ಗುರುವಾರ , ಜೂನ್ 24, 2021
25 °C

ಎಸ್‌ಪಿ ಜತೆ ಸಖ್ಯ: ಕಾಂಗ್ರೆಸ್ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಿತ್ರ ಪಕ್ಷ ಟಿಎಂಸಿಯಿಂದ ಹೆಜ್ಜೆಹೆಜ್ಜೆಗೂ `ಕಿರುಕುಳ~ ಅನುಭವಿಸುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷದ ಜತೆ ಸಖ್ಯ ಬೆಳೆಸಲು ಪ್ರಯತ್ನ ಆರಂಭಿಸಿದೆ. ಸಮಾಜವಾದಿ ಪಕ್ಷದ ನೇತಾರ ಮುಲಾಯಂಸಿಂಗ್ ಜತೆ ಹಿರಿಯ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸುತ್ತಿದ್ದು, ಸಂಬಂಧ ಕುದುರಿದರೆ ಆಡಳಿತ ಮೈತ್ರಿಕೂಟದಿಂದ ಮಮತಾ ಪಕ್ಷಕ್ಕೆ ಗೌರವದ ವಿದಾಯ ನೀಡಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ.

ಸಮಾಜವಾದಿ ಪಕ್ಷದ `ನೇತಾಜಿ~ ಜತೆ ಹಿರಿಯ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ. 22 ಲೋಕಸಭಾ ಸದಸ್ಯರ ಬಲ ಹೊಂದಿರುವ ಸಮಾಜವಾದಿ ಪಕ್ಷಕ್ಕೆ ಸರ್ಕಾರದಲ್ಲಿ ಪಾಲು ನೀಡಲು ಕಾಂಗ್ರೆಸ್ ಬಯಸಿದೆ. ಮುಲಾಯಂಸಿಂಗ್ ಮತ್ತು ಅವರು ಸೂಚಿಸುವ ಆ ಪಕ್ಷದ ಕೆಲವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಿದ್ಧವಿದೆ. ಆದರೆ, ಹೊರಗಿನಿಂದ ಬೆಂಬಲ ಕೊಡುತ್ತಿರುವ ಸಮಾಜವಾದಿ ಪಕ್ಷ ಆಡಳಿತದಲ್ಲಿ ಭಾಗಿಯಾಗಲು ಆಸಕ್ತಿ ತೋರುತ್ತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದಕ್ಕೆ ಬದಲಾಗಿ ಸಮಾಜವಾದಿ ಪಕ್ಷ ಮತ್ತೊಂದು ಸೂತ್ರ ಮುಂದಿಟ್ಟಿದೆ. ಹಿಂದೆ ಕೇಂದ್ರದಲ್ಲಿ ಹಲವು ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ `ತೆಲಗು ದೇಶಂ~ ಲೋಕಸಭೆ ಸ್ಪೀಕರ್ ಸ್ಥಾನ ಮಾತ್ರ ಪಡೆದು ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿತ್ತು. ಅದೇ ರೀತಿ ಯುಪಿಎ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುವ ಕುರಿತು ಪರಿಶೀಲಿಸಬಹುದು ಎಂದು ಹೇಳಿದೆ.

ಎರಡನೇ ಸೂತ್ರದ ಪ್ರಕಾರ ಸಮಾಜವಾದಿ ಪಕ್ಷ ಮುಲಾಯಂ ಸೋದರ ರಾಂಗೋಪಾಲ್ ಯಾದವ್ ಅವರನ್ನು ರಾಜ್ಯಸಭೆಗೆ ಕಳುಹಿಸಲಿದೆ. ಉಪ ಸಭಾಪತಿ ಹುದ್ದೆಗೆ ಅವರನ್ನು ಪರಿಗಣಿಸಬೇಕೆಂಬ ಸಲಹೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ. ಈ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.