ಶುಕ್ರವಾರ, ಮೇ 14, 2021
31 °C

ಈ ರಸ್ತೆಯಲ್ಲಿ ಪ್ರಯಾಣಿಸಲು ಗಟ್ಟಿ ಗುಂಡಿಗೆ ಬೇಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: `ರಸ್ತೆ ಕೆಲ್ಸ ಯಾರಿಗೆ ಬೇಕು. ಯಾವ ಕೆಲ್ಸ ಹಿಡಿದ್ರೂ 35 ಪರ್ಸೆಂಟ್ ಕಮಿಷನ್ ಹೋಗುತ್ತೆ. ಉಳಿದ ಹಣದಲ್ಲಿ ಕೆಲ್ಸ ಮಾಡಿದ್ರೆ ಕಳಪೆ ಆಗದೆ ಇನ್ನೇನಾಗುತ್ತೆ. ಜನರ ಹತ್ರ ಬೈಸಿಕೊಳ್ಳೋದು ಯಾವ ಕರ್ಮ~ ಹೋಬಳಿಯಲ್ಲಿ ರಸ್ತೆ ಕಾಮಗಾರಿಗಳ ಗುತ್ತಿಗೆ ಹಿಡಿಯುತ್ತಿದ್ದವರೊಬ್ಬರ ಈ ಮಾತು ಎಲ್ಲ ರಸ್ತೆಗಳ ದುಸ್ಥಿತಿಗೆ ಮೂಲ ಕಾರಣವನ್ನು ಬಿಂಬಿಸುತ್ತದೆ.ಸರ್ಕಾರ ಕಳಸ ಹೋಬಳಿಯಲ್ಲಿ ತೂಗುಸೇತುವೆ ಮತ್ತು ಸೇತುವೆ ಗಳತ್ತಲೇ ಗಮನ ನೀಡುತ್ತಿರುವುದ ರಿಂದ ಹೋಬಳಿ ವ್ಯಾಪ್ತಿಯ ರಸ್ತೆಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಕಳಸ-ಕಳಕೋಡು ರಸ್ತೆ, ಕಳಸ- ಹೊರನಾಡು ರಸ್ತೆ, ಕಳಸ-ಹಿರೇಬೈಲು ರಸ್ತೆ, ಬಾಳೆಹೊಳೆ-ಬಸರೀಕಟ್ಟೆ ರಸ್ತೆಯ ಚಿತ್ರಣ ಅತ್ಯಂತ ದಾರುಣವಾಗಿದೆ.ರಸ್ತೆಗಳ ಮರುಡಾಂಬರೀಕರಣದ ಬಗ್ಗೆ ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಗೆ ಆಸಕ್ತಿಯೇ ಇಲ್ಲ. ಕಾಂಕ್ರೆಟ್ ರಸ್ತೆ, ಸೇತುವೆಯಂತಹ ಲಾಭದಾಯಕ ಕಾಮಗಾರಿಗಳ ಬಗ್ಗೆ ಮಾತ್ರ ಅಧಿಕಾರಿಗಳಿಗೆ ಅಸ್ಥೆ ಮತ್ತು ಆಸಕ್ತಿ. ಯಾವ ರಸ್ತೆಯ ಬಗ್ಗೆ ಮಾಹಿತಿ ಕೇಳಿದರೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂಬುದಲ್ಲದೆ ಬೇರೆ ಉತ್ತರ ಅಧಿಕಾರಿಗಳ ಬಳಿ ಇಲ್ಲ.ವರ್ಷಕ್ಕೊಮ್ಮೆ ಎಲ್ಲ ರಸ್ತೆಗಳಿಗೂ ತೇಪೆ ಹಚ್ಚುವ ನಾಟಕ ಆಡಲಾ ಗುತ್ತದೆ. ನಾಟಕ ಮುಗಿಯುವ ಮುನ್ನವೇ ರಸ್ತೆಯ ಗುಂಡಿ ಮತ್ತೆ ಬಾಯ್ದೆರೆದಿರುತ್ತದೆ. `ಕಿ.ಮೀ.ಗೆ 20 ಸಾವಿರದಲ್ಲಿ ಇನ್ನು ಎಷ್ಟು ಗುಂಡಿ ಮುಚ್ಚುವುದಕ್ಕೆ ಸಾಧ್ಯ~ ಎಂದು ಎಂಜಿನಿಯರ್‌ಗಳೇ ಗುತ್ತಿಗೆದಾರರ ಪರ ವಕಾಲತ್ತು ವಹಿಸುತ್ತಾರೆ. ರಸ್ತೆ ಬದಿಯ ಚರಂಡಿಗಳನ್ನು ನಿರ್ವಹಿಸುವ ಕೆಲಸವನ್ನಂತೂ ಮಾಡದೇ ವರ್ಷಗಳೇ ಕಳೆದಿವೆ. ಪರಿಣಾಮವಾಗಿ ರಸ್ತೆಗಳ ಮೇಲೆಲ್ಲಾ ನೀರು ಹರಿದು ಉತ್ತಮ ಸ್ಥಿತಿಯಲ್ಲಿದ್ದ ಕಳಸ-ಕುದುರೆಮುಖ ರಸ್ತೆಯಂತಹ ಹೆದ್ದಾರಿಗಳೂ ಶಿಥಿಲಗೊಳ್ಳುತ್ತಿವೆ.  ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಕಳಸ ಪೇಟೆಗೆ ಬರುವ ಹಳ್ಳಿಗರು ತಮ್ಮ ಮನೆಗಳನ್ನು ಸೇರಿಕೊಳ್ಳಲು ಖಾಸಗಿ ವಾಹನಗಳಿಗೆ ದುಬಾರಿ ಬಾಡಿಗೆ ತೆರುವುದು ಅನಿವಾರ್ಯವಾಗಿದೆ. `ಹಳ್ಳಿ ರಸ್ತೇಲಿ ಒಂದ್ಸಲ ಹೋಗಿ ಬಂದ್ರೆ ಆಕ್ಸೆಲ್ ತುಂಡಾಗುವುದು, ಬ್ಲೇಡ್ ಮುರಿಯುವುದು ಗ್ಯಾರಂಟಿ~ ಎಂದು ಜೀಪ್‌ಗಳ ಮಾಲೀಕರು ತಮ್ಮ ಗೋಳು ತೋಡಿಕೊಳ್ಳುತ್ತಾರೆ.  ಶಾಶ್ವತ ಕೆಲಸಗಳಾದ ಸೇತುವೆ, ಕಾಲೇಜು, ಆಸ್ಪತ್ರೆಯ ಮಂತ್ರವನ್ನೇ ಸದಾ ಜಪಿಸುವ ಶಾಸಕರು ರಸ್ತೆಗಳು ಕೂಡ ನಾಗರೀಕತೆಯ ಅತಿ ಅಗತ್ಯದ ಪರಿಕರ ಎಂಬುದನ್ನು ಮನಗಾಣಬೇಕು ಎಂಬುದು  ಪ್ರತಿದಿನವೂ ಹದಗೆಟ್ಟ ರಸ್ತೆಗಳಲ್ಲಿ ಯಾತನೆ ಪಡುವ ಗ್ರಾಮಸ್ಥರ ಒತ್ತಾಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.