ಮಂಗಳವಾರ, ಮೇ 24, 2022
27 °C

ಎಸ್‌ಎಂಎಸ್‌ನಲ್ಲಿ ಇಂಟರ್‌ನೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೇ ಒಂದು ಎಸ್‌ಎಂಎಸ್‌ನಲ್ಲಿ  ಇಂಟರ್‌ನೆಟ್ ಸೌಲಭ್ಯ ಸಿಗುವುದನ್ನು ಊಹಿಸಿಕೊಳ್ಳಿ. ಅದೂ ಜಿಪಿಆರ್‌ಎಸ್ ಸೌಲಭ್ಯ ಇಲ್ಲದ ಮೊಬೈಲ್ ಹ್ಯಾಂಡ್ ಸೆಟ್‌ಗಳಲ್ಲಿ ಕೂಡ. ಟಿಎಕ್ಸ್‌ಟಿ ವೆಬ್ ಇಂಟ್ಯೂಟ್ ಇಂಡಿಯಾ ಇಂತಹ ಒಂದು  ಸಾಧ್ಯತೆ ಸಂಶೋಧಿಸಿದೆ. ಇಲ್ಲಿ ನೀವೂ ಮಾಹಿತಿ ಸೇರಿಸಬಹುದು, ಮಾಹಿತಿ ಪಡೆಯಬಹುದು.. ಹೌದು. ಇಂತಹ ಕಲ್ಪನೆ ಈಗ ನಿಜವಾಗಿದೆ. ಇಂಟರ್‌ನೆಟ್‌ನಲ್ಲಿ ಸಿಗುವ ಮಾಹಿತಿಯನ್ನು ಒಂದು ಎಸ್‌ಎಂಎಸ್ ಮೂಲಕ ಉಚಿತವಾಗಿ ಪಡೆಯುವ ಸೇವೆಯನ್ನು ಬೆಂಗಳೂರು ಮೂಲದ ಟಿಎಕ್ಸ್‌ಟಿ ವೆಬ್, ಇಂಟ್ಯೂಟ್ ಇಂಡಿಯಾ (txtWeb, Intuit India) ಸಾಫ್ಟ್‌ವೇರ್ ಕಂಪೆನಿ ಒದಗಿಸುತ್ತಿದೆ.ದೇಶದಲ್ಲಿ ಸುಮಾರು 70ಕೋಟಿಗೂ ಅಧಿಕ ಮೊಬೈಲ್ ಬಳಕೆದಾರರಿದ್ದಾರೆ. ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಸುಮಾರು 7  ಕೋಟಿಯಷ್ಟು. ಇನ್ನು ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸುವವರ ಸಂಖ್ಯೆ ಕೇವಲ 2 ಕೋಟಿ ಎಂದು ಅಂದಾಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇಂಟರ್‌ನೆಟ್ ಬಳಕೆದಾರರಲ್ಲದವರಿಗೂ ಮಾಹಿತಿ ನೀಡುವುದು ಟಿಎಕ್ಸ್‌ಟಿ ವೆಬ್ ತಂಡದ ಉದ್ದೇಶ. ಅದಕ್ಕಾಗಿ ಈ ಸೇವೆಯನ್ನು ಜಾರಿಗೆ ತಂದಿದೆ.ಆಯಾ ದಿನಗಳ ಪ್ರಮುಖ ಸುದ್ದಿ, ಕ್ರಿಕೆಟ್ ಸ್ಕೋರ್, ರೈಲುಗಳ ವೇಳಾಪಟ್ಟಿ, ವಿಮಾನಗಳ ಲಭ್ಯತೆ, ವಿಕಿಪಿಡಿಯಾ,  ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಯಾವ ಚಿತ್ರಗಳಿವೆ, ಹತ್ತಿರದಲ್ಲಿ ಕಣ್ಣಿನ ಆಸ್ಪತ್ರೆ ಎಲ್ಲಿದೆ? ಹೀಗೆ ನಿಮಗೆ ಯಾವುದರ ಕುರಿತು ಮಾಹಿತಿ ಬೇಕು ಅದನ್ನು ನಿಮ್ಮ ಮೊಬೈಲ್‌ನಲ್ಲಿ ಟೈಪ್ ಮಾಡಿ 92433 42000ಗೆ ಕಳುಹಿಸಿದರೆ ಆಯಿತು. ಕೆಲವೇ ಸೆಕೆಂಡ್‌ಗಳಲ್ಲಿ ನೀವು ಕೇಳಿದ ಮಾಹಿತಿ ಸಂದೇಶವಾಗಿ ನಿಮ್ಮ ಮೊಬೈಲ್‌ಗೆ ಬರುತ್ತದೆ.ಉದಾಹರಣೆಗೆ ನಿಮಗೆ ಇಂದಿನ ಪ್ರಮುಖ ಸುದ್ದಿಗಳನ್ನು ತಿಳಿಯಬೇಕೆಂದಿರುತ್ತದೆ. ನಿಮ್ಮ ಮೊಬೈಲ್‌ನಲ್ಲಿ @news ಅಂತ ಟೈಪ್ ಮಾಡಿ 92433 42000 ಸಂಖ್ಯೆಗೆ ಸಂದೇಶ ಕಳುಹಿಸಿ. ಕೆಲವೇ ನಿಮಿಷಗಳಲ್ಲಿ ಆ ದಿನದ ಪ್ರಮಖ ಸುದ್ದಿಯನ್ನು ಒಳಗೊಂಡಿರುವ ಸಂದೇಶ ನಿಮ್ಮ  ಮೊಬೈಲ್‌ಗೆ ಬರುತ್ತದೆ.ಕ್ರಿಕೆಟ್ ಸ್ಕೋರ್ ತಿಳಿಯಬೇಕೆಂದಿದ್ದರೆ  @cricbuzz  ಅಂತ ಬರೆದು ಅದೇ ಸಂಖ್ಯೆಗೆ ಎಸ್‌ಎಂಎಸ್ ಮಾಡಿ. ಕ್ರಿಕೆಟ್ ಸ್ಕೋರ್     ವಿವರವಾದ ಮಾಹಿತಿ ನಿಮಗೆ ಬರುತ್ತದೆ. ವಿಕಿಪೀಡಿಯದಲ್ಲಿ ಎಸ್‌ಎಂಎಸ್ ಬಗ್ಗೆ ಮಾಹಿತಿ ತಿಳಿಯಬೇಕು ಎಂದಿಟ್ಟುಕೊಳ್ಳಿ.@wikipedia sms ಅಂತ ಬರೆದು ಆ ಸಂಖ್ಯೆಗೆ ಸಂದೇಶ ಕಳುಹಿಸಿ. ಎಸ್‌ಎಂಎಸ್ ಅಂದರೆ ಏನು, ಅದರ ಕುರಿತ ಸಂಪೂರ್ಣ ವಿವರಣೆ ನಿಮ್ಮ ಮೊಬೈಲ್‌ಗೆ ಬರುತ್ತದೆ. ಆ ವಿವರಣೆ ಜೊತೆಯಲ್ಲಿ ಆವರಣದಲ್ಲಿ ಕೆಲವು ಇಂಗ್ಲಿಷ್ ಪದಗಳನ್ನು (ಉದಾಹರಣೆಗೆ (d) (v) ಇತ್ಯಾದಿ) ಕೊಟ್ಟಿರುತ್ತಾರೆ. ನಿಮಗೆ ಇನ್ನಷ್ಟು ಮಾಹಿತಿ  ತಿಳಿಯಬೇಕೆಂದಿದ್ದರೆ ಆ ಅಕ್ಷರವನ್ನು ಬರೆದು ಅದೇ ಸಂಖ್ಯೆಗೆ  ರಿಪ್ಲೈ ಮಾಡಿದರೆ ಆಯಿತು. ಆ ಬಗ್ಗೆ ಹೆಚ್ಚುವರಿ ಮಾಹಿತಿ ದೊರೆಯುತ್ತದೆ.ಇದಕ್ಕೆ ಟಿಎಕ್ಸ್‌ಟಿ  ವೆಬ್ ಯಾವುದೇ ದರ ವಿಧಿಸುವುದಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಉಚಿತ ಎಸ್‌ಎಂಎಸ್ ಸೇವೆ ಇಲ್ಲದಿದ್ದರೆ ಮೊಬೈಲ್ ಕಂಪೆನಿ ಎಸ್‌ಎಂಎಸ್‌ಗಳಿಗೆ ವಿಧಿಸಿಸುವ ಶುಲ್ಕ ಪಾವತಿಸಿದರಾಯಿತು. ಉಚಿತ ಎಸ್‌ಎಂಎಸ್ ಇದ್ದರೆ ಎಲ್ಲ ಮಾಹಿತಿಗಳೂ ನಿಮಗೆ ಉಚಿತ.ಏನಿದು ಟಿಎಕ್ಸ್‌ಟಿ ವೆಬ್?

ಮೂಲತಃ ಟಿಎಕ್ಸ್‌ಟಿ ವೆಬ್ ಎಸ್‌ಎಂಎಸ್ ಆಧಾರದ ಬ್ರೌಸರ್. ಕೆಲವು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ಟಿಎಕ್ಸ್‌ಟಿ ವೆಬ್ ಅನ್ನು ಪ್ರಸ್ತುತ ದೇಶದ 200ಕ್ಕೂ ಅಧಿಕ ಪಟ್ಟಣದಲ್ಲಿ 25,000ಕ್ಕೂ ಅಧಿಕ ಜನರು ಬಳಸುತ್ತಿದ್ದಾರೆ. ವಿವಿಧ ವಿಚಾರಗಳ ಕುರಿತು ಮಾಹಿತಿ ಕೋರಿ ದಿನಂಪ್ರತಿ 70,000ಕ್ಕೂ ಅಧಿಕ ಎಸ್‌ಎಂಎಸ್‌ಗಳು ಇದರ  ಬಾಗಿಲು ಬಡಿಯುತ್ತಿವೆ. ಕರ್ನಾಟಕ ಹೊರತಾಗಿ  ನೆರೆಯ ಆಂಧ್ರಪ್ರದೇಶ, ಗುಜರಾತ್‌ಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಇದರ ಬಳಕೆದಾರರಿದ್ದಾರೆ. ಇನ್ನೂ ವಿಶೇಷವೆಂದರೆ ಅಲ್ಲಿ ಕೃಷಿಕರು ಇದರ ಮೂಲಕ ತರಕಾರಿ, ಧಾನ್ಯ, ಬೇಳೆ ಕಾಳುಗಳ ಪ್ರಚಲಿತ ದರವನ್ನು ತಿಳಿಯಬಹುದು. ಸದ್ಯ ಕರ್ನಾಟಕದಲ್ಲಿ ಈ ಸೌಲಭ್ಯ ಚಾಲ್ತಿಯಲ್ಲಿಲ್ಲ. ಇದು ಜಾರಿಗೆ ಬಂದರೆ ಇಲ್ಲಿನ ರೈತರಿಗೂ ನೆರವಾಗಬಹುದು.ಅಪ್ಲಿಕೇಷನ್‌ಗಳು...

ಇವುಗಳು ಟಿಎಕ್ಸ್‌ಟಿ ವೆಬ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿ ಕೋಶಗಳು. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ 500ಕ್ಕೂ ಅಧಿಕ ಅಪ್ಲಿಕೇಷನ್‌ಗಳು ಈ ಬ್ರೌಸರ್‌ನಲ್ಲಿವೆ.ಅಸಲಿಗೆ ಈ ಅಪ್ಲಿಕೇಷನ್‌ಗಳನ್ನು ಟಿಎಕ್ಸ್‌ಟಿ ವೆಬ್ ಅಭಿವೃದ್ಧಿಪಡಿಸುವುದಿಲ್ಲ. ಯಾವುದಾದರೂ ಸಂಸ್ಥೆ, ವ್ಯಕ್ತಿಗಳು ಇವುಗಳನ್ನು ಅಭಿವೃದ್ಧಿ ಪಡಿಸುತ್ತಾರೆ.  ನೀವು ಕೂಡ ನಿಮ್ಮದೇ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಮಾಡಬಹುದು. ಅದಕ್ಕಾಗಿ ನೀವು ಟಿಎಕ್ಸ್‌ಟಿ     ವೆಬ್‌ಸೈಟ್‌ಗೆ   (www.txtWeb.com) ತೆರಳಿ ನೋಂದಣಿ ಮಾಡಬೇಕಾಗುತ್ತದೆ. ಕಂಪೆನಿ ಹೇಳುವ ಪ್ರಕಾರ, ಒಂದು ಟೆಕ್ಷ್ಟ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಬೇಕಾದರೆ ಐದು ಗಂಟೆ ಕಾಲಾವಕಾಶ ಬೇಕು.ಉದಾಹರಣೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಒಂದು   ನಗರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಟಿಎಕ್ಸ್‌ಟಿ ವೆಬ್‌ನಲ್ಲಿ ಸಂಗ್ರಹ ಮಾಡಿರುತ್ತಾನೆ.ಆ ನಿರ್ದಿಷ್ಟ ನಗರದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ಬಗ್ಗೆ ಮಾಹಿತಿ ಬೇಕಾದವರು ಈ ಮೇಲೆ ಹೇಳಿದ ಸಂಖ್ಯೆಗೆ (92433 42000) ಎಸ್‌ಎಂಎಸ್ ಮಾಡಿದರೆ ಟಿಎಕ್ಸ್‌ಟಿ ವೆಬ್ ತನ್ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ರವಾನಿಸುತ್ತದೆ. 250ಕ್ಕೂ ಅಧಿಕ  ಸಂಸ್ಥೆಗಳು ಮತ್ತು ಡೆವಲಪರ್‌ಗಳು ಈಗ ಈ ಸಂಸ್ಥೆ ಜೊತೆಗಿದ್ದಾರೆ. ಈಗಿರುವ ಅಪ್ಲಿಕೇಷನ್‌ಗಳಲ್ಲಿ ಶೇ 80ರಷ್ಟನ್ನು ಅಭಿವೃದ್ಧಿ ಪಡಿಸಿದವರು ವಿದ್ಯಾರ್ಥಿಗಳೇ. ಕೋಟ್ಯಂತರ ಜನರಿಗೆ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವಂತೆ  ಮಾಡಲು ಪ್ರತಿಯೊಬ್ಬರಿಗೂ ಟೆಕ್ಷ್ಟ್‌ವೆಬ್‌ನಲ್ಲಿ ವಿಷಯಗಳನ್ನು ಹಾಕಬಹುದಾದ ಅವಕಾಶವನ್ನು ಕಲ್ಪಿಸಿರುವುದು ಈ ಎಸ್‌ಎಂಎಸ್ ಆಧಾರದ ಬ್ರೌಸರ್‌ನ ಮತ್ತೊಂದು ವೈಶಿಷ್ಠ್ಯ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.