ಸೋಮವಾರ, ಮಾರ್ಚ್ 8, 2021
29 °C

ಊರುಕೇರಿಯ ಜನಮನದಾಟ

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಊರುಕೇರಿಯ ಜನಮನದಾಟ

ಅನೇಕ ಯುವಕರಲ್ಲಿ ಆತ್ಮವಿಶ್ವಾಸ, ಹೊಸ ಉತ್ಸಾಹವನ್ನು ಮೂಡಿಸಿದ ಆತ್ಮಕಥನ `ಊರುಕೇರಿ~. ಅದು ಕೇವಲ ಕವಿ ಡಾ.ಸಿದ್ಧಲಿಂಗಯ್ಯ ಅವರ ಆತ್ಮಕತೆ ಅಲ್ಲ. `ಅಕ್ಷರ ಸಾಂಗತ್ಯದ ಹೊಸ ಪ್ರಜ್ಞೆಯ ಬೆಳಕಿನಲ್ಲಿ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಮುನ್ನಡೆದ ದಲಿತ ಹುಡುಗನೊಬ್ಬನ ಈ ಯಾತ್ರೆ ಸಮಸ್ತ ದಲಿತರ ಊರುಕೇರಿಯ ಆತ್ಮಕಥಾನಕವೇ ಆಗಿದೆ~. ಸಂಸ್ಕೃತಿ ಚಿಂತಕ ಡಿ.ಆರ್.ನಾಗರಾಜ ಹೇಳಿದಂತೆ ಅದು `ಬಡವರ ನಗುವಿನ ಶಕ್ತಿ~.`ಊರುಕೇರಿ~ ನಾಟಕವಾಯಿತು. ಮಂಗಳೂರಿನಿಂದ ರಾಯಚೂರಿನವರೆಗೂ, ಚಾಮರಾಜನಗರದಿಂದ ಬೀದರ್‌ವರೆಗೂ ಸಂಚರಿಸಿತು. ಊರು- ಕೇರಿಗಳು ಸೇರಿ ನಾಟಕವನ್ನು ಆಸ್ವಾದಿಸಿದವು. ರಂಗ ವಿಮರ್ಶಕರಿಂದಲೂ ಉತ್ತಮ ಸ್ಪಂದನ ದೊರೆಯಿತು. 86 ಪ್ರದರ್ಶನಗಳನ್ನು ಕಂಡಿರುವ ನಾಟಕ ಈಗ ನೂರರತ್ತ ದಾಪುಗಾಲು ಇಡುತ್ತಿದೆ.ಬರುವ ಜೂನ್ 20ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂರನೇ ಪ್ರದರ್ಶನ ನಡೆಯಲಿದೆ. 101ನೇ ಪ್ರದರ್ಶನಕ್ಕೆ ಗೌರಿಬಿದನೂರಿನಿಂದ ಆಹ್ವಾನ ಬಂದಿದೆ. ಗಣೇಶ್ ಪಾಲಿಗೆ ಅದೆಲ್ಲಾ ಮಾಯೆಯಲ್ಲಿ ನಡೆದಂತೆ ಆಗಿದೆ. ನಾಟಕ ಹೀಗೆಲ್ಲಾ ಬೆಳೆಯುತ್ತದೆ ಎಂದು ಅವರು ಕನಸಲ್ಲೂ ಕಂಡಿರಲಿಲ್ಲವಂತೆ.ಊರುಕೇರಿಯನ್ನು ಮೊದಲು ಆಡಿಸಿದ್ದು ಮಂಡ್ಯದ `ನಾವು ತಂಡ~ಕ್ಕಾಗಿ. ಬಹಳ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಆದರೆ ತಂಡದಲ್ಲಿದ್ದವರೆಲ್ಲಾ ಹವ್ಯಾಸಿಗಳು. ಹಾಗಾಗಿ ಅವರಿಗೆ ನಾಟಕವನ್ನು ಬೇರೆ ಬೇರೆ ಊರುಗಳಿಗೆ ಕೊಂಡೊಯ್ಯುವ ಶಕ್ತಿ ಇರಲಿಲ್ಲ. ನಿರ್ದೇಶಕ ಎಂ.ಗಣೇಶ್ ನಾಟಕವನ್ನು ಮುನ್ನಡೆಸಿದರು. ಮಂಡ್ಯದ ಸ್ವಾಮಿ ಗಾಮನಹಳ್ಳಿ ಅವರ ಸಂಗೀತ ಸಂಯೋಜಿಸಿದರು.ಕಿನ್ನಗೋಳಿಯಲ್ಲಿ ಪ್ರದರ್ಶನ ರದ್ದಾಗಿತ್ತು. ಆದರೆ ಬರಿಗೈಯಲ್ಲಿ ಮರಳುವಂತಿರಲಿಲ್ಲ. ಊರಿನ ಮುಖಂಡರನ್ನು ತಂಡ ಸಂಪರ್ಕಿಸಿತು. ಅಲ್ಲಿ ಇದ್ದುದು ಒಂದೇ ಸಭಾಂಗಣ.

ಬೇರೆಯವರು ಬುಕ್ ಮಾಡಿದ್ದಾರೆ ಎಂಬ ಮಾತು ಮುಖಂಡರಿಂದ. ಹೇಗೋ ಮನವೊಲಿಸಲಾಯಿತು.ನಾಟಕ ಎರಡು ಗಂಟೆ ಅವಧಿಯದ್ದು. ಆದರೆ ಅವರು ನೀಡಿದ್ದು ಕೇವಲ ಒಂದು ಗಂಟೆ ಕಾಲಾವಕಾಶ. ನಾಟಕ ಶುರುವಾಯಿತು. ಒಂದು ಗಂಟೆ ಮುಗಿಯುತ್ತ ಬಂತು. ಮುಖಂಡರು ಗಣೇಶರ ಬಳಿ ಬಂದರು. `ಇನ್ನೇನು ಮುಗಿಯಲಿದೆ~ ಎಂದು ಗಣೇಶ್ ಹೇಳಬೇಕು ಆಗ ಮುಖಂಡರು `ನಿಲ್ಲಿಸೋದು ಬೇಡ~ ಎಂದರು. ಜನ ತುದಿಗಾಲಲ್ಲಿ ನಿಂತು ನಾಟಕ ನೋಡುತ್ತಿರುವುದು ಮುಖಂಡರ ಗಮನಕ್ಕೆ ಬಂದಿತ್ತು.ನಾಟಕದಲ್ಲಿ ಸಿದ್ಧಲಿಂಗಯ್ಯ ಅವರ ಕವಿತೆಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ತುಮಕೂರಿನಲ್ಲಿ ಪ್ರದರ್ಶನ ನಡೆಯುತ್ತಿತ್ತು. ಹಾಡು ಮುಗಿದರೂ ಪ್ರೇಕ್ಷಕರು ಸುಮ್ಮನಾಗುತ್ತಿಲ್ಲ!ಕವಿತೆಗಳನ್ನು ಪದಕಟ್ಟಿ ತಾವೇ ಹಾಡುತ್ತಿದ್ದಾರೆ. ದಮ್ಮಡಿ, ತಮಟೆಗಳು ಸದ್ದು ಮಾಡುತ್ತಿವೆ. ಪಾತ್ರಧಾರಿಗಳಿಗೂ ಹಿಗ್ಗು. ಮತ್ತೊಂದು ಹಾಡು ಬಂದಾಗಲೂ ಅದೇ ಕತೆ ಪುನರಾವರ್ತನೆ. ಸರಿ ಪ್ರೇಕ್ಷಕರ  ಹಾಡು ನಿಂತ ಮೇಲೆ ನಾಟಕ ಮುಂದುವರಿಸಲು ತೀರ್ಮಾನಿಸಲಾಯಿತು!ಔರಾದ್‌ನಲ್ಲಿ ಪ್ರದರ್ಶನ. ತಂಡವೇನೋ ಸರಕು ಸರಂಜಾಮುಗಳೊಂದಿಗೆ ಊರಿಗೆ ಬಂದು ಬಿಟ್ಟಿದೆ. ಬಹಳಷ್ಟು ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ಅಷ್ಟೂ ಜನರಿಗೆ ಜಾಗ ಹೊಂದಿಸಲು ಆಗುತ್ತಿಲ್ಲ. ಕಡೆಗೆ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ರದ್ದುಗೊಳಿಸಿ ನಾಟಕ ನಡೆಸಲಾಯಿತು.ಆತ್ಮಕತೆಯ ಮೊದಲ ಭಾಗವನ್ನು ಆಧರಿಸಿದೆ ನಾಟಕ. ಬಾಲ್ಯದ ಬದುಕಿನಿಂದ, ಮಾಸ್ತಿರಿಕೆ ಮಾಡುವವರೆಗಿನ ಸಿದ್ಧಲಿಂಗಯ್ಯನವರ ಬದುಕಿನ ಚಿತ್ರಣ ಇಲ್ಲಿದೆ. 70ರ ದಶಕದಲ್ಲಿ ರಾಜ್ಯ ಕಂಡ ಚಳವಳಿಗಳ ಪಾದರಸದ ಗುಣವನ್ನು ನಾಟಕದಲ್ಲಿ ಹಿಡಿದಿಡಲಾಗಿದೆ. ಲಘುದಾಟಿ, ತೆಳು ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ಪ್ರೇಕ್ಷಕರಿಗೆ ದಾಟಿಸಲಾಗಿದೆ.ಮೂವತ್ತೇಳರ ಪ್ರಾಯದ ಗಣೇಶ್ ಅವರ ಬದುಕೂ ಒಂದರ್ಥದಲ್ಲಿ `ಊರುಕೇರಿ~ಯೇ. ಸಿದ್ಧಲಿಂಗಯ್ಯನವರಂತೆ ಅವರೂ ನಗರದ ನೆರಳಿರುವ ಹಳ್ಳಿಯೊಂದರಿಂದ ಹುಟ್ಟಿಬಂದವರು. ಊರು ಹೊಸಕೋಟೆ ತಾಲ್ಲೂಕಿನ ತಿಮ್ಮಪ್ಪನಹಳ್ಳಿ. ತಾಯಿ ಜಾನಪದ ಹಾಡುಗಾರ್ತಿ. ಊರಿನಲ್ಲಿ ಆಡುತ್ತಿದ್ದ ಕಂಪೆನಿ ನಾಟಕಗಳು, ಹರಿಕತೆ ದಾಸರ ಕತೆಗಳು ಅವರೊಳಗೆ `ಆಟ~ ಹುಟ್ಟು ಹಾಕಿದವು.

 

ಜತೆಗೆ ಶಾಲೆಯಲ್ಲಿ ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ನಾಟಕದಲ್ಲಿ ಪಾಲ್ಗೊಳ್ಳುವ ಹುಚ್ಚು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ ಬೇರೊಂದು ಲೋಕವೇ ತೆರೆದುಕೊಂಡಿತು. ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ ಕೆ.ಮರುಳಸಿದ್ದಪ್ಪ, ನಟರಾಜ್ ಹುಳಿಯಾರ್, ಬಸವರಾಜ ಕಲ್ಗುಡಿ ಮುಂತಾದ ಗುರುಗಳೊಂದಿಗೆ ಒಡನಾಟ. ಜತೆಗೆ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕ.ರೈತ ಸಂಘದ ಹೋರಾಟಗಳ ದಟ್ಟ ಪ್ರಭಾವ. ಗದ್ದರ್, ಎಂ.ಡಿ. ನಂಜುಂಡಸ್ವಾಮಿ, ಅನಂತಮೂರ್ತಿ, ಸಿದ್ಧಲಿಂಗಯ್ಯ ಅವರೊಂದಿಗೆ ಚರ್ಚಿಸುವ ಅವಕಾಶ. `ಏಕಲವ್ಯ~ ನಾಟಕ ಆಡಿದ್ದು ಕಾಲೇಜು ದಿನಗಳ ಮರೆಯಲಾರದ ಅನುಭವ.ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಗಣೇಶ್. ಅದಾದ ಕೆಲವು ದಿವಸಗಳಲ್ಲೇ ಕಿ.ರಂ.ನಾಗರಾಜ ಅವರಿಂದ ಕರೆ ಬಂತು. ಸೀದಾ ನೀನಾಸಂ ದಾರಿ ಹಿಡಿಯುವಂತೆ ಆಜ್ಞಾಪಿಸಿದರು.

 

ಅದಷ್ಟೇ ಅಲ್ಲ ಸ್ವತಃ ಅರ್ಜಿ ತಂದು, ಅದನ್ನು ಅವರೇ ತುಂಬಿ, ಕೈಗೆ ಐನೂರು ರೂಪಾಯಿ ದುಡ್ಡು ಕೊಟ್ಟು `ಗಣೇಶ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗು ಅಲ್ಲಿಂದ ಸಾಗರಕ್ಕೆ ಬಸ್ ಹಿಡಿ. ಹೆಗ್ಗೋಡು ಎಂದು ಯಾರನ್ನಾದರೂ ಕೇಳು. ದಾರಿ ತೋರುತ್ತಾರೆ. ಅಲ್ಲೇ ಇರೋದು ನೀನಾಸಂ~ ಎಂದು ಬೆನ್ನು ತಟ್ಟಿದರು.ನೀನಾಸಂನಲ್ಲಿ ಸಂದರ್ಶನ ಮುಗಿಯಿತು. ಆಯ್ಕೆಯಾಗಿರುವ ವಿಷಯವೂ ತಿಳಿಯಿತು. ರಂಗಭೂಮಿಯ ಇಂಚಿಂಚನ್ನೂ ಅನುಭವಿಸುತ್ತ ಹೋದರು ಗಣೇಶ್. ನಾಟಕವೇ ತಮ್ಮ ಕ್ಷೇತ್ರ ಎಂದು ಗಣೇಶರಿಗೆ ಅನಿಸತೊಡಗಿದ್ದು ಆಗ.

 

ಒಂದು ವರ್ಷ ಅಧ್ಯಯನ, ಎರಡು ವರ್ಷ ತಿರುಗಾಟದಲ್ಲಿ ಕಳೆದರು. ಸ್ಮಶಾನ ಕುರುಕ್ಷೇತ್ರ, ಭಗವದ್ದಜ್ಜುಕೀಯಂ, ಮೂವರು ಅಕ್ಕತಂಗಿಯರು, ವಿದುಷಿಯ ವಿದೂಷಕ, ಕತ್ತಲೆಗೆ ಹತ್ತು ತಲೆ ನಾಟಕಗಳಲ್ಲಿ ಪಾಲ್ಗೊಂಡರು. ನೀನಾಸಂನಲ್ಲೇ ಮೇಷ್ಟ್ರಾಗುವ ಅವಕಾಶ ಒದಗಿಬಂತು.

 

ನಾಟಕ ಕುಟುಂಬದ ಕಾಯಂ ಸದಸ್ಯರಾದರು ಅವರು. ಮರು ತಿರುಗಾಟ ಆರಂಭ. ಕಾಲದಿವ್ಯ, ಆ ಮನಿ, ಕೇಶಪಾಶ ಪ್ರಪಂಚ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದರು.ರುಸ್ತುಂ ಬರೂಚ, ಕನ್ನೈಲಾಲ್, ಬಿ.ವಿ.ಕಾರಂತ, ಪ್ರಸನ್ನ, ಕೆ.ವಿ.ಅಕ್ಷರ, ವೆಂಕಟರಮಣ ಐತಾಳ, ಮಹಾಬಲೇಶ್ವರ ಮುಂತಾದವರ ಸ್ನೇಹ, ಮಾರ್ಗದರ್ಶನ ದೊರೆಯಿತು.ರಜೆಯ ದಿನಗಳನ್ನು ಕ್ರಿಯಾಶೀಲವಾಗಿ ಕಳೆಯುವ ಹಂಬಲ ಗಣೇಶರಿಗೆ. ಮಳೆಗಾಲದಲ್ಲಿ ಮೋಡ ಕಟ್ಟುವಂತೆ ನೀನಾಸಂಗೆ ಬಿಡುವಿದ್ದ ಸಮಯದಲ್ಲಿ ನಾಟಕ ಆಡಿಸಲು ಮುಂದಾದರು.

 

2005ರಲ್ಲಿ ನೀನಾಸಂ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು `ಜನಮನದಾಟ~ ರಂಗತಂಡ ಕಟ್ಟಿದರು. `ಊರುಕೇರಿ~ ಮಾತ್ರವಲ್ಲದೆ ಅನೇಕ ಪ್ರಯೋಗಗಳನ್ನು ನಡೆಸಿತು.

 

ತಂಡಕ್ಕೆ ಬಲು ಜನಪ್ರಿಯತೆಯನ್ನು ತಂದುಕೊಟ್ಟದ್ದು ಶ್ರೀನಿವಾಸ ವೈದ್ಯರ ಎರಡು ಕತೆಗಳನ್ನು ಆಧರಿಸಿದ `ಶ್ರದ್ಧಾ ಮತ್ತು ಹಣತೆ~ ನಾಟಕ. ನಂತರ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡರ `ಉಚಲ್ಯಾ~, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ `ರಹಸ್ಯ ವಿಶ್ವ ಮತ್ತು ತಬರನ ಕಥೆ~, ಮುಕುಂದರಾವ್ ಅವರ `ಬಾಬಾ ಸಾಹೇಬ್ ಅಂಬೇಡ್ಕರ್~, `ಸೂರ್ಯನ ಕುದುರೆ~ ಕೃತಿಗಳನ್ನು ರಂಗರೂಪಕ್ಕಿಳಿಸಲಾಯಿತು.`ಜನಮನದಾಟ~ ಕೇವಲ ಒಬ್ಬರ ಕೂಸಲ್ಲ. ಅದು ಹುಟ್ಟಿದಾಗ ಒಬ್ಬರೇ ನಿರ್ದೇಶಕರು ಇರಲಿಲ್ಲ. ತಾಲೀಮು ನಡೆಸುವಾಗಲೂ ಅಷ್ಟೇ. ಒಂದೇ ಕತೆಯನ್ನು ಹಲವರು ನಿರ್ದೇಶಿಸುವುದು, ಅವುಗಳಲ್ಲಿ ಯಾವುದು ಉತ್ತಮ ಫಸಲೋ ಅದನ್ನು ಬಳಸಿಕೊಳ್ಳುವುದು ಎಂದಾಗಿತ್ತು. ಅದೇ ಯಶಸ್ಸಿಗೂ ನಾಂದಿ ಹಾಡಿತು.

 

ಸರಳ ರಂಗಪರಿಕರಗಳನ್ನೇ ಉಪಯೋಗಿಸಿಕೊಂಡು ನಾಟಕ ಮಾಡುವುದು. ಲಕ್ಷ್ಮಣ ಪೀರಗಾರ, ಸಿತಾರ, ಕಲ್ಲಪ್ಪ ಪೂಜಾರ್, ಮಹದೇವ್ ಲಾಲಿಪಾಳ್ಯ, ಚಂದ್ರಮ್ಮ, ಎಂ.ಸೂರ್ಯ, ಕೆ.ಎನ್.ಜಯರಾಂ, ಚೈತ್ರ, ಅರುಣ್ ಮಾನ್ವಿ ಹಾಗೂ ಎಸ್.ಪಿ. ಮಂಜುನಾಥ ಮುಂತಾದವರು `ಜನಮನದಾಟ~ದ ಬೆನ್ನೆಲಬುಗಳು.ಸಿದ್ಧ ನಾಟಕಗಳಿಗಿಂತಲೂ ಕಥೆಗಳನ್ನೇ ಆಯ್ದುಕೊಂಡು ನಾಟಕ ಆಡಿಸುವುದು ಗಣೇಶರ ವೈಶಿಷ್ಟ್ಯ. ಹೀಗೇಕೆ ಎಂಬ ಪ್ರಶ್ನೆ ಎತ್ತಿದಾಗ ಅವರು, `ಹಲವು ವರ್ಷಗಳಿಂದ ಮಹತ್ವದ ನಾಟಕ ಕೃತಿಗಳು ಕನ್ನಡದಲ್ಲಿ ಬಂದಿಲ್ಲ. ಆದರೂ ಕನ್ನಡ ರಂಗಭೂಮಿ ಬೆಳಗುತ್ತಿದೆ. ಇದಕ್ಕೆ ಕಾರಣ ಅದು ಕಾವ್ಯ, ಕತೆ, ಹರಟೆ ಕಡೆ ಕಡೆಗೆ ಪತ್ರಿಕಾ ವರದಿಗಳನ್ನೂ ಆಧಾರವಾಗಿಟ್ಟುಕೊಂಡು ನಾಟಕ ಆಡಿಸುತ್ತಿರುವುದು~ ಎಂದರು.ಚಿಕ್ಕಂದಿನಲ್ಲಿ ಅವರು ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ನೋಡುತ್ತಿದ್ದರು. ಆಗೆಲ್ಲಾ ನಮ್ಮಂಥವರಿಗೂ ವಿಮಾನದಲ್ಲಿ ಹಾರಲು ಸಾಧ್ಯವಾ ಎಂದು ಕೇಳಿಕೊಳ್ಳುತ್ತಿದ್ದರು.2007ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ನೀಡಿತು. ಆಗ ವಿಮಾನವೇರುವ ಅವಕಾಶ. ದಲಿತ ಹುಡುಗನೊಬ್ಬ ವಿಮಾನವೇರಿದ್ದು ಅವರೊಳಗೆ ಮಾತ್ರವಲ್ಲ, ಅನೇಕ ಗೆಳೆಯರಲ್ಲಿ, ಹುಟ್ಟಿದೂರಿನಲ್ಲಿ ಪುಳಕ ಮೂಡಿಸಿತ್ತು!ಗಣೇಶ್ ಹೆಗ್ಗೋಡಿನ `ಚರಕ~, ಅಂಕೋಲಾದ `ಸಂಗಾತಿ ರಂಗಭೂಮಿ~, ಸಾಗರದ `ಸ್ಪಂದನ~, `ಕಾಗೋಡು ರಂಗಮಂಚ~ ಮತ್ತಿತರ ಸಂಘಟನೆಗಳೊಂದಿಗೆ ದುಡಿದಿದ್ದಾರೆ.ಈಗ ಕುವೆಂಪು ವಿಶ್ವವಿದ್ಯಲಯದಲ್ಲಿ `ಆಧುನಿಕ ಕನ್ನಡ ರಂಗಭೂಮಿಯ ಹೊಸ ಸಾಧ್ಯತೆಗಳು~ ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ. `ಊರುಕೇರಿ~ ನಾಟಕ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9900257750.ವಿಳಾಸ: ಎಂ. ಗಣೇಶ್, ಅಧ್ಯಾಪಕರು, ನೀನಾಸಂ ರಂಗ ಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.