ಗುರುವಾರ , ಜೂಲೈ 2, 2020
22 °C

ಎಚ್ಚೆನ್ ಸ್ಮರಣೆ: ನಾದ ಗಾನ ರಸದೌತಣ

ಶೇಷಶಾಯಿ Updated:

ಅಕ್ಷರ ಗಾತ್ರ : | |

ಎಚ್ಚೆನ್ ಸ್ಮರಣೆ: ನಾದ ಗಾನ ರಸದೌತಣ

ಬೆಂಗಳೂರು ಲಲಿತಕಲಾ ಪರಿಷತ್ ಮತ್ತು ರಾಮಸುಧಾ ಚಾರಿಟಬಲ್ ಟ್ರಸ್ಟ್   ಶುಕ್ರವಾರದಿಂದ ಮಂಗಳವಾರದವರೆಗೆ (ಜೂನ್ 3ರಿಂದ 7) ಡಾ. ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ, ಗೀತ ನಾಟಕ, ಸುಗಮ ಸಂಗೀತ ಮತ್ತು ಹರಿಕಥೆಯಂತಹ ಕಾರ್ಯಕ್ರಮ ಆಯೋಜಿಸಲಾಗಿದೆ.ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಲು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 1989ರಲ್ಲಿ ಸ್ಥಾಪನೆಯಾದ ಬೆಂಗಳೂರು ಲಲಿತಕಲಾ ಪರಿಷತ್ 15 ವರ್ಷಗಳಿಂದ ಈ ಚೈತ್ರೋತ್ಸವ ನಡೆಸಿಕೊಂಡು ಬರುತ್ತಿದೆ.

 

ಈ ಸಂಸ್ಥೆ ಮಹಾನ್ ಶಿಕ್ಷಕ, ಗಾಂಧಿ ವಾದಿ, ಕಲಾ ಪ್ರೇಮಿ ನರಸಿಂಹಯ್ಯನವರ ಕನಸಿನ ಕೂಸು. ಹೀಗಾಗಿ ಈ ಉತ್ಸವವನ್ನು  2006ರಿಂದ ಡಾ. ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವವಾಗಿ ಆಚರಿಸಲಾಗುತ್ತಿದೆ.ಜಯನಗರದ ನ್ಯಾಷನಲ್ ಕಾಲೇಜಿನ ಆವರಣದಲ್ಲಿರುವ ಸಭಾಂಗಣವೂ ಎಚ್ಚೆನ್ ಕಲಾಕ್ಷೇತ್ರ  ಎಂದೇ ಖ್ಯಾತಿ ಪಡೆದಿದೆ. ಈ ಭವನವೂ ಸದ್ಯದಲ್ಲೇ ನವೀಕರಣಗೊಳ್ಳಲಿದೆ. ಬಹು ಮಾಧ್ಯಮ, ಬಹು ಉಪಯೋಗಿ ಸಭಾಂಗಣವಾಗಿ ರೂಪುಗೊಳ್ಳಲಿರುವ ಸಭಾಂಗಣವು ಪ್ರಸಿದ್ಧ ಬ್ರಾಡ್‌ವೇ ಥಿಯೇಟರ್ ಮಾದರಿಯಲ್ಲಿ ಸಿದ್ಧಗೊಳ್ಳಲಿದೆ.

 

ಸುಮಾರು 1000 ಆಸನಗಳು, ಹವಾ ನಿಯಂತ್ರಣ ವ್ಯವಸ್ಥೆ, ಪ್ರಸಾದನ ಕೋಣೆ, ಬಾಲ್ಕನಿ, ಕ್ಯಾಂಟೀನ್ ಎಲ್ಲ ಸೌಲಭ್ಯಗಳೂ ನವೀಕೃತ ಸಭಾಂಗಣದಲ್ಲಿ ಇರುತ್ತವೆ ಎಂದು ಹೇಳುತ್ತಾರೆ ಪರಿಷತ್ತಿನ ಹಾಲಿ ಅಧ್ಯಕ್ಷ ಡಾ. ಎ.ಎಚ್. ರಾಮರಾವ್. ಅವರು ರಾಮಸುಧಾ ಚಾರಿಟೆಬಲ್ ಟ್ರಸ್ಟ್‌ಗೂ ಅಧ್ಯಕ್ಷರು. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವವನ್ನು ಪ್ರತಿವರ್ಷ ರಾಮಸುಧಾ ಚಾರಿಟೆಬಲ್ ಟ್ರಸ್ಟ್ ಪ್ರಾಯೋಜಿಸಿಕೊಂಡು ಬರುತ್ತಿದ್ದು, ಎಲ್ಲರ ಅಭಿನಂದನೆಗೆ ಪಾತ್ರವಾಗಿದೆ.ಈ ವರ್ಷದ ಉತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಹರಿಕಥೆ, ಭರತನಾಟ್ಯವಲ್ಲದೇ ಒಂದು ನಾಟಕವೂ ಏರ್ಪಾಡಾಗಿದೆ. ರಾಜ್ಯದ ಪ್ರತಿಭಾನ್ವಿತ ಕಲಾವಿದರುಗಳು ಪಾಲ್ಗೊಳ್ಳಲಿರುವ ಈ ಉತ್ಸವ ನಗರದ ಕಲಾ ರಸಿಕರಿಗೆ ವೈವಿಧ್ಯಮಯ ರಸದೌತಣ ಬಡಿಸಲಿದೆ.

 

ಈ ಉತ್ಸವದಲ್ಲಿ ಚಿತ್ರನಟಿಯೂ ಆಗಿರುವ ನೃತ್ಯ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಭರತನಾಟ್ಯ ಪ್ರದರ್ಶಿಸುವರು, ಎಂ.ಡಿ. ಪಲ್ಲವಿ ತಮ್ಮ ಸುಮಧುರ ಕಂಠದಲ್ಲಿ ಮಧುರ ಭಾವಗೀತೆ ಪ್ರಸ್ತುತಪಡಿಸುವರು. ಕರ್ನಾಟಕ ಸಂಗೀತ ಪಿತಾಮಹರನ್ನು ಕುರಿತಾದ `ದಾಸಪುರಂದರ~ ಎಂಬ ಅಪರೂಪದ ನಾಟಕವೂ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಶುಕ್ರವಾರ ಕವಿ ಚಂದ್ರಶೇಖರ ಕಂಬಾರ ಅವರಿಂದ ಸಾಂಸ್ಕೃತಿಕ ಉತ್ಸವ ಉದ್ಘಾಟನೆ, ಎಂ. ಎಸ್. ಶೀಲ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಪಿಟೀಲು (ಚಾರುಲತಾ ರಾಮಾನುಜಂ), ವಿ. ಕೃಷ್ಣ (ಮೃದಂಗ) ಮತ್ತು ಸುಕನ್ಯಾ ರಾಮಗೋಪಾಲ್ (ಘಟಂ)

ಸ್ಥಳ: ಡಾ. ಎಚ್. ಎನ್. ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು, ಜಯನಗರ. ಸಂಜೆ: 6.301920ರಲ್ಲಿ ಜನಿಸಿದ ನರಸಿಂಹಯ್ಯ, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಓದಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರಲ್ಲದೇ ಅಮೆರಿಕದಲ್ಲಿ ಪಿಎಚ್‌ಡಿ ಪಡೆದು ಸ್ವದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಹಿಂತಿರುಗಿದರು. ಬೆಂಗಳೂರಿನ ವಿದ್ಯಾ ಕ್ಷೇತ್ರವನ್ನು ಬೆಳಗಿಸಿದರು.

 

ತಾವು ಓದಿದ ಸಂಸ್ಥೆಯಲ್ಲೇ (ನ್ಯಾಷನಲ್ ಕಾಲೇಜು) ಪ್ರಾಚಾರ್ಯರಾಗಿ ಸೇವೆ ಸಲ್ಲಿಸುವ ಭಾಗ್ಯ ಅವರದಾಯಿತು. ತಮ್ಮ ಪರಿಣಾಮಕಾರಿ ಬೋಧನೆ, ದಕ್ಷ ಆಡಳಿತ ಹಾಗೂ ಗಾಂಧಿ ಮಾರ್ಗಗಳಿಂದ ನ್ಯಾಷನಲ್ ಕಾಲೇಜನ್ನು ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ರೂಪಿಸಿದರು. ಅಲ್ಲದೆ ಕೋಲಾರ ಜಿಲ್ಲೆಯ ಅನೇಕ ಚಿಕ್ಕ ಊರು-ಹಳ್ಳಿಗಳಲ್ಲಿ ಶಾಲೆ, ಕಾಲೇಜುಗಳನ್ನು ತೆರೆದು ಪ್ರತಿವರ್ಷ ಸುಮಾರು 7000 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು.ಅಲ್ಲದೆ ನರಸಿಂಹಯ್ಯನವರು ನ್ಯಾಷನಲ್ ಕಾಲೇಜಿನ ಅನೇಕ ಬದಲಾವಣೆ, ಬೆಳವಣಿಗೆಗಳಿಗೆ ಕಾರಣಕರ್ತರು. ಮೊದಲು ಕೇವಲ ಬಾಲಕರಿಗೆ ಮೀಸಲಾಗಿದ್ದ ಶಾಲೆಯನ್ನು ಹುಡುಗ, ಹುಡುಗಿಯರ ಶಿಕ್ಷಣಕ್ಕೆ ತೆರೆದರು. ವಿದ್ಯಾರ್ಥಿಗಳಿಗಾಗಿ ಸಂಗೀತ, ನೃತ್ಯ, ನಾಟಕ, ಚರ್ಚಾ ಸ್ಪರ್ಧೆಗಳನ್ನು ಪ್ರಾರಂಭಿಸಿದರು.

 

ಕಿರಿಯರಲ್ಲಿ ವೈಜ್ಞಾನಿಕ ದೃಷ್ಟಿ ಬೆಳೆಸಲು `ಬೆಂಗಳೂರು ವಿಜ್ಞಾನ ವೇದಿಕೆ~ ಸ್ಥಾಪಿಸಿ ಪ್ರತಿ ಬುಧವಾರ ತಪ್ಪದೆ ಗೋಷ್ಠಿಗಳನ್ನು ನಡೆಸಿಕೊಂಡು ಬಂದರು. ಈ ಅಖಂಡ ವೈಜ್ಞಾನಿಕ ಕಾರ್ಯಕ್ರಮ ದಾಖಲೆಗೆ ಅರ್ಹವಾದುದು. ಪ್ರತಿ ವರ್ಷ ತಿಂಗಳ ಕಾಲ ನಡೆಯುವ  ವಿಜ್ಞಾನ ಉತ್ಸವ  ಕಿರಿಯರಿಗೆ ಒಂದು ದೊಡ್ಡ ಆಕರ್ಷಣೆ! ನ್ಯಾಷನಲ್ ಕಾಲೇಜನ್ನು ಸಮಾಜಮುಖಿಯಾಗಿಯೂ ಎಚ್ಚೆನ್ ಪರಿವರ್ತಿಸಿದರು.ಇದಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗೂ ನರಸಿಂಹಯ್ಯ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ವಿಶ್ವವಿದ್ಯಾನಿಲಯ, ಸೆಂಟ್ರಲ್ ಕಾಲೇಜಿನಿಂದ ಜ್ಞಾನಭಾರತಿ ಆವರಣಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಸಂಗೀತ, ನೃತ್ಯ, ನಾಟಕಗಳನ್ನುಳ್ಳ ಲಲಿತ ಕಲಾ ವಿಭಾಗ ಪ್ರಾರಂಭಿಸಿದವರೇ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.