ಮಂಗಳವಾರ, ಮೇ 18, 2021
30 °C
ಬೆಲೆ ತೆರಬೇಕಾದೀತು: ಕೇಂದ್ರ ಆತಂಕ

ಎನ್‌ಸಿಟಿಸಿಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಸಿಟಿಸಿಗೆ ಆಕ್ಷೇಪ

ನವದೆಹಲಿ (ಐಎಎನ್‌ಎಸ್): ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪನೆಗೆ ಯುಪಿಎಯೇತರ ಪಕ್ಷಗಳ ಆಡಳಿತದ ರಾಜ್ಯಗಳು ತೀವ್ರ ಆಕ್ಷೇಪ ಮುಂದುವರಿಸಿವೆ. ಇದರಿಂದ ಕೇಂದ್ರ ಸರ್ಕಾರ ಅಸಮಾಧಾನಗೊಂಡಿದ್ದು, `ರಾಜ್ಯ ಸರ್ಕಾರಗಳ ಸಲಹೆ ಮೇರೆಗೆ ಕೆಲವು ಬದಲಾವಣೆಗಳನ್ನು ಮಾಡಿದ್ದರೂ, ಇದನ್ನು ಒಪ್ಪಿಕೊಳ್ಳದಿದ್ದರೆ ಮುಂದೆ ದೇಶ ಇದಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದೆ.ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಬುಧವಾರ ಇಲ್ಲಿ ನಡೆದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಹಲವು ಮುಖ್ಯಮಂತ್ರಿಗಳು ಎನ್‌ಸಿಟಿಸಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. `ಒಕ್ಕೂಟ ವ್ಯವಸ್ಥೆಯ ನೀತಿಗಳಿಗೆ ಎನ್‌ಸಿಟಿಸಿ ಪೂರಕವಾಗಿಲ್ಲ' ಎಂದು ಗುಜರಾತ್, ಬಿಹಾರ, ಒಡಿಶಾ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ, ನಿತೀಶ್‌ಕುಮಾರ್, ನವೀನ್ ಪಟ್ನಾಯಕ್ ಹಾಗೂ ಪಂಜಾಬ್‌ನ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಹೇಳಿದರು. ಈ ಆಕ್ಷೇಪ ತಳ್ಳಿ ಹಾಕಿದ ಹಣಕಾಸು ಸಚಿವ ಪಿ.ಚಿದಂಬರಂ, ಅನೇಕ ಮಾರ್ಪಾಡು ಮಾಡಿದರೂ ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳದೇ ಇರುವುದು ದುರದೃಷ್ಟಕರ ಎಂದರು.`ಎನ್‌ಸಿಟಿಸಿಯ ಸುಧಾರಿತ ರೂಪವನ್ನು ಕೆಲವು ಮುಖ್ಯಮಂತ್ರಿಗಳು ವಿರೋಧಿಸುತ್ತಿರುವುದು ವಿಷಾದನೀಯ. ಎನ್‌ಸಿಟಿಸಿ ಸ್ಥಾಪನೆಯಂತಹ ವಿಷಯಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ದೇಶ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಚಿದಂಬರಂ ಎಚ್ಚರಿಕೆ ನೀಡಿದರು.ಇದಕ್ಕೂ ಮುನ್ನ ಸಭೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮನಮೋಹನ ಸಿಂಗ್, ಕೇಂದ್ರದ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು

ಸಿದ್ದರಾಮಯ್ಯ ಪರೋಕ್ಷ ವಿರೋಧ`ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ' (ಎನ್‌ಸಿಟಿಸಿ) ಸ್ಥಾಪನೆ ಪ್ರಸ್ತಾವಕ್ಕೆ ನೇರವಾಗಿ ವಿರೋಧ ವ್ಯಕ್ತಮಾಡದ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ರಾಜ್ಯದ ಅಧಿಕಾರದಲ್ಲಿ ಇದು ಹಸ್ತಕ್ಷೇಪ ಮಾಡದಂತೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದೆ.`ಎನ್‌ಸಿಟಿಸಿ' ಸ್ಥಾಪನೆ ಮಾಡುವ ಮುನ್ನ ರಾಜ್ಯಗಳ ಅಧಿಕಾರದಲ್ಲಿ ಅದು ಹಸ್ತಕ್ಷೇಪ ಮಾಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಸಲಹೆ ಮಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳು `ಎನ್‌ಸಿಟಿಸಿ'ಯನ್ನು ಯಥಾಸ್ಥಿತಿಯಲ್ಲಿ ಸ್ವಾಗತಿಸಲು ತುದಿಗಾಲ ಮೇಲೆ ನಿಂತಿರುವ ಸಮಯದಲ್ಲಿ ಸಿದ್ದರಾಮಯ್ಯ, ಈ ಕೇಂದ್ರದ ಅಧಿಕಾರಗಳಿಗೆ ಕಡಿವಾಣ ಹಾಕಬೇಕೆಂದು ಹೇಳುವ ಧೈರ್ಯ ಪ್ರದರ್ಶಿಸಿದರು.ಭಯೋತ್ಪಾದಕರು ಹಾಗೂ ನಕ್ಸಲರ ಹಾವಳಿ ನಿಗ್ರಹಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯಗಳು, ರಾಜ್ಯ- ರಾಜ್ಯಗಳು, ಕೆಲವು ಸಲ ಅಂತರರಾಷ್ಟ್ರೀಯ ಸಂಸ್ಥೆಗಳ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅಗತ್ಯವನ್ನು ಕರ್ನಾಟಕ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಳ್ಳುತ್ತದೆ.ಹಿಂದೆ ಕೆಲ ಸಂದರ್ಭಗಳಲ್ಲಿ ಈ ವಿಷಯದಲ್ಲಿ ಕೇಂದ್ರ- ರಾಜ್ಯಗಳ ಮಧ್ಯೆ ಸರಿಯಾದ ಸಮನ್ವಯತೆ ಕಂಡುಬಂದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಬಳಿ ಅಭಿಪ್ರಾಯಪಟ್ಟರು.

ವಿರೋಧಿಸುವ `ಯುಪಿಎ'ಯೇತರ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಭಯೋತ್ಪಾದನೆ, ಕೋಮುವಾದ ಹಾಗೂ ಎಡಪಂಥೀಯ ಉಗ್ರವಾದವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಂಕುಚಿತ ರಾಜಕೀಯ ಹಾಗೂ ಸೈದ್ಧಾಂತಿಕ ವಿಚಾರಧಾರೆ ಮೀರಿ ಮುಂದಾಗಬೇಕು. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಹಕಾರ ಇನ್ನಷ್ಟು ಹೆಚ್ಚಿಸುವ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.ಪ್ರಜಾಪ್ರಭುತ್ವದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಸ್ಥಾನ ಇಲ್ಲ ಎಂದು ಒತ್ತಿಹೇಳಿದ ಅವರು, ಕೇಂದ್ರದ ಸಹಕಾರದೊಂದಿಗೆ ರಾಜ್ಯಗಳು ಮಾವೊವಾದಿಗಳ ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು. ನಕ್ಸಲರ ಸವಾಲು ಎದುರಿಸಲು ರಾಜ್ಯಗಳು ತುರ್ತಾಗಿ ಅಗತ್ಯ ಕಾರ್ಯತಂತ್ರ ರೂಪಿಸಬೇಕಾಗಿದೆ. ಇದಕ್ಕೆ ಬೇಕಾದ ನೆರವನ್ನು ಕೇಂದ್ರ ಸರ್ಕಾರ ನೀಡಲು ಸಿದ್ಧವಿದೆ ಎಂದರು.ಎಡಪಂಥೀಯ ನಕ್ಸಲರ ಪ್ರಭಾವಕ್ಕೆ ಒಳಗಾದ ಪ್ರದೇಶದ ಜನರಿಗೆ ಸಾಧ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನ ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದ ಮನಮೋಹನ ಸಿಂಗ್, ಛತ್ತೀಸಗಡ ಘಟನೆಯ ನಂತರ ನಕ್ಸಲರ ಹಿಂಸಾಚಾರ ಬಗ್ಗು ಬಡಿಯಲು ವಿವಿಧ ರಾಜ್ಯಗಳ ಜತೆಗೂಡಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲು ಕೇಂದ್ರ ಸಿದ್ಧತೆ ನಡೆಸಿದೆ. ಈ ಸಂಬಂಧ ರಾಷ್ಟ್ರೀಯ ಒಮ್ಮತಾಭಿಪ್ರಾಯ ರೂಪಿಸಲು ಇದೇ 10ರಂದು ಸರ್ವಪಕ್ಷಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಬಹಿಷ್ಕಾರ: `ಮುಖ್ಯಮಂತ್ರಿಗಳ ಸಭೆಯನ್ನು ಕೇಂದ್ರ ಸರ್ಕಾರ ವಾರ್ಷಿಕ ಕ್ರಿಯಾಕರ್ಮವನ್ನಾಗಿ ಮಾರ್ಪಡಿಸಿದೆ' ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಟೀಕಿಸಿದರು.`ಮುಖ್ಯಮಂತ್ರಿಗಳು ಐದು ನಿಮಿಷದ ಭಾಷಣ ಮಾಡುತ್ತಾರೆ. ಆದರೆ ಅವರ ಸಲಹೆಯ ಪೈಕಿ ಒಂದನ್ನೂ ಕೇಂದ್ರ ಸರ್ಕಾರ ಒಪ್ಪುವುದಿಲ್ಲ' ಎಂದರು.

`ಇಂತಹ ಸಭೆಗಳಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಟೀಕಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆ ಬಹಿಷ್ಕರಿಸಿದ್ದರು. ಆದರೆ ಅವರ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಒಕ್ಕೂಟ ವ್ಯವಸ್ಥೆಗೆ ಎನ್‌ಸಿಟಿಸಿ ಪೂರಕವಾಗಿಲ್ಲ

-ನಿತೀಶ್, ಮೋದಿ, ಬಾದಲ್, ನವೀನ್ ಪಟ್ನಾಯಕ್ .ಎನ್‌ಸಿಟಿಸಿಯ ಸುಧಾರಿತ ರೂಪವನ್ನು ಕೆಲವು ಮುಖ್ಯಮಂತ್ರಿಗಳು ವಿರೋಧಿಸುತ್ತಿರುವುದು ವಿಷಾದನೀಯ. ಎನ್‌ಸಿಟಿಸಿ ಸ್ಥಾಪನೆಯಂತಹ ವಿಷಯಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ದೇಶ ಇದಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ .-ಪಿ. ಚಿದಂಬರಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.