ಗುರುವಾರ , ಜನವರಿ 23, 2020
27 °C

ಏರ್‌ಪೋರ್ಟ್ ರಸ್ತೆಯೂ ಟ್ರಾಫಿಕ್ ಪೊಲೀಸರೂ

ಎಸ್‌. ಶಿವಲಿಂಗೇಗೌಡ,ಬೆಂಗಳೂರು Updated:

ಅಕ್ಷರ ಗಾತ್ರ : | |

ಈ ಬರಹದ ಶಿರೋನಾಮೆಯನ್ನು ‘ಕುರುಬರ ಲಕ್ಕನೂ ಎಲಿ­ಜ­ಬೆತ್ ರಾಣಿಯೂ’ ಎಂಬಂತೆ ಓದಿಕೊಳ್ಳಬೇಕು.ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ­ವಾಯಿತು, ನಿಜ. ಆದರೆ ನಗರ ಕೇಂದ್ರ ಭಾಗದಿಂದ ನಿಲ್ದಾಣ­ದವರೆಗೆ ಸುಮಾರು 40 ಕಿ.ಮೀ. ರಸ್ತೆ ಮಾತ್ರ ಸುಧಾರಣೆ­ಯಾಗುತ್ತಿಲ್ಲ. ಆಗುತ್ತಿದೆ ಎಂದು ಕೊಂಡರೂ ಕಾಮಗಾರಿ ಆಮೆ ನಡಿಗೆ­ಯಷ್ಟೇ ವೇಗದಲ್ಲಿದೆ. ಪರಿಸ್ಥಿತಿ ಹೇಗಿದೆ ಎಂದರೆ ಒಂದು ಕಡೆ ರಸ್ತೆ ಅಭಿವೃದ್ಧಿಯಾಗುತ್ತಿದ್ದರೆ, ಇನ್ನೊಂದು ಕಡೆ ಅಭಿವೃದ್ಧಿ­ಯಾದ ರಸ್ತೆ ದುರಸ್ತಿಯಾಗುತ್ತಿದೆ. ಇದರರ್ಥ ರಸ್ತೆ ಕಾಮಗಾರಿ ನಿರಂತರ, ಸಂಚಾರ ಮಾತ್ರ ಹರೋಹರ!ವಾಹನಗಳು ಇತ್ತಲಿಂದ–ಅತ್ತಲಿಗೆ, ಅತ್ತಲಿಂದ–ಇತ್ತಲಿಗೆ ಹೊರಳಾಡುತ್ತಾ ಅಡ್ಡ ಬರುವ ತಡೆಗೋಡೆಗಳನ್ನು ದಾಟು­ತ್ತಾ ಸಾಗ ಬೇಕಾದ ಸ್ಥಿತಿ ಒಂದು ಕಡೆಯಾದರೆ, ಸ್ವಲ್ಪ ದೂರ ಉತ್ತಮ­ವಾಗಿರುವ ರಸ್ತೆಗಳಲ್ಲಿ ಟ್ರಾಫಿಕ್‌ ಪೊಲೀಸರು ಇಂಟರ್‌­ಸೆಪ್ಟರ್‌ ಎಂಬ ವಾಹನ ನಿಲ್ಲಿಸಿಕೊಂಡು 4–5 ಜನರು ಒಂದು ಸ್ಕ್ವಾಡ್‌ ಸಹಿತ ಒಬ್ಬ ಡಬಲ್‌ಸ್ಟಾರ್‌ ಸರದಾರ, ಸಾಗುತ್ತಿ­ರುವ ವಾಹನ ಸರಣಿಯಿಂದ ಯಾವುದಾ ದರೊಂದು ಕಾರನ್ನು ಲಬಕ್ಕನೆ ಅಡ್ಡಹಾಕಿ ಅತಿವೇಗ, ಅಜಾಗರೂಕತೆ ಎಂಬ ಪ್ರವರಗಳನ್ನು ಒದರುತ್ತಾ ದಂಡವನ್ನೋ? ಮತ್ತೊಂದನ್ನೋ? ವಸೂಲಿಗಿಳಿದುಕೊಡುವ ಹಿಂಸೆ ಊಹಾತೀತ.ಕೆಟ್ಟ ರಸ್ತೆಯಲ್ಲಿ ಹೊರಳಾಡುತ್ತಾ ವಿಮಾನ ಹಿಡಿಯಲೋ ಅಥವಾ ಮನೆಗೆ ಸೇರಲೋ ಸಾಗುತ್ತಿರುವಾಗ ಈ ಪೊಲೀಸರ ಕಾಟದಿಂದ ವಿಮಾನ ನಿಲ್ದಾಣದ ಪ್ರಯಾಣ ಮತ್ತಷ್ಟು ದುಸ್ತರವಾಗುತ್ತಿದೆ.ವಿಮಾನ ನಿಲ್ದಾಣ ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಸಾಗುತ್ತಿರುವ ವಾಹನಗಳು ಸಾಮಾನ್ಯವಾಗಿ ಒಂದೇ ವೇಗ ಪಡೆದಿರುತ್ತವೆ. ಆ ಸಾಲಿನ ಮಧ್ಯೆ ಒಂದು ಕಾರನ್ನು ಅಡ್ಡಹಾಕಿ ತೊಂದರೆ ಕೊಡುವ ಉದ್ದೇಶ ಮತ್ತು ಅದರ ಮರ್ಮ ಆ ಟ್ರಾಫಿಕ್‌ ಪೊಲೀಸರಿಗೆ ಮಾತ್ರ ಗೊತ್ತು.ಏನಾದರೂ ವಾದ ಮಾಡಿದಿರಿ ಎಂದಿಟ್ಟುಕೊಳ್ಳಿ, ಒಂದರ ಬದಲು ಹತ್ತು ನಿಯಮ ಉಲ್ಲಂಘನೆಗಳ ಆರೋಪ ನಿಮ್ಮನ್ನು ಸುತ್ತಿಕೊಳ್ಳುತ್ತವೆ. ಅದರ ಬದಲು ವಾಮ ಮಾರ್ಗದಿಂದ ಬಚಾವಾಗುವುದು ಲೇಸು. ಟ್ರಾಫಿಕ್‌ ಪೊಲೀಸರಿಗೆ ಒಂದು ಸಲಹೆ ಎಂದರೆ ಮೊದಲು ರಸ್ತೆ ಪರಿಪೂರ್ಣವಾಗಲಿ, ನಡುವೆ ಎಲ್ಲಿಯೂ ಸಿಗ್ನಲ್‌ ಇಲ್ಲದಿರುವ, ಪ್ರಯಾಣಿಕರಿಗೆ ನಿಗದಿತ ವೇಳೆಗೆ ನಿಲ್ದಾಣ ಮುಟ್ಟುವ ಭರವಸೆ ಬಂದ ಮೇಲೆ ಆ ರಸ್ತೆಯ ವೇಗದ ಪರಿಮಿತಿ ನಿಗದಿಪಡಿಸಿ.ಮೇಲುಸ್ತರದಲ್ಲಿ ಸ್ವಯಂಚಾಲಿತ ಕ್ಯಾಮೆರಾ ಇಟ್ಟು ಅದು ದಾಖಲಿಸಿದ ವೇಗದ ಆಧಾರದ ಮೇಲೆ ದಾಖಲೆಸಹಿತ ದಂಡ ವಸೂಲಿ ಮಾಡುವ ಆಟೋಮೋಷನ್‌ ಸೆಂಟರ್‌ಗಳಿವೆ­ಯಲ್ಲ, ಅದರ ಉಪಯೋಗ­ವಾಗಲಿ. ಅದು ಬಿಟ್ಟು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಗಳ್ಳರನ್ನು ಹಿಡಿಯುವಂತೆ ವಾಹನ ಚಾಲಕ­ರನ್ನು ಅಟಕಾಯಿಸಿಕೊಂಡರೆ, ನಾವಿನ್ನೂ ಈ ಶತಮಾನಕ್ಕೆ ಕಾಲಿಟ್ಟಿ­ಲ್ಲವೇನೋ ಎಂಬ ಅನುಮಾನ. ಜನಸ್ನೇಹಿಯಾಗಿ­ರಬೇಕಾದ ಪೊಲೀಸರು ಜನದ್ವೇಷಿಗಳಾಗಬಾರದಲ್ಲವೇ?

ಪ್ರತಿಕ್ರಿಯಿಸಿ (+)