ಶನಿವಾರ, ಮೇ 21, 2022
23 °C

ಉಮೇಶ್ ರೆಡ್ಡಿ ಗಲ್ಲು:ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕುಖ್ಯಾತ ಅತ್ಯಾಚಾರಿ- ಕೊಲೆಗಡುಕ ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿ ‘ಗಲ್ಲು ಶಿಕ್ಷೆ’ಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿತು.

ಬೆಂಗಳೂರು ವಿಧವೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರಲ್ಲಿ ರೆಡ್ಡಿಗೆ ಸುಪ್ರೀಂ  ಕೋರ್ಟ್ ಗಲ್ಲು ಶಿಕ್ಷೆ ನೀಡಿತ್ತು.ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಹಾಗೂ ಎಸ್.ಎಸ್. ನಿಜ್ಜಾರ್ ಅವರನ್ನು ಒಳಗೊಂಡ ಪೀಠ ರೆಡ್ಡಿ ಪರ ವಕೀಲ ಗುರುದತ್ತ ಅಂಕೋಲೇಕರ್ ಸಲ್ಲಿಸಿದ ಅರ್ಜಿ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲು ಸೂಚಿಸಿತು.ಗಲ್ಲು ಶಿಕ್ಷೆ ಪುನರ್‌ಪರಿಶೀಲನೆ ಸಂಬಂಧ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳ ವಿಚಾರಣೆ ಪ್ರಕ್ರಿಯೆಯು  ನ್ಯಾಯಾಲಯ ಸಭಾಂಗಣದಲ್ಲೇ ನಡೆಯಬೇಕೆಂಬ ರೆಡ್ಡಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನ್ಯಾಯಾಲಯ ನಿರ್ಧರಿಸಿತು. ಈ ಅರ್ಜಿಗಳನ್ನು ನ್ಯಾಯಾಧೀಶರು ತಮ್ಮ ಚೇಂಬರ್‌ಗಳಲ್ಲಿ ನಡೆಸುತ್ತಾರೆ. ನ್ಯಾಯಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ಅಂಕೋಲೇಕರ್, ಉಮೇಶ್ ರೆಡ್ಡಿ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ಮಾರ್ಚ್ 18ರಂದು ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು,ಗಲ್ಲು ಶಿಕ್ಷೆಗೆ ಸಂಬಂಧಿಸಿದ ಪ್ರಕರಣಗಳನ್ನು ಐವರು ಅಥವಾ ಮೂವರು ನ್ಯಾಯಮೂರ್ತಿಗಳು ನಡೆಸಬೇಕೆಂಬ ಕಾನೂನು ಆಯೋಗದ 187ನೇ ವರದಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ನ 1966ರ ನಿಯಮಕ್ಕೆ ತಿದ್ದುಪಡಿ ಮಾಡುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಉಮೇಶ್ ರೆಡ್ಡಿ ಫೆಬ್ರುವರಿ 17ರಂದು ಅರ್ಜಿ ಸಲ್ಲಿಸಿದ್ದಾರೆ.ಅಲ್ಲದೆ, ಗಲ್ಲು ಶಿಕ್ಷೆಗೆ ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಸಭಾಂಗಣದಲ್ಲಿ ನಡೆಸಬೇಕು. ಇದರಿಂದ ಶಿಕ್ಷೆಗೊಳಗಾದವರ ಪರ ವಾದ ಮಂಡಿಸಲು ಅನುಕೂಲ ಆಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಕೈಗಳನ್ನು ಹಿಂದಕ್ಕೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ರೆಡ್ಡಿ ಮೇಲೆ ಕರುಣೆ ತೋರಲು ಫೆಬ್ರುವರಿ 1ರಂದು ನ್ಯಾಯಾಲಯ ನಿರಾಕರಿಸಿತ್ತು. ಕ್ರೂರ ರೀತಿಯಲ್ಲಿ ನಡೆದಿರುವ ಈ ಕೊಲೆ ವಿರಳಾತೀ ವಿರಳವಾಗಿದ್ದು ಗಲ್ಲು ಶಿಕ್ಷೆಗೆ ಅರ್ಹವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಕಾನ್‌ಸ್ಟೇಬಲ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ 2009ರ ಫೆಬ್ರುವರಿ 18ರಂದು ಗಲ್ಲು ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್ ಇದನ್ನು ಎತ್ತಿ ಹಿಡಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.