ಶನಿವಾರ, ಏಪ್ರಿಲ್ 10, 2021
33 °C

ಏಷ್ಯಾಕಪ್ ಹಾಕಿ: ಫೈನಲ್‌ಗೆ ಭಾರತ ವನಿತೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಪೂನಮ್ ರಾಣಿ ತಂದಿತ್ತ `ಗೋಲ್ಡನ್ ಗೋಲು~ ನೆರವಿನಿಂದ ಜಪಾನ್ ತಂಡವನ್ನು ಮಣಿಸಿದ ಭಾರತದ ವನಿತೆಯರು 6ನೇ  ಜೂನಿಯರ್ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಭಾರತ 2-1 ರಲ್ಲಿ ಜಪಾನ್ ವಿರುದ್ಧ ರೋಚಕ ಗೆಲುವು ಪಡೆಯಿತು. ಶನಿವಾರ ನಡೆಯುವ ಫೈನಲ್‌ನಲ್ಲಿ ಭಾರತ ತಂಡ ಚೀನಾ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚೀನಾ 3-2 ಗೋಲುಗಳಿಂದ ಕೊರಿಯಾ ತಂಡವನ್ನು ಮಣಿಸಿತು.ಭಾರತ ಮಹಿಳಾ ತಂಡ ಜೂನಿಯರ್ ಏಷ್ಯಾ ಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ಭಾರತ ಇದುವರೆಗೆ ನಾಲ್ಕು ಕಂಚಿನ ಪದಕ ಗೆದ್ದಿದೆ. ಆದರೆ ಒಮ್ಮೆಯೂ ಫೈನಲ್ ಪ್ರವೇಶಿಸಿಲ್ಲ.ಇಲ್ಲಿ ಫೈನಲ್ ಪ್ರವೇಶಿಸಿರುವ ಕಾರಣ ಭಾರತ ತಂಡ ಮುಂದಿನ ವರ್ಷ ನಡೆಯುವ ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದೆ. ಜಪಾನ್ ವಿರುದ್ಧದ ಪಂದ್ಯದಲ್ಲಿ 0-1 ರಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ಮರುಹೋರಾಟ ನಡೆಸಿ ಗೆಲುವು ತನ್ನದಾಗಿಸಿಕೊಂಡಿತು.ಮೊದಲ ಅವಧಿ ಕೊನೆಗೊಳ್ಳಲು ಐದು ನಿಮಿಷಗಳಿರುವಾಗ ಯೂರಿ ನಗಾಯ್ ಗೋಲು ಗಳಿಸಿ ಜಪಾನ್‌ಗೆ ಮೇಲುಗೈ ತಂದಿತ್ತರು. ಎರಡನೇ ಅವಧಿಯಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿಯರು ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಮಾತ್ರವಲ್ಲ 49ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು 1-1 ರಲ್ಲಿ ಸಮಸ್ಥಿತಿಗೆ ತಂದರು.ನಿಗದಿತ ಅವಧಿಯಲ್ಲಿ ಹೆಚ್ಚಿನ ಗೋಲುಗಳು ಬರಲಿಲ್ಲ. ಹೆಚ್ಚುವರಿ ಅವಧಿಯ 9ನೇ ನಿಮಿಷದಲ್ಲಿ ಪೂನಮ್ ರಾಣಿ ಚೆಂಡನ್ನು ಗುರಿ ಸೇರಿಸಿ ಭಾರತದ ಗೆಲುವಿನ ರೂವಾರಿ ಎನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.