ಮಂಗಳವಾರ, ಮಾರ್ಚ್ 2, 2021
31 °C

ಈ ಚಿತ್ರಗಳ ನೀವು ನೋಡಲೇಬೇಕು...

ನಿರೂಪಣೆ: ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಈ ಚಿತ್ರಗಳ ನೀವು ನೋಡಲೇಬೇಕು...

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನೋಡಲೇಬೇಕಾದ ಸಿನಿಮಾಗಳು ಯಾವುವು ಎಂಬ ಜಿಜ್ಞಾಸೆ ಅನೇಕರಿಗೆ ಇರಬಹುದು. ಅಂಥವರಿಗೆ ತೋರುದೀಪವಾಗಲಿ ಎಂಬ ಉದ್ದೇಶದಿಂದ ನಿತ್ಯವೂ ಆಯ್ದ ಒಬ್ಬರು ಸಿನಿಮಾ ವಿದ್ಯಾರ್ಥಿ/ ನಿರ್ದೇಶಕ/ ನಿರ್ಮಾಪಕ/ತಂತ್ರಜ್ಞಾನ ಪರಿಣತರು ತಮ್ಮ ಆಯಾ ದಿನದ ಆಯ್ಕೆಯ ಸಿನಿಮಾಗಳು ಹಾಗೂ ಹಾಗೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎನ್ನುವುದನ್ನು ಹಂಚಿಕೊಳ್ಳಲಿದ್ದಾರೆ. ಈ ಸರಣಿಯ ಮೊದಲ ಕಂತಿನಲ್ಲಿ ಸಿನಿಮೋತ್ಸವದಲ್ಲಿ ನೋಡಲೇಬೇಕಾದ ನಾಲ್ಕು ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ ಹಿರಿಯ ಸಿನಿಮಾ ವಿಮರ್ಶಕ ಎನ್‌. ಮನುಚಕ್ರವರ್ತಿ.1. ನಾನು ಅವನಲ್ಲ ಅವಳು

ನಿರ್ದೇಶನ:
ಬಿ.ಎಸ್‌. ಲಿಂಗದೇವರು. (ವರ್ಷ: 2015, ದೇಶ: ಭಾರತ)

ಅವಧಿ: 115 ನಿಮಿಷ.

ಪ್ರದರ್ಶನ: ಶನಿವಾರ (ಜ.31) ಸಂಜೆ 6. ಪರದೆ–4. 

ಈಗಿನ ಕಾಲದ ನಮ್ಮ ಅನೇಕ ಸಂಘರ್ಷಗಳ–ತೊಡುಕುಗಳ ಕಥೆ ಇದು. ಲೈಂಗಿಕತೆಗೆ ಸಂಬಂಧಪಟ್ಟಂತೆ ಇದು ಸರಿ, ಇದು ತಪ್ಪು ಎಂದು ಬಹಳ ಧರ್ಮಬೀರುಗಳಾಗಿ ನಾವು ಮಾತನಾಡಬಹುದು. ಆದರೆ ಈ ಪ್ರಕೃತಿ ಎನ್ನುವುದು ಹೇಗಿರುತ್ತದೆಂದರೆ, ಹೆಣ್ಣು ದೇಹವಿದ್ದೂ ಗಂಡಸಿನ ಬಯಕೆ ಹುಟ್ಟಬಹುದು, ಗಂಡು ದೇಹವಿದ್ದೂ ಹೆಣ್ಣಿನ ಬಯಕೆ ಹುಟ್ಟಬಹುದು.ಈ ಚಿತ್ರದ ನಿಜವಾದ ಕೊಡುಗೆ ಏನು ಅಂದರೆ ಲೈಂಗಿಕತೆ ಅನ್ನುವು ಪೂರ್ವ ನಿರ್ಧಾರಿತವೋ ಅಥವಾ ಆಗಾಗ್ಗೆ ಬದಲಾವಣೆ ಆಗುತ್ತಾ ಹೋಗುತ್ತದೆಯೋ? ಇದು ಕಾನೂನು ನ್ಯಾಯದ ಪ್ರಶ್ನೆಯಾ? ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಪ್ರಕೃತಿ ನಿಯಮವನ್ನೇ ಉಲ್ಲಂಘನೆ ಮಾಡುವಂಥ ಕಾನೂನು ನ್ಯಾಯ ಅಲ್ಲ, ಕಾನೂನು ನ್ಯಾಯವೂ ಕೂಡ ಪ್ರಕೃತಿಯ ಅನೇಕ ನಿಯಗಳನ್ನು ಒಳಗೊಳ್ಳುತ್ತಾ, ವೃದ್ಧಿಯಾಗ್ತಾ ಅದರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.ಆದ್ದರಿಂದಲೇ ನಮ್ಮ ಟ್ರಾನ್ಸ್‌ಜೆಂಡರ್‌ಗಳನ್ನು ಗಂಡು–ಹೆಣ್ಣು ಅನ್ನುವುದಕ್ಕೆ ಬದಲಾಗಿ ತೃತೀಯ ಲಿಂಗಿಗಳು ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡುವುದರ ಮೂಲಕ ತನ್ನ ಕಾನೂನಿನ ವ್ಯಾಪ್ತಿಯನ್ನೇ ಜಾಸ್ತಿ ಮಾಡಿತು.ಇನ್ನೊಂದು ಅಂಶವನ್ನೂ ಇಲ್ಲಿ ಹೇಳಿಬಿಡಬೇಕು. ಕ್ಯಾಥೋಲಿಕ್‌ ಚರ್ಚ್‌ ತುಂಬ ಕಟ್ಟುನಿಟ್ಟಿನ ಸಂಪ್ರದಾಯವಾದಿ.ಆದರೆ ಈಗಿನ ಕ್ಯಾಥೊಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್‌ ಈಗೊಂದು ಎರಡು ವರ್ಷಗಳ ಹಿಂದೆ ಒಂದು ಮಾತು ಹೇಳಿದ್ದರು. ‘ದೈವ ಅನ್ನೋದೇ ಸಲಿಂಗಿಗಳನ್ನು ಒಪ್ಪಿಕೊಂಡು ಅವರ ಪ್ರಾರ್ಥನೆಯನ್ನು ಮನ್ನಣೆಗೊಳಿಸುವುದಾದರೆ ನಾನ್ಯಾರು ಅದನ್ನು ತಡೆಯಲು?’ ಎಂದು ಹೇಳಿದ್ದರು. ಇದು ಪ್ರಕೃತಿ ಅನ್ನುವ ದೈವವನ್ನು ಮೀರಿದ ಕಾನೂನು ಇಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ. ನಮ್ಮ ಅನೇಕ ನೀತಿಯ ಕಟ್ಟಳೆಗಳು, ನ್ಯಾಯ ವ್ಯವಸ್ಥೆಯ ಕಟ್ಟಳೆಗಳು ಮತ್ತು ಸಮಾಜದಲ್ಲಿ ನಮ್ಮ ಪೂರ್ವಗ್ರಹ, ಸಿದ್ಧಮಾದರಿಗಳನ್ನು ಈ ಸಿನಿಮಾ ಒಡೆಯುತ್ತದೆ.2. ಮೆಸಿಸ್ಟೊ

ನಿರ್ದೇಶನ:
ಇಸ್ತ್‌ವಾನ್‌ ಝಾಬೊ (ವರ್ಷ: 1981, ದೇಶ: ಹಂಗೇರಿ)

ಅವಧಿ: 144 ನಿಮಿಷ.

ಪ್ರದರ್ಶನ: ಭಾನುವಾರ (ಜ.31) ಮಧ್ಯಾಹ್ನ 12.20. ಪರದೆ–6

ಸೃಜನ­ಶೀಲತೆಗೂ, ವ್ಯವಸ್ಥೆಗೂ, ಸರ್ವಾಧಿಕಾರಕ್ಕೂ ಇರುವ ಸೂಕ್ಷ್ಮ ಸಂಬಂಧವನ್ನು ಶೋಧಿಸಿ ಅಭಿವ್ಯಕ್ತಿಸುವ ಸಿನಿಮಾ ಇದು. ಇದು ಜರ್ಮನಿ ನಾಜಿಗಳ ಕಾಲದ ಚಿತ್ರ. ಸೃಜನಶೀಲತೆಯ ಹೆಸರಿನಲ್ಲಿ ಒಬ್ಬ ನಟ, ಪ್ರಭುತ್ವವನ್ನು ಬಳಸಿಕೊಂಡು– ಪ್ರಭುತ್ವಕ್ಕೆ ಪೂಸಿ ಹೊಡೆಯುತ್ತಾ ತಾವು ಖ್ಯಾತಿ ಪಡೆಯುತ್ತಾ ಕೊನೆಗೆ ಅವರೇ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುವ ಕಥೆ ಇದು. ಹಲವು ಜನರು ರಾಜಕೀಯಕ್ಕೂ ಸೃಜನಶೀಲತೆಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಾರಲ್ಲಾ... ಈ ಚಿತ್ರವು ಸೃಜನಶೀಲತೆ ಕೇವಲ ಕಲ್ಪನೆಗೆ ಸಂಬಂಧಿಸಿದ್ದಲ್ಲ. ಅದಕ್ಕೂ ಒಂದು  ನೈತಿಕವಾದ ರಾಜಕೀಯ ಆಯಾಮ ಇದೆ–ಇರಬೇಕು ಎಂಬುದನ್ನು ಈ ಸಿನಿಮಾ ತೋರಿಸಿಕೊಡುತ್ತದೆ.3. ಗಾಬೊ: ದ ಕ್ರಿಯೇಷನ್‌ ಆಫ್‌ ಗೇಬ್ರಿಯೆಲ್‌ ಗಾರ್ಸಿಯಾ ಮಾರ್ಕ್ವೇಜ್‌

ನಿರ್ದೇಶನ:
ಜಸ್ಟಿನ್‌ ವೆಬ್‌ಸ್ಟರ್‌. (ವರ್ಷ: 2015. ದೇಶ: ಸ್ಪೇನ್‌, ಯುಕೆ, ಕೊಲಂಬಿಯಾ)

ಅವಧಿ: 90 ನಿಮಿಷ.

ಪ್ರದರ್ಶನ: ಶನಿವಾರ (ಜ.30) ರಾತ್ರಿ 8.20. ಪರದೆ– 9.ಕೊಲಂಬಿಯಾ ದೇಶದ ಗೇಬ್ರಿಯಲ್‌ ಗಾರ್ಸಿಯಾ ಮಾರ್ಕ್ವೇಜ್‌ ನಮ್ಮಂಥ ತೃತಿಯ ಜಗತ್ತಿನ ದೇಶಗಳ ಸಂಸ್ಕೃತಿಯನ್ನು, ತವಕ–ತಲ್ಲಣಗಳನ್ನು, ಇತಿಹಾಸವನ್ನು ಕಟ್ಟಿಕೊಡುವ ದೊಡ್ಡ ಚಿಂತಕ ಮತ್ತು ಲೇಖಕ. ಎಲ್ಲಕ್ಕಿಂತ ಮುಖ್ಯವಾಗಿ ಅವನ ಸುಪ್ರಸಿದ್ಧ ಕಾದಂಬರಿ ‘ಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯೂಡ್‌’ (ನೂರು ವರ್ಷಗಳ ಏಕಾಂತ)ನಲ್ಲಿ ಯಾವುದನ್ನು ಪ್ರಥಮ ಜಗತ್ತು ಅಥವಾ ಬಂಡವಾಳಶಾಹಿ ಜಗತ್ತು ಅಂತಿವೋ ಅವುಗಳು ನಮ್ಮಂಥ ದೇಶಗಳನ್ನು ಮೌನಕ್ಕೆ ತಳ್ಳಿದ ಕಥನವನ್ನು ಹೇಳುತ್ತಾರೆ.ಈಗ ನಾವು ನಮ್ಮ ಧ್ವನಿ ಕಂಡುಕೊಳ್ಳುತ್ತಾ ಇದ್ದೀವಿ. ದಬ್ಬಾಳಿಕೆಗೆ ಒಳಪಟ್ಟ ದೇಶಗಳ, ಸಂಸ್ಕೃತಿಗಳ ಇತಿಹಾಸವನ್ನು ಮರುವ್ಯಾಖ್ಯಾನ ಮಾಡುವ ಕ್ರಮಗಳೇನು ಎಂಬುದನ್ನು ತನ್ನ ಕಾದಂಬರಿಯಲ್ಲಿ ಮಾರ್ಕ್ವೇಜ್‌ ಶೋಧಿಸಿದ್ದಾನೆ. ನಮ್ಮಂಥವರು ನಿಜವಾಗಿಯೂ ಆ ಥರದ ಸೃಜನಶೀಲತೆಯನ್ನು ನೋಡಬೇಕು. ಅದನ್ನು ನಮಗೆ ಮುಖಾಮುಖಿ ಮಾಡುವ ಲೇಖಕ ಗೇಬ್ರಿಯಲ್‌ ಗಾರ್ಸಿಯಾ ಮಾರ್ಕ್ವೇಜ್‌.4. ಭುವನ್‌ ಶೋಮ್‌

ನಿರ್ದೇಶನ:
ಮೃಣಾಲ್‌ ಸೇನ್‌. (ವರ್ಷ: 1969, ದೇಶ: ಭಾರತ)

ಅವಧಿ: 96 ನಿಮಿಷ.

ಪ್ರದರ್ಶನ: ಶನಿವಾರ (ಜ.30) ಮಧ್ಯಾಹ್ನ 12.  ಪರದೆ– 2.

ಹಾಸ್ಯ, ವ್ಯಂಗ್ಯ, ತಮಾಷೆ ಮಿಶ್ರಿತ ಶೈಲಿಯಲ್ಲಿ ವ್ಯವಸ್ಥೆಯ ಭ್ರಷ್ಟಾಚಾರವನ್ನು ಅನಾವರಣ ಮಾಡುತ್ತಾ ಹೋಗುವ ಸಿನಿಮಾ ‘ಭುವನ್‌ ಶೋಮ್‌’. ಇಲ್ಲಿ ಮೃಣಾಲ್‌ ಸೇನ್‌ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಭ್ರಷ್ಟತೆಯ ಕುರಿತು ಮಾತನಾಡುವುದಿಲ್ಲ. ಆದರೆ ಯಾರನ್ನೂ ದೂರದೇ, ದುಷ್ಟರನ್ನಾಗಿ ಮಾಡದೇ, ವಿಲನ್‌ಗಳಿಲ್ಲದೇ, ಒಬ್ಬ ವ್ಯಕ್ತಿಯನ್ನು ಇಟ್ಟುಕೊಂಡು, ಅವನ ಕಥನವನ್ನು ಹೇಳುತ್ತಾ ಹೇಳುತ್ತಾ ಭ್ರಷ್ಟತೆಯ ಕಡೆಗೂ ಗಮನ ಹರಿಸುತ್ತಾರೆ. ಬಹಳ ಸಂತೋಷವಾಗಿರುವಂತಹ ವ್ಯಂಗ್ಯ ತುಂಬಿರುವಂತಹ ಆನಂದದಾಯಕ ಸಿನಿಮಾ ಇದಾದರೂ ಭ್ರಷ್ಟಾಚಾರದ ಮುಖಗಳನ್ನೂ ನವಿರಾದ ಭಾವನೆಗಳ ಮೂಲಕ ಬಯಲು ಮಾಡುತ್ತಾ ಹೋಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.