ಸೋಮವಾರ, ಮಾರ್ಚ್ 1, 2021
31 °C
ದೇಶದ ಎಲ್ಲ ಹೆದ್ದಾರಿಗಳಲ್ಲಿ ಜಾರಿಗೆ ಕೇಂದ್ರದ ಚಿಂತನೆ

ಏಪ್ರಿಲ್‌ಗೆ ಎಲೆಕ್ಟ್ರಾನಿಕ್‌ ಟೋಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್‌ಗೆ ಎಲೆಕ್ಟ್ರಾನಿಕ್‌ ಟೋಲ್‌

ನವದೆಹಲಿ:  ಟೋಲ್‌ ಸಂಗ್ರಹ ಕೇಂದ್ರಗಳ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ದೇಶದ ವಿವಿಧ ಹೆದ್ದಾರಿಗಳಲ್ಲಿರುವ ಎಲ್ಲ 350 ಟೋಲ್‌ ಗೇಟ್‌ಗಳಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ (ಇಟಿಸಿ) ವ್ಯವಸ್ಥೆ ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.‘ಇದೇ ವರ್ಷದ ಏಪ್ರಿಲ್‌ ತಿಂಗಳ ಕೊನೆಯ ವೇಳೆಗೆ ಎಲ್ಲ ಟೋಲ್‌ ಕೇಂದ್ರಗಳಿಗೆ ಇಟಿಸಿ ವ್ಯವಸ್ಥೆ ದೊರೆಯಲಿದೆ. ಆರಂಭದಲ್ಲಿ ಇದಕ್ಕಾಗಿ ಟೋಲ್‌ ಗೇಟ್‌ನ ಒಂದು ಲೇನ್‌ ಅನ್ನು ಮೀಸಲಿಡಲಾಗುವುದು. ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ಈ ಲೇನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆರ್‌ಎಫ್‌ಐಡಿ ಫಾಸ್ಟ್‌ ಟ್ಯಾಗ್‌ ಲೇನ್‌ ಬಳಸುವ ವಾಹನಗಳಿಗೆ ಟೋಲ್‌ ಕೇಂದ್ರದಲ್ಲಿ ಕಾಯುವ ಅಗತ್ಯವಿರುವುದಿಲ್ಲ. ತಡೆಯಿಲ್ಲದೆ ಸಾಗಬಹುದು. ಇದರಿಂದ ಪ್ರಯಾಣದ ಅವಧಿ ಉಳಿತಾಯವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.‘ಪ್ರೀಪೇಯ್ಡ್‌ ಟೋಲ್‌ ಖಾತೆಯಲ್ಲಿರುವ (ಫಾಸ್ಟ್‌ ಟ್ಯಾಗ್) ಹಣ ಖಾಲಿಯಾದರೆ ವಾಹನ ಮಾಲೀಕರು ರೀಚಾರ್ಜ್‌ ಮಾಡಿಕೊಳ್ಳಬೇಕು. ವಿವಿಧ ಬ್ಯಾಂಕ್‌ಗಳು ಮತ್ತು ಎಲ್ಲ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ರೀಚಾರ್ಜ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದಿದ್ದಾರೆ.‘ಇಟಿಸಿ ಎಲ್ಲ ಕಡೆ ಜಾರಿಯಾದರೆ ಇನ್ನು ಮುಂದೆ ವಾಹನಗಳಿಗೆ ಹೆದ್ದಾರಿಗಳಲ್ಲಿ ತಡೆಯಿಲ್ಲದೇ ಸಂಚರಿಸಲು ಸಾಧ್ಯ.ಟೋಲ್‌ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ತರಬಹುದು. ಇಂಧನ ಕೂಡಾ ಉಳಿತಾಯವಾಗಲಿದೆ’ ಎಂದಿದ್ದಾರೆ.ಪ್ರತಿ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಇಟಿಸಿಗಾಗಿ ‘ಆರ್‌ಎಫ್‌ಐಡಿ ಫಾಸ್ಟ್‌ ಟ್ಯಾಗ್‌’  ಎಂಬ ಪ್ರತ್ಯೇಕ ಲೇನ್‌ ಇರಲಿದೆ. ಈ ಲೇನ್‌ಅನ್ನು ವಿಶಿಷ್ಟ ಬಣ್ಣದಿಂದ ಗುರುತಿಸಲಾಗುವುದು.ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಡಿವೈಸ್‌  (ಆರ್‌ಎಫ್‌ಐಡಿ) ಚಿಪ್‌ ಒಳಗೊಂಡ ಸ್ಟಿಕ್ಕರ್‌ ಅಂಟಿಸಿರುವ ವಾಹನಗಳು ಈ ಲೇನ್‌ನಲ್ಲಿ ಹಾದುಹೋಗಬಹುದು.ವಾಹನಗಳು ಹಾದು ಹೋಗುವಾಗ ಚಿಪ್‌ನಲ್ಲಿರುವ ಮಾಹಿತಿ ಟೋಲ್ ಕೇಂದ್ರದಲ್ಲಿ ಸ್ಥಾಪಿಸಿರುವ ಸರ್ವರ್‌ನಲ್ಲಿ ದಾಖಲಾಗುತ್ತದೆ. ಬಳಿಕ ವಾಹನದ ಪ್ರೀಪೇಯ್ಡ್‌ ಟೋಲ್‌ ಖಾತೆಯಿಂದ ನಿಗದಿತ ಶುಲ್ಕ ಕಡಿತವಾಗಲಿದೆ.ದೇಶದ ಮೊದಲ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಅಹಮದಾಬಾದ್‌– ಮುಂಬೈ ಹೆದ್ದಾರಿಯಲ್ಲಿ 2013 ರಲ್ಲಿ ಜಾರಿಗೆ ತರಲಾಗಿತ್ತು. ಆ ಬಳಿಕ ಕೆಲವು ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.ಎಲ್ಲ ಟೋಲ್‌ ಕೇಂದ್ರಗಳಲ್ಲಿ ಈ ವ್ಯವಸ್ಥೆ ಜಾರಿಯಾದರೆ ವಾಹನಗಳು ಕಾಯುವುದು ತಪ್ಪಲಿದೆ. ಇದರಿಂದ ವರ್ಷಕ್ಕೆ ₹ 60 ಸಾವಿರ ಕೋಟಿ ಮೊತ್ತದ ಇಂಧನ ಉಳಿತಾಯವಾಗಲಿದೆ ಎಂಬುದು ಹೆದ್ದಾರಿ ಪ್ರಾಧಿಕಾರದ ಹೇಳಿಕೆ.ಮುಖ್ಯಾಂಶಗಳು

* ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ ಸಾಧ್ಯ

* ಇನ್ನು ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.