ಶನಿವಾರ, ಜೂನ್ 12, 2021
28 °C

ಉಪಚುನಾವಣೆ: ಆಂಧ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್/ಪಿಟಿಐ): ಆಂಧ್ರಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲೂ ಸೋತು ಮುಖಭಂಗ ಅನುಭವಿಸಿದೆ.

ನಾಲ್ಕು ಸ್ಥಾನಗಳಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಜಯ ಗಳಿಸಿದೆ. ವೈಎಸ್‌ಆರ್ ಕಾಂಗ್ರೆಸ್, ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಹಾಗೂ ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.ಉಪಚುನಾವಣೆ ನಡೆದ ಏಳು ಕ್ಷೇತ್ರಗಳ ಪೈಕಿ ಆರು ತೆಲಂಗಾಣ ಪ್ರಾಂತ್ಯದಲ್ಲೇ ಇದ್ದು, ಭಾನುವಾರ ಮತದಾನ ನಡೆದಿತ್ತು. ಕಾಂಗ್ರೆಸ್‌ನ ಇಬ್ಬರು ಹಾಗೂ ತೆಲುಗು ದೇಶಂ ಪಕ್ಷದ ನಾಲ್ಕು ಶಾಸಕರ ರಾಜೀನಾಮೆಯಿಂದ ಆ ಕ್ಷೇತ್ರಗಳು ತೆರವಾಗಿದ್ದವು.  ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಶಾಸಕರು ನಿಧನರಾಗಿದ್ದರಿಂದ ಮಹಬೂಬನಗರ ದಲ್ಲಿ ಚುನಾವಣೆ ನಡೆಸಬೇಕಾಯಿತು.ಬಿಜೆಡಿ ಮೇಲುಗೈ (ಭುವನೇಶ್ವರ ವರದಿ): ಈ ರಾಜ್ಯದ ಅತಾಗರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾದಳದ (ಬಿಜೆಡಿ) ಅಭ್ಯರ್ಥಿ ರಾಣೇಂದ್ರ ಪ್ರತಾಪ್ ಸ್ವಾಯಿನ್ ಕಾಂಗ್ರೆಸ್‌ನ ಸುರೇಶ್ ಮಹಾಪಾತ್ರ ಅವರನ್ನು ಸೋಲಿಸಿದ್ದಾರೆ.ಕಾನೂನಿಗೆ ವಿರುದ್ಧವಾಗಿ 2009ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ತಮ್ಮನ್ನು ತಡೆಯಲಾಗಿತ್ತು ಎಂದು ಸ್ವಾಯಿನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿ ಕಳೆದ ಡಿಸೆಂಬರ್‌ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್  2009ರ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿತ್ತು.

ಹಾಗಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಬೇಕಾಯಿತು.ಜಯಾ ಜಯಭೇರಿ (ಚೆನ್ನೈ ವರದಿ): ಶಂಕರನ್ ಕೋಯಿಲ್ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಎಸ್. ಮುತ್ತುಸೆಲ್ವಿ ಡಿಎಂಕೆ ಅಭ್ಯರ್ಥಿ ಜವಾಹರ್ ಸೂರ್ಯಕುಮಾರ್ ಅವರನ್ನು 68,744 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಪ್ರಚಾರಕ್ಕಾಗಿ ಜಯಲಲಿತಾ ಸಂಪುಟದ ಬಹುತೇಕ ಎಲ್ಲ ಸದಸ್ಯರು ಅಲ್ಲಿ ವಾಸ್ತವ್ಯ ಹೂಡಿದ್ದರು. ಎಐಎಡಿಎಂಕೆ ಸಚಿವ ಸಿ. ಕರುಪ್ಪಸಾಮಿ ಅವರ ನಿಧನದಿಂದ ಅಲ್ಲಿ ಚುನಾವಣೆ ನಡೆದಿತ್ತು.ಕೇರಳದಲ್ಲಿ ಯುಡಿಎಫ್‌ಗೆ ಗೆಲುವು (ತಿರುವನಂತಪುರ ವರದಿ):
ಕೇರಳದ ಪಿರವಂ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಅನೂಪ್ ಜೇಕಬ್ ಜಯ ಗಳಿಸಿದ್ದಾರೆ.ಅನೂಪ್ ಜೇಕಬ್ ತಂದೆ, ಒಮನ್ ಚಾಂಡಿ ಮಂತ್ರಿಮಂಡಲದಲ್ಲಿ ಸಚಿವರು ಆಗಿದ್ದ ಕೇರಳ ಕಾಂಗ್ರೆಸ್ ನಾಯಕ ಟಿ.ಎಂ. ಜೆಕಬ್ ನಿಧನದಿಂದ ಆ ಕ್ಷೇತ್ರ ತೆರವಾಗಿತ್ತು.

ಗುಜರಾತ್: ಮೋದಿಗೆ ಹಿನ್ನಡೆ

ಅಹಮದಾಬಾದ್ (ಪಿಟಿಐ): ಗುಜರಾತ್‌ನ ಮನ್ಸಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.1995ರಿಂದ ಬಿಜೆಪಿ ಹಿಡಿತದಲ್ಲಿ ಇದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬೂಜಿ ಠಾಕೂರ್ ಬಿಜೆಪಿಯ ಡಿ.ಡಿ. ಪಟೇಲ್ ಅವರನ್ನು 8000 ಮತಗಳ ಅಂತರದಿಂದ ಸೋಲಿಸಿದ್ದಾರೆ.ಈ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಹೊಸ ಶಾಸಕರ ಅವಧಿ ಕೇವಲ ಎಂಟು ತಿಂಗಳು ಇರುತ್ತದೆ. ಆದಾಗ್ಯೂ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮನ್ಸಾದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಆ ಪಕ್ಷದ ಕಾರ್ಯಕರ್ತರಲ್ಲಿ ಭಾರಿ ಹುರುಪು ಮೂಡಿಸಿದೆ.ಮಾಜಿ ಸ್ಪೀಕರ್ ಬಿಜೆಪಿಯ ಮಂಗಲದಾಸ್ ಪಟೇಲ್ ಅವರ ನಿಧನದಿಂದ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.