ಶನಿವಾರ, ಮೇ 8, 2021
19 °C

ಊಟದ ಆಟ

-ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಇಡೀ ಮನೆ ಮುಂಜಾನೆಯ ನಸುಗತ್ತಲಿನಲ್ಲಿ ಕೊನೆಯ ಡೋಸ್ ನಿದ್ದೆಯನ್ನು ಸವಿಯುತ್ತಿದ್ದರೆ ಅಡುಗೆ ಮನೆಯ ದೀಪದ ಕೆಳಗೆ ಪಾಕ ಪ್ರಯೋಗದಲ್ಲಿ ತೊಡಗಿರುತ್ತಾಳೆ ಶಾಲಾ ಮಕ್ಕಳ ತಾಯಿ. ಶಾಲೆ ಶುರುವಾಗುವ ಹಿಂದಿನ ದಿನ ಅವಳೇ ಹೊಂದಿಸಿಟ್ಟ ಅಲಾರಂ ಸದ್ದಿಗೆ ಒಬ್ಬೊಬ್ಬರೇ ಎದ್ದು ಈಚೆ ಬರುವ ಹೊತ್ತಿಗೆ `ಮಾಡೋದು ಮಾಡಿದ್ದೇನೆ ಮಗು ತಿನ್ನುತ್ತೋ ಇಲ್ವೋ' ಎಂಬ ಆತಂಕದಲ್ಲೇ ದೇವರಿಗೆ ದೀಪ ಹಚ್ಚುತ್ತಾಳೆ ಅವಳು.`ಶಾಲೆ ಶುರುವಾಯಿತೆಂದರೆ ಬದುಕೇ ಸಾಕು ಅನ್ನಿಸಿ ಬಿಡುತ್ತದೆ. ಇರೋದು ಒಬ್ಬ ಮಗಳು. ದಿನಕ್ಕೊಂದು ಬಗೆ  ತಿಂಡಿ ರುಚಿ ರುಚಿಯಾಗಿ ತಯಾರಿಸಿ ತಂದಿಟ್ಟರೂ ತಿನ್ನುವುದಿಲ್ಲ. ಬಾಕ್ಸ್‌ಗೆ ಏನೇ ಹಾಕಿಕೊಟ್ಟರೂ ತಿನ್ನೋದೇ ಇಲ್ಲ. ಲೇಸ್, ಕುರ್‌ಕುರೆ ಕೇಳ್ತಾಳೆ' ಎಂಬುದು ಮೂರನೇ ತರಗತಿ ವಿದ್ಯಾರ್ಥಿನಿ ಅನಘಾಳ ಅಮ್ಮ, ಚಂದ್ರಾ ಲೇಔಟ್‌ನ ಸ್ವಾತಿ ಹೆಗ್ಡೆ ಅವರ ಅನುಭವ ನುಡಿ.ಹೊಟ್ಟೆ ಫುಲ್ ಆಯ್ತು ಅಂತ ಹೊಟ್ಟೆ ಉಬ್ಬಿಸಿ ತೋರಿಸುತ್ತಾನಂತೆ ಈಗಷ್ಟೇ ಡೆಲ್ಲಿ ಪಬ್ಲಿಕ್ ಸ್ಕೂಲ್ (ದಕ್ಷಿಣ)ನ ನರ್ಸರಿ ಸೇರಿರುವ ಮೂರು ವರ್ಷದ ನಿಖಿಲ್. ಮೊನ್ನೆ ಶುಕ್ರವಾರ ಅವನನ್ನು ಶಾಲೆಗೆ ಕರೆತಂದ ತಾಯಿ ಒಲಿವಿಯಾ, `ಒಂದು ಲೋಟ ಹಾಲು ಕುಡಿದು ಬಂದಿದ್ದಾನೆ. ಬಾಕ್ಸ್‌ಗೆ ಒಣಹಣ್ಣು ಹಾಕಿದ್ದೇನೆ. ನಿನ್ನೆ ವಾಪಸ್ ತಂದಿದ್ದಾನೆ. ಇವತ್ತು ಏನು ಮಾಡ್ತಾನೋ' ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.`ಅವನು ಕೇಳಿದ್ದನ್ನು ಮಾಡಿಕೊಡಲು ನನಗೆ ಪುರುಸೊತ್ತಿಲ್ಲ. ಬೆಳಗ್ಗಿನ ತಿಂಡಿ ಅಥವಾ ರಾತ್ರಿಯ ಸಾಂಬಾರಿನೊಂದಿಗೆ ಅನ್ನ ಕಲಸಿ ಕೊಟ್ಟಿರುತ್ತೇನೆ. ಅವನಿಗೆ ಇಷ್ಟ ಅಂತ ಮತ್ತೊಂದು ಡಬ್ಬಿಯಲ್ಲಿ ಲೇಸ್, ಕುರ್‌ಕುರೆ, ಚಿಪ್ಸ್, ಚಾಕೊಲೇಟ್ ಬಾರ್ ಪೈಕಿ ಏನಾದರೊಂದು ಹಾಕ್ತೇನೆ. ಅವನು ಅದನ್ನು ಖಾಲಿ ಮಾಡ್ತಾನೆ. ಊಟ ಮಾಡಲ್ಲ' ಎಂಬ ದುಃಖ ಜೆ.ಪಿ.ನಗರದ ನಾಗವೇಣಿ ಅವರದು.- ಮಕ್ಕಳ ಊಟದ ಡಬ್ಬಿ ಅಮ್ಮಂದಿರಿಗೆ ಸವಾಲಾಗಿರುವ ಪರಿಯಿದು. ಅದರಲ್ಲೂ ಮಗು ತಿಂದು ಖಾಲಿ ಮಾಡುವಂತಹ ಡಬ್ಬಿ ಸಿದ್ಧಪಡಿಸುವುದೆಂತು ಎಂಬ ಚಿಂತೆ. ಯಾಕೆಂದರೆ, ಶಾಲೆಯ ಆವರಣದಲ್ಲೋ, ದಾರಿ ಮಧ್ಯೆಯೋ ಡಬ್ಬಿಯಲ್ಲಿದ್ದ ಆಹಾರವನ್ನು ಎಸೆದು `ಖಾಲಿ ಮಾಡಿ' ಡಬ್ಬಿ ತರುವ ಜಾಣರೂ ಇದ್ದಾರೆ.ಡಬ್ಬಿಗೆ ಶಾಲೆಗಳ ಮೆನು

ಕೆಲವು ಶಾಲೆಗಳು ಕಂಡುಕೊಂಡ ರಾಜಿ ಸೂತ್ರ ಇದು. ಮಕ್ಕಳು ಮನೆಯಲ್ಲಿ ಕಟ್ಟಿಕೊಟ್ಟ ಡಬ್ಬಿಯಲ್ಲಿರುವ ತಿನಿಸುಗಳನ್ನು ತಿನ್ನಲು ಹಿಂದೇಟು ಹಾಕುವುದು ಸಾಮಾನ್ಯ. ಪ್ರಿ ನರ್ಸರಿ ಮತ್ತು ನರ್ಸರಿ ಹಂತದಲ್ಲಿ ಶಿಕ್ಷಕಿಯರು ಮತ್ತು ಸಹಾಯಕರ ಮೇಲ್ವಿಚಾರಣೆಯಲ್ಲೇ ತಿಂಡಿ ತಿನ್ನಬೇಕಾಗಿರುವುದರಿಂದ ಯಾವ ಮಕ್ಕಳು ತಿಂದರು, ಎಷ್ಟು ತಿಂದರು, ಯಾಕೆ ತಿನ್ನಲಿಲ್ಲ ಎಂಬ ಸ್ಪಷ್ಟ ಅರಿವು ಅವರಿಗಿರುತ್ತದೆ.ಈ ವಯಸ್ಸಿನ ಮಕ್ಕಳ ಮತ್ತೊಂದು ಸಮಸ್ಯೆಯೆಂದರೆ ತಮ್ಮ ಡಬ್ಬಿಯನ್ನು ಕೈಲಿಟ್ಟುಕೊಂಡು ಅಥವಾ ತಮ್ಮ ಸ್ಥಾನದಲ್ಲೇ ಬಿಟ್ಟು ಅಕ್ಕಪಕ್ಕದವರ ಡಬ್ಬಿಯಲ್ಲೇನಿದೆ ಎಂದು ಇಣುಕಿ ಅದಕ್ಕೆ ಕೈಹಾಕುವುದು. `ಅದೇನು? ನಂಗೆ ಬೇಕು ಕೊಡು' ಅಂತ ಕಿತ್ತುಕೊಳ್ಳುವ ಮಕ್ಕಳೂ ಇದ್ದಾರೆ.ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಕಂಡುಕೊಂಡ ಪರಿಹಾರ- `ನಿಮ್ಮ ಡಬ್ಬಿ ನಮ್ಮ ಮೆನು'. ಇಂತಹ `ಎವೆರಿಡೇ ಮೆನು' ಪದ್ಧತಿಯನ್ನು ಜಯನಗರದ ಸುದರ್ಶನ ವಿದ್ಯಾಮಂದಿರ ಶಾಲೆಯು ಅನುಷ್ಠಾನಕ್ಕೆ ತಂದಿದೆ.

`ಮೂರು, ಮೂರೂವರೆ ವರ್ಷ ವಯಸ್ಸಿನ ಮಕ್ಕಳಿಗೆ ಶಾಲೆ, ಲಂಚ್ ಬಾಕ್ಸ್, ಸ್ನ್ಯಾಕ್ಸ್ ಎಂಬ ಚೌಕಟ್ಟು ಹೊಸದು.ಆಕರ್ಷಕವಾಗಿರುವುದನ್ನು ಅವರು ಬಯಸುವುದು ಸಹಜ. ಎಲ್ಲರಿಗೂ ಒಂದೇ ಬಗೆಯ ತಿಂಡಿಯಿದ್ದರೆ ಈ ಪ್ರಮಾದಗಳಿಗೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸ್ಟೂಡೆಂಟ್ ಕೌನ್ಸೆಲರ್ ಹಾಗೂ ಪೌಷ್ಟಿಕ ಆಹಾರ ತಜ್ಞರ ಸಲಹೆ ಪಡೆದು ಸೂಕ್ತ ಆಹಾರಗಳ ಪಟ್ಟಿ ತಯಾರಿಸಿ ಪ್ರಿ ನರ್ಸರಿ, ನರ್ಸರಿ, ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಪೋಷಕರಿಗೆ ನೀಡಿದ್ದೇವೆ.

ಇದರಂತೆ ಸೋಮವಾರ ಮೊಳಕೆಕಾಳು, ಮಂಗಳವಾರ ತರಕಾರಿ ಸಲಾಡ್, ಬುಧವಾರ ಹಣ್ಣುಗಳ ಸಲಾಡ್, ಗುರುವಾರ ಒಣಹಣ್ಣುಗಳು, ಶುಕ್ರವಾರ ಕಡಲೆಕಾಳು/ ಹೆಸರುಕಾಳು ಮತ್ತಿತರ ಕಾಳುಗಳ ಸಲಾಡ್ ತರುವುದು ಕಡ್ಡಾಯ. ಈ ವ್ಯವಸ್ಥೆಗೆ ಪೋಷಕರೂ ಖುಷಿಯಿಂದಲೇ ಒಪ್ಪಿ ಸಹಕರಿಸುತ್ತಿದ್ದಾರೆ. ಇದು ಎಲ್ಲಾ ಶಾಲೆಗಳಿಗೂ ಮಾದರಿಯಾದರೆ ಮಕ್ಕಳಿಗೂ, ಪೋಷಕರಿಗೂ ಒಳ್ಳೆಯದು' ಎಂದು ಸಂಸ್ಥೆಯ ನಿರ್ಧಾರದ ಸ್ಪಷ್ಟ ಕಾರಣ ತಿಳಿಸಿದರು ನಿರ್ದೇಶಕಿ ಹಾಗೂ ಪ್ರಾಂಶುಪಾಲರಾದ ಹೇಮಾ ನಾರಾಯಣನ್.`ಮನೆಯ ಮೆನುವೇ ಬದಲಾಗಲಿ'

ಸಣ್ಣ ಮಕ್ಕಳನ್ನು ಆಹಾರದೆಡೆಗೆ ಸೆಳೆಯುವುದೂ ಒಂದು ಕಲೆ ಎಂಬ ಅನುಭವದ ಮಾತು ಐಟಿ ಉದ್ಯೋಗಿ ಶಿವಗೀತಾ ಅವರದು.

`ಲಂಚ್ ಬಾಕ್ಸ್ ಹೇಗಿರಬೇಕು ಎಂದು ಚಿಂತಿಸುವ ಬದಲು ನಮ್ಮ ಮಕ್ಕಳಿಗೆ ಆರೋಗ್ಯಕರ ಆಹಾರ ಸೇವಿಸುವ ಅಭಿರುಚಿಯನ್ನು ಮನೆಯಲ್ಲಿ ಸಣ್ಣ ವಯಸ್ಸಿನಿಂದಲೇ ಆರಂಭಿಸಬೇಕು. ಅದರ ರುಚಿ ಹತ್ತಿಸಿಕೊಂಡ ಮಕ್ಕಳು ಬೇರೆಯವರ ಡಬ್ಬಿ ಮೇಲೆ ಆಸೆಪಡುವ ಪ್ರಮೇಯವೇ ಬರುವುದಿಲ್ಲ. ಇದು ನನ್ನ ಅನುಭವದ ಮಾತು' ಎನ್ನುತ್ತಾರೆ ಅವರು.ಅವರ ಮಗ ಆದಿತ್ಯನ ಊಟದ ಡಬ್ಬಿಯಲ್ಲಿ ತರಕಾರಿ, ಮೊಳಕೆ ಕಾಳು ಹಾಗೂ ಅಕ್ಕಿಯಿಂದ ತಯಾರಿಸಿದ ಒಂದೊಂದು ತಿನಿಸು ಇರುವಂತೆ ನೋಡಿಕೊಳ್ಳುತ್ತಾರಂತೆ. ಚಪಾತಿ ಅಥವಾ ರೊಟ್ಟಿ ಕೂಡ ಕಡ್ಡಾಯ. ಕಾಳು ನೆನೆಹಾಕಿ ಕಟ್ಟಿ ಇಡಲು ಮರೆತರೆ ರಾತ್ರಿ ನೀರಲ್ಲಿ ನೆನೆಸಿದ ಕಾಳನ್ನು ಸ್ವಲ್ಪ ಅಥವಾ ಪೂರ್ತಿ ಬೇಯಿಸಿ ಅದಕ್ಕೆ ನಿಂಬೆಹಣ್ಣಿನ ರಸ ಹಿಂಡಿ, ಉಪ್ಪು, ಚಾಟ್ ಮಸಾಲಾ ಬೆರೆಸಿ ಹಸಿ ಸಲಾಡ್ ರೂಪದಲ್ಲಿ ಬಾಕ್ಸ್‌ಗೆ ಹಾಕಿಕೊಡುತ್ತಾರಂತೆ. ನರ್ಸರಿ ಹಂತದಲ್ಲಿ ಬಿಸ್ಕತ್ತಿನಂತಹ ಬೇಕರಿ ಉತ್ಪನ್ನಗಳನ್ನು ಕೇಳುತ್ತಿದ್ದ ಆದಿತ್ಯ ಈಗ ಅಮ್ಮನ ಮೆನುವನ್ನು ಮೆಚ್ಚಿ ಚಪ್ಪರಿಸುತ್ತಾನಂತೆ.ಮೊಳಕೆ ಕಾಳು ತಿಂದು ಅಭ್ಯಾಸವಿಲ್ಲದವರಿಗೆ ಹೊಟ್ಟೆ ಉಬ್ಬರವಾದೀತು. ಬೇಯಿಸಿದ ಮೊಳಕೆಕಾಳಿನ ನೀರು ಇಂಗಿಸಿ ಗುಗ್ಗರಿ (ಒಗ್ಗರಣೆ) ಮಾಡಿಕೊಟ್ಟರೆ ಬಾಕ್ಸ್‌ಗೆ ಅತ್ಯುತ್ತಮ ಆಯ್ಕೆಯಾಗುತ್ತದೆ ಎಂಬುದು ಅವರ ಸಲಹೆ.ನೂಡಲ್ಸ್ ಬೇಡ

ಮಂಗಳೂರು ಮೂಲದ ಶಿಕ್ಷಕಿ, ವಿಜಯನಗರದ ಪ್ರತೀಕ್ಷಾ, `ಮಾರುಕಟ್ಟೆಯಲ್ಲಿ ಸಿಗುವ ನೂಡಲ್‌ಗಳಲ್ಲಿ ಪ್ಲಾಸ್ಟಿಕ್‌ನಂತಹ ವಿಷಕಾರಿ ಅಂಶಗಳಿರುವ ವಿಷಯವನ್ನು ಮಗಳು ಅನೂಷಾಳಿಗೆ ತಿಳಿಹೇಳಿದ ಮೇಲೆ ನೂಡಲ್ಸ್ ತಿನ್ನುವುದನ್ನು ಬಿಟ್ಟಿದ್ದಾಳೆ' ಎನ್ನುತ್ತಾರೆ.

ನೀನು ಕೇಳುವ ಆಹಾರ ಯಾಕೆ ಕೆಟ್ಟದು, ನಾನು ಹೇಳುತ್ತಿರುವುದು ಯಾಕೆ ಸರಿ ಎಂದು ಮಕ್ಕಳಿಗೆ ಅರ್ಥಮಾಡಿಸಬೇಕು. ಅರಿವಿಲ್ಲದೆ ಮಾಡುವ ತಪ್ಪುಗಳನ್ನು ತಿದ್ದುವುದು ಸುಲಭ ಎಂಬುದು ಅವರ ಅಭಿಪ್ರಾಯ.

ಜಂಕ್ ಫುಡ್ ಯಾವುದು?

ಮನೆಯಾಚೆ ತಯಾರಿಸಿದ್ದೆಲ್ಲವೂ, ಬೇಕರಿ, ಫುಡ್ ಕಾರ್ನರ್‌ನಲ್ಲಿ ಖರೀದಿಸಿದ್ದೆಲ್ಲವೂ ಜಂಕ್ ಫುಡ್ ಆಗುತ್ತದೆಯೇ ಅಥವಾ ಬರ್ಗರ್, ಪೀಜಾ ಮಾತ್ರವೇ? ಜಂಕ್ ಫುಡ್ ಯಾವುದು ಎಂಬ ಬಗ್ಗೆ ಜನರಿಗೆ ತಿಳಿವಳಿಕೆ ಕಡಿಮೆ ಇದೆ. ಶಾಲೆಗಳಲ್ಲಿ ಈ ಬಗ್ಗೆಯೂ ಮಕ್ಕಳು ಮತ್ತು ಮನೆಯವರಿಗೆ ತಿಳಿಸಿಹೇಳಬೇಕಾದ ಅನಿವಾರ್ಯತೆ ಇದೆ ಎಂಬ ಮಹತ್ವದ ಪ್ರಶ್ನೆಯನ್ನು ಮುಂದಿಡುತ್ತಾರೆ ಸುದರ್ಶನ ವಿದ್ಯಾಮಂದಿರದ ಹೇಮಾ ನಾರಾಯಣನ್.`ನಾವು ನಮ್ಮ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸುವಾಗ ಈ ಅಂಶವನ್ನು ಸ್ಪಷ್ಟವಾಗಿ ಹೇಳುತ್ತೇವೆ. ಮಾತ್ರವಲ್ಲ, ಜಂಕ್ ಫುಡ್ ತಿಂದರೆ ಆಗುವ ತೊಂದರೆಯೇನು ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಿದರೆ ಅವರು ಅದನ್ನು ಕೇಳದೇ ಇರಬಹುದು. ತಂದೆ- ತಾಯಿ ತಮ್ಮ ಭಾವನೆಗಳನ್ನು, ನಿರ್ಧಾರಗಳನ್ನು ಮಕ್ಕಳ ಮೇಲೆ ಹೇರುವ ಬದಲು ಅವರ ಮನವೊಲಿಸಿ ತಮ್ಮ ದಾರಿಗೆ ತಂದುಕೊಳ್ಳುವುದೇ ಸೂಕ್ತ ಎಂಬುದನ್ನೂ ನಾವು ತಿಳಿಸುತ್ತೇವೆ. ಇದನ್ನು ತಿನ್ನಬೇಡಿ ಎಂದರೆ ಯಾಕೆ ತಿನ್ನಬಾರದು ಎಂಬ ಪ್ರಶ್ನೆ ಅವರಲ್ಲಿ ಮೂಡುತ್ತದೆ. ಅದರ ಬದಲು ಇದನ್ನು ತಿನ್ನಬೇಕು ಎಂಬ ಆಯ್ಕೆ ನಮ್ಮಲ್ಲಿದ್ದರೆ ಮಕ್ಕಳು ಖಂಡಿತ ಕೇಳುತ್ತಾರೆ.

ನಮ್ಮ ಸಂಸ್ಥೆಯಲ್ಲಿ ನಾಲ್ಕನೇ ತರಗತಿವರೆಗಿನ ಮಕ್ಕಳಿಗೆ ಮನೆಯಿಂದಲೇ ಊಟ ತಿಂಡಿ ತರಲು ಹೇಳುತ್ತೇವೆ. ದೊಡ್ಡ ಮಕ್ಕಳು ನಮ್ಮ ಸುಸಜ್ಜಿತ ಕ್ಯಾಂಟೀನ್‌ನಲ್ಲಿ ತಿನ್ನುತ್ತಾರೆ. ಹೋಮ್‌ಮೇಡ್ ಫುಡ್ ನಮ್ಮ ಕ್ಯಾಂಟೀನ್‌ನ ವಿಶೇಷ. ಯಾವುದೇ ರೂಪದ ಜಂಕ್ ಫುಡ್ ನಮ್ಮ ಕ್ಯಾಂಟೀನ್‌ನಲ್ಲಿ ಸಿಗುವುದಿಲ್ಲ.ಹೀಗೆ ಮಕ್ಕಳಲ್ಲಿ ಆರೋಗ್ಯಕರ ಆಹಾರಪದ್ಧತಿಯನ್ನು ಮನೆಯಲ್ಲಿ ಸಾಧ್ಯವಾಗದೇ ಇದ್ದರೆ ಶಾಲೆಗಳ ಮೂಲಕವಾದರೂ ಜಾರಿಗೆ ತರುವುದು ಅತ್ಯವಶ್ಯ ಎನ್ನುತ್ತಾರೆ ಅವರು. ಕನಕಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಊಟದ ಡಬ್ಬಿಗೆ ಜಂಕ್ ಫುಡ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಆರೋಗ್ಯಕರ ತಿನಿಸುಗಳನ್ನಷ್ಟೇ ಕೊಡಬೇಕು ಎಂಬ ಷರತ್ತು ಶಾಲಾ ಕೈಪಿಡಿ (ಆಲ್ಮನಾಕ್)ಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.

ಪೌಷ್ಟಿಕ ಆಹಾರ ತಜ್ಞರು ಏನಂತಾರೆ?

ಪೌಷ್ಟಿಕ ಅಂಶಗಳು ಕಡಿಮೆ ಇರುವ ಯಾವುದೇ ಆಹಾರ ಜಂಕ್ ಫುಡ್. ಕೆಟ್ಟ ಎಣ್ಣೆಯಲ್ಲಿ ಬೇಯಿಸಿದ/ಕರಿದ ಆಹಾರ, ಸರಿಯಾಗಿ ಬೇಯಿಸದೇ ಇರುವುದು, ಸೋಡಾ ಬೆರೆಸಿರುವುದು, ರೆಡಿ ಟು ಕುಕ್, ರೆಡಿ ಟು ಈಟ್ ಮಿಕ್ಸ್‌ಗಳೂ ಜಂಕ್ ಫುಡ್‌ಗಳೇ. ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಅವಶ್ಯ ಪೋಷಕಾಂಶ, ಪೌಷ್ಟಿಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಆಹಾರದ ಮೂಲಕ ನೀಡದೇ ಇದ್ದರೆ ಅದು ಮಕ್ಕಳ ಬೆಳವಣಿಗೆಗೆ ನಾವೇ ಕೊಡುವ ಏಟು. ಎಷ್ಟೇ ಮುದ್ದು ಮಾಡಿ. ತಿನ್ನುವ ವಿಚಾರದಲ್ಲಿ ಅವರು ರಗಳೆ, ಹಟ ಮಾಡಿದರೂ ತಾಳ್ಮೆ ಕಳೆದುಕೊಳ್ಳದೆ ಅವರ ಇಷ್ಟದ ತಿನಿಸುಗಳನ್ನೇ ಮಾಡಿಕೊಡುವ ಮೂಲಕ ಅವರನ್ನು ಮನೆಯ ಆಹಾರಕ್ಕೆ ಒಗ್ಗಿಸಿಕೊಳ್ಳಬೇಕು.

ಮ್ಯಾಗಿಯಂತಹ ನೂಡಲ್ಸ್ ಬೇಡ. ಆದರೆ ಬಿಸಿಹಾಲು ಬೆರೆಸಿ ತಿನ್ನಬಹುದಾದ ಕೆಲಾಗ್ಸ್, ಕಾರ್ನ್‌ಫ್ಲೋರ್ ಕೊಡಬಹುದು. ಸಣ್ಣ ಮಕ್ಕಳು ಇವುಗಳನ್ನು ಹಾಗೆಯೇ ತಿನ್ನಲೂ ಇಷ್ಟಪಡುತ್ತಾರೆ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚು ಇರುವುದರಿಂದ ಮಲಬದ್ಧತೆ, ಅಜೀರ್ಣ ಉಂಟಾಗುವುದಿಲ್ಲ.ನರ್ಸರಿ ಅಥವಾ ಪ್ರಿ ನರ್ಸರಿ ಮಕ್ಕಳು ಕಡಿಮೆ ಅವಧಿ ಶಾಲೆಯಲ್ಲಿರುವ ಕಾರಣ ಒಣಹಣ್ಣುಗಳು ಸೂಕ್ತ. ತಲಾ ನಾಲ್ಕೈದು ದ್ರಾಕ್ಷಿ, ಬಾದಾಮಿ, ಅಂಜೂರ, ವಾಲ್‌ನಟ್ ಕೊಡಬಹುದು. ಪಿಸ್ತಾ, ಗೋಡಂಬಿ ಬೇಡ. ಹಾಲು, ಮೊಸರು, ಟ್ರಾಪಿಕಾನಾ ರಿಯಲ್‌ನಂತಹ ಹಣ್ಣಿನರಸವನ್ನೂ ಕೊಡಬಹುದು. ತರಕಾರಿಯಲ್ಲಿ ಕ್ಯಾರೆಟ್, ಎಳೆಸೌತೆಕಾಯಿ ಸೂಕ್ತ. ಮಾಂಸಾಹಾರಿಗಳಿಗೆ ಸ್ಯಾಂಡ್‌ವಿಚ್ ಜತೆಗೆ ಕೋಳಿಮಾಂಸ, ಮೀನು, ಮೊಟ್ಟೆ ಆಮ್ಲೆಟ್ ಕೊಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಒಂದೇ ಸಲ ದೊಡ್ಡ ಪ್ರಮಾಣದ ಊಟ/ತಿಂಡಿಗಿಂತ  ವೈವಿಧ್ಯವಿರುವ ಊಟ ತಿಂಡಿಗಳನ್ನು ನಿಯಮಿತವಾಗಿ, ಸಣ್ಣ ಪ್ರಮಾಣದಲ್ಲಿ ಕೊಟ್ಟರೆ ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ. ಈ ಎಲ್ಲಾ ಆಹಾರದ ಜತೆ ಯಥೇಚ್ಛ ನೀರು ಕುಡಿಯುವ ಶಿಸ್ತನ್ನು ಮಕ್ಕಳಲ್ಲಿ ರೂಢಿಸಬೇಕು.-ಸಂಧ್ಯಾ ಸಿಂಗ್

ಮುಖ್ಯಸ್ಥರು, ಪೌಷ್ಟಿಕ ಆಹಾರ ಮತ್ತು ಪಥ್ಯಾಹಾರ ವಿಭಾಗ,ಅಪೋಲೊ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ. 99455 16163

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.