ಭಾನುವಾರ, ಜನವರಿ 19, 2020
27 °C
ಬಾರಾಕೊಟ್ರಿ–ಸಿದ್ಧಾರೂಢ ಕಾಲೊನಿ ರಸ್ತೆ

ಏಳು ವರ್ಷದ ಹೋರಾಟಕ್ಕೆ ಸಿಗದ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ರೈಲು ಹಳಿಯ ಅಂಚಿನಲ್ಲಿ­ರುವ ಬಾರಾಕೊಟ್ರಿ ಬಳಿಯ ಸಿದ್ಧಾ­ರೂಢ ಕಾಲೊನಿಯ ಜನರು ಬಾರಾ­ಕೊಟ್ರಿ–ಸಿದ್ಧಾ­ರೂಢ ಕಾಲೊನಿ ಮಧ್ಯದ ಲಿಂಕ್‌ ರಸ್ತೆಯನ್ನು ನಿರ್ಮಿಸಿಕೊಡಿ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿ­ವೃದ್ಧಿ ಪ್ರಾಧಿಕಾರ (ಹುಡಾ), ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಹಲವು ಬಾರಿ ಪತ್ರ ಬರೆದರೂ, ಜಿಲ್ಲಾಧಿ­ಕಾರಿ ಕಚೇರಿಗೆ ಹತ್ತಾರು ಬಾರಿ ಅಲೆದಾಡಿದರೂ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ.ಅಧಿಕಾರಶಾಹಿಯ ಜಡತ್ವದಿಂದ ಬೇಸತ್ತ ಇಲ್ಲಿನ ನಾಗರಿಕರು ಹೈಕೋ­ರ್ಟ್‌­ನಲ್ಲಿಯೂ ಈ ಕುರಿತು ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಾ­ಮರ್ಶೆ ನಡೆಸಿದ ಧಾರವಾಡ ಹೈಕೋರ್ಟ್‌ ಪೀಠ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಹುಡಾಕ್ಕೆ ಸೂಚಿ­ಸಿದೆ. ಆದಾಗ್ಯೂ ಕೆಲಸ ಮಾತ್ರ ಒಂದಿಂಚೂ ಆಗಿಲ್ಲ.2005ರಿಂದಲೇ ಈ ಸಂಬಂಧ ಹೋರಾಟ ಆರಂಭಿಸಿದ ‘ಶ್ರೀ ಸಿದ್ಧಾ­ರೂಢ ಕಾಲೊನಿ ನಿವಾಸಿಗಳ ಹಿತ­ವರ್ಧಕ ಸಂಘ’ದ ಸದಸ್ಯರು ಪಾಲಿಕೆ ಸದಸ್ಯರಿಂದ ಹಿಡಿದು ಶಾಸಕರು, ಸಂಸ­ದರು, ಸಚಿವರವರೆಗೂ ಹೋಗಿ ಮನವಿ ಸಲ್ಲಿಸಿದ್ದಾರೆ. ಸುಮಾರು ಮೂರು ಕಿಲೋ ಮೀಟರ್‌ ದೂರ ಸುತ್ತುವುದನ್ನು ತಡೆಯಲಿರುವ ಲಿಂಕ್‌ ರಸ್ತೆ ಮಾಡಿಕೊಡಲು ಪ್ರಾಧಿಕಾರ ಮಾತ್ರ ಇನ್ನೂ ಮನಸ್ಸು ಮಾಡಿಲ್ಲ ಎಂದು ದೂರುತ್ತಾರೆ ಸಂಘದ ಅಧ್ಯಕ್ಷ ಮಂಜು ಬಡಿಗೇರ.ಬಾರಾಕೊಟ್ರಿ ಅಂಡರ್‌­ಪಾಸ್‌ನ ಬಲಬದಿಯಿಂದ ನಿಂತು ನೋಡಿದರೆ ಸಿದ್ಧಾರೂಢ ಕಾಲೊನಿ ಕಾಣಿಸುತ್ತದೆ. ಅಲ್ಲದೇ, ವಿಶ್ವಭಾರತಿ ಕಾಲೊನಿ, ಚನ್ನಬಸವೇಶ್ವರ ನಗರ ಮತ್ತು ಮಂಜುನಾಥ ಕಾಲೊನಿಯ ಜನರಿಗೂ ಇದರಿಂದ ಅನುಕೂಲ­ವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಜನ ಹೋರಾಟಕ್ಕೆ ಮಣಿ­ದಿ­ರುವ ಮಹಾನಗರ ಪಾಲಿಕೆ­ಯು, ಈಗಾಗಲೇ ಇಲ್ಲಿ ಅಕ್ರಮವಾಗಿ ಮನೆಕಟ್ಟಿಕೊಳ್ಳಲು ಮುಂದಾದವರಿಗೆ ನೋಟಿಸ್‌ ಜಾರಿಗೊಳಿಸಿ ಕಟ್ಟಡ ನಿರ್ಮಾ­ಣವನ್ನು ಸ್ಥಗಿತಗೊಳಿಸಿದೆ.ಸುಮಾರು 100 ಮೀಟರ್‌ ರಸ್ತೆಯನ್ನು ನಿರ್ಮಾಣ ಮಾಡಿದರೂ ಸಾಕು ಈ ಭಾಗದ ನಾಗರಿಕರು, ಮಕ್ಕಳು, ಮಹಿಳೆ­ಯರು ಕಲ್ಯಾಣ ನಗರ, ಬಾರಾಕೊಟ್ರಿ ಹಾಗೂ ನವೋದಯ ನಗರದತ್ತ ತೆರ­ಳಲು ಅನುಕೂ­ಲವಾಗುತ್ತದೆ ಎನ್ನು­ತ್ತಾರೆ ಸಂಸ್ಥೆಯ ಉಪಾಧ್ಯಕ್ಷ, ಎಸ್‌­ಡಿಎಂ ಎಂಜಿನಿಯರಿಂಗ್‌ ಕಾಲೇಜಿ­ನಲ್ಲಿ ಪ್ರಾಧ್ಯಾಪಕರಾಗಿರುವ ವಿ.ಕೆ.ಪರ್ವತಿ.ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಹುಡಾ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರತಿಕ್ರಿಯಿಸಿ (+)