ಬುಧವಾರ, ಜೂನ್ 16, 2021
23 °C
ಪ್ಲಾಸ್ಟಿಕ್‌, ಅಪಾಯಕಾರಿ ತ್ಯಾಜ್ಯ ಉತ್ಪಾದನೆ ಕುರಿತ ಕಾರ್ಯಾಗಾರ

ಎಲೆಕ್ಟ್ರಾನಿಕ್‌ ತ್ಯಾಜ್ಯ ಪರಿಸರಕ್ಕೆ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಗತ್ತಿನಲ್ಲಿ ಪ್ರತಿವರ್ಷ ನೂರಾರು ಟನ್‌ನಷ್ಟು ಎಲೆಕ್ಟ್ರಾನಿಕ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಯುಬಿಡಿಟಿ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಶ್ಯಾಮ್‌ ಸುಂದರ್‌ ಮಾಹಿತಿ ನೀಡಿದರು.ನಗರದ ಯುಬಿಡಿಟಿ ಕಾಲೇಜಿನಲ್ಲಿ ಗುರುವಾರ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ನಡೆದ ‘ಎಲೆಕ್ಟ್ರಾನಿಕ್‌, ಅಪಾಯಕಾರಿ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ’ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪ್ರತಿವರ್ಷ 50 ಮಿಲಿಯನ್‌ ಟನ್‌ ಎಲೆಕ್ಟ್ರಾನಿಕ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಯುಎಸ್‌ಎನಲ್ಲಿ ಪ್ರತಿವರ್ಷ 30 ಮಿಲಿಯನ್‌ ಕಂಪ್ಯೂಟರ್‌ಗಳು ಮೂಲೆ ಸೇರುತ್ತಿವೆ. ಯೂರೋಪ್‌ನಲ್ಲಿ 100 ಮಿಲಿಯನ್‌ ಫೋನ್‌ಗಳು ತ್ಯಾಜ್ಯದ ಪಟ್ಟಿಗೆ ಸೇರ್ಪಡೆ ಆಗುತ್ತಿವೆ. ಇದು ಪರಿಸರಕ್ಕೂ ಮಾರಕವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತ ಸೇರಿದಂತೆ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳು ತ್ಯಾಜ್ಯ ಸುರಿಯುವ ಘಟಕಗಳಾಗಿ ಪರಿಣಮಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಪರಿಸರ ಮಾಲಿನ್ಯ ನಿಯಂತ್ರಣ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಶೇ 15ರಿಂದ 20ರಷ್ಟು ಮಾತ್ರ ಎಲೆಕ್ಟ್ರಾನಿಕ್‌ ವಸ್ತುಗಳ ಪುನರ್‌ ಬಳಕೆ ಸಾಧ್ಯವಾಗುತ್ತಿದೆ. 2005ರಲ್ಲಿ 1,46,000 ಟನ್‌, 2007ರಲ್ಲಿ 3,80,000 ಟನ್‌ ಹಾಗೂ 2012ರಲ್ಲಿ 8 ಲಕ್ಷ ಟನ್‌

ಎಲೆಕ್ಟ್ರಾನಿಕ್‌ ತ್ಯಾಜ್ಯ ಉತ್ಪಾದನೆ ಆಗಿತ್ತು ಎಂದು ಮಾಹಿತಿ ನೀಡಿದರು.ಎಲೆಕ್ಟ್ರಾನಿಕ್‌ ತ್ಯಾಜ್ಯದ ಪುನರ್‌ ಬಳಕೆಯಿಂದ ಮೂರು ರೀತಿಯಲ್ಲಿ ಸಮಾಜಕ್ಕೆ ಉಪಯೋಗ ಆಗುತ್ತದೆ. ಆರ್ಥಿಕವಾಗಿ ಹಣ ಗಳಿಸಬಹುದು, ಪರಿಸರಕ್ಕೂ ತೊಂದರೆ ಆಗುವುದಿಲ್ಲ. ಜತೆಗೆ, ನಿರುದ್ಯೋಗಿಗಳಿಗೆ ಉದ್ಯೋಗವೂ ಲಭಿಸಲಿದೆ ಎಂದು ಹೇಳಿದರು.ಅಪಾಯಕಾರಿ ತ್ಯಾಜ್ಯಗಳಾದ ರಾಸಾಯನಿಕ, ದೊಡ್ಡ ಗಾತ್ರದ ಮೆಟಲ್‌, ಬಣ್ಣ, ಹಳೆಯ ಬ್ಯಾಟರಿಗಳಿಂದಲೂ ಪರಿಸರಕ್ಕೆ ತೊಂದರೆ ಆಗುತ್ತಿದೆ. ಜಾಗತಿಕಮಟ್ಟದಲ್ಲಿ ಪ್ರತಿ ವರ್ಷ 400 ಮಿಲಿಯನ್‌ ಟನ್‌ ಅಪಾಯಕಾರಿ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಇನ್ನು ಪ್ರತಿನಿತ್ಯ ಭಾರತದಲ್ಲಿ 9,205 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ದೆಹಲಿ, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈ ಮಹಾನಗರದಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಎಸ್‌.ಮಂಜಪ್ಪ ಮಾತನಾಡಿ, ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆಯಲ್ಲಿ ಎಡವುತ್ತಿವೆ. ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಪ್ರಾಂಶುಪಾಲ ಡಾ.ಶಿವಪ್ರಸಾದ್‌ ಬಿ.ದಂಡಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ.ರುದ್ರೇಶಮೂರ್ತಿ, ಕುಮಾರ್‌ ಸ್ವಾಮಿ, ಕೆ.ಮಂಜುನಾಥ್‌, ಡಾ.ನಾಗರಾಜಪ್ಪ, ಡಾ.ಎಚ್‌.ಎಂ.ಲಕ್ಷ್ಮೀತಾಂತ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.