ಸೋಮವಾರ, ಮಾರ್ಚ್ 8, 2021
26 °C
ರಂಗಭೂಮಿ

ಎಣಿಸಿದಂತೆ ನಡೆಯದ ಕಥಾನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಣಿಸಿದಂತೆ ನಡೆಯದ ಕಥಾನಕ

ಹೊರಗೆ ಧಾರಾಕಾರವಾಗಿ ವರ್ಷಧಾರೆ. ಕೆ. ಎಚ್. ಕಲಾಸೌಧದ ಒಳಗೆ ಏಳು ಜನ ಯುವಕರು ಏನೋ ಹೇಳುತ್ತಿದ್ದರು, ಅಲ್ಲಲ್ಲ ಏನೋ ಕೇಳುತ್ತಿದ್ದರು... ‘ಏವಂ ಇಂದ್ರಜಿತ್!?...  ಏವಂ ಇಂದ್ರಜಿತ್!?...’ಇತ್ತೀಚೆಗೆ ಪಂಚಮುಖಿ ನಟರ ಸಮೂಹ, ಕೆ. ಎಚ್. ಕಲಾಸೌಧದಲ್ಲಿ, ಬಾದಲ್ ಸರ್ಕಾರ್‌ ಅವರ ‘ಏವಂ ಇಂದ್ರಜಿತ್!?...’ ನಾಟಕವನ್ನು ಪ್ರದರ್ಶಿಸಿತು. ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಬಿ.ವಿ. ಕಾರಂತರು.ನಾಟಕದ ಹಂದರವು ಆಂಗ್ಲ ನಾಟಕಕಾರ ಸಾಮ್ಯುಯಲ್ ಬೆಕೆಟ್‌ನ ‘ವೈಟಿಂಗ್‌ ಫಾರ್ ಗೋಡೋ’ನನ್ನು ನೆನಪಿಸುತ್ತದೆ. ಇದು ಒಂದು ಅಬ್ಸರ್ಡ್‌ ಪ್ಲೇ. ಯಾವುದೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ, ಅದಾಗಿಯೂ ನಾವು ಏನಾಗಬಹುದೆಂದು ಎಣಿಸುವುದನ್ನು ಬಿಡುವುದಿಲ್ಲ. ನಾಟಕದ ಮಧ್ಯೆ ‘ಕವಿ’ ಹೇಳುವಂತೆ, ‘ಒಂದು, ಎರಡು, ಮೂರು..., ಮೂರು, ಎರಡು, ಒಂದು”– ಇದು ಪ್ರಾಯಶಃ ನಾಟಕದ ಸಾರ ಕೂಡ.ನಾಟಕದ ಆರಂಭದಲ್ಲಿ, ಅಮಲ್, ವಿಮಲ್, ಕಮಲ್ ಪ್ರೇಕ್ಷರ ಮಧ್ಯದಿಂದ ಬರುವುದನ್ನು ತೋರಿಸಿರುವುದು, ಇದು ಪ್ರತಿಯೊಬ್ಬರ ಕಥೆ ಎನ್ನುವುದನ್ನು ನಿರ್ದೇಶಕ ರಕ್ಷಿತ್ ಮೊದಲೇ ತಿಳಿಸುವಂತೆ ಇದೆ. ಬಹುತೇಕರು ಈ ಮೂವರಂತೆ ಗಾಳಿ ಬೀಸಿದಂತೆ ತೂರಿಕೊಳ್ಳುವ, ಜೀವನ ಹೇಗೆ ಸಾಗುವುದೋ ಹಾಗೆ ಸಾಗುವವರೇ ಆಗಿದ್ದಾರಲ್ಲವೇ?  ಇವರಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಮುಂದೆ ಹೋಗುವವ ಎಂದರೆ ಇಂದ್ರಜಿತ್.  ಆದರೆ, ನಾಟಕದ ಅಂತ್ಯದ ಹೊತ್ತಿಗೆ ಇಂದ್ರಜಿತ್ ಕೂಡ ಅಮಲ್, ವಿಮಲ್, ಕಮಲ್‌ ಅವರಂತೆ ಆಗಿಬಿಟ್ಟಿರುತ್ತಾನೆ. ಹಾಗಾಗಿಯೇ ತಾನು ಇಂದ್ರಜಿತ್ ಅಂದರೂ ಒಂದೇ, ನಿರ್ಮಲ್ ಎನ್ನಿಸಿಕೊಂಡರೂ ಒಂದೇ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾನೆ. ಈ ಜಿಜ್ಞಾಸೆಗಳಿಗೆ, ಪ್ರಶ್ನೆಗಳಿಗೆ ಕವಿಯ ಉತ್ತರ ಸಮಂಜಸವೆನಿಸುತ್ತದೆ. ‘ಕನಸ್ಗಳಿರ್ಬೇಕು, ನಂಬ್ಕೆಗಳಿರ್ಬೇಕು, ಮಾರ್ಗವಿರುತ್ತೆ ನಡಿತಾಯಿರ್ಬೇಕು’.ನಾಟಕದುದ್ದಕ್ಕೂ ಗೆಲ್ಲುವುದು ಚುರುಕಾದ ನಟನೆ ಹಾಗೂ ಕಚಗುಳಿ ಇಡುವ ಸಂಭಾಷಣೆಗಳು. ಓದುವ ವಯಸ್ಸಿನ ಆ ತರಲೆ–ಕೀಟಲೆಗಳು, ಕೆಲಸ ಹುಡುಕುವಾಗಿನ ಪರದಾಟ ಇವೆಲ್ಲವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ, ಅಮಲ್ ಪಾತ್ರದಲ್ಲಿ ಸಚಿನ್, ವಿಮಲ್ ಪಾತ್ರದಲ್ಲಿ ಧನರಾಜ್, ಇಂದ್ರಜಿತ್ ಪಾತ್ರದಲ್ಲಿ ಅವಿನಾಶ್ ಬಹಳ ಚೆನ್ನಾಗಿ ನಟಿಸಿದರಾದರೂ, ಕಮಲ್ ಪಾತ್ರದಲ್ಲಿ ವಿಠಲ್‌ ಕೃಷ್ಣ ನೈಜ ಅಭಿನಯ ಮಾಡಿ ನಗಿಸಿದರು.ಹುಡುಗಿಯನ್ನು ನೋಡುವಾಗ ಅಮಲ್, ವಿಮಲ್, ಕಮಲ್‌ರ ಭಾವಾಭಿನಯ ಬಹಳ ಮೆಚ್ಚುಗೆ ಪಡೆಯಿತು.  ಇಂದ್ರಜಿತ್ ಇಷ್ಟಪಡುವ ಮಾನಸಿ ಹತ್ತಿರವಿದ್ದೂ ಕೈಗೆಟುಕದ ಮರೀಚಿಕೆ.  ಮನುಷ್ಯನ ಮನದಾಳದ ಆಶಯ ಈ ‘ಮಾನಸಿ’.  ಕೊನೆಗೂ ಇಂದ್ರಜಿತ್ ಮತ್ತೊಬ್ಬಳನ್ನು ಮದುವೆಯಾಗಿ ಸಂತೋಷದಿಂದ ಇರುತ್ತಾನೆ. ಆ ಹುಡುಗಿ ಯಾರು? ‘ಅವಳೂ ಒಬ್ಬ ಮಾನಸಿ ಅಂತಿಟ್ಕೊ’ ಎನ್ನುತ್ತಾನೆ ಇಂದ್ರಜಿತ್.

ನಾಟಕದಲ್ಲಿ ಸಂತಸ ತಂದಿದ್ದು ಮಂಜು ನಾರಾಯಣ ಅವರ ಬೆಳಕಿನ ವಿನ್ಯಾಸ.  ಹಲವು ಕಡೆ ಡಿಸ್ಕೊ ಬಾಲಿಗೆ ಕ್ರಾಸ್ ಲೈಟ್ ಬಿಟ್ಟು ರಂಗಮಂದಿರದಲ್ಲಿ ನಕ್ಷತ್ರಗಳನ್ನು ಸೃಷ್ಟಿಸಿದರು.ನಾಟಕದ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಮಧುಸೂದನ್ ಕನೇಕಲ್ ನಿಜಕ್ಕೂ ಗೆದ್ದಿದ್ದಾರೆ. ವೇದಿಕೆಯ ವಿನ್ಯಾಸವು ಶ್ಲಾಘನೆಗೆ ಅರ್ಹ. ಮುಖ್ಯವಾಗಿ ನಾಟಕದ ಉದ್ದಕ್ಕೂ ಇರುವ ಎರಡು ಬಟ್ಟೆಯ ಸ್ಟ್ಯಾಂಡುಗಳು.  ಪದೇ ಪದೇ ಅವುಗಳಲ್ಲಿನ ಬಟ್ಟೆಗಳನ್ನು ಬದಲಾವಣೆಯಾಗುವುದು, ಮನುಷ್ಯ ತನ್ನ ಜೀವನದಲ್ಲಿ ಹಲವು ಕಾಲಘಟ್ಟಗಳಲ್ಲಿ ತನ್ನ ವಿಚಾರಗಳನ್ನು ತನ್ನ ಮನಸೋಇಚ್ಛೆ ಬದಲಾಯಿಸುತ್ತಾನೆ ಎನ್ನುವುದನ್ನು ತೋರಿಸುತ್ತದೆ.ಚಿಕ್ಕಮ್ಮನಾಗಿ ರಶ್ಮಿ, ಮಾನಸಿಯಾಗಿ ರಾಜೇಶ್ವರಿ ಹಾಗೂ ಲೇಖಕನಾಗಿ ಅಭಿಷೇಕ್ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಮೇಳದಲ್ಲಿ ತೇಜಸ್ವಿ, ಮಹೇಶ್, ರಕ್ಷಿತ್, ಅಮಿತ್ ಅಚ್ಚುಕಟ್ಟಾಗಿ ಸಂಗೀತವನ್ನು ನಿರ್ವಹಿಸಿದ್ದಾರೆ. ನಾಟಕ ಸುಸೂತ್ರವಾಗಿ ಸಾಗಲು ವೇದಿಕೆಯ ಹಿಂದೆ ದುಡಿಯುವ ಕೈಗಳು ಬೇಕು.  ಅದನ್ನು ರೇಷ್ಮಿ, ರಾಜು ಜಗದಾನಂದ, ಶ್ರೀನಿಧಿ, ದಿವಾಕರ್, ಉತ್ತಮ್ ಮತ್ತು ಶ್ರೀಶ ಸೊಗಸಾಗಿ ನಿರ್ವಹಿಸಿದ್ದಾರೆ.ಮಾನಸಿ ಪಾತ್ರಧಾರಿ ತನ್ನ ಬಿಳಿ ಸಲ್ವಾರ್‌ನ ಮೇಲೆ ಹೊದ್ದ ವಿವಿಧ ಬಣ್ಣದ ದುಪ್ಪಟ್ಟದಂತೆ ನಮ್ಮ ಜೀವನದಲ್ಲಿ ನಾವೆಲ್ಲರೂ ನಿರಂತರ ಹುಡುಕಾಟದಲ್ಲಿದ್ದೇವೆ. ಬಂದದ್ದೆಲ್ಲಾ ಒಪ್ಪಿಕೊಂಡು, ತಗ್ಗಿ ಬಗ್ಗಿ ಮುಂದೆ ಸಾಗುತ್ತೇವೆ.  ಆದ್ದರಿಂದ ನಾವು ಜೀವನವನ್ನು ಗೆದ್ದ ಇಂದ್ರಜಿತ್ ಆಗುತ್ತೇವೆ ಅಥವಾ ಹಾಗೆಂದುಕೊಳ್ಳುತ್ತೇವೆ. ಒಟ್ಟಿನಲ್ಲಿ ಮನರಂಜನೆಯ ಜೊತೆಜೊತೆಗೆ ತಲೆಗೆ ಹೊಸ ವಿಷಯಗಳ ಹುಳು ಬಿಡುವ ನಾಟಕ ಇದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.