ಶನಿವಾರ, ಜೂನ್ 12, 2021
23 °C

ಉತ್ತರಾಖಂಡ: ಕಾಂಗ್ರೆಸ್ ಅಧಿಕಾರದ ಹೊಸ್ತಿಲಲ್ಲಿ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷದಲ್ಲಿ ಕೊನೆಯ ಗಳಿಯಲ್ಲಿ ಭುಗಿಲೆದ್ದ ಒಳಜಗಳ, ಗುಂಪುಗಾರಿಕೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಗ್ಗಂಟಾಗಿ ಪರಿಣಮಿಸಿದೆ.ಅಧಿಕಾರದ ಹೊಸ್ತಿಲಲ್ಲಿ ನಿಂತಿರುವ ಪಕ್ಷಕ್ಕೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹೊಸ ತಲೆನೋವಾಗಿ ಕಾಡುತ್ತಿದ್ದು, ಹಠಾತ್ ಉದ್ಭವಿಸಿರುವ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಹೈಕಮಾಂಡ್, ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಶನಿವಾರ ವೀಕ್ಷಕರನ್ನಾಗಿ ಇಲ್ಲಿಗೆ ಕಳುಹಿಸಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದ್ರ ಸಿಂಗ್ ಅವರ ಜತೆ ಸೇರಿ ಆಜಾದ್ ಇಲ್ಲಿನ ಬಿಜಾಪುರ ಅತಿಥಿಗೃಹದಲ್ಲಿ ಪ್ರತಿ ಶಾಸಕರನ್ನೂ ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿ ನಂತರ ನವದೆಹಲಿಗೆ ತೆರಳಿದರು. ಅವರು ಹೈಕಮಾಂಡ್‌ಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಆಜಾದ್, `ಶಾಸಕರ ಅಭಿಪ್ರಾಯಗಳನ್ನು ನಾವು ಸೋನಿಯಾ ಗಾಂಧಿ ಅವರ ಗಮನಕ್ಕೆ ತರುತ್ತೇವೆ. ಇನ್ನು ಒಂದೆರಡು ದಿನಗಳಲ್ಲಿ ಹೊಸ ನಾಯಕನ ಆಯ್ಕೆ ನಡೆಯಲಿದೆ~ ಎಂದು ತಿಳಿಸಿದರು.ಒಟ್ಟು 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 32 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್, ಸರಳ ಬಹುಮತಕ್ಕೆ ಇನ್ನೂ ನಾಲ್ವರು ಸದಸ್ಯರ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಮೂವರು ಪಕ್ಷೇತರ ಮತ್ತು ಒಬ್ಬ ಯುಕೆಡಿ (ಪಿ) ಶಾಸಕ ಈಗಾಗಲೇ ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ಸೂಚಿಸಿದ್ದಾರೆ.ಹಂಚಿಹೋದ ಬಣಗಳು: ಈ ನಾಲ್ವರ ಬೆಂಬಲ ಪಡೆದು ಸರಳ ಬಹುಮತಕ್ಕೆ ಬೇಕಾದ 36 ಸದಸ್ಯರ ಸಂಖ್ಯೆಯನ್ನು ಮುಟ್ಟಿದ್ದ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಮೂರ‌್ನಾಲ್ಕು ಬಣಗಳಲ್ಲಿ ಹೋಳಾಗಿದೆ.ಶಾಸಕರು ಕೇಂದ್ರ ಸಚಿವ ಹರೀಶ್ ರಾವತ್, ಕೇಂದ್ರ ಮಾಜಿ ಸಚಿವ ಸತ್ಪಾಲ್ ಮಹಾರಾಜ್, ಹಿರಿಯ ನಾಯಕ ವಿಜಯ್ ಬಹುಗುಣ ಹಾಗೂ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಯಶಪಾಲ್ ಆರ‌್ಯ ನೇತೃತ್ವದ ಪ್ರತ್ಯೇಕ ಬಣಗಳಲ್ಲಿ ಹರಿದು ಹಂಚಿಹೋಗಿದ್ದಾರೆ.ಈ ಬಣಗಳ ಹೊರತಾಗಿ ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಹರಕ್ ಸಿಂಗ್ ರಾವತ್ ಮತ್ತು ಹಿರಿಯ ನಾಯಕ ಇಂದಿರಾ ಹೃದಯೇಶ್ ಅವರ ಹೆಸರುಗಳೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಕೇಳಿಬರುತ್ತಿವೆ. ಅಧಿಕಾರಕ್ಕೆ ಬಂದಾಗ ಒಳಜಗಳ, ಗುಂಪುಗಾರಿಕೆ ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. ಈ ಹಿಂದೆ 2002ರಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಎನ್.ಡಿ ತಿವಾರಿ ಮತ್ತು ಹರೀಶ್ ರಾವತ್ ಬಣಗಳ ಜಗಳ ಬೀದಿಗೆ ಬಿದ್ದಿತ್ತು.ಆದರೆ, ಈ ಬಾರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಎಲ್ಲ ಪಕ್ಷೇತರ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ವಿವಿಧ ಬಣಗಳಲ್ಲಿ ಗುರುತಿಸಿಕೊಂಡಿದ್ದು, ತಾವು ಹೇಳಿದವರೇ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

 

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪಕ್ಷದ ಪಾಲಿಗೆ ಹಗ್ಗದ ಮೇಲಿನ ನಡಿಗೆಯಾಗಿದ್ದು ಸ್ವಲ್ಪ ಎಡವಟ್ಟಾದರೂ ಅಧಿಕಾರ ಕೈತಪ್ಪಿ ಹೋಗುವ ಸಂಭವವಿದೆ. 31 ಸ್ಥಾನ ಪಡೆದ ಬಿಜೆಪಿ ಈ ಎಲ್ಲ ಬೆಳವಣಿಗೆಗಳನ್ನೂ ಕಾಯ್ದು ನೋಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.