ಶುಕ್ರವಾರ, ಮೇ 14, 2021
21 °C
ರಾಜ್ಯದಲ್ಲೂ ವರುಣನ ಆರ್ಭಟ

ಏಳು ಬಲಿ, ಜಲಾಶಯಗಳ ಒಳಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಮಂಗಳವಾರ ಒಟ್ಟು 7 ಜನ ಬಲಿಯಾಗಿದ್ದು ಹಲವು ಮನೆಗಳು ಧರೆಗುರುಳಿದ್ದು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕೊಡಗು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದ್ದು ಆಲಮಟ್ಟಿ, ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವು ಹೆಚ್ಚಿದೆ.ಮಂಗಳೂರು ವರದಿ: ಮಂಗಳೂರು ತಾಲ್ಲೂಕಿನ ಬಜ್ಪೆ ಪೇಟೆಯ ತೊಟ್ಟಿಲಗುರಿಯಲ್ಲಿನ ದಲಿತ ಕಾಲೋನಿಯ ಎರಡು ಮನೆಗಳ ಮೇಲೆ ಪಕ್ಕದ ಕಾಂಪೌಂಡ್ ಮಂಗಳವಾರ ನಸುಕಿನ 3 ಗಂಟೆ ಸುಮಾರಿಗೆ ಕುಸಿದು ಬಿದ್ದುದರಿಂದ ಮನೆಯೊಳಗೆ ಮಲಗಿದ್ದ 10 ಮಂದಿಯ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಗಾಯಗೊಂಡಿದ್ದಾರೆ.ಮೃತರನ್ನು ಸುಂದರ (65), ಸುಂದರಿ (60), ಬೇಬಿ (50), ಚೈತ್ರಾ (13) ಎಂದು ಗುರುತಿಸಲಾಗಿದೆ. ಗಾಯಗೊಂಡವರ ಪೈಕಿ ಶೇಖರ್, ಲೀಲಾವತಿ, ಆಶಾ ಮತ್ತು ಅಶ್ವತ್ಥ್ ಅವರಿಗೆ ಗಂಭೀರ ಗಾಯವಾಗಿದ್ದು, ಅಶ್ವಿನಿ ಮತ್ತು ಅಜಿತ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.ತೊಟ್ಟಿಲಗುರಿ 18 ದಲಿತ ಕುಟುಂಬಗಳು ಇರುವ ಕಾಲೋನಿಯಾಗಿದ್ದು, ಸುಮಾರು 80 ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ವಾಣಿಜ್ಯ ಕಟ್ಟಡದವರು ನಿಯಮ ಉಲ್ಲಂಘಿಸಿ ದಲಿತರಿಗೆ ಸೇರಿದ ಜಾಗವನ್ನು ಕಬಳಿಸಿ ತಮ್ಮ ಕಟ್ಟಡ ನಿರ್ಮಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಈ ಕಟ್ಟಡಗಳ ಬಳಿ ನಿರ್ಮಿಸಿದ ಶಿಥಿಲ ಕಾಂಪೌಂಡ್  ಕುಸಿದು ನಿದ್ದೆ ಮಾಡುತ್ತಿದ್ದ ನಾಲ್ವರನ್ನು ಬಲಿತೆಗೆದುಕೊಂಡಿತು.ಭಾರಿ ಮಳೆಯಿಂದ ಕಾಂಪೌಂಡ್ ಗೋಡೆಯಲ್ಲಿ ಕೆಲವು ದಿನಗಳ ಹಿಂದೆಯೇ ಬಿರುಕು ಕಾಣಿಸಿಕೊಂಡಿತ್ತು. ಇದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಸ್ಥಳೀಯ ಪಂಚಾಯಿತಿ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.ಒತ್ತುವರಿಯನ್ನು ತೆರವುಗೊಳಿಸಬೇಕು ಇಲ್ಲವೇ ಪರ್ಯಾಯ ನಿವೇಶನ ಒದಗಿಸಬೇಕು ಎಂದು ಈ ಕುಟುಂಬಗಳು ಎರಡು ವರ್ಷಗಳಿಂದಲೂ ಹೋರಾಡುತ್ತಲೇ ಇದ್ದವು.ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಭಾನುವಾರ ಅಣಿಯೂರು ಹೊಳೆ ದಾಟಲು ನೀರಿಗೆ ಇಳಿದಿದ್ದ ದೇಜಪ್ಪ (65) ಎಂಬವರು ಮಳೆಯ ರಭಸವಾದ ನೀರಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಸೋಮವಾರ ಸಂಜೆ ಹೊಳೆಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಯಿತು. ಇದು ಕೂಡ ಮಳೆ ಸಂಬಂಧಿತ ಸಾವು ಎಂದು ಜಿಲ್ಲಾಡಳಿತ ದಾಖಲಿಸಿದೆ.ಕುಸಿದ ಗುಡ್ಡ

ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಪಳ್ಳಂಗೋಡು ಮೊರಂಗಾನ ಎಂಬಲ್ಲಿ ಸೋಮವಾರ ರಾತ್ರಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮುಸ್ಲಿಂ ಲೀಗ್ ಮುಖಂಡ ಎಂ.ಎ.ಅಬ್ದುಲ್ ಖಾದರ್ ಅವರ ಪತ್ನಿ ಅಸ್ಮಾ (38) ಹಾಗೂ ಇಬ್ರಾಹಿಂ ಎಂಬವರ ಪುತ್ರ ಮುಬೀನ್ (12) ಎಂಬವರು ಮೃತಪಟ್ಟಿದ್ದಾರೆ.ಗುಡ್ಡ ಕುಸಿಯುತ್ತಿದ್ದ ಶಬ್ದ ಕೇಳಿ ಮನೆಯಲ್ಲಿದ್ದ ಇತರರು ಓಡಿ ಪಾರಾದರು. ಆದರೆ ಕುಸಿದ ಮಣ್ಣಿನಡಿಯಲ್ಲಿ ಅಸ್ಮಾ ಮತ್ತು ಮುಬೀನ್ ಅವರು ಸಿಲುಕಿಕೊಂಡಿದ್ದರಿಂದ ಹೊರಬರಲಾಗದೆ ಸ್ಥಳದಲ್ಲೇ ಮೃತಪಟ್ಟರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ. ಈ ಪೈಕಿ 6 ಮನೆಗಳು ಸಂಪೂರ್ಣ ಕುಸಿದಿವೆ. ಮಂಗಳೂರಿನ ಅತ್ತಾವರದಲ್ಲಿ ಒಂದು, ಉಳ್ಳಾಲ ಪರಿಸರದಲ್ಲಿ 10, ಸುಳ್ಯ ತಾಲ್ಲೂಕಿನಲ್ಲಿ ನಾಲ್ಕು ಹಾಗೂ ಬಜ್ಪೆಯಲ್ಲಿ ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ 140.5 ಮಿ.ಮೀ, ಬಂಟ್ವಾಳ ತಾಲ್ಲೂಕಿನಲ್ಲಿ 145.2 ಮಿ.ಮೀ, ಸುಳ್ಯ ತಾಲ್ಲೂಕಿನಲ್ಲಿ 119.4 ಮಿ.ಮೀ, ಪುತ್ತೂರು ತಾಲ್ಲೂಕಿನಲ್ಲಿ 91.5 ಮಿ.ಮೀ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 73.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.ಹೆಚ್ಚಿದ ಒಳ ಹರಿವು

ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಮುಂದುವರಿದಿದೆ. ತುಂಗಾ ಜಲಾಶಯಕ್ಕೆ ಮಂಗಳವಾರವೂ 9,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಅಡಿ ಇದೆ.ಮಂಗಳವಾರ ಬೆಳಿಗ್ಗೆ 8ಕ್ಕೆ ಭದ್ರಾ ಜಲಾಶಯದ ನೀರಿನ ಮಟ್ಟ 121.2 ಅಡಿ ಇದ್ದು, (ಗರಿಷ್ಠ 186 ಅಡಿ) ಒಂದೇ ದಿನಕ್ಕೆ 2 ಅಡಿ ಏರಿಕೆ ಕಂಡಿದೆ. ಒಳಹರಿವು ಕೂಡ 6,708 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,759.05 ಅಡಿಗೆ ಏರಿದ್ದು, (ಗರಿಷ್ಠ 1819 ಅಡಿ) ಮಂಗಳವಾರಕ್ಕೆ ಒಂದು ಅಡಿ ಏರಿಕೆಯಾಗಿದೆ. ಒಳಹರಿವು 16,153 ಕ್ಯೂಸೆಕ್ ಹೆಚ್ಚಳವಾಗಿದೆ.ಆಲಮಟ್ಟಿ ಜಲಾಶಯಒಳಹರಿವು ಹೆಚ್ಚಳ

ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯದ ಒಳಹರಿವು ಮಂಗಳವಾರ 17,334 ಕ್ಯೂಸೆಕ್‌ಗೆ ಏರಿದೆ.ಉತ್ತರ ಕನ್ನಡದಲ್ಲಿ ಕಡಲ್ಕೊರೆತ ಭೀತಿ:

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿಯಿತು. ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು ಕಡಲ್ಕೊರೆತ ಹೆಚ್ಚುವ ಭೀತಿ ಎದುರಾಗಿದೆ. ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ದಿನವಿಡೀ ಮಳೆ ಸುರಿಯಿತು. ಇದರಿಂದಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳು ವಿಳಂಬವಾಗಿ ಸಂಚರಿಸಿದವು.ದಿನವಿಡೀ ಮುಸಲಧಾರೆ

ಮಡಿಕೇರಿ, ನಾಪೋಕ್ಲು, ಸಂಪಾಜೆ, ವಿರಾಜಪೇಟೆ, ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ, ಶಾಂತಳ್ಳಿ ಸೇರಿದಂತೆ ಕೊಡಗಿನಾದ್ಯಂತ ಮಂಗಳವಾರ ಕೂಡ ಧಾರಾಕಾರ ಮಳೆ ಮುಂದುವರಿದಿದೆ.ವಿವಿಧ ಸ್ಥಳಗಳಲ್ಲಿ ಮಳೆಯ ರಭಸದಿಂದಾಗಿ ಮನೆಗಳಿಗೆ ಹಾನಿ ಉಂಟಾಗಿದೆ ಹಾಗೂ ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಬಗ್ಗೆ ವರದಿಯಾಗಿದೆ.ಕಾವೇರಿಯ ಉಗಮಸ್ಥಾನ ತಲಕಾವೇರಿ-ಭಾಗಮಂಡಲದಲ್ಲಿಯೂ ಧಾರಾಕಾರವಾಗಿ ಮಳೆಯಾಗಿದೆ.

ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಈ ಭಾಗದಲ್ಲಿ 107.40 ಮಿ.ಮೀ. ಮಳೆಯಾಗಿದ್ದರೆ, ಜಿಲ್ಲೆಯಲ್ಲಿ ಸರಾಸರಿ 43.88 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ಪಟ್ಟು ಹೆಚ್ಚು ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 604.16 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 341.23 ಮಿ.ಮೀ. ಮಳೆಯಾಗಿತ್ತು.ಹಾರಂಗಿಗೆ 4 ಅಡಿ ನೀರು

ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಲಕ್ಷ್ಮಣ ತೀರ್ಥ, ಹಾರಂಗಿ, ಚಿಕ್ಲಿಹೊಳೆ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಹಾರಂಗಿ ಜಲಾಶಯಕ್ಕೆ 3,920 ಕ್ಯೂಸೆಕ್ ನೀರಿನ ಒಳಹರಿವು ಇದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಒಳಹರಿವು ಕೇವಲ 293 ಕ್ಯೂಸೆಕ್ ಇತ್ತು. ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿದ್ದು, ಜಲಾಶಯದಲ್ಲಿ 2,821.05 ಅಡಿಗಳಷ್ಟು ನೀರು ಸಂಗ್ರಹವಾಗಿದೆ (ಗರಿಷ್ಠ ಮಟ್ಟ 2,859 ಅಡಿ). ಕಬಿನಿ ಭರ್ತಿಗೆ 19ಅಡಿ ಬಾಕಿ

ಎಚ್.ಡಿ. ಕೋಟೆ:  ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 4 ಅಡಿ ನೀರು ಹರಿದುಬಂದಿದೆ. ಮಂಗಳವಾರ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ.ಕೆಆರ್‌ಎಸ್: 3ಅಡಿ ಹೆಚ್ಚಳ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ನೀರಿನ ಮಟ್ಟದಲ್ಲಿ ಮಂಗಳವಾರ ಮೂರು ಅಡಿಯಷ್ಟು ಹೆಚ್ಚಳವಾಗಿದೆ.ಅಣೆಕಟ್ಟೆಗೆ ನಾಲ್ಕು ದಿನಗಳಲ್ಲಿ 9 ಅಡಿಯಷ್ಟು ನೀರು ಹರಿದು ಬಂದಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ಲಭಿಸಿದೆ.ನೀರಿನಮಟ್ಟವು 72.25 ಇದ್ದು,  11,968 ಕ್ಯೂಸೆಕ್ ಒಳ ಹರಿವಿದ್ದು, 1,047 ಕ್ಯೂಸೆಕ್ ಹೊರಹರಿವಿದೆ. ಕಳೆದ ವರ್ಷ ಇದೇ ದಿನ ನೀರಿನಮಟ್ಟವು 72.35 ಅಡಿ ಇತ್ತು.ಹೇಮಾವತಿ: ಹೆಚ್ಚಿದ ಒಳಹರಿವು

ಹಾಸನದ ಹೇಮಾವತಿ ಅಚ್ಚುಕಟ್ಟು ಪ್ರದೇಶ ಸಕಲೇಶಪುರ ಭಾಗದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 16.2 ಮಿ.ಮೀ. ಮಳೆಯಾಗಿರುವುದರಿಂದ ಮಂಗಳವಾರ ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ 7,228 ಕ್ಯೂಸೆಕ್‌ಗೆ ಏರಿದೆ.ಜಲಾಶಯದ ನೀರಿನ ಮಟ್ಟದಲ್ಲಿ ಸುಮಾರು 1.5 ಅಡಿ ಏರಿಕೆಯಾಗಿದ್ದು, ಮಂಗಳವಾರದ ಮಟ್ಟ 2,866.60 ಅಡಿ ಇದೆ. ಸೋಮವಾರ 2,864 ಅಡಿ ಇತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.