ಗುರುವಾರ , ಮೇ 13, 2021
35 °C

ಊಜಿ ನೊಣ ತಡೆಗೆ ಬಲೆ

ಪ್ರಜಾವಾಣಿ ವಾರ್ತೆ / -ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಊಜಿ ನೊಣ ತಡೆಗೆ ಬಲೆ

ಶ್ರೀನಿವಾಸಪುರ: ಮಾವಿಗೆ ಹೆಸರಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತ್ಲ್ಲಾಲೂಕು ಸೇರಿದಂತೆ ಮುಳಬಾಗಲು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಮಾವಿನ ಫಸಲಿಗೆ ಊಜಿ ನೊಣಗಳ ಕಾಟ ಕಂಡುಬಂದಿದೆ. ಮೋಹಕ ಬಲೆಯನ್ನು ಬಳಸಿ ಅವುಗಳ ಹಾವಳಿಯನ್ನು ತಡೆಯಬಹುದಾಗಿದೆ.ಊಜಿ ನೊಣಗಳು ಹೀಚನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಅವು ಹುಳುಗಳಾಗಿ ಮಾರ್ಪಟ್ಟು ಹೀಚನ್ನು ಪ್ರವೇಶಿಸುತ್ತವೆ. ದಿನ ಕಳೆದಂತೆ ಬೆಳೆದು ಬೆಳೆಗೆ ಹಾನಿಯನ್ನು ಉಂಟುಮಾಡುತ್ತವೆ. ಎಳೆ ಹಂತದಲ್ಲಿ ಬೀಜವನ್ನು ಸೇರಿದ ಹುಳು ಕಾಯಿಯನ್ನು ಕೊರೆದು ಹೊರಬರುತ್ತದೆ. ಅಂತಹ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಮಾನ್ಯತೆ ಇರುವುದಿಲ್ಲ.ಕಾಯಿಗೂ ಈ ನೊಣಗಳ ಕಾಟ ತಪ್ಪಿದ್ದಲ್ಲ. ಕೊಳೆತ ಕಾಯಿಗಳಿಂದ ಹೊರ ಬರುವ ನೊಣಗಳು ಆರೋಗ್ಯವಂತ ಕಾಯಿಯನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಹೊರಬರುವ ಹುಳುಗಳು ಕಾಯಿನ್ನು ಪ್ರವೇಶಿಸಿ ಕೊಳೆಯುವಂತೆ ಮಾಡುತ್ತವೆ.ನೊಣಗಳ ಹಾವಳಿಯಿಂದಾಗಿ ಶೇ.50 ರಷ್ಟು ಮಾವಿನ ಫಸಲು ಹುಳು ಬಿದ್ದು ಹಾಳಾಗುತ್ತದೆ. ಈ ನೊಣಗಳ ಹಾವಳಿಯನ್ನು ವ್ಯವಸ್ಥಿತವಾಗಿ ತಡೆದಲ್ಲಿ ಅಷ್ಟು ಪ್ರಮಾಣದ ಇಳುವರಿ ಹೆಚ್ಚುತ್ತದೆ. ಮೋಹಕ ಬಲೆಯನ್ನು ಸಾಂಘಿಕವಾಗಿ ಬಳಸುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ.ವಿಧಾನ: ಮೋಹಕ ಬಲೆ ತಯಾರಿಸುವ ವಿಧಾನ ತುಂಬಾ ಸರಳ. ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್‌ನ ಬಾಯಿಗೆ ಸ್ವಲ್ಪ ಕೆಳಭಾಗದಲ್ಲಿ ಎರಡು ರಂಧ್ರ ಕೊರೆಯಬೇಕು. ಬಾಟಲ್‌ನ ಒಳಗೆ ಒಂದು ಮರದ ತುಂಡನ್ನು ಕಟ್ಟಬೇಕು. ಆ ಮರದ ತುಂಡಿನ ಮೇಲೆ 10 ಹನಿ ಮೀಥೇಲ್ ಯೂಜಿನಾಲ್ ಮತ್ತು 5 ಹನಿ ನುವಾನ್ ಔಷಧಿಯನ್ನು ಹಾಕಬೇಕು.ಮುಚ್ಚಳ ಹಾಕಿದ ಬಳಿಕ ಅದನ್ನು ಆಳೆತ್ತರದಲ್ಲಿ ಮಾವಿನ ಮರದ ಕೊಂಬೆಗೆ ಕಟ್ಟಬೇಕು. ಔಷಧಿಯ ವಾಸನೆಯಿಂದ ಆಕರ್ಷಿತವಾದ ಊಜಿ ನೊಣಗಳು ಸೀಸೆಯನ್ನು ಪ್ರವೇಶಿಸಿ ಸಾಯುತ್ತವೆ. ಸಿದ್ಧಪಡಿಸಲಾದ ಮೋಹಕ ಬಲೆಗಳೂ ಮಾರುಕಟ್ಟೆಯಲ್ಲಿ ಲಭ್ಯ. ಒಂದು ಎಕರೆ ಮಾವಿನ ತೋಟದಲ್ಲಿ ಐದರಿಂದ ಆರು ಕಡೆ ಇಂತಹ ಮೋಹಕ ಬಲೆಗಳನ್ನು ಕಟ್ಟಬೇಕು ಎಂಬುದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು ಅವರ ಸಲಹೆ.ಹಣ್ಣು ನೊಣಗಳ ನಿಯಂತ್ರಣದಿಂದ ಫಸಲು ಹೆಚ್ಚುವುದರ ಜತೆಗೆ, ಮಾವಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ಗುಣಮಟ್ಟದ ಮಾವಿಗೆ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗುತ್ತದೆ.ಮೋಹಕ ಬಲೆ ಬಳಕೆಯಿಂದ ಹೆಚ್ಚು ಪ್ರಯೋಜನ ಇದ್ದರೂ, ಹೆಚ್ಚಿನ ಸಂಖ್ಯೆಯ ರೈತರು ಬಳಸುವ ಗೋಜಿಗೆ ಹೋಗುವುದಿಲ್ಲ. ಇದು ನೊಣಗಳ ಹಾವಳಿಯನ್ನು ಹೆಚ್ಚಿಸುತ್ತದೆ. ರೈತರು ಸ್ವಯಂ ಪ್ರೇರಣೆಯಿಂದ ಸಕಾಲದಲ್ಲಿ ಸಾಂಘಿಕವಾಗಿ ಮೋಹಕ ಬಲೆ ಅಳವಡಿಸಿ ಮಾವಿನ ಫಸಲಿನ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು. ತೋಟಗಳಲ್ಲಿ ಕೊಳೆತು ಉದುರಿದ ಕಾಯಿಗಳನ್ನು ತೋಟಗಳಿಂದ ಹೊರಗೆ ಸಾಗಿಸಿ ಮಣ್ಣು ಮುಚ್ಚಬೇಕು. ಇಲ್ಲವಾದರೆ ನೊಣಗಳ ಸಂತಾನಾಭಿವೃದ್ಧಿ ಪ್ರಮಾಣ ಹೆಚ್ಚಿ ಫಸಲಿಗೆ ಹಾನಿಯಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.