ಶನಿವಾರ, ಜೂನ್ 12, 2021
28 °C
ಹರೆಯದಲ್ಲೇ ಮೂತ್ರ­ಪಿಂಡ ವೈಫಲ್ಯದ ಸಮಸ್ಯೆ

ಎಂಟು ವರ್ಷವಾದರೂ ಸಿಗದ ದಾನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೀವನದ ಆರೋಗ್ಯಕರ ಕ್ಷಣಗಳನ್ನು ಕಳೆಯಲು ಚಿತ್ರದುರ್ಗದ ಕಾಲೇಜು ವಿದ್ಯಾರ್ಥಿ ಆದರ್ಶ ದಿವಾ­ಕರ್ ಕಳೆದ 8 ವರ್ಷಗಳಿಂದ ಕಾಯು­ತ್ತಲೇ ಇದ್ದಾರೆ. ಆದರೆ, ಅವರಿಗೆ ಅಗತ್ಯ­ವಾದ ಮೂತ್ರಪಿಂಡ ದಾನ­ವಾಗಿ ನೀಡು­ವವರು ಮಾತ್ರ ಇದುವರೆಗೆ ಸಿಕ್ಕಿಲ್ಲ.ಆದರ್ಶ, 21ರ ಹರೆಯದಲ್ಲೇ ಮೂತ್ರ­ಪಿಂಡ ವೈಫಲ್ಯದ ಸಮಸ್ಯೆಗೆ ತುತ್ತಾ­­ಗಿದ್ದು, ಕಳೆದ ಒಂದೂವರೆ ವರ್ಷ­­ದಿಂದ ಡಯಾಲಿಸಿಸ್‌ ಮೇಲಿ­ದ್ದಾರೆ. ಅಂಗಾಂಗ ಕಸಿಗೆ ಸಂಬಂಧಿಸಿದ ವಲಯ ಸಮನ್ವಯ ಸಮಿತಿ (ಜೆಡ್‌ಸಿಸಿಕೆ)­ಯಲ್ಲಿ ಅವರು 2005­ರಲ್ಲೇ ಹೆಸರು ನೋಂದಣಿ ಮಾಡಿ­ಕೊಂಡಿ­ದ್ದಾರೆ. ಆದರೆ, ಮೂತ್ರಪಿಂಡ­ವನ್ನು ದಾನವಾಗಿ ಸ್ವೀಕರಿಸಲು ಅವರ ಪಾಳಿ ಮಾತ್ರ ಬಂದಿಲ್ಲ.‘ಯಾರಾದರೂ ಮೂತ್ರಪಿಂಡವನ್ನು ದಾನ ಮಾಡುವ ಕ್ಷಣಕ್ಕಾಗಿ ಕಾಯುತ್ತಿ­ದ್ದೇನೆ. ಇತರರಂತೆ ನೆಮ್ಮದಿಯ ಜೀವನ ನಡೆಸುವ ಅಭಿಲಾಷೆ ನನ್ನದಾ­ಗಿದೆ. ಮೂತ್ರಪಿಂಡ ಸಿಕ್ಕರೆ ನನಗೆ ಪುನ­ರ್ಜನ್ಮವೇ ಸಿಕ್ಕಂತೆ’ ಎಂದು ಹೇಳುತ್ತಾರೆ ಬಿ.ಎ ಅಂತಿಮ ವರ್ಷದಲ್ಲಿ ಓದುತ್ತಿರುವ ಆದರ್ಶ.‘ನನ್ನ ಗೆಳೆಯರೆಲ್ಲ ವಾರಕ್ಕೆ ಆರು ದಿನ ತರಗತಿಗೆ ಹಾಜರಾದರೆ ನಾನು ಕೇವಲ ಮೂರು ದಿನ ಹೋಗುತ್ತೇನೆ. ಮಿಕ್ಕ ಮೂರು ದಿನ ಡಯಾಲಿಸಿಸ್‌ಗೆ ತೆರಳಬೇ­ಕಾಗುತ್ತದೆ. ಜೆಡ್‌ಸಿಸಿಕೆಯಲ್ಲಿ ಹೆಸರು ನೋಂದಾಯಿಸಿಕೊಂಡು ಎಂಟು ವರ್ಷ­ಗಳೇ ಕಳೆದಿದ್ದರೂ ಇದುವರೆಗೆ ಒಮ್ಮೆಯೂ ಅಲ್ಲಿಂದ ನನಗೆ ಕರೆ ಬಂದಿಲ್ಲ’ ಎಂದು ಅತ್ಯಂತ ನೋವಿನಿಂದ ವಿವರಿಸುತ್ತಾರೆ. ಆದರ್ಶ ಅವರಿಗೆ ಚಿಕಿತ್ಸೆ ನೀಡುತ್ತಿ­ರುವ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ. ಅನಿಲ್‌ ಕುಮಾರ್‌, ‘ಮೂತ್ರ­ಪಿಂಡ ಕಸಿ ಮಾಡಲು ರಕ್ತದ ಗುಂಪು ಮತ್ತು ರೋಗಿಯ ವಯಸ್ಸು ಎರಡೂ ಮುಖ್ಯ. ವಿರಳ ರಕ್ತದ ಗುಂಪಾಗಿದ್ದು, ರೋಗಿಗೆ ವಯಸ್ಸಾಗಿ­ದ್ದರೆ ಕಸಿ ಮಾಡುವುದು ಕಷ್ಟ’ ಎಂದು ಹೇಳುತ್ತಾರೆ.ರಾಜ್ಯದಲ್ಲಿ ಮೂತ್ರಪಿಂಡದ ದಾನ­ಕ್ಕಾಗಿ ಕಾಯ್ದಿರುವ ಜನರ ಸಂಖ್ಯೆ ದೊಡ್ಡ­ದಿದೆ. ‘ನಮ್ಮಲ್ಲಿ ಒಟ್ಟಾರೆ 910 ಜನ ಹೆಸರು ನೋಂದಣಿ ಮಾಡಿ­ಕೊಂಡಿ­ದ್ದಾರೆ. ಆದರೆ, ಮೃತರಿಂದ ವಿರಳ­ವಾಗಿ ಮೂತ್ರಪಿಂಡಗಳು ದಾನವಾಗಿ ಸಿಗುತ್ತಿವೆ. ಹೀಗಾಗಿ ಕಾಯುವುದು ಅನಿವಾರ್ಯ­ವಾಗಿದೆ’ ಎಂದು ಜೆಡ್‌ಸಿಸಿಕೆ ಮುಖ್ಯ ಕಸಿ ಸಮನ್ವಯಾ­ಧಿಕಾರಿ ಕೆ.ಯು. ಮಂಜುಳಾ ಕನ್ನಡಿ ಹಿಡಿಯುತ್ತಾರೆ.‘ಅಂಗಾಂಗಳ ಕಸಿಗಾಗಿ ಪ್ರತಿಯೊಬ್ಬ ರೋಗಿ ಕನಿಷ್ಠ ಮೂರು ತಿಂಗಳು ಕಾಯಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ. ‘ಮೂತ್ರಪಿಂಡಕ್ಕಾಗಿ ಅಧಿಕ ಬೇಡಿಕೆ ಇರುವುದರಿಂದ ರೋಗಿ­ಗಳ ಕಾಯುವ ಅವಧಿ ತುಂಬಾ ಹೆಚ್ಚಾಗಿದೆ’ ಎಂದು ಮಣಿಪಾಲ್‌ ಆಸ್ಪತ್ರೆ ನಿರ್ದೇಶಕ ಡಾ.ಎಚ್‌.ಎಸ್‌. ಸುದರ್ಶನ ಬಲ್ಲಾಳ ವಿವರಿಸುತ್ತಾರೆ.‘ಮೂತ್ರಪಿಂಡ ವೈಫಲ್ಯದ ಸಮಸ್ಯೆಗೆ ಡಯಾಲಿಸಿಸ್‌ ಉತ್ತಮ ಪರಿಹಾರ­ವಲ್ಲ. ಇದರಿಂದ ಸಂಕೀರ್ಣ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯೇ ಹೆಚ್ಚು’ ಎಂದು ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.