ಶುಕ್ರವಾರ, ಮೇ 7, 2021
26 °C
ಎಂ.ಆಂಜನಪ್ಪ- ಡಾ.ಕೆ.ಸುಧಾಕರ್ ಬಣದ ಆಕ್ರೋಶ

ಉಸ್ತುವಾರಿ ಸಚಿವರ ಎದುರೇ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ಬಣ ಮತ್ತು ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಕಾರಣ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲೇ ಎರಡೂ ಬಣದವರು ಪರಸ್ಪರ ವಾಗ್ದಾಳಿ ನಡೆಸಿದರು.ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಾತಾವರಣ ಬಿಗುವಿನಿಂದ ಕೂಡಿದ್ದ ಕಾರಣ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎರಡೂ ಬಣದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಅಹಿತಕರ ಘಟನೆ ಜರುಗಬಹುದೆಂದು ಬೇರೆ ಬೇರೆ ತಾಲ್ಲೂಕುಗಳಿಂದಲೂ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಯಿತು.ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಕೈಕೈ ಮಿಲಾಯಿಸುವ ಹಂತದವರೆಗೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ, ಎರಡೂ ಬಣದವರನ್ನು ಸಮಾಧಾನಪಡಿಸಲು ಯತ್ನಿಸಿದಷ್ಟು ಅವರ ಆಕ್ರೋಶ ಹೆಚ್ಚಾಗುತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್, ಡಿವೈಎಸ್ಪಿ ಎ.ಬಿ.ದೇವಯ್ಯ ಮತ್ತು ವಿವಿಧ ತಾಲ್ಲೂಕುಗಳ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಎರಡೂ ಬಣದವರನ್ನು ಸಮಾಧಾನಪಡಿಸಲು ಪ್ರಯಾಸಪಟ್ಟರು.ವಿವರ:ನಿಗದಿತ ವೇಳಾಪಟ್ಟಿಯಂತೆ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಬೆಳಿಗ್ಗೆ 11ಕ್ಕೆ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಅವರೊಂದಿಗೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಪಕ್ಷದ ಮುಖಂಡರಾದ ಎಂ.ಪ್ರಕಾಶ್, ಬಳುವನಹಳ್ಳಿ ಲೋಕೇಶಗೌಡ ಮುಂತಾದವರು ಆಗಮಿಸಿದರು. ದಿನೇಶ್ ಗುಂಡೂರಾವ್ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಶುಭಾಶಯ ರೂಪದಲ್ಲಿ ಹೂಗುಚ್ಛ ಸ್ವೀಕರಿಸುತ್ತಿದ್ದಾಗ, ಶಾಸಕ ಡಾ.ಕೆ.ಸುಧಾಕರ್ ಬಣದವರೂ ಕೂಡ ಪ್ರವಾಸಿ ಮಂದಿರದ ಕೊಠಡಿಯೊಳಗೆ ಪ್ರವೇಶಿಸಿ, ಶುಭಾಷಯ ಸಲ್ಲಿಸಲು ಮುಂದಾದರು.ಕೊಠಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮೆಯಾದ ಕಾರಣ ಪೊಲೀಸರು ಇತರರನ್ನು ನಿಯಂತ್ರಿಸಲು ಮುಂದಾದರು. `ಇನ್ನಷ್ಟು ಮಂದಿ ಕೊಠಡಿಯೊಳಗೆ ಒಮ್ಮೆಲ್ಲೇ ಬರುವುದು ಬೇಡ. ಒಬ್ಬೊಬ್ಬರೇ ಬಂದು ಶುಭಾಶಯ ಸಲ್ಲಿಸಿ' ಎಂದು ಪೊಲೀಸರು ಮನವಿ ಮಾಡಿದರು.ಆದರೆ ಅಷ್ಟರಲ್ಲಿ ಡಾ.ಕೆ.ಸುಧಾಕರ್ ಬಣದ ಕಾರ್ಯಕರ್ತರು, `ನಮ್ಮನ್ನು ಒಳಗಡೆ ಪ್ರವೇಶಿಸಲು ಅವಕಾಶ ನೀಡದೇ ತಡೆಯಲಾಗುತ್ತಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಆಂಜನಪ್ಪಗೆ ಧಿಕ್ಕಾರ' ಎಂದು ಘೋಷಣೆ ಕೂಗುತ್ತಾ, ಕೊಠಡಿಯೊಳಗೆ ನುಗ್ಗಲು ಯತ್ನಿಸಿದರು.ತಮ್ಮ ನಾಯಕನ ವಿರುದ್ಧ ಘೋಷಣೆ ಕೂಗಿದ್ದನ್ನು ಸಹಿಸದ ಆಂಜನಪ್ಪ ಬಣದವರು, ಘೋಷಣೆ ಹಾಕಿದವರ ವಿರುದ್ಧ ಕೆಂಡಕಾರಿದರು. ಪರಿಸ್ಥಿತಿ ಹತೋಟಿ ಮೀರುತ್ತಿರುವುದನ್ನು ಅರಿತ ದಿನೇಶ್ ಗುಂಡೂರಾವ್ ಎರಡೂ ಬಣದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಎರಡೂ ಬಣದ ಕಾರ್ಯಕರ್ತರ ವರ್ತನೆ ಕಂಡು ಬೇಸರಗೊಂಡ ದಿನೇಶ್ ಗುಂಡೂರಾವ್ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತೆರಳಿದರು.ಸಚಿವರ ನಿರ್ಗಮನದ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಎಂ.ಆಂಜನಪ್ಪ ಬಣದವರು ಪ್ರವಾಸಿ ಮಂದಿರದ ಮೆಟ್ಟಿಲುಗಳ ಮೇಲೆ ನಿಂತುಕೊಂಡು ಡಾ.ಕೆ.ಸುಧಾಕರ್ ಮತ್ತು ಅವರ ಬಣದವರ ವಿರುದ್ಧ ಘೋಷಣೆಗಳನ್ನು ಹಾಕುತ್ತಿದ್ದರೆ, ಪ್ರವಾಸಿ ಮಂದಿರ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ ನಿಂತುಕೊಂಡು ಡಾ.ಕೆ.ಸುಧಾಕರ್ ಬಣದವರು ಎಂ.ಆಂಜನಪ್ಪ ಮತ್ತು ಅವರ ಬಣದವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.`ಎಂ.ಆಂಜನಪ್ಪ ಅವರನ್ನು ಪ್ರವಾಸಿ ಮಂದಿರದಿಂದ ಹೊರಹೋಗಲು ಬಿಡುವುದಿಲ್ಲ' ಎಂದು ಡಾ. ಕೆ.ಸುಧಾಕರ್ ಬಣದವರು ಪಟ್ಟು ಹಿಡಿದು ನಿಂತುಕೊಂಡಿದ್ದರೆ, ಕೊಠಡಿಯಲ್ಲಿ ಕೂತಿದ್ದ ಎಂ.ಆಂಜನಪ್ಪ ಮತ್ತು ಅವರ ಬಣದವರು, `ನಮಗೇಕೆ ಗೃಹ ಬಂಧನ?' ಎಂದು ಪೊಲೀಸರನ್ನು ಪ್ರಶ್ನಿಸುತ್ತಿದ್ದರು.ಪೊಲೀಸ್ ಭದ್ರತೆಯೊಂದಿಗೆ ಎಂ.ಆಂಜನಪ್ಪ ಮತ್ತು ಅವರ ಬಣದವರನ್ನು ಪ್ರವಾಸಿ ಮಂದಿರದಿಂದ ಹೊರಗೆ ಕರೆದೊಯ್ಯಲಾಯಿತ. ನಂತರ ಡಾ.ಕೆ.ಸುಧಾಕರ್ ಕಡೆಯವರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.