ಸೋಮವಾರ, ಜೂನ್ 21, 2021
23 °C

ಉತ್ತರಕ್ಕಾಗಿ ಹರಿದು ಬಂದ ಸಾವಿರ ತೊರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಕ್ಕಾಗಿ ಹರಿದು ಬಂದ ಸಾವಿರ ತೊರೆಗಳು

ಗದಗ: ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ಸಾವಿರಾರು ಜನರು ವಿದ್ಯಾದಾನ ಸಮಿತಿ ಮೈದಾನಕ್ಕೆ ಮಂಗಳವಾರ ನದಿಯೋಪಾದಿಯಲ್ಲಿ ಆಗಮಿಸುತ್ತಲೇ ಇದ್ದರು ಬೆಳಿಗ್ಗೆ ಹೊತ್ತು ಮೂಡಿದಾಗ ಪ್ರಾರಂಭವಾದ ಈ ಪ್ರವಾಹ ಸೂರ‌್ಯ ನೆತ್ತಿಯ ಮೇಲೆ ಬರುವವರೆಗೂ ಮುಂದುವರೆದಿತ್ತು.  ಎಲ್ಲರೂ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರಕ್ಕೆ ಕೇಳಿದ 108 ಪ್ರಶ್ನೆಗಳ ಧ್ವನಿಗೆ ತಮ್ಮ ಧ್ವನಿಯನ್ನು ಸೇರಿಸಲು ಓಡೋಡಿ ಬಂದಿದ್ದರು.ಬಳ್ಳಾರಿ, ವಿಜಾಪುರ,ಕೊಪ್ಪಳ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದಲೂ ಜನರು ಬಸ್, ಕ್ರೂಸರ್,ಗೂಡ್ಸ್ ಆಟೋ, ಕಾರು, ಜೀಪುಗಳಲ್ಲಿ ಆಗಮಿಸಿದ್ದರು.ಜನರನ್ನು ಕರೆದುಕೊಂಡು ಬಂದ ವಾಹನಗಳು ಎಪಿಎಂಸಿ ಆವರಣದ ಅಲ್ಲಲ್ಲಿ ಇದ್ದ ಮರದ ನೆರಳಿನಲ್ಲಿ ನಿಂತಿದ್ದವು.ಈ ವಾಹನಗಳಿಗೆ ಸಂಭಾಪುರ ರಸ್ತೆಯಿಂದ ಹೋಗುವ-ಬರುವ ಅನುಕೂಲವನ್ನು ಪೊಲೀಸರು ಈ ಸಂದರ್ಭದಲ್ಲಿ ಕಲ್ಪಿಸಿಕೊಟ್ಟಿದ್ದರು.ಊಟವಾಯಿತು: ಹೊರಟು ಬಿಟ್ಟರು

ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮ ಬೆಳಿಗ್ಗೆ ಪ್ರಾರಂಭ ವಾದರೂ ಮುಖ್ಯವಾಗಿ ಶ್ರೀರಾಮುಲು ಮಾತನಾಡುವ ವೇಳೆಗೆ ಊಟದ ಸಮಯವಾಗಿತ್ತು. ಆ ಹೊತ್ತಿಗಾಗಲೇ ಹಲವಾರು ಮಂದಿ ಸ್ವಾಮಿ ವಿವೇಕಾನಂದ ಸಭಾಂಗಣದ ಎದುರಿಗೆ ಇರುವ ಮೈದಾನದತ್ತ ಹೆಜ್ಜೆ ಹಾಕಿದರು.ಅಲ್ಲಿ ನೂಕು ನುಗ್ಗಲಿನಲ್ಲಿ ಊಟ ಮಾಡಿದರು. ಸ್ವಲ್ಪ ಜನರು ಹೊರಡುತ್ತಿದ್ದಂತೆ ಸಭೆಯಲ್ಲಿ ಇದ್ದ ಮಿಕ್ಕ ಜನರಿಗೂ ಅತ್ತ ಕಡೆಯೇ ಗಮನವಿತ್ತು. ಶ್ರೀರಾಮುಲು ಭಾಷಣ ಮುಗಿದ ಕೂಡಲೇ ತಿರುವು ಪಡೆದುಕೊಂಡ ನದಿಯಂತೆ ಎಲ್ಲರೂ ಊಟದ ಕಡೆಗೆ ದಾಳಿ ಮಾಡಿದರು.ಊಟ ಮಾಡಿದ ಬಳಿಕ ತಮ್ಮ-ತಮ್ಮ  ಬಸ್‌ಗಳಿಗೆ ಹತ್ತಿದರು; ಊರ ಕಡೆ ಹೊರಟೇ ಬಿಟ್ಟರು.ವೈನ್ ಸ್ಟೋರ್ ಭರ್ತಿ

ವಿದ್ಯಾದಾನ ಸಮಿತಿ ಮೈದಾನಕ್ಕೆ ಕೂಗಳತೆಯಲ್ಲಿ ಇದ್ದ ವೈನ್‌ಸ್ಟೋರ್‌ಗಳು ಭರ್ತಿಯಾಗಿದ್ದು. ಮದ್ಯಪ್ರಿಯರು ಜೇನುನೋಣದ ಹಾಗೆ ಮುತ್ತಿಕೊಂಡು ಮದ್ಯವನ್ನು ಹೀರಿದರು.ಇದಲ್ಲದೇ ತಂಪು ಪಾನೀಯ, ಕಲ್ಲಂಗಡಿ, ಐಸ್‌ಕ್ರೀಮ್, ಸೋಡಾ ವ್ಯಾಪಾರವೂ ಕೂಡಾ ಭರ್ಜರಿಯಾಗಿ ಈ ಸಂದರ್ಭದಲ್ಲಿ ನಡೆಯಿತು.ರಕ್ಷಿತಾ ಕ್ರೇಜ್

ಸೆಕ್ಸಿ ತಾರೆ ಎಂದು ಖ್ಯಾತಿಗಳಿಸಿರುವ ಚಿತ್ರನಟಿ ರಕ್ಷಿತಾ ಅವರನ್ನು ಇಲ್ಲಿವರೆಗೂ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದ ಜನರು, ಮಂಗಳವಾರ ಕಣ್ಣಾರೆ ಕಂಡು ಆನಂದಕ್ಕೆ ಒಳಗಾದರು.ಸ್ವಾಗತಕಾರರು ರಕ್ಷಿತಾ ಹೆಸರು ಹೇಳಿದ ತಕ್ಷಣವೇ ಇಡೀ ಸಭಾಂಗಣಕ್ಕೆ ಸಭಾಂಗಣವೇ ಕೇಕೆ ಹಾಕಿ ಸಂಭ್ರಮಿಸಿತು.ಚಕ್ಕಡಿ ಮೇಲೆ ನಿಂತು ಮೆರವಣಿಗೆ ಸಾಗಿದಾಗಲೂ ಜನರು ರಕ್ಷಿತಾ ಅವರತ್ತ ಕೈ ಬೀಸಿ ಕೂಗುತ್ತಿದ್ದರು.ರೈತ ದಂಪತಿ ಚಾಲನೆ

ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮವನ್ನು ರೈತ ದಂಪತಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.

ಹಳೇ ಮೈಸೂರು ಪ್ರಾಂತ್ಯದ ಹಲವಾರು ಸ್ವಾಮೀಜಿಗಳು ಆಗಮಿಸಿ ಶ್ರೀರಾಮುಲು ಅವರನ್ನು ಆಶೀರ್ವದಿಸಿದರು. ಕಾರ್ಯಕ್ರಮ ಹಲವು ವಿಶೇಷಗಳಿಂದ ಕೂಡಿದ್ದು, ಎಲ್ಲರ ಗಮನ ಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.