ಮಂಗಳವಾರ, ಏಪ್ರಿಲ್ 20, 2021
32 °C

ಉದಯೋನ್ಮುಖ ಪ್ರತಿಭೆ ಸ್ನೇಹಾ ಸುಭಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಶಾಸ್ತ್ರೀಯ ನೃತ್ಯ ಕಲೆಗೆ ಉನ್ನತ ಪರಂಪರೆ ಇದೆ. ನಾಟ್ಯ ಶಾಸ್ತ್ರ ‘ಪಂಚಮ ವೇದ’ ವೆಂದು ಪುರಸ್ಕರಿಸಲ್ಪಟ್ಟಿದೆ. ಬ್ರಹ್ಮ ನಾಟ್ಯಶಾಸ್ತ್ರದ ರಚನಾಕಾರ ಎಂಬ ನಂಬಿಕೆ ನಮ್ಮಲ್ಲಿದೆ. ಋಗ್ವೇದದಿಂದ ‘ಸಾಹಿತ್ಯ’ವನ್ನು, ಯಜುರ್ವೇದದಿಂದ ‘ಅಭಿನಯ’ವನ್ನು, ಸಾಮವೇದದಿಂದ ‘ಸಂಗೀತ’ವನ್ನು ಹಾಗೂ ಅಥರ್ವಣ ವೇದದಿಂದ ‘ರಸ’ವನ್ನು ಆಯ್ದುಕೊಂಡು ಪಂಚಮವೇದ ‘ನಾಟ್ಯವೇದ’ ವನ್ನು ರಚಿಸಿದ ಎಂಬ ಉಲ್ಲೇಖ ನಮ್ಮ ಶಾಸ್ತ್ರಗಳಲ್ಲಿದೆ.ಭಾರತದ ರಾಜ್ಯ ಪತ್ರ ಮಾನ್ಯ ಮಾಡಿರುವ ಏಳು ರಾಷ್ಟ್ರೀಯ ಶಾಸ್ತ್ರೀಯ ನೃತ್ಯಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪ್ರಚಲಿತವಿರುವ ಭರತನಾಟ್ಯ, ಉತ್ತರ ಭಾರತೀಯರು ಪುರಸ್ಕರಿಸಿರುವ ಕಥಕ್ ನೃತ್ಯ ವಿಶಿಷ್ಟ ಬಗೆಯವು. ಭರತನಾಟ್ಯ ಹಾಗೂ ಕಥಕ್ ನೃತ್ಯ ಪ್ರಕಾರಗಳಲ್ಲಿ ಮಾತ್ರವಲ್ಲದೇ, ಜೈಪುರ ಘರಾಣೆ ಗಾಯನ ಕಲೆಯಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿರುವವರು ಸಾಂಸ್ಕೃತಿಕ ಯುವ ರಾಯಭಾರಿ ಧಾರವಾಡದ ಸ್ನೇಹಾ ಸುಭಾಸ ಕುಲಕರ್ಣಿ.ನಾಟ್ಯಗುರು ವಿದುಷಿ ಶ್ರೀಮತಿ ಕುಮುದಿನಿ ಗುಣವಂತೆ ರಾವ್(ಬೈಲ್) ಅವರಲ್ಲಿ 1993ರಿಂದ ಇಲ್ಲಿಯ ತನಕ ಕಥಕ್ ಹಾಗೂ ಭರತನಾಟ್ಯವನ್ನು ಸ್ನೇಹಾ ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಿದ್ದಾರೆ. 2005ರಲ್ಲಿ ಕಥಕ್ ಹಾಗೂ ಭರತನಾಟ್ಯದಲ್ಲಿ ಅವರು ರಂಗಪ್ರವೇಶ ಮಾಡಿದ್ದಾರೆ. ಮುಂಬೈ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ 2007 ರಲ್ಲಿ ಕಥಕ್ ನೃತ್ಯದಲ್ಲಿ ವಿಶಾರದಾ ಹಾಗೂ 2008ದಲ್ಲಿ ಭರತನಾಟ್ಯದಲ್ಲಿ ವಿಶಾರದಾ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ಸದ್ಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಪರೀಕ್ಷಕರಾಗಿ ಅವರು ಕರ್ತವ್ಯ ನಿರತರಾಗಿದ್ದಾರೆ. ಕಥಕ್ ಹಾಗೂ (ಪಂಢನಲ್ಲೂರು ಶೈಲಿ) ಭರತನಾಟ್ಯ ಶಾಸ್ತ್ರೀಯ ನೃತ್ಯಗಳೊಂದಿಗೆ ಗರ್ಭಾ, ಮಣಿಪುರಿ, ಕೊಂಕಣಿ, ಪಂಜಾಬಿ ಜನಪದ ನೃತ್ಯಗಳಲ್ಲೂ ಅವರ ಪ್ರಾವಿಣ್ಯತೆ ಪಡೆದಿದ್ದಾರೆ. ರಾಜ್ಯದ ಅನೇಕ ಭಾಗಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿಯೂ ಅವರ ತಮ್ಮ ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ.  ಸ್ನೇಹಾ ಅವರ ಗಾಯನಕ್ಕೆ ತಾಯಿ ಹಾಗೂ ಸ್ವತ: ಗಾಯಕಿಯೂ ಆದ ಉಮಾ ಕುಲಕರ್ಣಿ ಅವರೇ ಪ್ರೇರಣೆ. ಎಳವೆಯಲ್ಲಿ ತಾಯಿ ಅವರಿಂದ ಗಾಯನಾಭ್ಯಾಸ ಆರಂಭಿಸಿದ ಸ್ನೇಹಾ ನಂತರ ಶ್ರೀಮತಿ ಸಂಧ್ಯಾ ಕುಲಕರ್ಣಿ ಅವರ ಬಳಿ ಪಾಠವನ್ನು ಮುಂದುವರೆಸಿದರು. ಸದ್ಯ ಡಾ. ಮುಕ್ತಾ ಮುಜುಮದಾರ್ ಅವರ ಮಾರ್ಗದರ್ಶನದಲ್ಲಿ ಜೈಪುರ ಘರಾಣೆಯ ಗಾಯಕಿ ಶೈಲಿಯನ್ನು ಅಭ್ಯಸಿಸುತ್ತಿದ್ದಾರೆ. ಸ್ನೇಹಾ ಕಲೆಗಳಲ್ಲಿ ಮಾತ್ರವಲ್ಲ ಅಭ್ಯಾಸದಲ್ಲೂ ಅನುಪಮ ಶಿಸ್ತು ರೂಢಿಸಿಕೊಂಡಿದ್ದಾರೆ.

 

ಕಳೆದ 2009ರಲ್ಲಿ ಕವಿವಿಯ ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ‘ಬ್ಯಾಚುಲರ್ ಆಫ್ ಮ್ಯುಸಿಕ್’ ಪದವಿಯನ್ನು ದಿ. ಅಂಬಾಬಾಯಿ ಹಾನಗಲ್ ಸ್ಮಾರಕ ಸ್ವರ್ಣ ಪದಕದೊಂದಿಗೆ ಮುಡಿಗೇರಿಸಿದ್ದಾರೆ. ಸದ್ಯ ಕವಿವಿಯ ಸ್ನಾತಕೋತ್ತರ ಸಂಗೀತ ಅಧ್ಯಯನ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ ಅಧ್ಯಯನ ನಿರತರಾಗಿದ್ದಾರೆ. ಸ್ನೇಹಾ ಲೇಖಕಿಯೂ ಹೌದು. ಈಗಾಗಲೇ ಅವರು ಕಥಕ್ ಮತ್ತು ಭರತ ನಾಟ್ಯ ಶೀರ್ಷಿಕೆಯ ಕಿರು ಪರಿಚಯ ಪುಸ್ತಕ ಸಹ ಬರೆದು, ಪ್ರಕಟಿಸಿದ್ದಾರೆ. ಪುಸ್ತಕದ ಇಂಗ್ಲಿಷ್ ಅವತರಣಿಕೆಯೂ ಪ್ರಕಟಗೊಂಡಿದೆ.‘ಸೆಮಿಸ್ಟರ್/ ನಾನ್ ಸೆಮಿಸ್ಟರ್ ಈ ಯಾವ ಪದ್ಧತಿಯೂ ನನ್ನ ಹವ್ಯಾಸ ಸಾಧನೆಯೊಳಗ ಅಡ್ಡಿ ಅಂತ ಅನ್ನಿಸಲಿಲ್ಲ. ಅಭ್ಯಾಸ ತುಸು ಭಾರ ಅನ್ನಿಸ್ತಿತ್ತು;ಆದರೆ ಹೊರೆ ಅನ್ನಿಸಲಿಲ್ಲ. ನೃತ್ಯ ಮತ್ತು ಗಾಯನದಿಂದ ಯೋಗ, ವ್ಯಾಯಾಮ ನನಗೆ ಸತತವಾಗಿ ಆಗುತ್ತಿತ್ತು. ಹಾಗಾಗಿ ನಾನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾದೆ’ ಎಂದು ಹೇಳುತ್ತಾರೆ ಸ್ನೇಹಾ.ಸ್ನೇಹಾ ನೃತ್ಯಾಲಯ ಸ್ಥಾಪಿಸಿ, ಯುವ ಪೀಳಿಗೆಗೆ ಭರತ ನಾಟ್ಯ, ಕಥಕ್ ಹಾಗೂ ಗಾಯನ ಕಲಿಸುವಲ್ಲಿ ಶೃದ್ಧೆಯಿಂದ ಸ್ನೇಹಾ ಮುನ್ನಡೆದಿದ್ದಾರೆ.ಗುರುಗಳಾದ ವಿದುಷಿ ಕುಮುದಿನಿ ಹಾಗೂ ಸಂಧ್ಯಾ ಕುಲಕರ್ಣಿ ಆಕೆಯ ಪ್ರಯತ್ನಕ್ಕೆ ಗುರುಬಲ ನೀಡಿದ್ದಾರೆ. ತಾಯಿ ಹಾಗೂ ಗುರು ಉಮಾ ತಂದೆ ಸುಭಾಸ ಸ್ನೇಹಾಳ ಆಸಕ್ತಿಗಳಿಗೆ ಬೆನ್ನೆಲುಬಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.