ಭಾನುವಾರ, ಮೇ 16, 2021
23 °C

ಎರಡು ಕ್ರಿಯೇಟಿವ್ ಪ್ರದರ್ಶನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿ ವಲಯದಲ್ಲಿ, ಎಲ್ಸೀಮೇಡಮ್ ಎಂದೇ ಚಿರಪರಿಚಿತರಾದ ಲಕ್ಷ್ಮೀ ಚಂದ್ರಶೇಖರ್‌ರವರು ತಮ್ಮ ಕ್ರಿಯೇಟಿವ್ ಥಿಯೇಟರ್‌ನ ಮೂಲಕ ಎರಡು ಹೊಸ ರಂಗಪ್ರಯೋಗಗಳನ್ನು ಸಿದ್ಧಪಡಿಸಿಕೊಂಡು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಾಲೇ ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡ ದ್ವಿವ್ಯಕ್ತಿ ಪ್ರದರ್ಶನ `ಗುಂಡಾಯಣ~ ಹಾಗೂ ಏಕವ್ಯಕ್ತಿ ಪ್ರದರ್ಶನವಾದ  ಕಿತ್ತಳೆ ಮನೆ ಕಾವೇರಿ ಇತ್ತೀಚೆಗೆ ರಂಗಶಂಕರ ಹಾಗೂ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನವಾಯಿತು.

ಗುಂಡಾಯಣ: ತಮ್ಮ ಹಾಸ್ಯ ಬರಹಗಳಿಗೇ ಹೆಸರಾದ ನಾ.ಕಸ್ತೂರಿಯವರ `ಚಕ್ರದೃಷ್ಟಿ~ ಕಾದಂಬರಿಯ ರಂಗರೂಪವೇ ಗುಂಡಾಯಣ. ಇದನ್ನು ರಂಗರೂಪಕ್ಕೆ ತಂದು ಅಭಿನಯಿಸಿದವರು ಲಕ್ಷ್ಮೀ ಚಂದ್ರಶೇಖರ್ ಹಾಗೂ ಸುಂದರ್. ನಿರ್ದೇಶಿಸಿದವರು ಜೋಸೆಫ್. ಮಜ್ಜಿಗೆ ಮಾರುವ ಹೆಂಗಸಾಗಿ, ಗುಂಡಪ್ಪನವರ ಅಜ್ಜಿಯಾಗಿ, ಮಡದಿಯಾಗಿ, ನೆರೆಮನೆಯವಳಾಗಿ ಎಲ್ಸೀ ಮೇಡಮ್ ನಟಿಸಿದರೆ, ಗುಂಡಪ್ಪನವರ ಗೆಳೆಯನಾಗಿ, ಮೇಲಧಿಕಾರಿಯಾಗಿ, ಸ್ವಾಮಿಯಾಗಿ, ಸೂತ್ರದಾರನಾಗಿ ಸುಂದರ್ ನಟಿಸಿದ್ದಾರೆ.

ಇಡೀ ಪ್ರಯೋಗದಲ್ಲಿ ಮುಖ್ಯಪಾತ್ರವಾದ ಗುಂಡಪ್ಪನವರು ರಂಗದ ಮೇಲೆ ಬರುವುದೇ ಇಲ್ಲ. ಅವರ ಅನುಪಸ್ಥಿತಿಯಲ್ಲಿ ಹತ್ತು ಹಲವು ಪಾತ್ರಗಳು ಅವರ ಬದುಕಿನ ಕಥೆ, ವ್ಯಕ್ತಿತ್ವದ ಚಿತ್ರಗಳನ್ನು ಕೊಡುತ್ತಾ ಹೋಗುತ್ತವೆ. ಘಟನೆಯ ಸುತ್ತ ಹಲವು ಜನರ ಅಭಿಪ್ರಾಯಗಳನ್ನು ಆಧರಿಸಿ ಸತ್ಯ ಘಟನೆ ಯಾವುದು ಎಂದು ಶೋಧಿಸುವ ಕಥಾನಕವನ್ನು ಹೊಂದಿರುವ ಕುರೋಸವಾನ ರಶೋಮನ್‌ನಂಥ ಸಿನಿಮಾವನ್ನು ನೆನಪಿಗೆ ತರುವ ಪ್ರಯೋಗವು ಒಂದು ಬಗೆಯಲ್ಲಿ ವಿಶಿಷ್ಟವೆನಿಸುತ್ತದೆ. ಆದರೆ ಆದ್ಯಂತಿಕವಾಗಿ ಅದು ಹೊಮ್ಮಿಸುವ ಅರ್ಥವ್ಯಾಪ್ತಿಗಳಲ್ಲಿ ಆಲೋಚನೆಗೆ ಹಚ್ಚುವ ಯಾವುದೇ ಕೆಲಸಮಾಡದೆ ಬರಿದೇ ನಗಿಸುವ ವಸ್ತುವಾಗಿ ನಿಂತುಬಿಡುತ್ತದೆ. ನಗಿಸುವುದೊಂದನ್ನು ಹೊರತುಪಡಿಸಿದರೆ ಹಲವು ದಶಕಗಳ ಹಳೆಯ ಮತ್ತು ಯಾವುದೇ ಸಂಘರ್ಷವಿಲ್ಲದ ಗುಂಡಪ್ಪನವರ ಜೀವನಕಥೆಯನ್ನು ನಿಜಕ್ಕೂ ಪ್ರೇಕ್ಷಕನಾದವನು ಇವತ್ತಿನ ಸಂದರ್ಭದಲ್ಲಿ ಯಾಕೆ ಕೇಳಬೇಕು? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಆಹಾರ‌್ಯಾಭಿನಯದ ರಂಗಸಾಧ್ಯತೆಯನ್ನು ಹೇರಳವಾಗಿ ಬಳಸಿಕೊಂಡಿರುವ ಪ್ರಯೋಗವು ಹಲವು ಪಾತ್ರಗಳನ್ನು ರಂಗದ ಮೇಲೆ ತರಲು ಯಶಸ್ವಿಯಾಗಿದೆ.

ಇದರ ಮೇಕಪ್ ಮಾಡಿದವರು ರಾಮಕೃಷ್ಣ ಕನ್ನರಪಾಡಿ. ಇಂತಹ ದ್ವಿವ್ಯಕ್ತಿ ಪ್ರಯೋಗಗಳ ಇನ್ನೊಂದು ಗುಣವೆಂದರೆ ನೋಡುತ್ತ ನೋಡುತ್ತ ಪ್ರೇಕ್ಷಕ ಕಥಾಹಂದರವನ್ನು, ಪಾತ್ರದ ಕಷ್ಟಸುಖಗಳನ್ನು ಅರಿಯುವ ಬದಲಾಗಿ ಅದನ್ನು ಅಭಿನಯಿಸುತ್ತಿರುವ ನಟರ ಚಾಕಚಕ್ಯತೆ ಕಂಡು ಬೆರಗಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿಯೇ ಇದನ್ನು ಪ್ರದರ್ಶನ ಎನ್ನಬಹುದೇ ವಿನಾ ನಾಟಕ ಎನ್ನಲಾಗದು. ಎಲ್ಸೀ ಮೇಡಮ್ ತಮ್ಮ ತಾಕತ್ತನ್ನೆಲ್ಲ ಬಳಸಿ ಸಾತ್ವಿಕವಾಗಿ, ಪ್ರಾಮಾಣಿಕವಾಗಿ ಪಾತ್ರವನ್ನು ಅಭಿನಯಿಸುವಲ್ಲಿ ಕಾರ್ಯಪ್ರವತ್ತರಾದರೆ, ಸುಂದರ್ ತಮಗಿರುವ ಧ್ವನಿಸಾಮರ್ಥ್ಯವನ್ನು ತಾವೇ ವ್ಯತ್ಯಾಸಗೊಳಿಸಿಕೊಂಡಿದ್ದಾರೆ. ಅವರ ನಾಸಿಕದಿಂದ ಹೊಮ್ಮುವ ಹುಸಿದನಿಯು ಏಕತಾನತೆಯನ್ನು ಹೆಚ್ಚಿಸುತ್ತದೆ. ರಂಗಸಜ್ಜಿಕೆ, ಪರಿಕರಗಳು ಅಚ್ಚುಕಟ್ಟಾಗಿವೆ. ಬೆಳಕಿನ ವಿನ್ಯಾಸವೂ ಬಹಳ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಗುಂಡಾಯಣವು ಹಾಸ್ಯವನ್ನೇ ಮೂಲದ್ರವ್ಯವನ್ನಾಗಿರಿಸಿಕೊಂಡಿರುವ ಪ್ರಯೋಗವಾಗಿ ಯಶಸ್ವಿಯಾದರೂ ಅದು ಇವತ್ತಿನ ನಮ್ಮ ಕಾಲಘಟ್ಟಕ್ಕೆ ಸಲ್ಲುವಂಥದ್ದೇ? ಪ್ರೇಕ್ಷಕರ‌್ಯಾಕೆ ಇದನ್ನು ನೋಡಬೇಕು? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಪಾತ್ರಗಳು, ನಿರ್ದೇಶಕರೂ ಗೌಣರಾಗಿ ಇಬ್ಬರೇ ನಟರು ಹತ್ತು ಹಲವು ಪಾತ್ರಗಳನ್ನು ಕಣ್ಣಮುಂದೆಯೇ ನಿರ್ವಹಿಸುವ ತಾಂತ್ರಿಕ ಚಾಕಚಕ್ಯತೆಯೇ ಮೇಲುಗೈ ಸಾಧಿಸಿಬಿಡುತ್ತದೆ.

ಕಿತ್ತಳೆಮನೆ ಕಾವೇರಿ: ಇನ್ನು ಲಕ್ಷ್ಮೀ ಚಂದ್ರಶೇಖರ್ ರೂಪಾಂತರಿಸಿ ಒಬ್ಬರೇ ಅಭಿನಯಿಸಿರುವ ಏಕವ್ಯಕ್ತಿ ಪ್ರಯೋಗ  ಕಿತ್ತಳೆ ಮನೆ ಕಾವೇರಿ. ಇದು ಸಿಂಗಾಪುರದ ಬರಹಗಾರ್ತಿ ಸ್ಟೆಲ್ಲಾ ಕಾನ್‌ರವರ `ಎಮಿಲಿ ಆಫ್ ಎಮರಾಲ್ಡ್ ಹಿಲ್~ ಎಂಬ ನಾಟಕದ ರೂಪಾಂತರ. ಇದರ ರಂಗವಿನ್ಯಾಸ ಪ್ರಮೋದ್ ಶಿಗ್ಗಾಂವ್. ನಿರ್ದೇಶನ ಸೌಮ್ಯ ವರ್ಮ.

ಕೊಡಗಿನ ದೊಡ್ಡ ತೋಟದ ಮನೆಯ ಸೊಸೆಯಾಗಿ ಬಂದ ಕಾವೇರಿ ಹೇಗೆ ಆ ಮನೆಯನ್ನು ತನ್ನ ಲವಲವಿಕೆಯ ವ್ಯಕ್ತಿತ್ವದಿಂದ ಚೈತನ್ಯಗೊಳಿಸುತ್ತಾಳೆ, ಆಶಾದಾಯಕ ವಾದ ಬದುಕನ್ನು ಬದುಕುತ್ತಾಳೆ, ಸಂಬಂಧಗಳನ್ನು ಬೆಸೆಯುತ್ತಾಳೆ ಮತ್ತು ಹೇಗೆ ಗಂಡಸರ ತಣ್ಣನೆಯ ಕ್ರೌರ್ಯವನ್ನು ತಾಳಿಕೊಳ್ಳುತ್ತಾಳೆ, ಬದಲಾಗುತ್ತಿರುವ ತನ್ನ ಸುತ್ತಲಿನ ಜಗತ್ತು ಹಾಗೂ ತನ್ನ ಮುಂದಿನ ಪೀಳಿಗೆಯನ್ನು ಹೇಗೆ ತಣ್ಣಗೆ ನೋಡುತ್ತಾ ಕೂರುತ್ತಾಳೆ, ಕಡೆಯದಾಗಿ ಅಖಂಡವಾಗಿದ್ದ ತನ್ನ ತೋಟದ ಮನೆ ಹೇಗೆ ಛಿದ್ರವಾಗುತ್ತದೆ ಎಂಬುದನ್ನು ಕೊಡವ ಸಂಸ್ಕೃತಿಯ ನೆಲೆಗಟ್ಟಿಗೆ ಅನುಗುಣವಾಗಿ ಅಲ್ಲಿನ ಭಾಷಾ ಸೊಗಡನ್ನು ಸಶಕ್ತವಾಗಿ ರೂಪಾಂತರಿಸಿ ಅಷ್ಟೇ ಸಶಕ್ತವಾಗಿ ಅಭಿನಯಿಸಿದ್ದಾರೆ ಲಕ್ಷ್ಮೀ ಚಂದ್ರಶೇಖರ್.

ಕೊಡವ ಭಾಷೆಯ ಏರಿಳಿತಗಳನ್ನು ಅವರು ಹಿಡಿದಿರುವ ಪರಿ ಶ್ಲಾಘನೀಯ. (ಹಲವು ಕಡೆ ಅದು ಮಂಗಳೂರಿನ ವೈಖರಿ ತಾಳಿದರೂ) ರಂಗವಿನ್ಯಾಸ ರಂಗಸಜ್ಜಿಕೆ, ಮುದ್ರಿತಸಂಗೀತ ಮತ್ತು ಹಿನ್ನೆಲೆಚಿತ್ರಗಳು ಎಲ್ಲವೂ ಕೊಡವ ಕುಟುಂಬ-ಸಮುದಾಯದ  ವಾತಾವರಣವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ತಾಂತ್ರಿಕತೆಯ ಎಲ್ಲ ಸಾಧ್ಯತೆಗಳೂ ಪ್ರಯೋಗದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಆದರೆ ಮುಖ್ಯ ಸಮಸ್ಯೆ ಇರುವುದು ಪ್ರಯೋಗದ ಹೂರಣದಲ್ಲಿ. ಹೆಣ್ಣಿನ ಒಳಮನಸ್ಸು ಮತ್ತು ಅವಳ ತುಮುಲಗಳನ್ನು ಅನಾವರಣಗೊಳಿಸುವ ಅನೇಕ ಕಥೆಗಳು, ಉಪಕಥೆಗಳು, ನಾಟಕಗಳು, ಸಿನಿಮಾಗಳು ಈಗಾಗಲೇ ನಮ್ಮಲ್ಲಿ ಹೇರಳವಾಗಿ ಬಂದಿರುವಾಗ ಕಿತ್ತಳೆಮನೆ ಕಾವೇರಿಯ ನೋವು ಯಾವ ಹಿನ್ನೆಲೆಯಲ್ಲಿ ಭಿನ್ನವಾಗುತ್ತದೆ ಎಂದು ತಿಳಿಯುವುದಿಲ್ಲ. ಇದಕ್ಕಿಂತಲೂ ಸೂಕ್ಷ್ಮವಾದ ಮತ್ತು ಸಂಘರ್ಷವುಳ್ಳ ನಾಟಕಗಳು ಮರಾಠಿಯಲ್ಲಿ, ಹಿಂದಿಯಲ್ಲಿ ಸಾಕಷ್ಟು ಬಂದಿವೆ. ಕನ್ನಡದ ವೈದೇಹಿಯರಂತಹ ಸೂಕ್ಷ್ಮಮನಸ್ಸಿನ ಲೇಖಕಿಯರ ಕಥೆಗಳೇ ಹಲವು ಸಂಘರ್ಷ ಮತ್ತು ನಾಟಕೀಯತೆಯನ್ನು ಗರ್ಭೀಕರಿಸಿಕೊಂಡು ಅನೇಕ ಧ್ವನಿಶಕ್ತಿಯಿಂದ ಕೂಡಿವೆ. ಅದೂ ಅಲ್ಲದೇ ಇಬ್ಸನ್ನನ ಖ್ಯಾತ ನಾಟಕ `ಡಾಲ್ಸ್‌ಹೌಸಿ~ನ ನೋರಾಳನ್ನು ನೋಡಿದ ಪ್ರೇಕ್ಷಕರಿಗೆ ಕಿತ್ತಳೆ ಮನೆ ಕಾವೇರಿಯ ಸ್ಥಿತಿ ಮತ್ತು ಸಂಘರ್ಷ ಯಾವ ಥರದಲ್ಲೂ ಭಿನ್ನ ಎನಿಸುವುದೇ ಇಲ್ಲ.

ಆದರೆ ಏಕವ್ಯಕ್ತಿ ಪ್ರದರ್ಶನಗಳಿಗೆ ಆಯ್ದುಕೊಳ್ಳುವ ಪಾತ್ರಗಳು ತುಂಬ ವಿಭಿನ್ನವಾಗಿರುತ್ತವೆ. ಒಂದು ಪಾತ್ರ ರಂಗದ ಮೇಲೆ ಒಬ್ಬಂಟಿಯಾಗಿ ಬಂದು ನಿಂತು ಪ್ರೇಕ್ಷಕರ ಜೊತೆ ಮಾತನಾಡುತ್ತದೆ ಎಂದರೆ, ಆ ಪಾತ್ರಕ್ಕೆ ಕಥಾನಕದಲ್ಲಿ ಆಡದೆ ಉಳಿದ ಮಾತುಗಳು ಬಾಕಿ ಇವೆ ಎಂದರ್ಥ. ಆ ಆಡದೇ ಉಳಿದ ಮಾತುಗಳನ್ನು ಅದು ಪ್ರೇಕ್ಷಕರ ಮುಂದೆ ಆಡುವುದರ ಮೂಲಕ ಆ ಪಾತ್ರದ ಇನ್ನೊಂದು ಮಗ್ಗುಲನ್ನು ಅನಾವರಣಗೊಳಿಸುತ್ತದೆ. ಉದಾಹರಣೆಗೆ ದ್ರೌಪದಿಯ ಪಾತ್ರವನ್ನು ಏಕವ್ಯಕ್ತಿಯಾಗಿ ಆಡುವಷ್ಟು ಸಮಂಜಸವಾಗಿ ಭೀಮನನ್ನು ಆಡಲು ಸಾಧ್ಯವಿಲ್ಲ. ಕುಂತಿ-ಕರ್ಣರನ್ನು ತರುವಷ್ಟು ಸುಲಭವಾಗಿ ಸುಯೋಧನನನ್ನು ತರಲು ಆಗುವುದಿಲ್ಲ. ಸೀತೆಯನ್ನು ತರು ವಷ್ಟು ರಾಮನನ್ನು, ಶಕುಂತಲೆಯನ್ನು ತರುವಷ್ಟು ದುಷ್ಯಂತನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಈ ಪಾತ್ರಗಳೆಲ್ಲಕ್ಕೂ ಆಡದೇ ಉಳಿದ ಮಾತುಗಳು ನೂರಾರಿವೆ. ಇವಿಷ್ಟು ಪುರಾಣದ ಪಾತ್ರಗಳಾದರೆ ಇನ್ನೊಂದು ಬಗೆಯ ಏಕವ್ಯಕ್ತಿ ಪ್ರದರ್ಶನದ ಪಾತ್ರಗಳಿದ್ದಾವೆ. ಅವು ಐತಿಹಾಸಿಕವಾದದ್ದು. ಉದಾಹರಣೆಗೆ ಗಾಂಧಿ, ಕಸ್ತೂರಿ ಬಾ, ಚನ್ನಮ್ಮ, ಸುಭಾಷ್‌ಚಂದ್ರಬೋಸ್ ಇತ್ಯಾದಿ... ಪೌರಾಣಿಕ ಪಾತ್ರಗಳು ಹಾಗೂ ಐತಿಹಾಸಿಕ ಪಾತ್ರಗಳು ಜನಜನಿತವಾದದುರಿಂದ ಅವು ಹೆಚ್ಚಿಗೆ ತ್ರಾಸನ್ನುಂಟು ಮಾಡುವುದಿಲ್ಲ. ಆದರೆ ಈ ಮೂರನೆಬಗೆಯ ಕಾಲ್ಪನಿಕ ಪಾತ್ರವಿದೆಯಲ್ಲಾ, ಅದು ಸವಾಲು ಒಡ್ಡುವಂಥದ್ದು. ಕಾಲ್ಪನಿಕ ಪಾತ್ರವೊಂದನ್ನು ಏಕವ್ಯಕ್ತಿ ಪ್ರದರ್ಶನದ ಚೌಕಟ್ಟಿನಲ್ಲಿ ರಂಗದ ಮೇಲೆ ತರುವಾಗ ಒಟ್ಟಾರೆ ಆ ಪಾತ್ರದ ಒಳತೋಟಿಯ ಸಂಘರ್ಷ ಬಹಳ ಮುಖ್ಯವಾಗುತ್ತದೆ. ಅದನ್ನು ಅಷ್ಟೇ ಸಶಕ್ತವಾಗಿ ಕಟ್ಟುವುದೂ ಸವಾಲೇ. ಅದು ಲೇಖಕ ಮತ್ತು ನಟ ಇಬ್ಬರಿಂದಲೂ ಆಗುವ ಕೆಲಸ. ಪ್ರಯೋಗದಲ್ಲಿ ಮುಖ್ಯಕ್ರಿಯೆ ಮತ್ತು ಅಮುಖ್ಯಕ್ರಿಯೆಗಳನ್ನು ಗುರುತಿಸುವಲ್ಲಿ ನಿರ್ದೇಶಕರೂ ವಿಫಲರಾಗಿದ್ದಾರೆ. ಸಂತೆಯಲ್ಲಿ ಶಾಪಿಂಗ್ ಮಾಡುವುದು, ಫೋರ್ಕ್ ರೆಸಿಪಿ ಹೇಳಿ ಮಾಡುವುದು, ಹಲವು ಬಾರಿ ಪುನರಾವರ್ತನೆಗೊಳ್ಳುವ ಪಾರ್ಟಿಯ ದೃಶ್ಯಗಳು ಇವೆಲ್ಲಕ್ಕೂ ಪ್ರಯೋಗದಲ್ಲಿ ಹೆಚ್ಚಿನ ಸಮಯ ವ್ಯಯವಾಗಿದ್ದು, ಅದು ಪ್ರಯೋಗದ ಲಯವನ್ನೇ ಹಾಳು ಮಾಡುತ್ತದೆ.

ಒಟ್ಟಾರೆಯಾಗಿ `ಕಿತ್ತಳೆಮನೆ ಕಾವೇರಿ~ ಅದರ ಭಾಷೆ, ರಂಗಸಜ್ಜಿಕೆ, ತಾಂತ್ರಿಕತೆ, ಅಭಿನಯದ ದೃಷ್ಟಿಯಿಂದ ಹುಬ್ಬೇರಿಸುವಂತೆ ಮಾಡಿದರೂ ಅದರ ಸಂಘರ್ಷದ ದೃಷ್ಟಿಯಿಂದ ನಿರಾಸೆ ಮೂಡಿಸುತ್ತದೆ. ಎಷ್ಟೇ ಆದರೂ ನಾಟಕ ಒಂದು ಸಮಷ್ಟಿಯ ಕೆಲಸ. ಏಕವ್ಯಕ್ತಿ, ದ್ವಿವ್ಯಕ್ತಿ ಪ್ರದರ್ಶನಗಳು ಒಂದೋ ನಟರ ಅಭಾವದಿಂದ ಆಗುತ್ತವೆ; ಅಥವಾ ಕೆಲವು ಸೂಕ್ಷ್ಮ ಸಾಮಾಜಿಕ, ರಾಜಕೀಯ ಸಂದರ್ಭಗಳಲ್ಲಿ ಆಗುತ್ತವೆ. ಹೀಗೆ ಕರ್ನಾಟಕದಲ್ಲಿ ಆದದ್ದು ಇಲ್ಲವೇ ಇಲ್ಲ ಎನ್ನಬಹುದು. ಬದಲಾಗಿ ಮಣಿಪುರದ ಹೆಸರಾಂತ ರಂಗಕರ್ಮಿಗಳಾದ ಕನ್ಹಯ್ಯಲಾಲ್ ಹಾಗೂ ಸಾಬಿತ್ರಿದೇಬಿ ದಂಪತಿ ತಮ್ಮ ಕಲಾಕ್ಷೇತ್ರದ ಮೂಲಕ ಹಲವು ಏಕ, ದ್ವಿವ್ಯಕ್ತಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.

ಬಿತ್ರಿದೇಬಿಯವರು ಅಭಿನಯಿಸಿದ ಮಹಾಶ್ವೇತಾದೇವಿಯವರ ಕತೆಯನ್ನಾಧರಿಸಿದ `ದೋಪ್ತಿ~ ಇಡೀ ರಂಗಭೂಮಿಯಲ್ಲೇ ತಲ್ಲಣವನ್ನು ಸೃಷ್ಟಿಸಿದ ಪ್ರಯೋಗವಾಗಿತ್ತು. ಇಂತಹ ಪ್ರಯೋಗಗಳ ಹಿಂದೆ ಮಣಿಪುರದ ಸಾಮಾಜಿಕ, ರಾಜಕೀಯ, ಆರ್ಥಿಕವಾದ ಸ್ಥಿತಿಗತಿಗಳು ಕೆಲಸಮಾಡುತ್ತಿರುತ್ತವೆ. ಇವನ್ನು ಮಾಡುವುದೇ ಒಂದು ಉದ್ದೇಶಕ್ಕಾಗಿ. ಆದರೆ ಕರ್ನಾಟಕದ ಸ್ಥಿತಿ ಇಷ್ಟು ಅತಿರೇಕಕ್ಕೇರಿಲ್ಲ. ಅದರಲ್ಲೂ ಬೆಂಗಳೂರೆಂಬ ಥಳುಕುನಗರದಲ್ಲಿ ಬದುಕು ನಮಗೆ. ಹಾಗಿದ್ದರೆ ಏಕವ್ಯಕ್ತಿ, ದ್ವಿವ್ಯಕ್ತಿ ಪ್ರದರ್ಶನಗಳ ಉದ್ದೇಶವೇನು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗುತ್ತದೆ. ನಟರ ಅಭಾವ ಎಂದು ಹೇಳಲು ಆಗುವುದಿಲ್ಲ ಎನಿಸುತ್ತದೆ. ಒಂದು ಕಾಲದಲ್ಲಿ ನಾಟಕದ ಕಾಲೇಜು ಎಂದೇ ಹೆಸರಾಗಿದ್ದ ನ್ಯಾಷನಲ್ ಕಾಲೇಜಿಗೆ ಸರಿಸಮನಾಗಿ ಮಹಿಳಾ ಕಾಲೇಜಾದ ಎನ್‌ಎಮ್‌ಕೆಆರ್‌ವಿಯಲ್ಲಿ ಒಂದು ದೊಡ್ಡ ರಂಗ ಚಳವಳಿಯನ್ನೇ ಆರಂಭಿಸುವ ಮೂಲಕ ನಾಟಕ ಎಂದರೇ ಮೂಗು ಮುರಿಯುತ್ತಿದ್ದ ಹುಡುಗಿಯರನ್ನು ರಂಗದ ಮೇಲೆ ತಂದು ಹುರುಪು ತುಂಬಿದವರು ಲಕ್ಷ್ಮೀ ಚಂದ್ರಶೇಖರ್. ಅವರ ರಂಗಪ್ರೀತಿ ಅಪಾರ. ಎಷ್ಟೇ ಟೀವಿ, ಸಿನಿಮಾಗಳನ್ನು ಮಾಡಿದರೂ ರಂಗಚಟುವಟಿಕೆಯನ್ನು ಮಾತ್ರ ನಿಲ್ಲಿಸಿಲ್ಲ. ನಿವೃತ್ತಿಯ ಬಳಿಕವೂ ಇಷ್ಟು ಸಕ್ರಿಯ ಹಾಗೂ ಸೃಜನಶೀಲರಾಗಿರುವವರು ವಿರಳ. ಇವತ್ತಿಗೂ ಅವರು ಹುಟ್ಟುಹಾಕಿದ ರಂಗಪ್ರೀತಿ ಆ ಕಾಲೇಜಿನಲ್ಲಿ ಥಿಯೇಟರ್ ಕ್ಲಬ್‌ನ ಮೂಲಕ ಕ್ರಿಯಾಶೀಲವಾಗಿದೆ. ಒಂದೇ ಆಶಯವೆಂದರೆ, ಹೀಗೆ ರಂಗಾಸಕ್ತಿ ಮೂಡಿದ ಹುಡುಗಿಯರನ್ನೂ ತಮ್ಮ ಕ್ರಿಯೇಟಿವ್ ಥಿಯೇಟರ್‌ಗೆ ಸೇರಿಸಿಕೊಂಡು ಮಾಡುವ ಪ್ರಯೋಗಗಳಿಂದ ನಿಜಕ್ಕೂ ಒಂದು ರಂಗ ಚಳವಳಿಯೇ ಪುನರಾವರ್ತನೆಗೊಳ್ಳಲಾರದೇ? ಎಲ್ಸೀ ಮೇಡಮ್ ಕರೆದರೆ ಅವರ ಮೇಲೆ ಅಭಿಮಾನವಿರುವ, ಕಲಿಕೆಯ ಹಸಿವಿರುವ ಹುಡುಗಿಯರು ಬಾರದೇ ಇರುತ್ತಾರೆಯೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.