ಶ್ರೀನಿವಾಸಪುರ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ದಲ್ಲಾಳಿಗಳು ಹಾಗೂ ಮಾವಿನಕಾಯಿ ವ್ಯಾಪಾರಿಗಳ ಅಘೋಷಿತ ಮುಷ್ಕರದಿಂದಾಗಿ ಸೋಮವಾರ ಮಾವಿನ ವಹಿವಾಟು ಸ್ಥಗಿತಗೊಂಡಿತ್ತು.

ಮಾವಿನ ಸುಗ್ಗಿ ಪ್ರಾರಂಭವಾದಂದಿನಿಂದ ರೈತರು, ವ್ಯಾಪಾರಿಗಳು, ಕಾರ್ಮಿಕರು ಹಾಗೂ ವಾಹನಗಳಿಂದ ಗಿಜಿಗುಡುತ್ತಿದ್ದ ಮಾವಿನ ಮಾರುಕಟ್ಟೆ ಪ್ರಾಂಗಣದಲ್ಲಿ ಮೌನ ಆವರಿಸಿತ್ತು. ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ತಮ್ಮ ಮಂಡಿಗಳಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಮಂಡಿ ಕಾರ್ಮಿಕರು ಕೆಲಸವಿಲ್ಲದೆ ಕೈಚೆಲ್ಲಿ ಕುಳಿತಿದ್ದರು.

ಮಂಡಿ ಮಾಲೀಕರು ಭಾನುವಾರವೇ ಮಾವು ಬೆಳೆಗಾರರಿಗೆ ಮುಷ್ಕರದ ಸೂಚನೆ ನೀಡಿದ್ದರಿಂದ ಬಹುತೇಕ ರೈತರು ಕಾಯಿ ಕೀಳುವ ಕಾಯಕಕ್ಕೆ ಪೂರ್ಣವಿರಾಮ ಹಾಕಿದ್ದರು. ಹೊರ ರಾಜ್ಯದ ಲಾರಿಗಳು ಕಾಯಿ ಇಲ್ಲದೆ ಬಯಲಿನಲ್ಲಿ ನಿಂತಿದ್ದವು. ಮುಷ್ಕರದ ಅರಿವಿಲ್ಲದೆ ದೂರದ ಸ್ಥಳಗಳಿಂದ ಕಾಯಿ ತಂದಿದ್ದ ಬೆರಳೆಣಿಕೆಯಷ್ಟು ರೈತರು ಕಾಯಿ ತುಂಬಿದ್ದ ವಾಹನಗಳನ್ನು ಮಂಡಿಗಳ ಎದುರು ನಿಲ್ಲಿಸಿ ಕಾಯುತ್ತಿದ್ದರು.

ಇಷ್ಟಕ್ಕೂ ಈ ಅಘೋಷಿತ ಮುಷ್ಕರದ ಉದ್ದೇಶ ಮಾತ್ರ ಅಸ್ಪಷ್ಟ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರುಕಟ್ಟೆ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿರುವುದು ಹಿಂದೆ ರೈತರಿಂದ ಶೇ10 ರಷ್ಟು ಕಮೀಷನ್ ಪಡೆಯುತ್ತಿದ್ದ, ರೈತರಿಗೆ ತಡವಾಗಿ ಹಣ ಪಾವತಿಸುತ್ತಿದ್ದ ದಲ್ಲಾಳಿಗಳಿಗೆ ಅಪಥ್ಯವಾಗಿ ಪರಿಣಮಿಸಿದೆ.

ಮಾರುಕಟ್ಟೆ ನಿಯಮ ಪಾಲನೆಯಲ್ಲಿ ಗೊಂದಲ ಉಂಟಾಗಿದೆ. ಸಣ್ಣ ಪ್ರಮಾದಕ್ಕೂ ಮಾರುಕಟ್ಟೆ ಅಧಿಕಾರಿಗಳು ಪರವಾನಗಿ ರದ್ದು ಮಾಡುತ್ತಿದ್ದಾರೆ. ಮಾರುಕಟ್ಟೆ ನಿಯಮ ಪಾಲಿಸುತ್ತಿದ್ದರೂ ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಇಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಸಮಸ್ಯೆಯಾಗಿದೆ ಎಂಬುದು ಮಂಡಿ ಮಾಲೀಕರ ಅಳಲು.

ಈಚೆಗೆ ಮಾರುಕಟ್ಟೆ ನಿಯಮದಂತೆ ಮಾವಿನ ಕಾಯಿಯನ್ನು ಹರಾಜು ಮಾಡಲಾಯಿತು. ಟನ್ಗೆ ರೂ. 7 ಸಾವಿರ ಹೋಗುತ್ತಿದ್ದ ಕಾಯಿಯನ್ನು ಮೂರು ಸಾವಿರಕ್ಕೆ ಕೂಗಿದರು. ರೂ.18 ಸಾವಿರ ಹೋಗುತ್ತಿದ್ದ ಕಾಯಿಯನ್ನು 10 ಸಾವಿರಕ್ಕೆ ಕೂಗಿದರು. ಇದರಿಂದ ಬೇಸರಗೊಂಡ ಮಾವು ಬೆಳೆಗಾರರು ತಮಗೆ ಹರಾಜು ಬೇಡ, ಹಿಂದೆ ನಡೆದಂತೆಯೇ ವಹಿವಾಟು ನಡೆಯಲಿ ಎಂದು ಆಗ್ರಹಿಸಿದರು. ರೈತರೇ ಕಾಯಿ ತರಲು ಹಿಂದೇಟು ಹಾಕಿದ್ದಾರೆ ಎಂದು ಮಂಡಿ ಮಾಲೀಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಮಾರುಕಟ್ಟೆಯಲ್ಲಿ ಮಾವು ವಹಿವಾಟಿನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದವರಿಗೆ, ಮಂಡಿ ಮಾಲೀಕರು ಆ ಬಗ್ಗೆ ರೈತರು ಮಾರುಕಟ್ಟೆ ಸಮಿತಿಗೆ ದೂರು ನೀಡಿದ್ದಾರೆಯೇ ಎಂದು ಪ್ರಶ್ನಿಸಿ ಬಾಯಿ ಮುಚ್ಚಿಸುತ್ತಿದ್ದರು.

ಆದರೆ ಈಚೆಗೆ ರೈತರೊಬ್ಬರು ಬಿಳಿ ಚೀಟಿ ವ್ಯವಹಾರ ನಡೆಸುತ್ತಿದ್ದ ಮಂಡಿ ಮಾಲೀಕರ ವಿರುದ್ಧ ಮಾರುಕಟ್ಟೆ ಸಮಿತಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಸಮಿತಿ ಮಂಡಿ ಮಾಲೀಕನ ಲೈಸನ್ಸ್ ರದ್ದುಪಡಿಸಿದ್ದರು. ಇನ್ನೂ ಕೆಲವರ ವಿರುದ್ಧ ಬಂದ ದೂರುಗಳ ಬಗ್ಗೆ ಸಮಿತಿ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಇದು ಅಘೋಷಿತ ಮುಷ್ಕರಕ್ಕೆ ಕಾರಣ ಎಂಬುದು ರೈತರ ಅಭಿಪ್ರಾಯ.

ಮುಷ್ಕರಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹಾಗೂ ಕಾರ್ಯದರ್ಶಿ ಎಂ.ಕೃಷ್ಣನ್ ದಲ್ಲಾಳಿಗಳು ಹಾಗೂ ವ್ಯಾಪಾರಿಗಳನ್ನು ಕರೆಸಿ ಮಾರುಕಟ್ಟೆ ನಿಯಮದಂತೆ ಹೀಗೆ ಸೂಚನೆ ನೀಡದೆ ಮುಷ್ಕರ ನಡೆಸುವಂತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಏನಾದರೂ ಸಮಸ್ಯೆ ಇದ್ದಲ್ಲಿ ರೈತರು ಹಾಗೂ ವ್ಯಾಪಾರಿಗಳ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಅವರ ಮಾತಿಗೆ ಮನ್ನಣೆ ನೀಡಿದ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಮಂಗಳವಾರವೂ ನಡೆಸಬೇಕೆಂದಿದ್ದ ಮುಷ್ಕರವನ್ನು ಕೈಬಿಟ್ಟರು. ರೈತರು ಕಾಯಿ ತಂದರೆ ವಹಿವಾಟನ್ನು ತಕ್ಷಣದಿಂದಲೇ ಪ್ರಾರಂಭಿಸುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಯಾರೇ ಮುಷ್ಕರ ನಡೆಸಬೇಕೆಂದರೂ ಒಂದು ವಾರದ ಮೊದಲು ಸಮಿತಿಗೆ ಸೂಚನೆ ನೀಡಬೇಕು. ಅನಿರೀಕ್ಷಿತವಾಗಿ ಮುಷ್ಕರ ನಡೆಸುವಂತಿಲ್ಲ. ಕಾನೂನು ಬಾಹಿರವಾಗಿ ಮುಷ್ಕರ ನಡೆಸಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗುತ್ತದೆ. ವ್ಯಾಪಾರಿಗಳು ಮುಷ್ಕರವನ್ನು ಘೋಷಿಸಿಲ್ಲ. ವಹಿವಾಟು ನಡೆಸಲು ಮುಂದಾಗಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಎಂ.ಕೃಷ್ಣನ್ `ಪ್ರಜಾವಾಣಿ~ಗೆ ತಿಳಿಸಿದರು.

ಮಾವಿನ ಮಂಡಿ ಮಾಲೀಕರ ಅಘೋಷಿತ ಮುಷ್ಕರದಿಂದಾಗಿ ಮಂಡಿ ಪ್ರದೇಶದ ಹಾಗೂ ಗ್ರಾಮೀಣ ಪ್ರದೇಶದ ಅಸಂಘಟಿತ ಬಡ ಕಾರ್ಮಿಕರು ಒಂದು ದಿನದ ಕೂಲಿಯನ್ನು ಕಳೆದುಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.