ಭಾನುವಾರ, ಜೂನ್ 7, 2020
22 °C

ಎಚ್.ಡಿ.ಕೋಟೆ: ಕಾಡಿಗೆ ತೆರಳದೆ ನಾಡಿನಲ್ಲೇ ಬೀಡುಬಿಟ್ಟ ಕಾಡಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಕಾಡಿಗೆ ತೆರಳದೆ ನಾಡಿನಲ್ಲೇ ಬೀಡುಬಿಟ್ಟ ಕಾಡಾನೆ

ಎಚ್.ಡಿ.ಕೋಟೆ: ಎರಡು ದಿನಗಳ ಹಿಂದೆ ಕಾಡಿನಿಂದ ನಾಡಿನತ್ತ ಮುಖ ಮಾಡಿದ ಗಂಡಾನೆಯೊಂದು ತಾಲ್ಲೂಕಿನ ಮತ್ತು ಪಟ್ಟಣದ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕಾಡಿನತ್ತ ಅದನ್ನು ಓಡಿಸಲು ಮಾಡಿದ ಯತ್ನಗಳು ವಿಫಲವಾಗಿದ್ದು ಸಾರ್ವಜನಿಕರು ಹಾಗೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನು ಸತಾಯಿಸುತ್ತಿದೆ.ಈ ಆನೆಯ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಹಲವು ಮನೆಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಬುಧವಾರ ರಾತ್ರಿಯೂ ಆನೆ ಚಕ್ಕೋಡನಹಳ್ಳಿ ಕೆರೆಯಲ್ಲಿ ಬೀಡುಬಿಟ್ಟಿದೆ.ಇದನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಅರ್ಜುನ ಮತ್ತು ಮೇರಿಯನ್ನು ಕಾರ್ಯಾಚರಣೆಗೆ ಬಳಸಿಕೊಂಡಿದ್ದರೂ ಪ್ರಯೋಜನವಾಗಲಿಲ್ಲ. ಗಾಬರಿಯಿಂದ ದಿಕ್ಕಾಪಾಲಾಗಿ ಓಡಾಡುತ್ತಿದ್ದ ಆನೆಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೆಲವರು ಕಲ್ಲು ತೂರುವ ಮೂಲಕ ಆನೆಯನ್ನು ಕಾಡಿನತ್ತ ಓಡಿಸುವ ಯತ್ನ ಮಾಡಿದರು. ಆದರೆ ಆನೆ ಇದರಿಂದ ಮತ್ತಷ್ಟು ಆಕ್ರೋಶಗೊಂಡಿತು. ಕೆಲವರು ಕೂದಲಳತೆಯಲ್ಲಿ ಅಪಾಯದಿಂದ ಪಾರಾದರು.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ ವಲಯದ ಕಾಡಿನಿಂದ ಈ ಆನೆ ಸೋಮವಾರ ರಾತ್ರಿಯೇ ಚಕ್ಕೋಡನಹಳ್ಳಿಯ ಜಮೀನಿನಲ್ಲಿ ಬೆಳೆಯನ್ನು ತಿಂದು, ತುಳಿದು ಹಾಳು ಮಾಡಿತ್ತು. ಆದರೆ, ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಚಕ್ಕೋಡನಹಳ್ಳಿ ಪೋಸ್ಟ್ ಮಾಸ್ಟರ್ ಶ್ರೀನಿವಾಸ್‌ರವರ ಮನೆಯ ಮುಂಭಾಗದ ಕಲ್ನಾರ್ ಶೀಟುಗಳನ್ನು ಒಡೆದು ಹಾಕಿತು. ನಂತರ ಇದೇ ಗ್ರಾಮದ ಕೆರೆಯಲ್ಲಿ ಕಾಣಿಸಿಕೊಂಡಿತು. ಆನೆಯನ್ನು ಕಾಡಿನತ್ತ ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದರು. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಕಾರಣ ಗಾಬರಿಗೊಂಡ ಆನೆ ಮೇಟಿಕುಪ್ಪೆ ಮಾರ್ಗವಾಗಿ ಪಟ್ಟಣದ ಬಸ್ ಡಿಪೋ ಸಮೀಪದ ಜಮೀನುಗಳಿಗೆ ದಾಳಿ ಇಟ್ಟಿತು. ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಇದರಿಂದ ಆನೆಯು ಓಡಲು ಪ್ರಾರಂಭಿಸಿ ದೊರೆ ಎಂಬುವವರ ತೋಟದಲ್ಲಿದ್ದ 20  ಅಡಿ ಆಳದ ತೆರೆದ ಬಾವಿಗೆ ಬಿದ್ದಿತ್ತು. ಇಲ್ಲಿ ಈಜುತ್ತಾ ದಾರಿಯನ್ನು ಹುಡುಕಿ ಮೇಲಕ್ಕೆ ಬಂದಿತು. ನಂತರ ಪಕ್ಕದಲ್ಲಿದ್ದ ಹೆಗ್ಗಡಾಪುರ ಕೆರೆಯಲ್ಲಿ ವಿಶ್ರಾಂತಿ ಪಡೆಯಿತು.ಅರಣ್ಯ ಇಲಾಖೆ ಯತ್ನ: ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಯನ್ನು ಚಕ್ಕೋಡನಹಳ್ಳಿ ಕೆರೆಯಿಂದ ಕಾಡಿಗೆ ಓಡಿಸಲು ಮಂಗಳವಾರ ಬೆಳೆಗ್ಗೆಯಿಂದಲೇ ಯತ್ನಿಸಿದರು. ತನ್ನ ಸುತ್ತಲೂ ಜನರು ನೆರೆದಿದ್ದರಿಂದ ಗಾಬರಿಗೊಂಡು ಆನೆ ದಿಕ್ಕು ತಪ್ಪಿ ಪಟ್ಟಣದ ಕಡೆಗೆ ಮುಖ ಮಾಡಿತು. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವು ಹೆಚ್ಚಾಯಿತು. ಸಿಬ್ಬಂದಿಯ ಎಲ್ಲ ಶ್ರಮ ವ್ಯರ್ಥವಾಗುತ್ತಲೇ ಇತ್ತು. ಆನೆ ಕಾಡಿನ ಕಡೆ ಹೋಗದೆ ಪಟ್ಟಣಕ್ಕೆ ಹೊರಟಿತು. ಸಂಜೆ ಹೊತ್ತಿಗೆ ಸತೀಶ್ ಮತ್ತು ರಾಜುರವರ ಜಮೀನಿನಲ್ಲಿದ್ದ ಬಿದಿರು ಪೊದೆಯಲ್ಲಿ ಆಶ್ರಯ ಪಡೆಯಿತು. ಇಷ್ಟರಲ್ಲಿ ರಾತ್ರಿಯಾಗಿದ್ದರಿಂದ ಆನೆ ಕಾಡಿಗೆ ಹೋಗಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹಿಂದಿರುಗಿತು.ಮತ್ತೆ ಪಟ್ಟಣದತ್ತ: ಬುಧವಾರ ಮುಂಜಾನೆ 5 ಗಂಟೆಗೆ ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜು ಅವರ ಶೌಚಾಲಯದ ಗುಂಡಿಯನ್ನು ತುಳಿದು ಮುಗ್ಗರಿಸಿ ಕೆಳಕ್ಕೆ ಬಿತ್ತು ಎನ್ನಲಾಗಿದೆ. ವರದರಾಜಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಶ್ರೀನಿಧಿಯವರ ಮನೆಯ ಮುಂಭಾಗದ ಗೇಟ್‌ಗೆ ಹಾಗೂ ನಾಯಕರ ಬೀದಿಯ ಕೆಲವು ಕಟ್ಟಡಗಳಿಗೆ ಹಾನಿ ಮಾಡಿತು.ಕೆಂಕೆರೆ ಮತ್ತು ಸ್ಟೇಡಿಯಂ ಬಡಾವಣೆಯಲ್ಲಿ ಕಾಣಿಸಿಕೊಂಡು, ನಂತರ ಹೆಬ್ಬಾಳ್ಳ ಹಾಗೂ ಟೈಗರ್ ಬ್ಲಾಕ್ ಮಾರ್ಗವಾಗಿ ಚಕ್ಕೋಡನಹಳ್ಳಿಯ ಗೋವಿಂದೇಗೌಡ, ಜವರೇಗೌಡರವರ ಮನೆ ಮತ್ತು ತಂಬಾಕು ಬ್ಯಾರಲ್‌ಗಳಿಗೂ ಹಾನಿ ಮಾಡಿತು. ಸಿಸಿಎಫ್ ಅಜಯ್ ಮಿಶ್ರರವರ ಮಾರ್ಗದರ್ಶನದಲ್ಲಿ, ಡಿಸಿಎಫ್ ಮನೋಜ್‌ಕುಮಾರ್ ನೇತೃತ್ವದಲ್ಲಿ ಎಸಿಎಫ್‌ಗಳಾದ ತಮ್ಮಯ್ಯ, ಚಂದ್ರಶೇಖರ್ ಹಾಗೂ ಚಾಮರಾಜನಗರದ ಮಣಿಕಂಡನ್, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಮುತ್ತುಸ್ವಾಮಿ ನಾಯ್ಡು, ಸಿಪಿಐ ಮಲ್ಲಿಕ್, ಪಿಎಸ್‌ಐ ನಟರಾಜು, ಆರ್‌ಎಫ್‌ಒ ಸಂತೋಷ್‌ನಾಯಕ್ ಹಾಗೂ ಅಂತರಸಂತೆ, ಬಳ್ಳೆ, ಮೇಟಿಕುಪ್ಪೆ, ಇತರೆ ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.  ಅರಣ್ಯ ಸಿಬ್ಬಂದಿ ಈಗ ಕೆರೆ ಪಕ್ಕದಲ್ಲಿ ಟೆಂಟ್ ಹಾಕಿದ್ದಾರೆ.`ಆನೆ ಕಾಡಿಗೆ ಹೋಗುತ್ತದೆ ಎನ್ನುವುದು ನಮ್ಮ ನಂಬಿಕೆ. ಒಂದು ವೇಳೆ ಕಾಡಿಗೆ ಹೋಗದೆ ಕೆರೆಯಲ್ಲಿಯೇ ಉಳಿದುಕೊಂಡಿದ್ದರೆ, ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸುತ್ತೇವೆ~ ಎಂದು ಡಿಸಿಎಫ್ ಮನೋಜ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.