ಸೋಮವಾರ, ಏಪ್ರಿಲ್ 19, 2021
25 °C

ಉನ್ನತ ಶಿಕ್ಷಣ ವ್ಯಾಪಾರೀಕರಣಕ್ಕೆ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ನೀಡುವ ಮೂಲಕ ಸರ್ಕಾರ ಇಂದು ಉನ್ನತ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ಹೊರಟಿದೆ ಎಂದು ಶಿಕ್ಷಣ ತಜ್ಞ ಡಾ.ಅನಿಲ್ ಸದ್ಗೋಪಾಲ್ ಅಭಿಪ್ರಾಯಪಟ್ಟರು.ನಗರದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು ಸಿಂಗಾರ ಸಭಾಂಗಣದಲ್ಲಿ ಮಂಗಳವಾರ ವಿವೇಕ ವೇದಿಕೆಯೊಂದಿಗೆ ಹಮ್ಮಿಕೊಂಡಿದ್ದ `ಭಾರತದ ಇಂದಿನ ಶಿಕ್ಷಣ ವ್ಯವಸ್ಥೆಯ ಮೂಲ ಸಮಸ್ಯೆಗಳು~ ವಿಷಯ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.ಸರ್ವರಿಗೂ ಸಮಾನ ಶಿಕ್ಷಣ ನೀಡಬೇಕಾದ ಸಾಂವಿಧಾನಿಕ ಜವಾಬ್ದಾರಿಯಿಂದ ಸರ್ಕಾರ ನುಣಚಿಕೊಳ್ಳುತ್ತಿದೆ. ನಮ್ಮ ದೇಶದ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯನ್ನು ಡಬ್ಲ್ಯೂಟಿಒ, ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಬಿಟ್ಟುಕೊಟ್ಟು, ನವ ಆರ್ಥಿಕ ನೀತಿಗಳಿಗನುಗುಣವಾಗಿ ಶಿಕ್ಷಣದ ಮೇಲೆ ಗಧಾಪ್ರಹಾರ ಮಾಡಲು ಹೊರಟಿದೆ ಎಂದು ಆರೋಪಿಸಿದರು.ಬ್ರಿಟಿಷರು ರಕ್ತದಲ್ಲಿ ಭಾರತೀಯರಾಗಿರುವ ಆದರೆ ಮಾನಸಿಕವಾಗಿ ಇಂಗ್ಲಿಷ್‌ರವರಾಗಿರಬಲ್ಲ ಶಿಕ್ಷಣವನ್ನು ಭಾರತದಲ್ಲಿ ಜಾರಿಗೆ ತಂದರು. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಶಿಕ್ಷಣ ವ್ಯವಸ್ಥೆಯಲ್ಲಿ ಬ್ರಿಟಿಷರ ಪದ್ಧತಿಯೇ ಉಳಿದುಕೊಂಡಿದ್ದು, ಸರ್ವರಿಗೂ ಸಮಾನವಾದ ಶಿಕ್ಷಣವನ್ನು ಸರ್ಕಾರಗಳಿಂದ ರೂಪಿಸಲಾಗಲಿಲ್ಲ ಎಂದು ವಿಷಾದಿಸಿದರು.ನಮ್ಮ ದೇಶದ ರಾಷ್ಟ್ರೀಯ ಆದಾಯ ್ಙ 100 ಲಕ್ಷ ಕೋಟಿ ಇದ್ದರೆ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವುದು ಶೇಕಡ 0.5ಕ್ಕಿಂತಲೂ ಕಡಿಮೆ ಹಣ. ಇದರಿಂದಲೇ ಸರ್ಕಾರದ ನಿರ್ಲಕ್ಷ ಅರಿಯಬಹುದು. ಆದ್ದರಿಂದ, ಎಲ್ಲಾ ವರ್ಗ, ಜಾತಿ ಜನರಿಗೆ ಸಮಾನ ಶಿಕ್ಷಣವನ್ನು ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿರುವ, ವಿಕೇಂದ್ರೀಕೃತ ಮಾದರಿಯ, ಸಂಸ್ಥೆಗಳು ಸ್ವ-ನಿಯಂತ್ರಣ ಹೊಂದಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಜಾರಿಗೊಳಿಸಲು ಒತ್ತಡಗಳು ನಿರ್ಮಾಣವಾಗಬೇಕು ಎಂದು ಆಶಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎಚ್.ಟಿ. ಕೃಷ್ಣಮೂರ್ತಿ ವಹಿಸಿದ್ದರು. ಡಾ.ವಾಸು, ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ಪ್ರಾಂಶುಪಾಲ ಡಾ.ಬಿ.ಎಂ. ಹೊಸೂರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.