ಭಾನುವಾರ, ಫೆಬ್ರವರಿ 28, 2021
31 °C

ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ...

ರಂಗಶಂಕರದಲ್ಲಿ ಶನಿವಾರ ಮತ್ತು ಭಾನುವಾರ (ಏ.21 ಹಾಗೂ 22) ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ... ನಾಟಕ ಪ್ರದರ್ಶನ.ಪ್ರಖ್ಯಾತ ಫ್ರೆಂಚ್ ಪ್ರಹಸನಕಾರ ಮೋಲಿಯರ್ ಅವರದ್ದೊಂದು ನಾಟಕವಿದೆ. ಜಂಟಲ್‌ಮನ್ ಆಗಲಿಕ್ಕೆ ಹೊರಟ ಬೂರ್ಜ್ವಾ ಎಂದು ಅದರ ಹೆಸರು. ಇಂದಿನ ಪರಿಸ್ಥಿತಿಗೆ ಹೇಳಿಮಾಡಿಸಿದ ಪ್ರಹಸನವದು. ಆ ನಾಟಕವನ್ನು, `ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ~ ಎಂದು ಕನ್ನಡಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ ಖ್ಯಾತ ನಿರ್ದೇಶಕ ಪ್ರಸನ್ನ.ಬದಲಾದ ಪರಿಸ್ಥಿತಿ, ಏನದು ಬದಲಾದ ಪರಿಸ್ಥಿತಿ? ವ್ಯವಹಾರ ಚುರುಕಾಗಿದೆ, ಸ್ಪರ್ಧಾ ಗುಣ ಮೇಲೆದ್ದು ಬಂದಿದೆ. ಮುನ್ನುಗ್ಗಬೇಕು ಪ್ರತಿಸ್ಪರ್ಧಿಗಳನ್ನು ಬಡಿದುರುಳಿಸಬೇಕು, ರಕ್ತಹೀರಬೇಕು ಎಂಬ ಮನೋವೃತ್ತಿ ಜಾಗೃತವಾಗಿದೆ.ಸಿದ್ಧಾಂತ, ಸೈದ್ಧಾಂತಿಕತೆ, ಸಮಾಜವಾದ, ರಾಷ್ಟ್ರಪ್ರೇಮ, ತ್ಯಾಗ, ವೈರಾಗ್ಯ, ಅಹಿಂಸೆ ಮೊದಲಾದ ಮೌಲ್ಯಗಳು ಸಪ್ಪೆಯಾಗಿ ಕಾಣತೊಡಗಿದೆ. ತನ್ನ ಹಕ್ಕು, ತನ್ನ ಸವಲತ್ತು, ತನ್ನ ಆಸ್ತಿ ಹಾಗೂ ತನಗಾಗುತ್ತಿರಬಹುದಾದ ಅನ್ಯಾಯಗಳು ಹೊಸ ಸಾಹುಕಾರರ ಕಾಳಜಿಗಳಾಗಿವೆ. ಅಂತಸ್ತಿನ ಪ್ರಜ್ಞೆ, ಅಹಂಕಾರ, ಸ್ವಾಭಿಮಾನ ಹಾಗೂ ಬಾಹ್ಯಾಡಂಬರಗಳು ಇವರ ಲಕ್ಷಣಗಳಾಗಿವೆ.ಇತ್ತ ಸಂಸ್ಕೃತಿಯೂ ಬದಲಾಗಿದೆ: ಸಂಸ್ಕೃತಿ ಎಡಬಿಡಂಗಿಯಾಗಿದೆ. ಭಾಷೆ ಎಡಬಿಡಂಗಿಯಾಗಿದೆ. ವೇಷ ಎಡಬಿಡಂಗಿಯಾಗಿದೆ, ವ್ಯವಹಾರ ಎಡಬಿಡಂಗಿಯಾಗಿದೆ. ಈ ಹೊಸ ಸಾವ್ಕಾರರಿಗೆ ಅರಿವಿನ ಗಂಭೀರ ಕೊರತೆಯಿದೆ. ಮೋಲಿಯರನ ನಾಟಕವು ವಿಡಂಬನೆ ಮಾಡುವುದು ಇದೇ ತಲೆಕೆಳಗು ಸಭ್ಯತೆಯನ್ನು.ಇಡೀ ಪರಿಸ್ಥಿತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿ, ತಾನೂ ನಕ್ಕು ಇತರರನ್ನೂ ನಗಿಸುತ್ತಾನೆ ಮೋಲಿಯರ್. ನಾಟಕ ಮತ್ತೇನು ಮಾಡಲು ಸಾಧ್ಯ ಹೇಳಿ? ಯಾರಮೇಲೆ ಆಕ್ರೋಶ ವ್ಯಕ್ತಪಡಿಸುತ್ತೀರಿ? ಹೊಸ ಸಾವ್ಕಾರರು ನಮ್ಮವರೇ ತಾನೆ? ನಮ್ಮದೇ ಊರು-ಮನೆಯವರು. ನಮ್ಮದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಗಳು.ಸ್ಥಳ; ರಂಗಶಂಕರ, ಜೆ.ಪಿ. ನಗರ. ಶನಿವಾರ ಸಂಜೆ 7.30 ಹಾಗೂ ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.