ಶುಕ್ರವಾರ, ಜುಲೈ 30, 2021
28 °C

ಉಡುಪಿ- ಶೀಘ್ರವೇ ನಿಗಮದ ಸಂಪನ್ಮೂಲ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಶೀಘ್ರವೇ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಂಪನ್ಮೂಲ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್‌ ಇಲ್ಲಿ ಹೇಳಿದರು.ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿಗಮದಿಂದ ಕೈಗೊಂಡ ಹಾಗೂ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.ರಾಜ್ಯದ 16 ಜಿಲ್ಲೆಗಳಲ್ಲಿ ಈಗಾಗಲೇ ಸಂಪನ್ಮೂಲ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆದರೆ ಉಡುಪಿಯಲ್ಲಿ ಈವರೆಗೂ ಆಗಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಸಾಧ್ಯವಾದಷ್ಟು ಶೀಘ್ರವೇ ಸಂಪನ್ಮೂಲ ಕೇಂದ್ರ ತೆರೆಯಲಾಗುವುದು. ಆ ಮೂಲಕ ಮಹಿಳೆಯರಿಗೆ ನಿಗಮದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ, ಡಾಟಾ ಬ್ಯಾಂಕ್‌ ನಿರ್ವಹಣೆ,  ಸ್ವ ಉದ್ಯೋಗ ಸಲಹೆ, ಮಾರ್ಗದರ್ಶನ, ತರಬೇತಿ ಕೈಗೊಳ್ಳಲು ನೆರವಾಗುತ್ತದೆ ಎಂದರು.ಮಹಿಳೆಯರು ನಿಗಮದ ನೆರವು ಪಡೆದುಕೊಂಡು ಸಿದ್ಧಪಡಿಸುವ ಉತ್ಪನ್ನಗಳಿಗೆ ಶಾಶ್ವತವಾದ ಮಾರುಕಟ್ಟೆ ಸೌಲಭ್ಯಗಳನ್ನು ಆಯಾ ಜಿಲ್ಲಾಕೇಂದ್ರಗಳಲ್ಲಿಯೇ ಒದಗಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಸದ್ಯಕ್ಕೆ ಎರಡು ವಲಯಗಳಲ್ಲಿ ಬೆಂಗಳೂರು ಮತ್ತು ಬಾಗಲಕೋಟೆಗಳಲ್ಲಿದೆ. ಅದನ್ನು ಮಂಗಳೂರಿಗೂ ಶೀಘ್ರವೇ ವಿಸ್ತರಿಸಲಾಗುವುದು. ಅದಕ್ಕಾಗಿ ಸ್ತ್ರೀ ಶಕ್ತಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.ಉಡುಪಿಯಲ್ಲಿ ತಾ.ಪಂ. ಕಚೇರಿ ಬಳಿ ನಿರ್ಮಾಣಗೊಳ್ಳುತ್ತಿರುವ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಉತ್ಪನ್ನಗಳ ಮಾರಾಟಕ್ಕೆ ಜಾಗ ಕಲ್ಪಿಸಲಾಗುತ್ತದೆ ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಭರವಸೆ ನೀಡಿದರು.ಮೊಬೈಲ್‌ ರಿಪೇರಿ ತರಬೇತಿ: ಮಹಿಳೆಯರಿಗೆ ನೀಡಲಾಗುತ್ತಿರುವ ಕಂಪ್ಯೂಟರ್‌ ತರಬೇತಿ ಯೋಜನೆಯಲ್ಲಿ ರಾಜ್ಯದಲ್ಲಿ 9,000 ಗುರಿ ಇದ್ದು ಪ್ರಸ್ತುತ 3000 ಮಂದಿಗೆ ತರಬೇತಿ ನೀಡಲಾಗಿದೆ. ಈ ವರ್ಷದಿಂದ ಜಿಲ್ಲೆಯಲ್ಲಿ ಮೊಬೈಲ್‌ ರಿಪೇರಿ ತರಬೇತಿಗೆ ಅರ್ಜಿ ಅಹ್ವಾನ ಮಾಡಲಿದ್ದೇವೆ ಎಂದರು.ಜಿಲ್ಲೆಯಲ್ಲಿ ಗಾರ್ಮೆಂಟ್ಸ್‌ ಮತ್ತು ಕಂಪ್ಯೂಟರ್‌ ತರಬೇತಿಗಳಿಗೆ ಮಹಿಳೆಯರಿಂದ ಅರ್ಜಿಗಳು ಬಹಳ ಕಡಿಮೆ.ಗಾರ್ಮೆಂಟ್ಸ್‌ ತರಬೇತಿಗೆ ಒಂದು ಅರ್ಜಿ ಬಂದಿರಲಿಲ್ಲ. ಇನ್ನೂ ಹಲವು ಯೋಜನೆಗಳನ್ನು ಜ್ಲ್ಲಿಲ್ಲೆಯಲ್ಲಿ ನಿಗಮದಿಂದ ಜಾರಿಗೆ ತರಲಾಗುತ್ತಿದೆ ಆದರೆ ನಮ್ಮ ನಿರೀಕ್ಷೆಗೆ ತಕ್ಕ ಸ್ಪಂದನೆ ಸಿಗುತ್ತಿಲ್ಲ ಎಂದರು.ಉದ್ಯೋಗಿನಿ ಯೋಜನೆ: ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಮಹಿಳೆಯರಿಗೆ ರೂ1 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 184 ಮಹಿಳೆಯರಿಗೆ ಈ ಸೌಲಭ್ಯ ಪಡೆದಿದ್ದಾರೆ.ರಾಜ್ಯದಲ್ಲಿ ವಿಶೇಷವಾಗಿ ಹೈನುಗಾರಿಕೆಗೆ ಮಾತ್ರವೇ ಬಹಳ ಬೇಡಿಕೆ ಇದ್ದು ಶೇ 60 ಮಹಿಳೆಯರು ಇದಕ್ಕೆ ಸಾಲ ತೆಗೆದುಕೊಳ್ಳುತ್ತಾರೆ ಎಂದರು.ರಾಜ್ಯದಲ್ಲಿ 10,900 ಮಂದಿಯನ್ನು ಉದ್ಯೋಗಿನಿ ಯೋಜನೆಯಡಿ ಅರ್ಹ ಫಲಾನುಭವಿಗಳಾಗಿ ಮಾಡುವ ಗುರಿ ಇದ್ದರೂ ಕೂಡ ಕೇವಲ 8,000 ಮಂದಿ ಫಲಾನುಭವಿಗಳನ್ನು ಮಾತ್ರವೇ ಗುರುತಿಸಲಾಗಿದೆ. ಇದಕ್ಕೆ ಸರ್ಕಾರ ನಿಗಮಕ್ಕೆ ಹಿಂದಿನ ವರ್ಷ ಕಡಿಮೆ ಅನುದಾನ ನೀಡಿದ್ದೂ ಕಾರಣ ಎಂದರು.23 ಸಾವಿರ ದೇವದಾಸಿಯರಿಗೆ ಸೌಲಭ್ಯ ಸಿಕ್ಕಿಲ್ಲ: ರಾಜ್ಯದಲ್ಲಿ 22 ಸಾವಿರ ದೇವದಾಸಿಯರಿಗೆ ಮಾತ್ರವೇ ಸರ್ಕಾರದ ಎಲ್ಲ ಸೌಲಭ್ಯಗಳು ಸಿಕ್ಕಿದ್ದು ಇನ್ನುಳಿದ 23 ಸಾವಿರ ದೇವದಾಸಿಯರಿಗೆ ಸೌಲಭ್ಯ ಸಿಕ್ಕಿಲ್ಲ ಎಂದು ನಿಗಮ ಅಧ್ಯಕ್ಷೆ ತಿಳಿಸಿದರು. ಅದಕ್ಕೆ ಕಾರಣ ಹಿಂದಿನ ಗಣತಿಯಂತೆ ಅವರನ್ನು ಗುರುತಿಸಲಾಗಿತ್ತು. ಅವರಿಗೆ ಮಾತ್ರವೇ ಸಿಕ್ಕಿದೆ. ಇನ್ನುಳಿದವರಿಗೆ  ಸೌಲಭ್ಯ ದೊರಕಿಸಲು ಸರ್ಕಾರಕ್ಕೆ ಈಗಾಗಲೇ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಮಂಜೂರಾತಿ ಹಂತದಲ್ಲಿದೆ ಎಂದರು.

ನಿಗಮದ ಪ್ರಧಾನ ವ್ಯವಸ್ಥಾಪಕ ಮುನಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಗ್ರೇಸಿಯಲ್‌ ಗೋನ್ಸಾಲ್ವಿಸ್‌, ಉಪ ನಿರ್ದೇಶಕಿ ಸುಮನಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.