ಶುಕ್ರವಾರ, ಜೂನ್ 25, 2021
30 °C

ಎಸ್‌ಪಿ ಬೆಂಬಲಕ್ಕೆ ಕಾಂಗ್ರೆಸ್ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಪಿ ಬೆಂಬಲಕ್ಕೆ ಕಾಂಗ್ರೆಸ್ ಯತ್ನ

ನವದೆಹಲಿ: ಐದು ರಾಜ್ಯಗಳ ಚುನಾವಣೆ ಬಳಿಕ ಕೇಂದ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದ್ದು, ಅವಧಿಗೆ ಮೊದಲೇ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ನಡುವೆಯೇ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ವಿರೋಧವನ್ನು ಸಮರ್ಥವಾಗಿ ನಿಭಾಯಿಸಲು ಬೆಂಬಲ ಕೊಡುವಂತೆ ಸಮಾಜವಾದಿ ಪಕ್ಷಕ್ಕೆ ಕಾಂಗ್ರೆಸ್ ಸೋಮವಾರ ಮನವಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಅವರನ್ನು ಭೇಟಿಯಾಗಿ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ತಂತ್ರ ರೂಪಿಸಿರುವ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಬೆಂಬಲ ನೀಡುವಂತೆ ಕೇಳಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಜನತಾದಳದ ಮುಖಂಡ ಲಾಲುಪ್ರಸಾದ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದಾರೆಂದು ಮೂಲಗಳು ಹೇಳಿವೆ. ಮುಲಾಯಂ ಯುಪಿಎ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿದ್ದಾರೆ.

ಈ ಮಧ್ಯೆ  ಸದ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗ ರಚಿಸುವ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.

ಅಖಿಲೇಶ್ ಅವರು ಸೋಮವಾರ ಸಂಸತ್ತಿಗೆ ಬರುತ್ತಿದ್ದಂತೆಯೇ ವಿವಿಧ ಪಕ್ಷಗಳ ಸಂಸದರು ಹಾಗೂ ಮಾಧ್ಯಮದವರು ಅವರನ್ನು ಸುತ್ತುವರಿದ ಸಂದರ್ಭದಲ್ಲಿ ಅವರು ತೃತೀಯ ರಂಗ ರಚನೆಯ ಕುರಿತ  ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದ ನಂತರ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗ ಸ್ಥಾಪನೆ ಯತ್ನದ ವದಂತಿಗಳನ್ನು ಮತ್ತು ತೃತೀಯ ರಂಗ ರಚಿಸುವ ಸಂಬಂಧ ತಮ್ಮ ಪಕ್ಷವು ಎಡ ಪಕ್ಷಗಳು ಹಾಗೂ ಮತ್ತಿತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದರು.

`ತೃತೀಯ ರಂಗ ರಚಿಸುವ ಯಾವುದೇ ಪ್ರಯತ್ನವನ್ನು ನಾನು ಮಾಡುತ್ತಿಲ್ಲ ಎಂಬುದು ನೂರಕ್ಕೆ ನೂರರಷ್ಟು ನಿಜ. ನಾನು ಕೇವಲ ಮುಖಂಡರನ್ನು ಭೇಟಿಯಾಗುತ್ತಿದ್ದೇನೆ~ ಎಂದರು.

`ಉತ್ತರ ಪ್ರದೇಶದ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ಆ ರಾಜ್ಯವನ್ನು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸಬೇಕಿದೆ~ ಎಂದರು.

ಆದರೆ ಇದೇ ವೇಳೆ, ತೃತೀಯ ರಂಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಪಕ್ಷದ ಇತರ ರಾಷ್ಟ್ರೀಯ ನಾಯಕರು ಕೈಗೊಳ್ಳಲಿದ್ದಾರೆ. ತೃತೀಯ ರಂಗ ರಚನೆ ಸಾಧ್ಯತೆ ಕುರಿತ ಚರ್ಚೆ ಒಂದು ಉತ್ತಮ ಆರಂಭ ಎಂದೂ  ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು ಸಂಪ್ರದಾಯ. ಆ ಪ್ರಕಾರ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮುಖ್ಯಮಂತ್ರಿಯವರನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.

ಬಿಜು ಜನತಾದಳ ಮುಖ್ಯಸ್ಥರಾದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾತನಾಡಿ, “ತೃತೀಯ ರಂಗ ಅಥವಾ ಚತುರ್ಥ ರಂಗ ರಚಿಸುವುದು ನಮ್ಮ ಉದ್ದೇಶವಲ್ಲ; ಆದರೆ ಸಮಾನ ಮನಸ್ಕ ಪಕ್ಷಗಳ `ಸಂಯುಕ್ತ ವೇದಿಕೆ~ ರಚಿಸುವುದು ನಮ್ಮ ಗುರಿ~ ಎಂದಿದ್ದಾರೆ. ಬಿಜೆಡಿ ನಾಯಕ ಬಿ.ಮಹತಾಬ್ ಕೂಡ ಇದೇ ರೀತಿ ಹೇಳಿದ್ದಾರೆ.

ಆದರೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ತೃತೀಯ ರಂಗ ರಚನೆ- ಮಧ್ಯಂತರ ಚುನಾವಣೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ತಮ್ಮ ಜೆಡಿಯು ಪಕ್ಷ ಎನ್‌ಡಿಎ ಅಂಗ ಪಕ್ಷ ಎಂಬುದನ್ನು ಸ್ಪಷ್ಟಪಡಿಸಿದ ನಿತೀಶ್, ತೃತೀಯ ರಂಗ ರಚನೆ ಕುರಿತ ಚರ್ಚೆಗಳು ಇನ್ನಷ್ಟೇ ರೂಪ ಪಡೆಯಬೇಕಿದೆ ಎಂದಿದ್ದಾರೆ.

ಪ್ರಕಾಶ್ ಸಿಂಗ್ ಬಾದಲ್ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿತರಾಗಿರುವ ಕೇಂದ್ರ ಸಚಿವ ನ್ಯಾಷನಲ್ ಕಾನ್ಫ್‌ರೆನ್ಸ್‌ನ ಫಾರೂಕ್ ಅಬ್ದುಲ್ಲಾ, `ಬಾದಲ್ ನನಗೆ ತಂದೆ ಸಮಾನರು. ಕೇಂದ್ರದ ಪ್ರಮುಖರು ಅನುಮತಿ ನೀಡಿದರೆ ಪ್ರಮಾಣ ವಚನ ಸಮಾರಂಭಕ್ಕೆ ಹೋಗುತ್ತೇನೆ~ ಎಂದಿದ್ದಾರೆ.

ಅವಧಿ ಪೂರ್ವ ಚುನಾವಣೆ ಇಲ್ಲ: ಪ್ರಧಾನಿ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು  ಬಜೆಟ್ ಅಧಿವೇಶನದಲ್ಲಿ ಹಣಿದು, ಕಾಲೆಳೆಯಲು ವಿರೋಧ ಪಕ್ಷಗಳು ಸನ್ನದ್ಧವಾಗಿದ್ದರೆ, ಪ್ರತಿಪಕ್ಷಗಳು ಎತ್ತುವ ಯಾವುದೇ ವಿಚಾರವನ್ನು ಸಮರ್ಥವಾಗಿ ಎದುರಿಸುವಷ್ಟು ಸಂಖ್ಯಾಬಲ ತಮಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವಧಿಗೆ ಮುನ್ನ ಚುನಾವಣೆ ನಡೆಯಲಿದೆ ಎಂಬುದನ್ನು ತಳ್ಳಿ ಹಾಕಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಪಕ್ಷ ಮತ್ತು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆಯೇ? ಹಾಗೂ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಆಡಳಿತರೂಢರ ಕಾಲೆಳೆಯಲು ಪ್ರಯತ್ನಿಸಿದರೆ ಅಗತ್ಯ ಸಂಖ್ಯಾಬಲ ಇದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ  ಪ್ರಧಾನಿ ಅವರು ಮೇಲಿನಂತೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.