ಗುರುವಾರ , ಮೇ 13, 2021
16 °C
ರಾಜ್ಯದ ಅಧಿಕಾರಿಗಳಿಗೆ ಗೃಹ ಸಚಿವ ಜಾರ್ಜ್ ನಿರ್ದೇಶನ

ಉತ್ತರಾಖಂಡ ಅಧಿಕಾರಿಗಳ ಜತೆ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಪ್ರವಾಹದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರ ಹಿತ ಕಾಯುವ ಉದ್ದೇಶದಿಂದ, ಉತ್ತರಾಖಂಡ ರಾಜ್ಯದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ನಿರ್ದೇಶನ ನೀಡಿದ್ದಾರೆ.`ಜಲಪ್ರವಾಹದ ನಡುವೆ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಸರ್ಕಾರ ಭರವಸೆ ನೀಡಿದೆ' ಎಂದು ಜಾರ್ಜ್ ಅವರು `ಪ್ರಜಾವಾಣಿ'ಗೆ ತಿಳಿಸಿದರು. ಕೇದಾರನಾಥಕ್ಕೆ ಪ್ರವಾಸಕ್ಕೆ ತೆರಳಿದ್ದ ರಾಜ್ಯದ ಪ್ರವಾಸಿಗರು ಪ್ರವಾಹದ ನಡುವೆ ಸಿಲುಕಿದ್ದಾರೆ.ಪ್ರವಾಹದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರ ಪಟ್ಟಿಯೊಂದನ್ನು ಉತ್ತರಾಖಂಡ ಸರ್ಕಾರಕ್ಕೆ ಶೀಘ್ರವೇ ಹಸ್ತಾಂತರ ಮಾಡಲಾಗುವುದು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಉಮೇಶ್ ತಿಳಿಸಿದರು. `ರಾಜ್ಯದ ಪ್ರವಾಸಿಗರೂ ಸೇರಿದಂತೆ ಒಟ್ಟು 500 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂಬ ಮಾಹಿತಿ ದೊರೆತಿದೆ' ಎಂದು ಅವರು ಹೇಳಿದರು.ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರೂ ತೆಹ್ರಿ ಅಣೆಕಟ್ಟು ಸಮೀಪದ ಹಳ್ಳಿಯೊಂದರಲ್ಲಿ ಇದ್ದಾರೆ. `ಇಲ್ಲಿ ಪ್ರವಾಸಿಗರ ಒಂದು ಗುಂಪು ಸಿಲುಕಿಕೊಂಡಿದೆ. ಮಹಿಳೆಯರೂ ರಾತ್ರಿ ವೇಳೆ ರಸ್ತೆಯ ಮೇಲೆ ನಿದ್ರಿಸಬೇಕಾದ ಸ್ಥಿತಿ ಇದೆ. ಪ್ರವಾಸಿಗರನ್ನು ಕಾಪಾಡುವ ಯಾವುದೇ ಕಾರ್ಯ ಇಲ್ಲಿ ನಡೆಯುತ್ತಿಲ್ಲ' ಎಂದು `ಪ್ರಜಾವಾಣಿ' ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು ತಿಳಿಸಿದರು. ಶೋಭಾ ಅವರು ಉತ್ತರಕಾಶಿಯ ಪ್ರವಾಸದಲ್ಲಿದ್ದರು.`ಭಾನುವಾರ ಬೆಳಿಗ್ಗೆಯಿಂದ ನಾವು ಇಲ್ಲೇ ಇದ್ದೇವೆ. ಭೂಕುಸಿತದ ಕಾರಣ ರಸ್ತೆಗಳು ಬಂದ್ ಆಗಿವೆ. ಇಲ್ಲಿನ ಪರಿಸ್ಥಿತಿ ಕೆಟ್ಟದ್ದಾಗಿದೆ. ಹೆಲಿಕಾಪ್ಟರ್ ಸಹಾಯದಿಂದ ಮಾತ್ರ ನಮ್ಮನ್ನು ರಕ್ಷಿಸಬಹುದು' ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರೂ ಶೋಭಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದರು.ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಹೃಷಿಕೇಶದಲ್ಲಿದ್ದಾರೆ. ಸ್ವಾಮೀಜಿ ಕ್ಷೇಮವಾಗಿದ್ದಾರೆ ಎಂದು ಅವರ ಆಪ್ತ ಸಹಾಯಕ ರಾಘವೇಂದ್ರ ಮಧ್ಯಸ್ಥ ತಿಳಿಸಿದ್ದಾರೆ. `ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸ್ವಾಮೀಜಿ ಗಂಗಾರತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.