ಮಂಗಳವಾರ, ಜೂನ್ 15, 2021
21 °C

ಎಂಜಿನಿಯರ್ ಜಕ್ಕಣ್ಣ!

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಎಂಜಿನಿಯರ್ ಜಕ್ಕಣ್ಣ!

ಅಮರಶಿಲ್ಪಿ ಜಕ್ಕಣಾಚಾರಿ ಆ ಕಾಲದ ಎಂಜಿನಿಯರ್. ಈ ಕಾಲದ ಎಂಜಿನಿಯರ್ `ಜಕ್ಕಣ್ಣ~! ಹೌದು, ಜಕ್ಕಣ್ಣನಾಗಿ ಕಾಣಿಸಿಕೊಳ್ಳುತ್ತಿರುವ ಯುವರಾಜ್ ಮೂಲತಃ ಎಂಜಿನಿಯರ್. ಅದಕ್ಕೂ ಮಿಗಿಲಾಗಿ ಇವರು `ಅಮರಶಿಲ್ಪಿ...~ ಕಲ್ಯಾಣ್‌ಕುಮಾರ್ ಅವರ ಮೊಮ್ಮಗ. ಜಡೆಯಂತಹ ಉದ್ದ ಕೂದಲು, ವಿಶ್ವಾಸ ತುಂಬಿದ ಕಣ್ಣಗಳು, ಆ್ಯಕ್ಷನ್ ಚಿತ್ರಗಳಿಗೆ ಹೇಳಿ ಮಾಡಿಸಿದ ದೇಹಭಾಷೆ. ನೋಟದಿಂದಲೇ ಸೆಳೆಯಬಲ್ಲ ಆಕರ್ಷಕ ವ್ಯಕ್ತಿತ್ವದವರು ಯುವರಾಜ್.  ಚಿಕ್ಕವಯಸ್ಸಿನಿಂದಲೂ ತಾತನ ನಟನೆಯೇ ದೊಡ್ಡ ಪ್ರೇರಣೆ. ಐದನೇ ತರಗತಿಯಲ್ಲಿ ತಾತನ ಚಿತ್ರವೊಂದರಲ್ಲಿ ನಟಿಸುವ ಅವಕಾಶ. ಜಗ್ಗೇಶ್ ಅದರಲ್ಲಿ ಅಭಿನಯಿಸುತ್ತಿದ್ದರು.

 

ಒಂದು ದಿನ ಶೂಟಿಂಗ್ ವೇಳೆ ಯಾವುದೋ ತಪ್ಪಿಗೆ ಅಜ್ಜನಿಂದ ಎಲ್ಲರ ಮುಂದೆ ಬೈಗುಳ. ಇವರಿಗೆ ಅಪಮಾನ. ಉಳಿದದ್ದು ಕಣ್ಣೀರು ಮಾತ್ರ. ಚಿತ್ರೀಕರಣ ಮುಗಿದ ಮೇಲೆ ಅಜ್ಜ ಮೆಲ್ಲಗೆ ಕರೆದರು. ನಟನೆ ಎಲ್ಲರಿಗೂ ಸಾಧ್ಯವಾದ ಮಾತಲ್ಲ ಎಂಬ ಬುದ್ಧಿಮಾತು ಹೇಳಿದರು. ತಿಳಿಯುವುದು ಕಲಿಯುವುದು ಬಹಳಷ್ಟಿದೆ ಎಂದರು.ಈ ಮಧ್ಯೆ ಓದು ಮುಖ್ಯವಾಗಿತ್ತು. ಸೂಕ್ತ ವಿದ್ಯಾಭ್ಯಾಸ ದೊರೆಯುವವರೆಗೆ ಅಭಿನಯಕ್ಕೆ ಪೂರ್ಣವಿರಾಮ ದೊರೆಯಿತು. ಅಪ್ಪ ದ್ವಾರಕಾನಾಥ್ ಕೂಡ ಓದನ್ನು ಮುಂದುವರಿಸುವಂತೆ ತಾಕೀತು ಮಾಡಿದ್ದರು.ಚಿತ್ರರಂಗದ ಅನಿಶ್ಚಿತತೆ ಯುವರಾಜ್‌ಗೂ ತಿಳಿದಿತ್ತು. ಓದುವಾಗಲೂ ಗೊಂದಲ. ತಾನು ಅಂದುಕೊಂಡಿದ್ದೇ ಬೇರೆ ಆಗುತ್ತಿರುವುದೇ ಬೇರೆ ಎಂಬ ಯಾತನೆ. ಯಾವಾಗ ಎಂಜಿನಿಯರಿಂಗ್ ಪದವಿ ಪಡೆದರೋ ಆಗ ಎಲ್ಲದಕ್ಕೂ ಮುಕ್ತಿ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡುವ ಸ್ವಚ್ಛಂದ ಹಕ್ಕಿ.ಮಾಡೆಲಿಂಗ್ ಕಡೆಗೆ ಆಕರ್ಷಣೆ. ಒಂದೆರಡು ಸಲ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದುಂಟು. ಯಾವುದಕ್ಕೂ ಇರಲಿ ಎಂದು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. ಆಗಲೂ ಅವರನ್ನು ಅಪ್ಪಟವಾಗಿ ಆವರಿಸಿದ್ದು ಚಿತ್ರರಂಗವೇ. ಇತ್ತ ನೃತ್ಯ, ಸಾಹಸ ಕಲೆಗಳ ಅಧ್ಯಯನ. ಆನಂದ್, ಚಂದ್ರಮೋಹನ್, ಚಂದ್ರಮಯೂರ್ ಅವರು ನೃತ್ಯಗುರುಗಳು. ಫೈಟಿಂಗ್ ಹೇಳಿಕೊಟ್ಟಿದ್ದು ರವಿ ಜಮಖಂಡಿ ಹಾಗೂ ಅಲ್ಟಿಮೇಟ್ ಶಿವು.ಈ ಮಧ್ಯೆ ತಮಿಳು ಚಿತ್ರವೊಂದರಲ್ಲಿ ಅವಕಾಶ ಅರಸಿ ಬಂದಿತ್ತು. ತೆಲುಗಿನ `ಹ್ಯಾಪಿಡೇಸ್~ನ ರೀಮೇಕ್ ಅದು. ಆದರೆ ಯುವರಾಜ್ ಒಪ್ಪಲಿಲ್ಲ. ಕನ್ನಡದಿಂದಲೇ ಪ್ರವೇಶ ಆರಂಭಿಸುವ ಬಯಕೆ.ಹಾಗಾಗಿ ಅನೇಕ ವರ್ಷ ಒಳ್ಳೆಯ ಕತೆಗಾಗಿ ಕಾದು ಕುಳಿತರು. ಆಗ ಸಿಕ್ಕಿದ್ದು `ಜಕ್ಕಣ್ಣ~. ಅಂದಹಾಗೆ ಜಕ್ಕಣ್ಣನಿಗೂ ಜಕ್ಕಣಾಚಾರಿಗೂ ಯಾವುದೇ ಸಂಬಂಧವಿಲ್ಲವಂತೆ. ಅಜ್ಜನ ಮೇಲಿನ ಪ್ರೀತಿಗೆ ಇಟ್ಟ ಹೆಸರು ಇದು. ಸಸ್ಪೆನ್ಸ್ ಜತೆಗೆ ಆ್ಯಕ್ಷನ್ ಇರುವ ಚಿತ್ರದಲ್ಲಿ ಹೊಸಮುಖಗಳೇ ಹೆಚ್ಚು. ನಿರ್ದೇಶಕ ರಮೇಶ್ ಕೂಡ ಹೊಸಬರೇ. ಕತೆ ಪೂರ್ಣ ಸಿದ್ಧಗೊಂಡ ಮೇಲೆ ಜಕ್ಕಣ್ಣನ ನಾಯಕಿಗಾಗಿ ಹುಡುಕಾಟ ಸಾಗಿದೆ.ಚೊಚ್ಚಲ ಚಿತ್ರವಾದ್ದರಿಂದ ಯುವರಾಜ್ ಬಗೆಗಿನ ನಿರೀಕ್ಷೆಗಳೂ ಹೆಚ್ಚಿವೆಯಂತೆ. ಹಾಗಾಗಿ ಚಿತ್ರವನ್ನು ಹೆಚ್ಚು ಕಾಳಜಿಯಿಂದ ನಿರ್ಮಿಸಲಾಗುತ್ತಿದೆ. ಕನ್ನಡ ಚಲನಚಿತ್ರ ಎಂದರೆ ಮೂಗುಮುರಿಯುವ ಐಟಿ ಮಂದಿಗೆ ಒಂದೊಳ್ಳೆ ಚಿತ್ರ ನೀಡಬೇಕು, ಅವರೂ ಕನ್ನಡ ಚಿತ್ರಗಳತ್ತ ಮುಖ ಮಾಡುವಂತಾಗಬೇಕು ಎನ್ನುವುದು ಯುವರಾಜರ ಹೆಬ್ಬಯಕೆ.ಅಂದಹಾಗೆ, ತಾತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವುದರಿಂದ ಸವಾಲು ಹೆಚ್ಚಿದೆ ಎನ್ನುತ್ತಾರೆ ಯುವರಾಜ್. `ಒಬ್ಬ ಹಿರಿಯ ಕಲಾವಿದನ ಕುಡಿ ಹೇಗೆ ನಟಿಸಬಲ್ಲದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಆ ನಿರೀಕ್ಷೆಯನ್ನು ಸುಳ್ಳಾಗಿಸಬಾರದು. ಆದ್ದರಿಂದಲೇ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.ನಟನೆಯಲ್ಲಿ ತಾತ ನನ್ನ ಗುರು. ಆದರೆ ಅವರನ್ನು ಅನುಕರಿಸಲಾರೆ. ಅದು ಎಂದಿಗೂ ಸಾಧ್ಯವಿಲ್ಲ~ ಎಂಬುದು ಅವರ ವಿನಯ ತುಂಬಿದ ಮಾತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.