ಬುಧವಾರ, ಆಗಸ್ಟ್ 4, 2021
21 °C

ಎಚ್‌ಬಿಆರ್ ಬಡಾವಣೆಗೆ ನೀರು ಪೂರೈಕೆ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸತತ ಮೂರು ವರ್ಷಗಳಿಂದ ನಗರದ ಎಚ್‌ಬಿಆರ್ ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಇಲ್ಲಿನ ಜನತೆ ನೀರಿಗಾಗಿ ಬೆಂಗಳೂರು ಜಲಮಂಡಲಿ, ಜನಪ್ರತಿನಿಧಿಗಳ ಮೊರೆ ಹೋಗಿದ್ದಾಗಿದೆ. ಆದರೆ ನೀರು ಸರಬರಾಜು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ನಿವಾಸಿಗಳ ನೋವು.

ಬಡಾವಣೆಯ ಮೊದಲನೇ ಹಂತದ ಐದು ಬ್ಲಾಕ್‌ಗಳಲ್ಲಿ ಸಾವಿರಾರು ಮನೆಗಳಿವೆ. ನಗರದ ಬೃಹತ್ ಬಡಾವಣೆಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಹದಿನೈದು ದಿನಕ್ಕೊಮ್ಮೆ ನೀರು ಬಂದರೆ ಅದು ನಾಗರಿಕರ ಸುದೈವ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಡಿಎ ವತಿಯಿಂದ ನಿವೇಶನಗಳು ನಿರ್ಮಾಣವಾಗಿದ್ದರೂ ನೀರು ಒದಗಿಸಲು ಮಾತ್ರ ಸಮರ್ಪಕ ಯೋಜನೆ ಇಲ್ಲದಿರುವುದು ಹಾಗೂ ಜಲಮಂಡಲಿಗೆ ಪದೇಪದೇ ಮನವಿ ಮಾಡಿದರೂ ಸೂಕ್ತ ಉತ್ತರ ದೊರೆಯದೇ ಇರುವುದು ನಿವಾಸಿಗಳನ್ನು ಚಿಂತೆಗೀಡು ಮಾಡಿದೆ.

ಇತ್ತ ಜನಪ್ರತಿನಿಧಿಗಳು ಕೂಡ ಸಮಸ್ಯೆ ಪರಿಹಾರಕ್ಕೆ ಗಂಭೀರ ಯತ್ನ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಲ್ಲಿನ ಕೊಳೆಗೇರಿಗೆ ಸಾರ್ವಜನಿಕ ನಲ್ಲಿ  ಮೂಲಕ ನೀರು ನೀಡಲಾಗುತ್ತಿದೆ. ಅದೇ ರೀತಿ ತೆರಿಗೆ ಪಾವತಿಸುವ ನಾಗರಿಕರ ಮನೆಗಳಿಗೂ ನೀರು ಪೂರೈಕೆ ಮಾಡಬೇಕು ಎಂಬ ಒತ್ತಡ ಹೆಚ್ಚಿದೆ.  ಪಕ್ಷಬೇಧ ಮರೆತು ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

‘ಕಳೆದ ವರ್ಷ ಆಗಸ್ಟ್‌ನಲ್ಲಿ ನೀರು ಬಾರದಿರುವುದನ್ನು ಪ್ರತಿಭಟಿಸಿ ಬೆಂಗಳೂರು ಜಲಮಂಡಲಿ ವಿರುದ್ಧ ಇಲ್ಲಿ ಪ್ರತಿಭಟನೆ ನಡೆಯಿತು. ಸುಭಾಷ್ ಲೇಔಟ್‌ಮುಖ್ಯರಸ್ತೆಯಿಂದ ಟ್ಯಾನರಿ ರಸ್ತೆವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ನೀರಿನ ಸಮಸ್ಯೆ ಕುರಿತು ಪೊಲೀಸರ ಗಮನಕ್ಕೆ ತರಲಾಯಿತು. ಆದರೆ ಯಾವುದೇ ಪರಿಹಾರ ದೊರೆಯಲಿಲ್ಲ’ ಎನ್ನುತ್ತಾರೆ ಮೊದಲನೇ ಬ್ಲಾಕ್‌ನ ನಿವಾಸಿ ಹೇಮಾ.

ಕೊಳವೆ ಬಾವಿಗಳಲ್ಲಿ ನೀರಿಲ್ಲ: ಮೊದಲ ಹಂತದ ಐದು ಬ್ಲಾಕ್‌ಗಳ ಬಹುತೇಕ ಮನೆಗಳಲ್ಲಿ ಕೊಳವೆ ಬಾವಿಕೊರೆಸಲಾಗಿದೆ. ಆದರೆ ಅನೇಕ ದಿನಗಳಿಂದ ಅಂತರ್ಜಲ ದೊರೆಯದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಅಂತರ್ಜಲ ಕಲುಷಿತಗೊಂಡಿದೆ.

ದುಬಾರಿ ನೀರು:  ಜನರು ಅನೇಕ ದಿನಗಳಿಂದ ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ಪಡೆಯುವುದು ಅನಿವಾರ್ಯವಾಗಿದೆ. ಆದರೆ ಈ ನೀರು ಬಳಕೆಗೆ ಮಾತ್ರ ಯೋಗ್ಯವಾಗಿದ್ದು ಒಂದೆರಡು ಕಿ.ಮೀ ದೂರದಿಂದ ಬಿಂದಿಗೆಗಳಲ್ಲಿ ನೀರು ತರಬೇಕಿದೆ. ಅಪರೂಪಕ್ಕೆ ಬರುವ ಜಲಮಂಡಲಿ ಟ್ಯಾಂಕರ್‌ಗಳು ಅಗತ್ಯವಿರುವಷ್ಟು ನೀರು ಒದಗಿಸುವುದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಖಾಸಗಿ ಟ್ಯಾಂಕರ್ ಮಾಲೀಕರು ಹಾಗೂ ಜಲಮಂಡಲಿ ಅಧಿಕಾರಿಗಳು ಶಾಮೀಲಾಗಿರುವುದರಿಂದ ಈ ಪ್ರದೇಶದಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ಅನೇಕ ಕೊಳವೆ ಬಾವಿಗಳು ಬತ್ತಿವೆ. ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಿ ನೀರು ಸಮರ್ಪಕವಾಗಿ ಸರಬರಾಜಾಗುತ್ತದೆ. ಈ ತಾರತಮ್ಯ ಧೋರಣೆ ಏಕೆ?’ ಎನ್ನುವುದು ನಿವೃತ್ತ ನೌಕರ ಲಕ್ಷ್ಮೀನಾರಾಯಣ ಅವರ ಪ್ರಶ್ನೆ.

ಶುಲ್ಕದ ಹೊರೆ: ನೀರು ಬಾರದಿದ್ದರೂ ಜಲಮಂಡಲಿ ಬಿಲ್ ಪ್ರತಿ ತಿಂಗಳು ತಪ್ಪದೇ ಇಲ್ಲಿನ ನಿವಾಸಿಗಳನ್ನು ತಲುಪುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಸೇವಾಶುಲ್ಕ ಪಾವತಿಸಲೇಬೇಕು ಎಂಬುದು ಜಲಮಂಡಲಿಯ ನಿಲುವು. ಹೀಗಾಗಿ ಕೆಲವರು ಅನಿವಾರ್ಯವಾಗಿ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಕೆಲವರು ಶುಲ್ಕ ಪಾವತಿಸಲು ವಿರೋಧ ವ್ಯಕ್ತಪಡಿಸಿದ್ದಾರೆ.

‘ನೀರು ಬಾರದಿದ್ದರೂ ಸುಮ್ನೆ ಯಾಕೆ ಬಿಲ್ ಕಟ್ಟಬೇಕು. ನೀರು ಬರಲಿ ಆಮೇಲೆ ಬಿಲ್ ಪಾವತಿಯ ಬಗ್ಗೆ ಮಾತನಾಡುತ್ತೇವೆ. ನೀರು ನೀಡದೇ ಸೇವಾ ಶುಲ್ಕ ವಿಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎನ್ನುತ್ತಾರೆ ಎಚ್‌ಬಿಆರ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಉಬೇದುಲ್ಲಾ ಖಾನ್.

ಸಕಿಂಗ್ ಪಂಪ್‌ಗಳ ಕಾಟ: ತೀವ್ರ ನೀರಿನ ಅಭಾವ ಇರುವುದರಿಂದ ಸಕಿಂಗ್ ಪಂಪ್ ಅಳವಡಿಸಿ ಜಲಮಂಡಲಿ ಕೊಳವೆಗಳ ಮೂಲಕ ಕೆಲವು ನಿವಾಸಿಗಳು  ಮನಬಂದಂತೆ ನೀರು ಪಡೆಯುತ್ತಿದ್ದಾರೆ. ಇದರಿಂದಾಗಿ ಬಹುಪಾಲು ಜನರಿಗೆ ನೀರು ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಡೆಯಲು ಜನಪ್ರತಿನಿಧಿಗಳು, ಅಧಿಕಾರಿಗಳು ಅನೇಕ ಬಾರಿ ಯತ್ನಿಸಿದ್ದಾರೆ. ನಿವಾಸಿಗಳ ಅಸಹಕಾರದಿಂದಾಗಿ ಸಕಿಂಗ್ ಪಂಪ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಫಲಿಸದ ಅದಾಲತ್: ಜಲಮಂಡಲಿ ನಡೆಸುವ ನೀರಿನ ಅದಾಲತ್ ಕೇವಲ ಕಣ್ಣೊರೆಸುವ ತಂತ್ರ ಎಂದು  ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಅದಾಲತ್ ಸಮಯದಲ್ಲಿ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತೇವೆ ಎನ್ನುವ ಅಧಿಕಾರಿಗಳು ನಂತರ ಇತ್ತ ಸುಳಿಯುವುದಿಲ್ಲ. ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದರೂ ಜಲಮಂಡಲಿಯ ನಿರ್ಲಕ್ಷ್ಯ ಬೇಸರ ಹುಟ್ಟಿಸುತ್ತದೆ’ ಎನ್ನುತ್ತಾರೆ ನಿವಾಸಿ ಅಯ್ಯಣ್ಣ. ಶೀಘ್ರವೇ ಸಮಸ್ಯೆ ಬಗೆ ಹರಿಯದಿದ್ದರೆ ಹೋರಾಟ ತೀವ್ರಗೊಳಿಸಲು ನಾಗರಿಕರು ನಿರ್ಧರಿಸಿದ್ದಾರೆ.

ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಲಮಂಡಲಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಛಲಪತಿ ‘ವಿದ್ಯುತ್ ಕೊರತೆಯಿಂದಾಗಿ ನೀರು ಪೂರೈಕೆ ನಿರಂತರವಾಗಿ ನಡೆಯುತ್ತಿಲ್ಲ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪ್ರದೇಶದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಬಾರದ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಜನಪ್ರತಿನಿಧಿಗಳು ಏನಂತಾರೆ?

ಬಡಾವಣೆಯಲ್ಲಿರುವ ಬಿಡಿಎ ನಿವೇಶನಗಳಿಗೆ ಕಾವೇರಿ ನೀರು ಸರಬರಾಜಾಗುತ್ತಿದೆ. ಆದರೆ ಸಿಎಂಸಿ ವ್ಯಾಪ್ತಿಯಲ್ಲಿರುವ ನಿವೇಶನಗಳಿಗೆ ನೀರು ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ಕಾಮಗಾರಿ ಪೂರ್ಣಗೊಂಡರೆ ಈ ಪ್ರದೇಶಕ್ಕೆ ಸಾಕಷ್ಟು ನೀರು ಲಭಿಸಲಿದೆ.

- ಕೆ.ಜೆ. ಜಾರ್ಜ್,  ಶಾಸಕ

ಎಚ್‌ಬಿಆರ್ ಬಡಾವಣೆ ಹಾಗೂ ಸುತ್ತಲಿನ ಪ್ರದೇಶಗಳಿಗೆ ಗುರುತ್ವ ಆಧಾರದಲ್ಲಿಯೇ ನೀರು ಬರಬೇಕಾದ ಸ್ಥಿತಿ ಇದೆ. ಆದ್ದರಿಂದ ನೀರಿನ ಒತ್ತಡ ಕಡಿಮೆ ಇರುತ್ತದೆ. ಮೋಟಾರ್ ಪಂಪ್ ಅಳವಡಿಸುವ ಕಾಮಗಾರಿ ಆರಂಭವಾಗಿದ್ದು ಇನ್ನು ನಾಲ್ಕೈದು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ.

- ಗೋವಿಂದರಾಜು, ಪಾಲಿಕೆ ಸದಸ್ಯ

ನಿಮ್ಮ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಇದೆಯೇ? ಹಾಗಿದ್ದರೆ ನಿಮ್ಮ ದೂರವಾಣಿ ಸಂಖ್ಯೆ ಹಾಗೂ ವಿಳಾಸದೊಡನೆ ಸಂಪರ್ಕಿಸಿ

citypv@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.