ಬುಧವಾರ, ಜೂನ್ 16, 2021
27 °C

ಉದ್ಯಮಶೀಲ ಶಿಕ್ಷಣ: ವಾಗ್ದೇವಿಯ ಯಶಸ್ಸು

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಉದ್ಯಮಶೀಲ ಶಿಕ್ಷಣ: ವಾಗ್ದೇವಿಯ ಯಶಸ್ಸು

ಸ್ಥಳೀಯ ಶಿಕ್ಷಣ ಸಂಸ್ಥೆಗಳೂ ಈಗ ಅಂತರರಾಷ್ಟ್ರೀಯ ದರ್ಜೆಯ ಕಲಿಕಾ ವ್ಯವಸ್ಥೆ ಕಲ್ಪಿಸಬೇಕಾಗಿರುವುದರಿಂದ, ಉದ್ಯಮಶೀಲತೆ ಅಳವಡಿಸಿಕೊಳ್ಳಬೇಕಾದ ಅಗತ್ಯ ಉದ್ಭವಿಸಿದೆ. ಈ `ಉದ್ಯಮಶೀಲ ಶಿಕ್ಷಣ ವ್ಯವಸ್ಥೆ~ ಎನ್ನುವ ಪರಿಕಲ್ಪನೆಯೇ  ಹೊಸತು. ಇದು ಎಂತಹ ಮಾದರಿ, ಯಶಸ್ವಿಯಾಗಿ ಬೆಳೆಯಲು ಸಾಧ್ಯವೇ ಎಂಬುದರ ಬಗ್ಗೆ ಅನೇಕರಿಗೆ ಅನುಮಾನಗಳಿವೆ.ಆದರೆ ಆ ಅನುಮಾನಕ್ಕೆ ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಯಶಸ್ಸಿನ ಮೂಲಕ ಉತ್ತರ ನೀಡುತ್ತಿದ್ದಾರೆ ಅದರ ಅಧ್ಯಕ್ಷ  ಕೆ. ಹರೀಶ್.ಅಂತರರಾಷ್ಟ್ರಿಯ ಶಿಕ್ಷಣಸಂಸ್ಥೆಗಳು ನೀಡುವ ಸುಸಜ್ಜಿತ ಮತ್ತು ಮೂಲ ಸೌಕರ್ಯಗಳನ್ನು ಒಳಗೊಂಡ  ಶಿಕ್ಷಣ ಸೌಲಭ್ಯಕ್ಕೆ ಸರಿಸಮನಾಗಿ, ದೇಶದ ಸಮೃದ್ಧ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ಪೂರಕವಾದ  ಉದ್ಯಮಶೀಲ ಶಿಕ್ಷಣ ವ್ಯವಸ್ಥೆ ಸದ್ಯದ ಅಗತ್ಯವಾಗಿದೆ. ಅಂತರರಾಷ್ಟ್ರಿಯ ಗುಣಮಟ್ಟದ ಶಿಕ್ಷಣ ಪೂರೈಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೆೀವೆ.

 

ಅದನ್ನು ಸಾಧ್ಯ ಮಾಡಿ ತೋರಿಸಲು ಉದ್ಯಮಶೀಲ ಶಿಕ್ಷಣ ಪರಿಕಲ್ಪನೆಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಬರೀ ಉತ್ಸಾಹ ಸಾಲದು. ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಲು ಉದ್ಯಮಶೀಲ ಮನೋಭಾವವೂ ಇರಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಎಂಬುದು ಎಲ್ಲರ ಅರಿವಿಗೆ ಬರುತ್ತಿದೆ.ಈಗ ಮತ್ತೆ ಗುರುಕುಲ ಶಿಕ್ಷಣದ ರೀತಿಯ ಆದರ್ಶ ವ್ಯವಸ್ಥೆಗೆ ಒಲವು ವ್ಯಕ್ತವಾಗುತ್ತಿದೆ. ಲೋಕಜ್ಞಾನದ ಜೊತೆಗೆ ನೈತಿಕ ಮೌಲ್ಯ, ಚಾರಿತ್ರ್ಯ, ಸಮಗ್ರ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಇಂದಿನ  ಅವಶ್ಯಕತೆಯಾಗಿದೆ. ಇಂತಹ ದೂರದೃಷ್ಟಿಯಿಂದ ಪ್ರೇರಣೆ ಪಡೆದ ಉದ್ಯಮಶೀಲರ ಸಂಖ್ಯೆ ಹೆಚ್ಚಳಗೊಳ್ಳಬೇಕಾಗಿದೆ ಎನ್ನುವುದು ಅವರ ಖಚಿತ ಅಭಿಪ್ರಾಯ.ಶಿಕ್ಷಣ ಕ್ಷೇತ್ರವು ಮೂಲಭೂತವಾಗಿ ಸೇವಾ ವಲಯಕ್ಕೆ ಸೇರಿದ್ದರೂ, ಜಾಗತಿಕ ಪೈಪೋಟಿಗೆ ಸರಿಸಾಟಿಯಾಗಿ ನಿಲ್ಲಲು ಸಾಹಸ ಮನೋಭಾವದ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿ ಅಥವಾ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸಬೇಕಾದ ಅವಶ್ಯಕತೆ ಇದೆ. ನಂತರ ಲಾಭದ ದೃಷ್ಟಿಯಿಂದ ಅಲ್ಲದಿದ್ದರೂ, ಸಂಸ್ಥೆಯು ತನ್ನ ಕಾಲಿನ ಮೇಲೆ ತಾನು ನಿಲ್ಲುವಷ್ಟು ಹಾಗೂ ಸಮಾಜದ ನಿರೀಕ್ಷೆಗೆ ತಕ್ಕಂತೆ ಬೆಳೆಯುವುದು ಅನಿವಾರ್ಯವಾಗುತ್ತದೆ.ಇದನ್ನು ಸಾಧಿಸಲು ದಕ್ಷತೆ, ವೃತ್ತಿಪರತೆ, ಸೂಕ್ತ ಯೋಜನೆ ಮತ್ತು ನಿರ್ವಹಣಾ ಕೌಶಲ್ಯದ ಅವಶ್ಯಕತೆ ಇದೆ. ಇದೇ ಉದ್ಯಮಶೀಲ ಶಿಕ್ಷಣ ವ್ಯವಸ್ಥೆಯ ಅಡಿಪಾಯ ಎಂದು ಹರೀಶ್ ವಿವರಿಸುತ್ತಾರೆ.ಶಿಕ್ಷಣ ಸಂಸ್ಥೆ ನಡೆಸುವ ನಾಯಕ ಉದ್ಯಮಿಯಾಗಿ ಮತ್ತು ಒಬ್ಬ ಶಿಕ್ಷಣ ತಜ್ಞನಾಗಿಯೂ ನಿರ್ವಹಿಸಲು ಸಾಧ್ಯವಿದೆ.  ಆಧುನಿಕ ಶಿಕ್ಷಣದ  ಸವಾಲು ಎದುರಿಸಲು ಸೂಕ್ತ ನಾಯಕತ್ವ, ಮಾನವ ಸಂಪನ್ಮೂಲ, ತಂತ್ರಜ್ಞಾನ, ಪೂರಕ ಸೌಲಭ್ಯ, ಯೋಜನೆಗಳ ನಿರ್ವಹಣಾ ಕೌಶಲ್ಯ, ಮುಖ್ಯವಾಗಿ ಬಂಡವಾಳ ಮತ್ತು ಚಿಂತನೆ ಅಗತ್ಯ.

 

ಈ ದೃಷ್ಟಿಯಿಂದಲೇ ಆತ ಒಬ್ಬ ಉದ್ಯಮಿ. ಹೀಗೆ ಉದ್ಯಮಶೀಲತೆ ಹಾಗೂ ಶಿಕ್ಷಣ ಪ್ರೇಮದ ಸಮನ್ವಯ ಚಿಂತನೆ ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುತ್ತದೆ. ಈ ಚಿಂತನೆಯೇ ಒಂದು ವಿಶಿಷ್ಟ ಪರಿಕಲ್ಪನೆಯಾಗಿ  ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಏಳಿಗೆಗೂ ಕಾರಣವಾಗಿದೆ ಎಂದು ಹೇಳುತ್ತಾರೆ.`ಸಂಸ್ಥೆ ಈಗ  ನಾಲ್ಕು ಕಡೆ ಸಮುದಾಯ ಪರಿಕಲ್ಪನೆಯ ಶಾಲೆಗಳನ್ನು ನಡೆಸುತ್ತಿದೆ. 2004 ರಲ್ಲಿ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆ ಪ್ರಾರಂಭಿಸಲಾಯಿತು.ಆಗ ಯೋಚಿಸಿದಂತೆ ಶಿಕ್ಷಣ ಒಂದು ವ್ಯವಸ್ಥೆಯಾಗಿ ಬೆಳೆಯಬೇಕು ಎಂದು ಬಯಸಿದ್ದೆ. ಅದಕ್ಕೆ ಬೇಕಾದ ಸೌಲಭ್ಯಗಳನ್ನೂ ಪೂರೈಸಿದೆ. ಇದರ ಫಲವಾಗಿ ವರ್ತೂರು, ಬಿಡದಿಯಲ್ಲೂ ವಾಗ್ದೇವಿ ವಿಲಾಸ ಬ್ರಾಂಡ್ ವಿಸ್ತರಿಸಲು ಸಾಧ್ಯವಾಯಿತು. ಇಲ್ಲಿ ಗುರುಕುಲ ಮಾದರಿ  ಅಳವಡಿಸಿ ಯಶಸ್ವಿಯಾದೆ~ ಎಂದು ಹೇಳುತ್ತಾರೆ.ಗುರುಕುಲ ಎಂದರೆ ಸನಾತನ ಮೌಲ್ಯಗಳ ಜೊತೆಗೆ ಆಧುನಿಕ ಪರಿಣತಿ, ಸಮಗ್ರ ವ್ಯಕ್ತಿತ್ವ ರೂಪಿಸುವ ಅಪರೂಪದ ವ್ಯವಸ್ಥೆ. ಯೋಗ, ವೇದ ಹಾಗೂ ಸಂಸ್ಕೃತದಲ್ಲಿ ಪರಿಣತಿ ಹೊಂದಿದ ಆಚಾರ್ಯರನ್ನು ಇಲ್ಲಿ ಮೇಲ್ವಿಚಾರಣೆಗಾಗಿ ನೇಮಿಸಲಾಗಿದೆ.  ದೇಶಿ ಸಂಸ್ಕೃತಿ ಉತ್ತೇಜಿಸುತ್ತ, ಅದಕ್ಕೆ ಸಮಾನವಾಗಿ ಅಂತರರಾಷ್ಟ್ರಿಯ ಚಿಂತನೆ, ಗುಣಮಟ್ಟ  ನೀಡುವುದು ನಮ್ಮ ಗುರಿ ಎನ್ನುತ್ತಾರೆ ಅವರು.`ಈಗ, ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಮಲೇಷ್ಯಾಕ್ಕೂ ಕಾಲಿಟ್ಟಿದೆ. ಅಲ್ಲಿನ ಭಾರತೀಯರ ಬೇಡಿಕೆಗೆ ತಕ್ಕಂತೆ ಅಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಟಿಡಿಕೆ-ಟಾಸ್ಕ್ ವಾಗ್ದೇವಿ ವಿಲಾಸ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ವರ್ಷದಲ್ಲಿ ಇದೇ ಮಾದರಿಯನ್ನು 4ಕ್ಕೆ ಏರಿಸುವ ಆಲೋಚನೆ ಇದೆ.ಪೋಷಕರ ಅನುಕೂಲಕ್ಕಾಗಿ `ಯಶೋದಾ ಲಾಲನ ಪಾಲನ~ ಶಿಶುಪಾಲನಾ  (ಪ್ರೀಸ್ಕೂಲ್) ಕೇಂದ್ರಗಳನ್ನು ಬೆಂಗಳೂರಿನ 4 ಕಡೆಗಳಲ್ಲಿ ಪ್ರಾರಂಭಿಸಿದ್ದೆೀವೆ. ಈಗಾಗಲೇ ಬೆಂಗಳೂರಿನ ಮಾರತಹಳ್ಳಿ, ವರ್ತೂರು, ಹಾಗೂ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಸಿಬಿಎಸ್‌ಇ ಶಾಲೆ ಮತ್ತು ಗುರುಕುಲ ಮಾದರಿ ನಡೆಸುತ್ತಿದ್ದೇವೆ.ಪಿರಿಯಾಪಟ್ಟಣ ಹಾಗೂ ಪೊನ್ನಂಪೇಟೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆ ಪ್ರಾರಂಭವಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದ ಇನ್ನಿತರ ತಾಲ್ಲೂಕು,  ಗ್ರಾಮೀಣ ಪ್ರದೇಶಗಳಲ್ಲಿ ಪ್ರೀಸ್ಕೂಲ್ ಹಾಗೂ ಸಿಬಿಎಸ್‌ಇ ಶಾಲೆಗಳನ್ನು ಪ್ರಾರಂಭಿಸುವ ಯೋಜನೆ ಇದೆ~  ಎನ್ನುತ್ತಾರೆ. ಅವರ ಸಂಪರ್ಕ ಸಂಖ್ಯೆ 96865 77171. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.