ಸೋಮವಾರ, ಜನವರಿ 27, 2020
22 °C

ಎಂಪಿಎಂಗೆ ಮಾರುಕಟ್ಟೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದ ತನಕ ಪೇಪರ್ ಹಾಗೂ ಷುಗರ್ ಹೆಚ್ಚು ಬಿಕರಿಯಾಗುವ ಸಮಯ. ಆದರೆ, 11,275 ಟನ್ ಕಾಗದ ಹಾಗೂ 2,15,000 ಕ್ವಿಂಟಲ್ ಸಕ್ಕರೆ ದಾಸ್ತಾನು ಮಾಡಿರುವ ಇಲ್ಲಿನ ಎಂಪಿಎಂ ಕಾರ್ಖಾನೆ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿದೆ.ಹೌದು! ಇದು ಸತ್ಯ. ಇದನ್ನು ಕಾರ್ಮಿಕ ಮುಖಂಡರಾಗಲಿ, ಅಧಿಕಾರಿಗಳಾಗಲಿ ಅಲ್ಲಗೆಳೆಯುವುದಿಲ್ಲ. ಬದಲಾಗಿ ಮಾರುಕಟ್ಟೆ ಪೈಪೋಟಿಯ ಈ ಸಂದರ್ಭದಲ್ಲಿ ಉತ್ತಮದರ್ಜೆ ವಸ್ತುವನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಿದಲ್ಲಿ ನಷ್ಟತೆ ಹೆಚ್ಚುತ್ತದೆ ಎಂಬುದು ಒಟ್ಟಾರೆ ಅಭಿಪ್ರಾಯ.

 

ಇದರಿಂದಾಗಿ ಕಾರ್ಖಾನೆಯ ಮೂರು ಗೋದಾಮು ಭರ್ತಿಯಾಗಿ ಉತ್ಪಾದಿತ ವಸ್ತುವನ್ನು ಶೇಖರಣೆ ಮಾಡಲು ಆಡಳಿತ ಮಂಡಳಿ ಆಹಾರ ನಿಗಮ ಹಾಗೂ ಕೈಗಾರಿಕ ಪ್ರದೇಶದ ಗೋದಾಮಿನ ಸಹಕಾರಕ್ಕೆ ಮುಂದಾಗಿದೆ.ಒಂದೆಡೆ ಉತ್ಪಾದಿತ ವಸ್ತುವಿನ ಶೇಖರಣೆ ಸಮಸ್ಯೆ ಕಾರ್ಖಾನೆಗೆ ಎದುರಾಗಿದ್ದರೆ, ಮತ್ತೊಂದೆಡೆ ಉತ್ಪಾದನೆ ಸ್ಥಗಿತ ಮಾಡಿ ದಾಸ್ತಾನು ನಿಯಂತ್ರಿಸುವ ಕೆಲಸಕ್ಕೂ ಆಡಳಿತ ಮಂಡಳಿ ಮನಸ್ಸು ಮಾಡಿದ್ದು, ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಯಿತು.ಬಿಕರಿಗೆ ಒತ್ತು ನೀಡಿ:  ಇದನ್ನು ಅರಿತ ಕಾರ್ಮಿಕ ಸಂಘದ ಪದಾಧಿಕಾರಿಗಳು ಉತ್ಪಾದಿತ ವಸ್ತುಗಳ ಮಾರಾಟ ಮಾಡಿ ಬಂದಷ್ಟು ಹಣ ತೆಗೆದುಕೊಂಡು ಕೆಲಸ ಮಾಡುವ ಕಾರ್ಯಕ್ಕೆ ಮುಂದಾಗಿ ಎಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.ಇದನ್ನು ನಿಭಾಯಿಸುವಲ್ಲಿ ವಿಫಲರಾದ ಅಧಿಕಾರಿಗಳ ಪರವಾಗಿ ಕಾರ್ಖಾನೆ ಅಧ್ಯಕ್ಷ ಆರಗ ಜ್ಞಾನೇಂದ್ರ ಕಾರ್ಮಿಕ ಮುಖಂಡರ ಜತೆ ಮಾತುಕತೆ ನಡೆಸಿ ಹೋರಾಟಕ್ಕೆ ಇತಿಶ್ರೀ ಹಾಡಿ, ಸರ್ಕಾರದ ಮುಂದೆ ಅಹವಾಲು ಹೇಳಿಕೊಂಡು ಪರಿಹಾರ ಹುಡುಕುವ ಭರವಸೆ ನೀಡಿದರು.ಬಾಕಿ ಸಮಸ್ಯೆ: ವಸ್ತುಗಳ ಮಾರುಕಟ್ಟೆ ಕೊರತೆ ಕಾರಣ ಕಚ್ಚಾ ಸಾಮಗ್ರಿಗಳ ಬಿಲ್, ವಿದ್ಯುತ್ ಹಾಗೂ ಇನ್ನಿತರೆ ಖರ್ಚಿನ ಬಾಬ್ತು ಹೆಚ್ಚುತ್ತಲೇ ಸಾಗುತ್ತದೆ. ಇದರಿಂದಾಗಿ ನಿರಂತರ ವ್ಯವಹಾರ ಸ್ಥಗಿತವಾಗಿ ತೊಂದರೆ ಸೃಷ್ಟಿಯಾಗುತ್ತದೆ ಎಂಬುದು ಕಾರ್ಮಿಕ ಸಂಘದ ಪದಾಧಿಕಾರಿಗಳ ಆತಂಕ.ಹೊಂದಾಣಿಕೆ ದರದಲ್ಲಿ ಮಾರುಕಟ್ಟೆ ವೃದ್ಧಿಯಾದರೆ ಗ್ರಾಹಕರು ನೇರವಾಗಿ ಕಂಪೆನಿ ಜತೆ ವ್ಯವಹಾರ ಮಾಡುತ್ತಾರೆ. ಇಲ್ಲವಾದರೆ ಬೇರೆ ಕಂಪೆನಿಗಳು ದಾಳಿ ಮಾಡುತ್ತವೆ. ಇದರಿಂದಾಗಿ ಉತ್ತಮ ಉತ್ಪಾದನೆ ವಸ್ತುಗಳು ಗೋದಾಮಿನಲ್ಲಿ ಉಳಿದು ಹಾಳಾಗುತ್ತದೆ ಎನ್ನುತ್ತಾರೆ ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್.ಬ್ಯಾಂಕ್ ಗ್ಯಾರಂಟಿ ಭರವಸೆ: ್ಙ 101 ಕೋಟಿ ಷೇರು ಪರಿವರ್ತನಾ ಕಾರ್ಯಕ್ಕೆ ಮುಂದಾದ ಯಡಿಯೂರಪ್ಪ ಅವರ ಭರವಸೆಗೆ ಸಿಎಂ ಸದಾನಂದಗೌಡ ಅಂಕಿತ ಹಾಕಿದ ಕಾರಣ ನಷ್ಟತೆ ಪ್ರಮಾಣ ಕಡಿತವಾಗುವ ಭರವಸೆ ಇದರಿಂದ ಸಿಕ್ಕಂತಾಗಿದೆ. ಆದರೂ, ಇರುವ ಹಣದ ಆವಶ್ಯಕತೆಗೆ ಒಂದಿಷ್ಟು ಬ್ಯಾಂಕ್ ಗ್ಯಾರಂಟಿ ಆವಶ್ಯವಿದ್ದು, ಇದಕ್ಕೆ ಕಾರ್ಖಾನೆ ಅಧ್ಯಕ್ಷರು ಪ್ರಯತ್ನ ನಡೆಸಿದ್ದಾರೆ.`ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ~ ಎಂಬಂತೆ ಸರ್ಕಾರ ನೀಡುತ್ತಿರುವ ಅನುದಾನ, ಸಹಕಾರ ಬೃಹತ್ ಆಧುನೀಕರಣ ಯೋಜನೆಗೆ ಸಾಕಾಗದ ಸ್ಥಿತಿ ಇದೆ. ಏಳೂವರೆ ದಶಕದ ಕಾರ್ಖಾನೆ ಕಾಲ ಕಾಲಕ್ಕೆ ಅಗತ್ಯವಿದ್ದ ಆಧುನೀಕರಣ ನೆರವು ಪಡೆಯಲು ವಿಫಲವಾದ ಕಾರಣ ಸಮಸ್ಯೆಗಳ ಸುಳಿ ಹೆಚ್ಚಿದೆ.ಸಹಸ್ರಾರು ಕಾರ್ಮಿಕರ ಬಾಳಿಗೆ ಬೆಳಕನ್ನು ನೀಡಿರುವ ಕಾರ್ಖಾನೆಯ ಮಾರುಕಟ್ಟೆ ಸಮಸ್ಯೆಯ ಬಿಸಿ ಹೆಚ್ಚಿದಲ್ಲಿ ಸಂಬಳಕ್ಕೂ ತೊಂದರೆ ಎದುರಾಗುವ ಸ್ಥಿತಿ ಇದೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಮನಸ್ಸು ಮಾಡಲಿ ಎಂಬುದು ಎಲ್ಲರ ಆಗ್ರಹ.

   ಕೆ.ಎನ್. ಶ್ರೀಹರ್ಷ

ಪ್ರತಿಕ್ರಿಯಿಸಿ (+)