ಬುಧವಾರ, ಏಪ್ರಿಲ್ 21, 2021
24 °C

ಉಗ್ರ ಹೋರಾಟಕ್ಕೆ ಸಜ್ಜಾದ ನಿವೇಶನರಹಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕಳಸ: ಮನೆ ನಿರ್ಮಿಸಿಕೊಳ್ಳಲು ಸ್ವಂತ ನಿವೇಶನವೂ ಇಲ್ಲದೆ ಪರದಾಡುತ್ತಿರುವ ತಾಲ್ಲೂಕಿನ ಬಡಜನರು ವಸತಿ ಸಮಸ್ಯೆ ಪರಿಹರಿಸಿಕೊಳ್ಳಲು ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಪ್ರಬಲವಾದ ಹೋರಾಟ ರೂಪಿಸಲು ನಿರ್ಧರಿಸಿದ್ದಾರೆ.ಪಟ್ಟಣದ ಅರಮನೆಮಕ್ಕಿಯ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಭಾನು ವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಸಿ.ಪಿ.ಐ. ತಾಲ್ಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ, ತಾಲ್ಲೂಕಿನ ವಸತಿರಹಿತರಿಗೆ ನಿವೇಶನ ಒದಗಿಸುವಂತೆ ಹಲವಾರು ಬಾರಿ ಅಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗ ಆಗಿಲ್ಲ. ಜನಪ್ರತಿನಿ ಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ಮುಂದಿನ ತಿಂಗಳ 15ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಸ್ವಾತಂತ್ರೋತ್ಸವದ ಆಚರಣೆ ಸಂದರ್ಭದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ  ಬಡ ಕಾರ್ಮಿಕರಿಗೆ ನೆಲೆ ನಿಲ್ಲಲು ಒಂದು ಸೂರೂ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.  ಬಡ ಕಾರ್ಮಿಕರು ಅರಣ್ಯದ ಆಸುಪಾಸಿನಲ್ಲಿ ಗುಡಿಸಲು ನಿರ್ಮಿಸಿಕೊಂಡರೆ  ಪರಿಸರವಾದಿಗಳು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಬಡವರ ಮನೆಗಳನ್ನು ಕಿತ್ತು ಎಸೆಯಲು ಅಧಿಕಾರಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಬಾಳೆಹೊಳೆ ಸಮೀಪದ ಘಟನೆಯೊಂದನ್ನು ಉಲ್ಲೇಖಿಸಿದರು.ಈ ಭೂಮಿ  ಎಲ್ಲರಿಗೂ ಸೇರಿದ್ದು. ನಮಗೆ ನಮ್ಮ ಆಸ್ತಿಯನ್ನು ನೀಡದಿದ್ದರೆ ಅದನ್ನು ಕಿತ್ತುಕೊಳ್ಳುವ ದಾರಿಯೂ ಗೊತ್ತು. ನೂರಾರು ಎಕರೆ ಭೂಮಿ ಒತ್ತುವರಿ ಮಾಡಿರುವವರ ಒತ್ತುವರಿ ಬಿಡಿಸಿ ಬಡವರಿಗೆ ನಿವೇಶನ ಹಂಚಬೇಕು ಎಂದು ಅವರು ಆಗ್ರಹಿಸಿದರು.ಸಿ.ಪಿ.ಐ ರಾಜ್ಯ ಸಮಿತಿಯ ಸಹಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ ಆರಂಭಗೊಂಡ `ಸೂರಿಗಾಗಿ ಸಮರ~ ಚಳವಳಿ ರಾಜ್ಯದ ಎಲ್ಲೆಡೆಗೂ ವ್ಯಾಪಿಸುತ್ತಿದೆ. ಕಳಸದಲ್ಲಿ ಕೆಡಿಪಿ ಸಭೆಯ ಸಂದರ್ಭದಲ್ಲಿ ನಿವೇಶನದ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಈಗ ಆ ವಿಚಾರವನ್ನೇ ಮರೆತಿದ್ದಾರೆ ಎಂದರು.ಸ್ವಾತಂತ್ರೋತ್ಸವದಂದು ಭ್ರಷ್ಟರು, ದುರಾಡಳಿತಗಾರರು ಮತ್ತು ಸ್ವಜನ ಪಕ್ಷಪಾತಿಗಳು ತ್ರಿವಣ ಧ್ವಜ ಹಾರಿಸಲು ಬಿಡುವುದಿಲ್ಲ. ಕುದುರೆಮುಖದ ದಿನಗೂಲಿ ನೌಕರರಿಗೆಂದು ಕಳಸ ಸಮೀಪ ಮಂಜೂರಾದ 12 ಎಕರೆ ಭೂಮಿಯನ್ನು  ಆ ಕಾರ್ಮಿಕರಿಗೆ ಹಂಚದಿದ್ದಲ್ಲಿ ಮತ್ತೊಂದು ಹೋರಾಟ ರೂಪಿಸ ಬೇಕಾಗುತ್ತದೆ ಎಂದು ಸುಂದರೇಶ್ ಎಚ್ಚರಿಸಿದರು.ಮೂಡಿಗೆರೆ ಕ್ಷೇತ್ರಕ್ಕೆ ಬಸವ  ಯೋಜನೆಯಡಿ 4 ಸಾವಿರ ಮನೆ ಮಂಜೂರಾಗಲಿದೆ. ಆದರೆ ಇಲ್ಲಿನ ವಸತಿರಹಿತರಿಗೆ ನಿವೇಶನಗಳೇ ಇಲ್ಲದಿರುವುದರಿಂದ ಮನೆ ಸಮಸ್ಯೆ ಬಗೆಹರಿಯುವ ಲಕ್ಷಣವೇ ಇಲ್ಲ ಎಂದ ಸುಂದರೇಶ್ ಬಣ್ಣಿಸಿದರು.ನಿವೇಶನದ ಹೋರಾಟವನ್ನು ಬಲಗೊಳಿಸಲು ಪೊಲೀಸರು ಮತ್ತು ಕಾನೂನಿಗೆ ಭಯಪಡದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಭೆ ನಿರ್ಣಯಿಸಿತು. ಸಿ.ಪಿ.ಐ. ಜಿಲ್ಲಾ ಸಮಿತಿಯ ಲಕ್ಷ್ಮಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಸಿ.ಪಿ.ಐ., ಎ.ಐ.ವೈ.ಎಫ್ ಮತ್ತು ನಿವೇಶನರಹಿತರ ಸಂಘಟನೆಯ  ಮುಖಂಡರಾದ ಪೆರಿಯಸ್ವಾಮಿ, ಮಂಜುನಾಥ್, ರಮೇಶ್, ರಘು, ವಜೀರ್, ರಾಜೇಶ್, ಗೋಪಾಲ, ಕೃಷ್ಣ, ಸತೀಶ್ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.