ಸೋಮವಾರ, ಮೇ 23, 2022
26 °C

ಎಲ್ಲ ಭಾಷೆಗಳಲ್ಲಿ ಪರಮಹಂಸರ ಚಲನಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಕೃಷ್ಣ ಮಿಷನ್ ಸಭಾಂಗಣ ಉದ್ಘಾಟಿಸಿ ಅಡ್ವಾಣಿ ಸಲಹೆಬೆಳಗಾವಿ: ‘ರಾಮಕೃಷ್ಣ ಪರಮಹಂಸರು ಹಿಂದೂ ಧರ್ಮದ ಉಳಿವಿಗಾಗಿ ನೀಡಿದ ಕೊಡುಗೆ ಬಹುದೊಡ್ಡದು. ಆದರೆ ಅವರ ಕುರಿತು ಜನಸಾಮಾನ್ಯರಿಗೆ ತಿಳಿಹೇಳುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ. ನಾಡಿನ ಎಲ್ಲ ಭಾಷೆಗಳಲ್ಲಿ ಪರಮಹಂಸರ ಕುರಿತು ಚಲನಚಿತ್ರ ನಿರ್ಮಿಸಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ ಶುಕ್ರವಾರ ಇಲ್ಲಿ ಹೇಳಿದರು.ಬೆಳಗಾವಿಯ ರಾಮಕೃಷ್ಣ ಮಿಷನ್ ನಿರ್ಮಿಸಿರುವ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ‘ಪರಮಹಂಸರ ಕುರಿತು ಸಾಕ್ಷ್ಯ ಚಿತ್ರಗಳು ಮಾತ್ರ ಬಂದಿವೆ. ಆದರೆ ಚಲನಚಿತ್ರ ಬಂದಿಲ್ಲ. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಈ ಕಾರ್ಯ ನಡೆಯಬೇಕು’ ಎಂದು ಸಲಹೆ ಮಾಡಿದರು.‘ಜಾಗತಿಕ ಮಟ್ಟದಲ್ಲಿ ಭಾರತ ಹಿರಿಮೆಯನ್ನು ತೋರಿಸಿಕೊಟ್ಟ ಖ್ಯಾತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಚಿಕಾಗೋ ಭಾಷಣದಿಂದ ವಿವೇಕಾನಂದರ ವಿಚಾರಧಾರೆ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತವಾಯಿತು’ ಎಂದರು.‘ವಿವೇಕಾನಂದರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗದಿದ್ದರೂ ಜನತೆಗೆ ಅಮೂಲ್ಯ ಸಂದೇಶ ನೀಡಿದ್ದರು. 1897ರಲ್ಲಿ ಮುದ್ರಾಸ್‌ದಲ್ಲಿ ನಡೆದ ಸಭೆಯೊಂದರಲ್ಲಿ ಅವರು ‘ಭಾರತಾಂಬೆಯನ್ನು ಪ್ರೀತಿಸಿ’ ಎಂದು ಕರೆಕೊಟ್ಟಿದ್ದರು. ಆ ಮೂಲಕ ದೇಶಪ್ರೇಮಕ್ಕೆ ಮುನ್ನುಡಿ ಬರೆದರು. ಅವರು ಹೇಳಿಕೆ ನೀಡಿದ 50 ವರ್ಷಗಳಲ್ಲಿ (1947) ದೇಶ ಸ್ವಾತಂತ್ರ್ಯವಾಯಿತು’ ಎಂದು ಶ್ಲಾಘಿಸಿದರು.‘ರಾಮಕೃಷ್ಣ ಪರಮಹಂಸರು, ವಿವೇಕಾನಂದರ ತತ್ವಗಳನ್ನು ಓದಿದರೆ ದೇಶದ ಬಗ್ಗೆ ಗೌರವ ಉಕ್ಕುತ್ತದೆ. ಜತೆಗೆ ಹಿಂದೂಗಳಿಗೆ ಆತ್ಮ ಚಿಂತನೆಗೆ ಅವಕಾಶವಾಗುತ್ತದೆ’ ಎಂದು ಅವರು ತಿಳಿಸಿದರು.‘ಸ್ವಾಮಿ ವಿವೇಕಾನಂದರು ಬೆಳಗಾವಿಯಲ್ಲಿ 9 ದಿನಗಳ ಕಾಲ ತಂಗಿದ್ದರು. ಅಂತೆಯೇ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬೆಳಗಾವಿಯ ಮಹತ್ವ ಅಷ್ಟು ದೊಡ್ಡದಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಸ್ವಾಮಿ ಪ್ರಭಾನಂದಜೀ ಮಹಾರಾಜ ಹಾಗೂ ಸ್ವಾಮಿ ಸ್ಮರಣಾನಂದಜೀ ಮಹಾರಾಜ ಅವರು ಮಾತನಾಡಿದರು.ರಾಮಕೃಷ್ಣ ಮಿಷನ್ ಆಶ್ರಮ ಬೆಳಗಾವಿಯ ಕಾರ್ಯದರ್ಶಿ ಸ್ವಾಮಿ ರಾಘವೇಶಾನಂದಜಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಭಿನಂದನೆ: ಕಾರ್ಯಕ್ರಮದಲ್ಲಿ ವಿವೇಕಾನಂದ ಆಶ್ರಮದ ಅಧ್ಯಕ್ಷ ಸುರೇಶ ಹುಂಡ್ರೆ, ರಾಮಾ ರೆಡ್ಡಿ, ಲಕ್ಷ್ಮಣ ರೆಡ್ಡಿ ಹಾಗೂ ಭವ್ಯ ಸಭಾಮಂಟಪದ ಆರ್ಕಿಟೆಕ್ಟ್ ಅಶ್ವಿನ್ ಶ್ರೀನಿವಾಸ ಅವರನ್ನು ಸತ್ಕರಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಮಕೃಷ್ಣ ಆಶ್ರಮದ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸ್ವಾಮಿ ವೇದಿತಾನಂದ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.