ಶುಕ್ರವಾರ, ಮೇ 27, 2022
30 °C

ಏಕೀಕರಣ ಸ್ಮಾರಕ ಸ್ಥಾಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಕರ್ನಾಟಕದ ಏಕೀಕರಣವನ್ನು ದಿನಾಂಕ 1ನವೆಂಬರ್ 1956 ರಂದು ಆಗಿನ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರಪ್ರಸಾದರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಉದ್ಘಾಟಿಸಿದರು.ಏಕೀಕರಣದ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದ  ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಪಾಂಡೇಶ್ವರ ಕಾಳಿಂಗರಾಯರು ಹಾಡಿ ಸಭೆಯಲ್ಲಿನ ಜನಸಾಗರವನ್ನು ರೋಮಾಂಚನ ಗೊಳಿಸಿದರು.ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ, ಆ ಐತಿಹಾಸಿಕ ಘೋಷಣೆಯಾದ ಆ ಸ್ಥಳ ನಿಜಕ್ಕೂ ಕನ್ನಡ ಜನಸಮುದಾಯ ಕಂಡ ಅಪೂರ್ವ ಕ್ಷಣಗಳ, ಸಂಭ್ರಮದ ಸಾಕ್ಷಿ ಭೂಮಿ.ಕರ್ನಾಟಕ ಏಕೀಕರಣ ಹೋರಾಟದ ಹಾಗೂ ಹೋರಾಟಗಾರರ ಐತಿಹಾಸಿಕ ವೀರಗಾಥೆ, ಕೇವಲ ಗ್ರಂಥಗಳಲ್ಲಿವೆ. ಆದರೆ ಏಕೀಕರಣ ಅಧಿಕೃತವಾಗಿ ಉದ್ಘಾಟನೆಯಾದ ಆ ಸ್ಥಳದಲ್ಲಿ, ಆ ಐತಿಹಾಸಿಕ ನೆನಪಿನ ಯಾವ ಕುರುಹು, ಸ್ಮಾರಕವೂ ಇಲ್ಲದಿರುವುದು ಐತಿಹಾಸಿಕ ವಿಪರ್ಯಾಸವೆನಿಸುತ್ತದೆ. ಆ ಕ್ರೀಡಾಂಗಣದಲ್ಲಿ ಸೂಕ್ತವಾದ ರೀತಿಯಲ್ಲಿ ಏಕೀಕರಣದ ಮಹತ್ವದ ಘಟನೆಗಳ ಸಂಕ್ಷಿಪ್ತ ವಿವರಗಳೊಂದಿಗೆ ಸ್ಮಾರಕ ಸ್ತಂಭವನ್ನು ನಿರ್ಮಿಸಬೇಕು. ಈ ಹಿಂದೆ ಎಸ್. ಎಂ. ಕೃಷ್ಣ ಅವರ ಸರ್ಕಾರ ಸ್ಮಾರಕ ಸ್ತಂಭವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಆದರೆ ಆ ಘೋಷಣೆ ಘೋಷಣೆಯಾಗಿಯೇ ಉಳಿಯಿತು.ಆನಂತರ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮಾಚರಣೆಗೆ ನೂರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಿತು. ಆ ಸಂದರ್ಭದಲ್ಲೂ ಸಹ ಸರ್ಕಾರಕ್ಕೆ ಈ ಸಾರ್ಥಕ ಕಾರ್ಯದ ನೆನಪೇ ಬರಲಿಲ್ಲ. ಕನ್ನಡಿಗರು ಇಂತಹ ಮಹತ್ವದ ಇತಿಹಾಸವನ್ನು ಹಾಗೂ ಸಾರ್ಥಕ ಕರ್ತವ್ಯಗಳನ್ನು ಮರೆಯುವುದನ್ನು ಕಂಡೇ ಗಳಗನಾಥರು ಕನ್ನಡಿಗರ ಕರ್ಮ ಕಥೆಯನ್ನು ಬರೆದಂತೆ ಅನಿಸುತ್ತದೆ.ಇದೀಗ ಇದೇ ಬೆಂಗಳೂರಿನಲ್ಲಿ 77ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಿರುವ ನಾಡೋಜ ಜಿ. ವೆಂಕಟಸುಬ್ಬಯ್ಯನವರು ಏಕೀಕರಣದ ಸ್ಮಾರಕ ಸ್ತಂಭವನ್ನು ಆ ಸ್ಥಳದಲ್ಲಿ ನಿರ್ಮಿಸುವಂತೆ ಸಮ್ಮೇಳನದ ಮೂಲಕ ಸರ್ಕಾರವನ್ನು ಆಗ್ರಹಿಸಬೇಕೆಂದು ವಿನಮ್ರ ಮನವಿ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.