ಸೋಮವಾರ, ಜೂನ್ 21, 2021
21 °C

ಎಳ್ಳು ಬೆಲ್ಲವೂ ಬೇವು ಬೆಲ್ಲವೂ

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಚಿತ್ರ: ಸಂಕ್ರಾಂತಿ

ಅನೇಕ ವರ್ಷಗಳ ಹಿಂದೆ ಒಲವನ್ನೇ ನೆಚ್ಚಿ ತಾಯಿ ಮನೆಯಿಂದ ಬೇರೆಯಾಗಿದ್ದಾಳೆ. ಎಷ್ಟೇ ಆದರೂ ಪ್ರೇಮ ಕುರುಡು. ಮಗ ತನಗರಿವಿಲ್ಲದೆ ತಾಯಿಮನೆಯ ಹುಡುಗಿಯನ್ನು ಅದೇ ಒಲವಿನ ಮೂಲಕ ವರಿಸಲು ಹೊರಡುತ್ತಾನೆ. ಪ್ರೀತಿಗಾಗಿ ಮನೆತನದ ಪ್ರತಿಷ್ಠೆಯನ್ನು ಸೂರೆ ಮಾಡಿ ಹೋದ ಆ ಹೆಣ್ಣುಮಗಳನ್ನು ಮತ್ತೆ ಮನೆ ಸ್ವೀಕರಿಸುವುದೇ? ಹಳೆಯ ಪ್ರೇಮದ ಗಾಯವನ್ನು ಹೊಸ ಪ್ರೇಮದ ಮುಲಾಮು ವಾಸಿ ಮಾಡಬಲ್ಲದೇ? ಇಷ್ಟರ ನಡುವೆ ಹೊಸತಲೆಮಾರಿನ ಪ್ರೀತಿ ಎದುರಿಸುವ ಸಂಘರ್ಷ ಎಂಥದ್ದು ಎನ್ನುವುದನ್ನು ಹೇಳುತ್ತದೆ `ಸಂಕ್ರಾಂತಿ~.`ಹಾಡು ಹಳೆಯದಾದರೇನು~ ಕೇಳುಗ ಹೊಸಬ ಎಂಬುದನ್ನು ಬಲವಾಗಿ ನಂಬಿ ತೆಗೆದ ಚಿತ್ರ ಇದು. ತಮಿಳಿನ `ಅರುಣಾಚಲಂ~ ಸೇರಿದಂತೆ ಕನ್ನಡದ ಅನೇಕ ಚಿತ್ರಗಳ ಛಾಯೆಯನ್ನು ಇಲ್ಲಿ ಕಾಣಬಹುದು. `ಭಾವ ನವನವೀನ~ ಅಲ್ಲದೇ ಹೋದರೂ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರ ಕಥೆ ಹೇಳುವ ಉತ್ಸಾಹ ಹಾಗೂ ಧೈರ್ಯವನ್ನು ಮೆಚ್ಚಬೇಕು. ಯಶಸ್ಸಿಗೆ ಬೇಕಾದ ಸೂತ್ರಗಳೇನು ಎಂಬುದು ಅವರಿಗೆ ಗೊತ್ತಿದೆ. ವೈಭವಕ್ಕೆ ವಿದೇಶ, ವೈರಾಗ್ಯಕ್ಕೆ ಸ್ವದೇಶವಿದೆ. ವಿಭಕ್ತ ಕುಟುಂಬದ ಚಿತ್ರಣದ ಜತೆಗೆ ಕೂಡು ಕುಟುಂಬದ ಸೊಬಗಿದೆ. ಖುಷಿಯ ಜತೆಗೆ ಕಣ್ಣೀರು ಬೆರೆತಿದೆ.ನಗಿಸಲು ಮಾಸ್ಟರ್ ಹಿರಣ್ಣಯ್ಯ, ಮಂಡ್ಯ ರಮೇಶ್ ಇದ್ದಾರೆ. ಹಿರಣ್ಣಯ್ಯ ಅವರ ಪಾತ್ರವನ್ನು ಇನ್ನಷ್ಟು ಹಿಗ್ಗಿಸಿದ್ದರೆ ಸ್ವಾರಸ್ಯ ಹೆಚ್ಚುತ್ತಿತ್ತು. ಪ್ರೇಕ್ಷಕರನ್ನು ಭಾವುಕರನ್ನಾಗಿಸಲು ಭವ್ಯ, ವಿಜಯಕಾಶಿ, ಶ್ರೀನಿವಾಸಮೂರ್ತಿ, ಬಿ.ವಿ.ರಾಧಾ, ಶಂಕರ್ ಅಶ್ವತ್ಥ್ ಮುಂತಾದವರ ಪಡೆಯೇ ಇದೆ. ಚಿತ್ರದ ಮೂಲಕ ಪರಿಚಯವಾಗುತ್ತಿರುವ ಸ್ಕಂದ, ದಿವಂಗತ ಕೆ.ಎಸ್.ಅಶ್ವತ್ಥರ ಮೊಮ್ಮಗ. ಎರಡನೇ ನಾಯಕನಾಗಿ ಅವರದು ಮನೋಜ್ಞ ಅಭಿನಯ.

 ಶ್ರೀಧರ್ ಸಂಭ್ರಮ್ ಉತ್ತಮ ಸಂಗೀತ ನೀಡಿದ್ದಾರೆ.

 

ಚಿತ್ರದುದ್ದಕ್ಕೂ ಬರುವ ಮ್ಯಾಂಡೊಲಿನ್ ಹಿಮ್ಮೇಳ ಪ್ರೇಮಕತೆಗೆ ಪಲ್ಲವಿಯಾಗಿದೆ. ಸೂರಿಯವರ ಛಾಯಾಗ್ರಹಣ ಹಾಡುಗಳಲ್ಲಿ ಹಿಗ್ಗಿದೆ. ಹೊರಾಂಗಣ ದೃಶ್ಯಗಳು ಪ್ರೇಕ್ಷಕರ ಕಣ್ಣಿಗೆ ತಂಪೆರೆಯಬಲ್ಲವು. `ಗಲ್ಲಿ~ ಚಿತ್ರದ ಮೂಲಕ ನಾಯಕ ನಟನಾಗಿ ಪ್ರವೇಶ ಪಡೆದ ಗುರುರಾಜ್ ಜಗ್ಗೇಶ್ ಈ ಚಿತ್ರದಲ್ಲಿ ಎಷ್ಟರಮಟ್ಟಿಗೆ ಮಾಗಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ. ನೃತ್ಯದಲ್ಲಿ ಇನ್ನಷ್ಟು ಪಳಗಿದ್ದರೆ, ಮೇಕಪ್ ಬಗ್ಗೆ ಹೆಚ್ಚು ಆಸ್ಥೆ ವಹಿಸಿದ್ದರೆ ಅವರು `ಸಂಕ್ರಾಂತಿ~ಯ ಕಿಚ್ಚನ್ನು ಸರಾಗವಾಗಿ ಹಾಯಬಹುದಿತ್ತು.

 

ಚಿತ್ರಕ್ಕೆ ನಾಯಕಿ ರೂಪಶ್ರೀ ಅವರು ನೀಡಿರುವ ಕೊಡುಗೆ ಅಷ್ಟಕ್ಕಷ್ಟೇ. ಸನ್ನಿವೇಶಕ್ಕೆ ತಕ್ಕಂತೆ ಅವರ ಹಾವಭಾವ ಬದಲಾಗದು. ವಿವಾದದ ಮೂಲಕ ನಾಯಕಿಆಯ್ಕೆ ಮಾಡಿದ ಚಿತ್ರತಂಡ `ಎಳ್ಳಷ್ಟೂ~ ಎಚ್ಚರ ವಹಿಸದಂತೆ ಕಾಣುವುದಿಲ್ಲ.ದ್ವಿತೀಯಾರ್ಧದಲ್ಲಿ ನಿರ್ದೇಶಕರು ಚಿತ್ರದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ಓತಪ್ರೋತವಾಗಿ ನಡೆಯುವ ಕತೆ, ಉದ್ದುದ್ದ ದೃಶ್ಯಗಳು ನಿರೂಪಣೆಯಲ್ಲಿ ಬಿರುಕು ಮೂಡಿಸುತ್ತವೆ. ಅನೇಕ ತಿರುವುಗಳಿದ್ದರೂ ಅವುಗಳಿಗೆ ಗಹನತೆಯ ಕೊರತೆ ಇದೆ. ಹೀಗಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆಗೀಡಾಗುತ್ತದೆ. ಲವಲವಿಕೆ ಇಲ್ಲದ ಸಂಭಾಷಣೆ ಚಿತ್ರದ ಮತ್ತೊಂದು ಲೋಪ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.