ವಸತಿ ಸೊಸೈಟಿಯ ಅಪಾರ್ಟ್‌ಮೆಂಟ್ ಗಳನ್ನು ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಅಕ್ರಮವಾಗಿ ಪಡೆದುಕೊಂಡಂತಹ ಈ ಹಗರಣ ರಾಷ್ಟ್ರದ  ಅಂತಃಸಾಕ್ಷಿಯನ್ನೇ  ಕಲಕಿದೆ. ಈ ಹಗರಣದಲ್ಲಿ ದುರಾಸೆ ಹಾಗೂ ಸ್ವಜನಪಕ್ಷಪಾತ ತೋರಲಾಗಿದೆ ಎಂದು ನ್ಯಾಯಾಂಗ ಆಯೋಗ ಹೇಳಿದೆ.  ಆದರ್ಶ ಹೌಸಿಂಗ್ ಸೊಸೈಟಿಯಿಂದ ಫ್ಲಾಟ್ ಪಡೆಯುವುದಕ್ಕಾಗಿ ತಪ್ಪು ಮಾಹಿತಿ ನೀಡಿರುವವರಲ್ಲಿ ಮನೆಗೆಲಸ­ದಾಕೆಯ ವಿಚಾರದಲ್ಲಿ ಇತ್ತೀಚೆಗೆ ಅಮೆರಿಕದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಬ್ರಾಗಡೆ ಸಹ ಸೇರಿದ್ದಾರೆ. ಸಮಾಜದ ಬಲಾಢ್ಯರ ಒಳಗೊಳ್ಳುವಿಕೆ­ಯಿಂದಾಗಿ ಈ ಹಗರಣ ರಾಷ್ಟ್ರದಾದ್ಯಂತ ಗಮನ ಸೆಳೆದಿರುವುದು ನಿಜ.ಇತ್ತೀಚೆಗೆ ನಡೆದ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲನು ಭವಿಸಿದ ನಂತರ ಭ್ರಷ್ಟಾಚಾರ ವಿರೋಧಿ ನಿಲುವನ್ನು ಕಾಂಗ್ರೆಸ್ ಪಕ್ಷ ದೊಡ್ಡ ದನಿಯಲ್ಲಿ ವ್ಯಕ್ತಪಡಿಸುತ್ತಿದೆ. ಸಂಸತ್‌ನಲ್ಲಿ ಲೋಕಪಾಲ ಮಸೂದೆಯನ್ನು ಅಂಗೀಕರಿಸಿದ ವಿಚಾರದ ಯಶಸ್ಸಿನ ಹೆಚ್ಚಿನ ಪಾಲನ್ನು ತನ್ನದಾಗಿಸಿ ಕೊಳ್ಳಲೂ ಕಾಂಗ್ರೆಸ್ ಯತ್ನಿಸಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಇನ್ನೂ ಇಂತಹ ಹೆಚ್ಚಿನ ಮಸೂದೆಗಳು ಅಂಗೀಕಾರವಾಗಬೇಕಿವೆ ಎಂದು ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೇ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್-–ಎನ್‌ಸಿಪಿ ಮೈತ್ರಿಕೂಟದ ಮಹಾರಾಷ್ಟ್ರ ಸರ್ಕಾರ ಆದರ್ಶ ಹಗರಣ ಕುರಿತಾದ ನ್ಯಾಯಾಂಗ ವರದಿಯನ್ನು ತಿರಸ್ಕರಿಸಿರುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಜನರ ಹಿತದ ದೃಷ್ಟಿಯಿಂದ  ಈ ವರದಿ ಯನ್ನು ತಿರಸ್ಕರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸಮಜಾಯಿಷಿಯೇನೋ ನೀಡಿದ್ದಾರೆ. ಆದರೆ ಈ ನಿರ್ಧಾರ ಹೇಗೆ ಸಾರ್ವಜನಿಕ ಹಿತ ರಕ್ಷಿಸುತ್ತದೆ ಎಂಬುದನ್ನು ವಿವರಿಸಿಲ್ಲ.

   ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವ ಈ ದಿನಗಳಲ್ಲಿ ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್  ನಾಯಕರ ಭ್ರಷ್ಟಾಚಾರ ವಿರೋಧಿ  ಮಾತುಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು? ನ್ಯಾಯಾಂಗ ತನಿಖೆಯ ವರದಿ ಯನ್ನು ಒಪ್ಪಿಕೊಳ್ಳಲೇಬೇಕೆಂಬ ಬದ್ಧತೆ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ ನಿಜ. ಆದರೆ ನಿರಾಕರಣೆಗೆ ಸೂಕ್ತ ಕಾರಣಗಳನ್ನು ನೀಡಬೇಕಾದುದು ಅವಶ್ಯ.

ಮುಖ್ಯಮಂತ್ರಿ ಪೃಥ್ವಿರಾಜ್ ಅಂತಹದೇನೂ ಕಾರಣಗಳನ್ನು ನೀಡಿಲ್ಲ.  ಸಂಪುಟದ ನಿರ್ಧಾರ ‘ಸರ್ವಾನುಮತ’ದ್ದಾಗಿತ್ತು ಎಂದಷ್ಟೇ ಹೇಳಿದ್ದಾರೆ.  ರಾಜಕೀಯವಾಗಿ ಕಾಂಗ್ರೆಸ್‌ನ  ದ್ವಿಮುಖ ಧೋರಣೆಗಳಿಗೆ ಇದು ದ್ಯೋತಕ. ಪಕ್ಷದ ರಾಷ್ಟ್ರೀಯ ನಾಯಕತ್ವ ಮಧ್ಯಪ್ರವೇಶಿಸಿ ಕಳಂಕಿತ ನಾಯಕರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಕಾಂಗ್ರೆಸ್ ಪ್ರತಿಪಾದಿಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಅರ್ಥವಿಲ್ಲ.

ಪ್ರತಿಕ್ರಿಯಿಸಿ (+)