ಭಾನುವಾರ, ಮೇ 9, 2021
27 °C

ಎಲೆಕ್ಟ್ರಿಕ್ ರೇವಾ ಹೊಸ ಕಾಲದ ಕಾರು

- ದಿಲೀಪ್ ಮೈತ್ರಾ Updated:

ಅಕ್ಷರ ಗಾತ್ರ : | |

ಎಲೆಕ್ಟ್ರಿಕ್ ರೇವಾ ಹೊಸ ಕಾಲದ ಕಾರು

ಮಹಿಂದ್ರಾ ಇ20 ಅನ್ನು ಸಂಪೂರ್ಣವಾಗಿ ಸಿಟಿ ಕಾರ್ ಎನ್ನಬಹುದು. ಏಕೆಂದರೆ 100 ಕಿಲೋಮೀಟರ್‌ಗಳ ಮೈಲೇಜ್ ಮಿತಿ ಇದಕ್ಕೆ ಇದೆ. ಅದೂ ಅಲ್ಲದೇ 1 ದಿನಕ್ಕೆ ವಿದ್ಯುತ್ ಚಾರ್ಜ್ ಮಾಡಿಕೊಳ್ಳುವ ಅವಕಾಶ ಸಾಮಾನ್ಯವಾಗಿ ಒಮ್ಮೆಯೇ ಸಿಗುವುದು. ಹಾಗಾಗಿ ನಗರ ಮಿತಿಯನ್ನು ಬಿಟ್ಟು ಹೊರಗೆಲ್ಲೂ ಹೋಗಲಾರದ ಚೌಕಟ್ಟು ಈ ಕಾರ್‌ಗೆ ಇದೆ. ಇದರೊಳಗಿನ ಬ್ಯಾಟರಿ ಚಾರ್ಜ್ ಆಗಲು ಕನಿಷ್ಠ 4-5 ಗಂಟೆ ಬೇಕು. ಗರಿಷ್ಠ ವೇಗ 81 ಕಿಲೋಮೀಟರ್‌ಗಳು. ನಗರ ಮಿತಿಗೆ ಈ ವೇಗದ ಅಗತ್ಯ ಇಲ್ಲವೂ ಇಲ್ಲ. 100 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಹೇಳಿದರೂ, 80 ಕಿಲೋಮೀಟರ್ ಇದರ ನಿಜ ಮೈಲೇಜ್ ಅನ್ನಬಹುದು. 60 ಕಿಲೋಮೀಟರ್ ಓಡಿಸಿದ ಬಳಿಕವೇ ಮತ್ತೊಮ್ಮೆ ಚಾರ್ಜ್ ಮಾಡಿಕೊಳ್ಳುವುದು ಒಳ್ಳೆಯದು. ಜತೆಗೆ ಹವಾನಿಯಂತ್ರಣ ವ್ಯವಸ್ಥೆ ಬಳಸಿದರಂತೂ ಮತ್ತಷ್ಟು ಮೈಲೇಜ್ ಕುಸಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹೊಸ ಕಾರ್‌ನ ಮಿತಿಯೂ ಇದರ ಮೈಲೇಜ್‌ನದೇ ಎಂದು ಹೇಳಬಹುದು. ಆದರೆ ಎಸಿ ಅತ್ಯುತ್ತಮವಾಗಿದೆ. ಶ್ರೇಷ್ಠ ತಣ್ಣನೆಯ ಅನುಭವವನ್ನು ಇದು ನೀಡುತ್ತದೆ.ಇದು ಸಣ್ಣ ಕಾರ್. ಇದು ಮಾರುತಿ ಆಲ್ಟೊಗಿಂತ ಕೊಂಚ ಚಿಕ್ಕದು, ಟಾಟಾ ನ್ಯಾನೊಗಿಂತ ಕೊಂಚ ದೊಡ್ಡದಾಗಿದೆ. ಕಾರ್‌ನ ಉದ್ದ 3280 ಎಂಎಂ, ಅಗಲ 1514 ಎಂಎಂ, ಎತ್ತರ 1560 ಎಂಎಂ ಇದೆ. ನಗರದೊಳಗೆ ಚುರುಕಾಗಿ ಓಡಾಡಲು ತಕ್ಕದು ಎಂಬಂತೆ ಈ ಕಾರ್ ಇದೆ. ಕೇವಲ 3.9 ಮೀಟರ್‌ಗಳ ತಿರುಗುವ ವ್ಯಾಸ ಹೊಂದಿರುವ ಕಾರಣ, ನಗರ ಮಿತಿಯಲ್ಲಿ ಪಾರ್ಕಿಂಗ್ ಮಾಡಿಕೊಳ್ಳುವುದು ಅತಿ ಸುಲಭ. ಕಾರ್‌ಗೆ ಅತ್ಯುತ್ತಮ ಪಿಕ್‌ಅಪ್ ಇದೆ. 4 ಮಂದಿ ಕುಳಿತರೂ ಆರಾಮಾಗಿ ಸಾಗುತ್ತದೆ. ಎಸಿ ಬಳಸಿದರೆ ಇತರ ಕಾರ್‌ಗಳಲ್ಲಿ ಶಕ್ತಿ ಕೊಂಚ ಕಡಿಮೆ ಆಗುತ್ತದೆ. ಆದರೆ ಇ20ನಲ್ಲಿ ಈ ಸಮಸ್ಯೆ ಇಲ್ಲ. ಇಲ್ಲಿ ಮೋಟಾರ್‌ಗೂ, ಎಸಿಗೂ ಯಾವ ಸಂಬಂಧವೂ ಇರದೇ ಇರುವ ಕಾರಣ, ಎಸಿಯಲ್ಲೂ ಅತ್ಯುತ್ತಮ ಪಿಕ್‌ಅಪ್ ಇದೆ.ಇದರ ವಿಶೇಷವೆಂದರೆ ಕಾರ್‌ನ ಆಟೊ ಟ್ರಾನ್ಸ್‌ಮಿಷನ್ ವ್ಯವಸ್ಥೆ. ಅಂದರೆ ಇದರಲ್ಲಿ ಹಿಂದಿನ ರೇವಾದಲ್ಲಿ ಇದ್ದಂತೆ ಗಿಯರ್, ಕ್ಲಚ್ ಯಾವುದೂ ಇಲ್ಲ. ಸುಮ್ಮನೆ ಆಕ್ಸಿಲರೇಟರ್ ಒತ್ತಿದರೆ ಸಾಕು ಮುನ್ನುಗ್ಗುತ್ತದೆ. ನಿಲ್ಲಿಸಲು ಬ್ರೇಕ್ ಪೆಡಲ್ ಇದೆ. ಆದರೆ ಇಲ್ಲೊಂದು ಎಫ್- ಫಾರ್ವರ್ಡ್ ಹಾಗೂ ಆರ್- ರಿವರ್ಸ್ ಎಂಬ ದಿಕ್ಕುಗಳನ್ನು ನಿರ್ಧರಿಸಬಲ್ಲ ಲಿವರ್ ಅನ್ನು ನೀಡಲಾಗಿದೆ. ನೋಡಲು ಪಕ್ಕಾ ಗಿಯರ್ ಶಿಫ್ಟರ್‌ನಂತೆಯೇ ಇದ್ದರೂ ಇದರ ಕಾರ್ಯವೇ ಬೇರೆ. ಜತೆಗೆ ಕಾರ್‌ನಲ್ಲಿ ಹಿಲ್ ಹೋಲ್ಡ್- ಎಂಬ ಸೌಲಭ್ಯ ನೀಡಲಾಗಿದೆ. ಅತಿ ದಿಣ್ಣೆಯಲ್ಲಿ ಕಾರ್ ನಿಂತಿದ್ದು, ಹಿಮ್ಮುಖವಾಗಿ ಚಲಿಸಬಾರದು ಎಂದಿದ್ದರೆ, ಈ ಹಿಲ್ ಹೋಲ್ಡ್ ಬಟನ್ ಅನ್ನು ಒತ್ತಿದರೆ ಸಾಕು. ಕಾರ್ ಹಿಂದಕ್ಕೆ ಸಾಗುವುದು ತಪ್ಪುತ್ತದೆ.ಹಿಂದಿನ ಸೀಟ್‌ನಲ್ಲಿ ಇಬ್ಬರು ವಯಸ್ಕರು ಅಥವಾ ಮೂರು ಮಕ್ಕಳು ಆರಾಮಾಗಿ ಕೂರಬಹುದು. ಆದರೆ ಹಿಂದಿನ ಕಿಟಕಿಯ ಗಾಜನ್ನು ಇಳಿಸದಂತೆ ಮಾಡಿದ್ದಾರೆ. ಇದನ್ನು ದೊಡ್ಡ ಮಿತಿ ಎಂದೇ ಹೇಳಬಹುದು. ಬಾಗಿಲು ಇಲ್ಲದೇ ಇದ್ದರೂ, ಗಾಜು ತೆರೆಯುವ ಅವಕಾಶವಾದರೂ ಇರಲೇಬೇಕು.

ಸುಧಾರಣೆ ಅಗತ್ಯ

ಕಾರ್ ಅತ್ಯುತ್ತಮವಾಗೇ ಇದ್ದರೂ ಅನೇಕ ಸುಧಾರಣೆಗಳಿಗೆ ಅವಕಾಶವಿದೆ. ಕಾರ್‌ಗೆ ಪವರ್ ಸ್ಟೀರಿಂಗ್ ಸೌಲಭ್ಯವೇ ಇಲ್ಲ. ಹಾಗಾಗಿ ವಾಹನದಟ್ಟಣೆ ಇರುವೆಡೆ ಪಾರ್ಕ್ ಮಾಡುವಾಗ ತುಂಬ ಕಷ್ಟವಾಗುತ್ತದೆ. ಜತೆಗೆ ವಿದ್ಯುತ್ ಚಾಲಿತ ಕಾರ್ ಆದ್ದರಿಂದ ಕಡಿಮೆ ವೇಗದ ಚಾಲನೆಯಲ್ಲಂತೂ ಸ್ಟೀರಿಂಗ್ ಅತಿ ಹೆಚ್ಚು ಗಡಸಾಗುತ್ತದೆ. ಶೀಘ್ರದಲ್ಲೇ ಕಾರ್ ಪವರ್ ಸ್ಟೀರಿಂಗ್ ವ್ಯವಸ್ಥೆ ಪಡೆಯಲಿದೆ. ಅದು ಸಿಕ್ಕರೆ ಒಳ್ಳೆಯದು. ಜತೆಗೆ ಕಾರ್ ಒಳಗಿನ ಸೌಂಡ್ ಪ್ರೂಫಿಂಗ್ ಸಹ ಶ್ರೇಷ್ಠವಾಗಿಲ್ಲ. ಆಚಿನ ಗದ್ದಲ ಒಳಗೆ ಹೆಚ್ಚೇ ಕೇಳುತ್ತದೆ. ಜತೆಗೆ ಕಾರ್‌ನ ಸಸ್ಪೆನ್ಷನ್ ಸಹ ಉತ್ತಮವಾಗಿ ಇರಬೇಕಿತ್ತು. ಕುಳಿಗಳಿರುವ ರಸ್ತೆಗಳಲ್ಲಿ ಕಾರ್ ಚಾಲನೆ ತ್ರಾಸ ಎಂದು ಅನ್ನಿಸುತ್ತದೆ. ಇವೆಲ್ಲದರ ಜತೆಗೆ ಕಾರ್‌ನ ಮೈಲೇಜ್‌ನ ಮಿತಿ. 100 ಕಿಲೋಮೀಟರ್ ಮಾತ್ರ ಮೈಲೇಜ್ ನೀಡುವ ಕಾರಣ ದೂರದ ಪ್ರಯಾಣ ಅಸಾಧ್ಯ. ಇದಕ್ಕಾಗಿ ಕಂಪೆನಿ ಬೆಂಗಳೂರಿನಲ್ಲಿ 100 ಚಾಜಿರ್ಂಗ್ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆಯಲ್ಲಿದೆ. ಇದು ಸಾಧ್ಯವಾದರೆ 1 ಗಂಟೆ ಬ್ಯಾಟರಿ ಚಾರ್ಜ್ ಮಾಡಿಕೊಂಡರೆ 20 ಕಿಲೋಮೀಟರ್ ದೂರ ಸಾಗುವ ಸಾಧ್ಯತೆ ಸಿಗುತ್ತದೆ. ಇದಕ್ಕಾಗಿ ಸಣ್ಣ ಮೊತ್ತದ ಶುಲ್ಕ ಕಟ್ಟಬೇಕಾಗಿಬರಬಹುದು.

ಎಲ್ಲರಿಗೂ ಸಲ್ಲುವುದಿಲ್ಲ

ಮಹಿಂದ್ರಾ ಇ20 ಎಲ್ಲರಿಗೂ ಅಲ್ಲವೇ ಅಲ್ಲ. ಶ್ರಿಮಂತ ಕುಟುಂಬಗಳಿಗೆ ದ್ವಿತೀಯ ಆಯ್ಕೆಯ ಕಾರ್ ಆಗಿ ಇದು ಬಳಕೆ ಆಗಬಲ್ಲದು. ಅಂದರೆ ಮನೆಯಲ್ಲಿ ಈಗಾಗಲೇ ಒಂದು ಕಾರ್ ಇದ್ದು, ಈ ಕಾರ್ ಅನ್ನು ಸುಮ್ಮನೆ ಶೋಕಿಗಾಗಿ ಇಟ್ಟುಕೊಳ್ಳಲು ಇದು ಅರ್ಹವಷ್ಟೇ. ಎಲ್ಲದಕ್ಕಿಂತ ಮುಖ್ಯವಾಗಿ ಇದರ ಬೆಲೆ 6.49 ಲಕ್ಷ ರೂಪಾಯಿಗಳು (ಎಕ್ಸ್ ಶೋರೂಂ ಬೆಂಗಳೂರು). ಈ ಕಾರ್ ಅನ್ನು ಮಾರುತಿ ಆಲ್ಟೊ, ಹುಂಡೈ ಇಯಾನ್, ಶೆವರ್ಲೆ ಸ್ಪಾರ್ಕ್ ಮಾದರಿಯ ಸಣ್ಣ ಕಾರ್‌ಗಳ ಜತೆಗೆ ಹೋಲಿಸುವ ಕಾರಣ, ಇಷ್ಟು ದೊಡ್ಡ ಮೊತ್ತದ ಹಣ ವ್ಯಯ ಮಾಡಿ ಸಣ್ಣ ಕಾರ್ ಕೊಳ್ಳುವಂತಾಯಿತಲ್ಲ ಎಂದುಕೊಳ್ಳಬಾರದು. ಮಹಿಂದ್ರಾ ಕಂಪೆನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, 1.5 ಲಕ್ಷ ರೂಪಾಯಿಗಳ ಡೌನ್‌ಪೇಮೆಂಟ್ ಹಾಗೂ ಮಾಸಿಕ 9275 ರೂಪಾಯಿಗಳ ಕಂತಿನ ಸಾಲ ಸೌಲಭ್ಯ ನೀಡಲು ಚಿಂತನೆ ನಡೆಸಿದೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದಲ್ಲಿ ಮಾತ್ರ ಈ ಕಾರ್‌ನ ಬೆಲೆ ಕಡಿಮೆ ಎನ್ನಬಹುದು. ಇದೇ ಕಾರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಿಸುಮಾರು 16 ಲಕ್ಷ ರೂಪಾಯಿ ಬೆಲೆ ಬಾಳಬಹುದು. ಆದರೆ ಭವಿಷ್ಯದಲ್ಲಿ ಭಾರತದಲ್ಲಿ ಈ ಕಾರ್‌ನ ಬೆಲೆ ಕಡಿಮೆ ಆಗಬಹುದು. ಭಾರತ ಸರ್ಕಾರ ಪ್ರತಿ ಕಾರ್‌ನ ಮೇಲೆ 1.5 ಲಕ್ಷ ರೂಪಾಯಿಯ ಸಬ್ಸಿಡಿ ನೀಡಲಿದೆ. ಇದರಿಂದ ಕಾರ್‌ನ ಮುಖಬೆಲೆ ಸಾಕಷ್ಟು ಕಡಿಮೆ ಆಗಲಿದೆ.ಕಾರ್‌ನ ನಿರ್ವಹಣಾ ಬೆಲೆಯಂತೂ ಕಡಿಮೆಯೇ ಇದೆ. ತಿಂಗಳಿಗೆ ಕಾರ್‌ನ ಚಾಲನೆಗೆ 600 ರೂಪಾಯಿ ಖರ್ಚಾಗಲಿದೆ. ದಿನಕ್ಕೆ 40 ಕಿಲೋಮೀಟರ್‌ನಂತೆ ಕಾರ್ ಅನ್ನು ಓಡಿಸಿದರೆ, ಇದೊಂದು ಅದ್ಭುತ ಮಿತವ್ಯಯಿ ಕಾರ್ ಎಂದು ಕರೆಸಿಕೊಳ್ಳುವ ಎಲ್ಲ ಲಕ್ಷಣ ಹೊಂದಿದೆ. ಒಂದು ಬೈಕ್ ನಿರ್ವಹಿಸುವುದಕ್ಕಿಂತಲೂ ಕಡಿಮೆ ಆಗಲಿದೆ. ಇಂದು ಕಿಲೋಮೀಟರ್‌ಗೆ 50 ಪೈಸೆ ಮಾತ್ರ ತಗುಲುವುದು ಇದರ ವಿಶೇಷ. ಇತರೆ ಕಾರ್‌ಗಳಲ್ಲಿ ಒಂದು ಕಿಲೋಮೀಟರ್‌ಗೆ 5 ರೂಪಾಯಿ ತಗುಲುತ್ತದೆ. ಕಾರ್ ಒಳಗಿನ ಬ್ಯಾಟರಿ 4 ವರ್ಷ ಬಾಳಿಕೆ ಬರುತ್ತದೆ.

ನಂತರ ಹೊಸದನ್ನು ಅಳವಡಿಸಿಕೊಳ್ಳಬೇಕು. ಇದಾದ ನಂತರ ಒಂದು ಕಿಲೋಮೀಟರ್‌ಗೆ 3.10 ರೂಪಾಯಿಯೇ ವೆಚ್ಚವಾಗಲಿದೆ. ಆದರೆ ಬೇರಾವುದೇ ರೀತಿಯ ನಿರ್ವಹಣಾ ವೆಚ್ಚಗಳಿಲ್ಲ. ಅಂದರೆ ಎಂಜಿನ್ ಆಯಿಲ್, ಎಂಜಿನ್ ಸರ್ವಿಸಿಂಗ್ ಯಾವುದೂ ಇರುವುದಿಲ್ಲ. ಹಾಗಾಗಿ ವಾರ್ಷಿಕ 60 ಸಾವಿರ ರೂಪಾಯಿ ಸಹ ಮಿಗುತ್ತದೆ ಎನ್ನುವುದು ಮಹಿಂದ್ರಾದ ಸಮರ್ಥನೆ.

ತಂತ್ರಜ್ಞಾನ

ಕಾರ್ ಒಳಗೆ 48 ವೋಲ್ಟ್‌ಗಳ ಲೀಥಿಯಂ ಅಯಾನ್ ಬ್ಯಾಟರಿ ಇದೆ. ಇದಕ್ಕೆ ತಕ್ಕಂತೆ 3 ಫೇಸ್‌ಗಳ ಬಿಎಲ್‌ಡಿಸಿ (ಬ್ರಷ್‌ಲೆಸ್ ಡೈರೆಕ್ಟ್ ಕರೆಂಟ್) ಮೋಟಾರ್ ಇದೆ. 5 ಗಂಟೆಗಳ ಕಾಲ ಚಾರ್ಜ್ ಆದರೆ 100 ಕಿಲೋಮೀಟರ್ ಚಲಿಸಬಹುದು. ಇದರ ಜತೆಗೆ ಸೋಲಾರ್ ಚಾಜಿರ್ಂಗ್ ಸೌಲಭ್ಯವೂ ಇದೆ. ಮನೆಯಲ್ಲೇ ಒಂದು ಸೋಲಾರ್ ಪೆನಲ್ ಅನ್ನು ಸುಮಾರು 1 ಲಕ್ಷ ರೂಪಾಯಿ ಖರ್ಚಲ್ಲಿ ಅಳವಡಿಸಿಕೊಂಡರೆ, ನಂತರ ವಿದ್ಯುತ್ ಖರ್ಚೇ ಇಲ್ಲದೇ ಕಾರ್ ಚಲಾಯಿಸಬಹುದು.ಕಾರ್‌ನ ಬ್ಯಾಟರಿ 60 ಸಾವಿರ ಕಿಲೋಮೀಟರ್ ಓಡುತ್ತದೆ. ಆದರೆ ವಾಸ್ತವದಲ್ಲಿ ಇನ್ನೂ ಹೆಚ್ಚು ಬರಬಹುದು. ದಿನಕ್ಕೆ 4 ಕಿಲೋಮೀಟರ್‌ನಂತೆಯೇ ಓಡಿಸಿದರೆ ಹೆಚ್ಚು ವರ್ಷ ಬರಬಹುದು. ಹೊಸ ಬ್ಯಾಟರಿಗೆ 1.5 ಲಕ್ಷ ರೂಪಾಯಿ ತಗುಲಲಿದೆ. ಜತೆಗೆ ಕಾರ್‌ನ ಬ್ರೇಕ್ ಬಳಸಿದಂತೆ ವಿದ್ಯುತ್ ಜನರೇಟರ್‌ನಂತೆ ಕೆಲಸ ಮಾಡಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದರಿಂದ ದಿನಕ್ಕೆ ಸುಮಾರು 7-8 ಕಿಲೋಮೀಟರ್ ಹೆಚ್ಚು ದೂರವನ್ನು ಕ್ರಮಿಸಲು ಸಹಾಯವಾಗುತ್ತದೆ.ಕಾರ್‌ನ ಒಳಾಂಗಣ ಅತ್ಯುತ್ತಮವಾಗಿದೆ. 15.5 ಇಂಚ್‌ನ ಟಚ್‌ಸ್ಕ್ರೀನ್ ಇದ್ದು, ಜಿಪಿಎಸ್, ರೇಡಿಯೊ, ಮ್ಯೂಸಿಕ್ ಸಿಸ್ಟಂ, ಡಿವಿಡಿ, ಬ್ಲೂಟೂತ್, ಐ-ಪಾಡ್ ಸಂಪರ್ಕ ಸೌಲಭ್ಯ ನೀಡಲಾಗಿದೆ. ಐಷಾರಾಮಿ ಸೀಟ್ ಹಾಗೂ ಡ್ಯಾಷ್ ಬೋರ್ಡ್ ಕಾರ್‌ನ ಅಂದ ಹೆಚ್ಚಿಸುತ್ತವೆ. ಜತೆಗೆ ಪ್ರೊಜೆಕ್ಟರ್ ಶೈಲಿ ಹೆಡ್ ಲೈಟ್, ಎಲ್‌ಇಡಿ ಟೇಲ್‌ಲ್ಯಾಂಪ್, ಹಿಂದಿನ ಕ್ಯಾಮೆರಾ, ಜೆಎಲ್‌ಬಿ ಬ್ರಾಂಡ್‌ನ 4 ಸ್ಪೀಕರ್‌ಗಳು ಮುದ ನೀಡುತ್ತವೆ. 6 ಅತ್ಯುತ್ತಮ ವರ್ಣಗಳಲ್ಲೂ ಕಾರ್ ಸಿಗುವುದು ವಿಶೇಷವಾಗಿದೆ.

(ಲೇಖಕರು ವಾಣಿಜ್ಯ ಪತ್ರಕರ್ತರು. ಕಳೆದ 10 ವರ್ಷಗಳಿಂದ ಕಾರ್ ಟೆಸ್ಟ್‌ಡ್ರೈವ್ ವರದಿ ಬರೆಯುತ್ತಿದ್ದಾರೆ)

ಕನ್ನಡಕ್ಕೆ: ನೇಸರ ಕಾಡನಕುಪ್ಪೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.