ಸೋಮವಾರ, ಮಾರ್ಚ್ 1, 2021
29 °C
ವ್ಯಕ್ತಿ/ ಸ್ಮರಣೆ

ಐತಿಹಾಸಿಕ ತೀರ್ಪಿತ್ತ ‘ಚಾಯ್‌ವಾಲ’ ಕಪಾಡಿಯಾ

ಕೃಷ್ಣ ದೀಕ್ಷಿತ್‌ Updated:

ಅಕ್ಷರ ಗಾತ್ರ : | |

ಐತಿಹಾಸಿಕ ತೀರ್ಪಿತ್ತ ‘ಚಾಯ್‌ವಾಲ’ ಕಪಾಡಿಯಾ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಕಳೆದ 27 ವರ್ಷಗಳಲ್ಲಿ  ಅಧಿಕ ಅವಧಿಯವರೆಗೆ ಕಾರ್ಯ ನಿರ್ವಹಿಸಿದ ಖ್ಯಾತಿ ಪಡೆದವರು ನ್ಯಾಯಮೂರ್ತಿ ಸರೋಶ್‌ ಹೋಮಿ ಕಪಾಡಿಯಾ. ಎರಡು ವರ್ಷ ನಾಲ್ಕು ತಿಂಗಳು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಇವರದ್ದು ಪ್ರಶ್ನಾತೀತ ವ್ಯಕ್ತಿತ್ವ. 1947ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಜನಿಸಿದ್ದ ಇವರು ಸ್ವತಂತ್ರ ಭಾರತದಲ್ಲಿ ಹುಟ್ಟಿ ಈ ಹುದ್ದೆ ಏರಿದ ಪ್ರಥಮ ಮುಖ್ಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.ತಮಗೆ ಅನಿಸಿದ್ದನ್ನು ಮುಲಾಜಿಲ್ಲದೇ ಹೇಳಿಬಿಡುತ್ತಿದ್ದ, ಅದನ್ನು ತಮ್ಮ ತೀರ್ಪಿನಲ್ಲಿಯೂ ಉಲ್ಲೇಖಿಸುತ್ತಿದ್ದ, ತಮಗಿಂತ ಹಿರಿಯ ನ್ಯಾಯಮೂರ್ತಿಗಳ ಜೊತೆ ಪೀಠದಲ್ಲಿದ್ದಾಗ ಅವರಿಗಿಂತ ಭಿನ್ನ ತೀರ್ಪು ನೀಡಲೂ ಹಿಂಜರಿಯದ ನೇರ, ದಿಟ್ಟ ಸ್ವಭಾವದ ನ್ಯಾ.ಕಪಾಡಿಯಾ ಅವರು ಈ ಸ್ವಭಾವದಿಂದಾಗಿಯೇ ಕೆಲವರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಕೆಟ್ಟದ್ದನ್ನು ಕಂಡಾಗ ಶೀಘ್ರ ಕೋಪಗೊಳ್ಳುವ ಸ್ವಭಾವ ಇವರದ್ದಾಗಿತ್ತು. ಹೆಚ್ಚು ಮಾತನಾಡುತ್ತ ಕಾಲಹರಣ ಮಾಡುವ ಬದಲು ಅಧಿಕ ಕೆಲಸ ಮಾಡಬೇಕು ಎನ್ನುವ ಮನೋಭಾವ ಇವರದ್ದು. ಇದಕ್ಕಾಗಿಯೇ ನ್ಯಾಯಮೂರ್ತಿಗಳ ಚಹಾ ಕೂಟ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಕೂಡ ಚಹಾ ಸೇವನೆ ವೇಳೆ ಸಮಯಕ್ಕೆ ಸರಿಯಾಗಿ ಹೋಗಿ, ಚಹಾ ಸೇವಿಸಿ ಒಂದು ನಿಮಿಷವೂ ನಿಲ್ಲದೆ ಕೆಲಸಕ್ಕೆ ಬಂದುಬಿಡುತ್ತಿದ್ದರು.ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲೇ ಕೋರ್ಟ್‌ಗೆ ಬೇಸಿಗೆ ರಜೆ ಇತ್ತು. ಆದರೂ ರಜೆಯಲ್ಲಿ ಕೆಲಸ ನಿರ್ವಹಿಸಿ ಕೋರ್ಟ್‌ ನೌಕರರ ಕೆಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ಭ್ರಷ್ಟಾಚಾರವನ್ನು ಸಹಿಸದ ವ್ಯಕ್ತಿತ್ವ ನ್ಯಾ.ಕಪಾಡಿಯಾ ಅವರದ್ದಾಗಿತ್ತು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ಅಲ್ಲಿಯ ‘ಫೈಲಿಂಗ್‌’ ವಿಭಾಗದಲ್ಲಿ ಭ್ರಷ್ಟಾಚಾರ ಅಧಿಕವಾಗಿತ್ತು. ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದು, ಬಿಗಿ ನಿಯಮಗಳನ್ನು ರೂಪಿಸಿದರು. ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಕೂಗು ಎಲ್ಲೆಡೆ ವ್ಯಾಪಕವಾದಾಗ, ‘ಯಾವ ನ್ಯಾಯಾಧೀಶರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ನನ್ನ ಗಮನಕ್ಕೆ ತನ್ನಿ. ಒಬ್ಬರು– ಇಬ್ಬರು ಭ್ರಷ್ಟರಾಗಿದ್ದರೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೆರಳು ಮಾಡಿ ತೋರಿಸಬೇಡಿ’ ಎಂದು ಕಿಡಿ ಕಾರಿದ್ದರು.ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಹಾಗೂ ಮುಖ್ಯ ನ್ಯಾಯಮೂರ್ತಿಯಾಗಿ ಇವರು ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವೆಂಬ ಕುಖ್ಯಾತಿ ಪಡೆದಿದ್ದ ಎರಡನೇ ತಲೆಮಾರಿನ ರೇಡಿಯೊ ತರಂಗಾಂತರದ 122 ಪರವಾನಗಿಗಳನ್ನು (2ಜಿ ತರಂಗಾಂತರ ಹಗರಣ) ರದ್ದುಗೊಳಿಸಿದ್ದು ಇವರ ನೇತೃತ್ವದ ಪೀಠ. ತೆರಿಗೆಗೆ ಸಂಬಂಧಿಸಿದ ಕಾನೂನಿನಲ್ಲಿ ನ್ಯಾ. ಕಪಾಡಿಯಾ ಹೆಚ್ಚಿನ ಹಿಡಿತ ಸಾಧಿಸಿದ್ದರು. ಇದಕ್ಕೆ ಸಾಕ್ಷಿಯಾದದ್ದು ವೊಡಾಫೋನ್ ಕಂಪೆನಿಯ ಪ್ರಕರಣ. ‘ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ’ ಎನ್ನುವ ಮಹತ್ವದ ತೀರ್ಪನ್ನು ಅವರು ಈ ಪ್ರಕರಣದಲ್ಲಿ ನೀಡಿದ್ದರು.ಹಚ್ ಎಸ್ಸಾರ್ ಸಂಸ್ಥೆಯ ವಹಿವಾಟಿಗೆ ಸಂಬಂಧಿಸಿದಂತೆ ದೂರಸಂಪರ್ಕ ಸಂಸ್ಥೆ ವೊಡಾಫೋನ್, ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್‌ಗೆ ನೀಡಬೇಕಿದ್ದ ₹ 11 ಸಾವಿರ ಕೋಟಿಗಳಷ್ಟು ಆದಾಯ ತೆರಿಗೆ ಮತ್ತು ದಂಡವನ್ನು ಅವರು ರದ್ದು ಮಾಡಿ ಆದೇಶಿಸಿದ್ದರು. ಅದೇ ರೀತಿ, ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದ ಪಿ.ಜೆ. ಥಾಮಸ್‌ ಅವರನ್ನು ಕೇಂದ್ರ ಜಾಗೃತ ಆಯುಕ್ತರನ್ನಾಗಿ ನೇಮಿಸಿದ್ದ ಆದೇಶವನ್ನು ರದ್ದು ಮಾಡಿದ್ದು ಕೂಡ ಇವರ ನೇತೃತ್ವದ ಪೀಠವೇ. ಈ ತೀರ್ಪಿನ ನಂತರ ಥಾಮಸ್‌ ಅವರನ್ನು ನೇಮಕ ಮಾಡಿದ್ದಕ್ಕೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ತಪ್ಪು ಒಪ್ಪಿಕೊಂಡಿದ್ದರು.ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಸುತ್ತಲಿನ ಪರಿಸರದ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ 25ರಷ್ಟು ಸೀಟು ಮೀಸಲಿಡುವ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಇಟಿ) ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಮೂಲಕ ಶಿಕ್ಷಣದ ಕುರಿತಾಗಿ ಇದ್ದ ಅಪಾರ ಕಾಳಜಿಯನ್ನು ಇವರು ತೋರಿಸಿದ್ದರು.ಮೇವು ಹಗರಣ ಪ್ರಕರಣದಲ್ಲಿ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರಿಗೆ ಜಾಮೀನು ನೀಡಬಾರದು ಎಂದು ನ್ಯಾ. ಕಪಾಡಿಯಾ ತೀರ್ಪಿನಲ್ಲಿ ಉಲ್ಲೇಖಿಸಿದ್ದರು. ಬಿಹಾರ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಅಲ್ಲಿಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಮೂವರು ನ್ಯಾಯಮೂರ್ತಿಗಳ ಪೈಕಿ ಇಬ್ಬರು ಜಾಮೀನು ನೀಡಲು ಒಪ್ಪಿಕೊಂಡಿದ್ದರೆ ನ್ಯಾ. ಕಪಾಡಿಯಾ ಅದಕ್ಕೆ ಸುತರಾಂ ಒಪ್ಪಿರಲಿಲ್ಲ. ಆದ್ದರಿಂದ ಪ್ರತ್ಯೇಕ ತೀರ್ಪು ಬರೆದಿದ್ದರು. ಆದರೆ ಇಬ್ಬರು ನ್ಯಾಯಮೂರ್ತಿಗಳು ಜಾಮೀನು ನೀಡಬೇಕು ಎಂದು ಹೇಳಿದ ಕಾರಣ, ಲಾಲೂ ಅವರಿಗೆ ಜಾಮೀನು ಸಿಕ್ಕಿತ್ತು.ಇಷ್ಟೆಲ್ಲಾ ಐತಿಹಾಸಿಕ ತೀರ್ಪು ನೀಡಿದ್ದ ನ್ಯಾ. ಕಪಾಡಿಯಾ ಅವರು ರೈತರ ಪ್ರಕರಣವೊಂದರಲ್ಲಿ ನಗೆಪಾಟಲಿಗೀಡಾಗಿದ್ದರು. ರೈತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ‘ರೈತರು ಸರ್ಕಾರಕ್ಕೆ ಎಷ್ಟು ತೆರಿಗೆ ಸಂದಾಯ ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿಬಿಟ್ಟರು. 2ಜಿ, ವೊಡಾಫೋನ್‌ನಂತಹ ಪ್ರಕರಣಗಳ ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ರೈತರು ತೆರಿಗೆ ನೀಡುವುದಿಲ್ಲ ಎಂಬ ವಿಷಯವೂ ತಿಳಿದಿಲ್ಲ ಎಂದು ವಕೀಲರು ಹಾಸ್ಯ ಮಾಡಿದ್ದರು.ಚಹಾ ಮಾರುತ್ತಿದ್ದ ಬಾಲಕ ಸಿಜೆಐ ಆದದ್ದು...

ಮುಂಬೈನ ಪಾರ್ಸಿ ಕುಟುಂಬದಲ್ಲಿ ಹುಟ್ಟಿದ ನ್ಯಾ. ಕಪಾಡಿಯಾ ಅವರು ಬಾಲಕನಾಗಿದ್ದಾಗ ವಕೀಲರೊಬ್ಬರ ನಿವಾಸದ ಬಳಿ ಚಹಾ ಮಾರುತ್ತ ಹಣ ಸಂಪಾದನೆ ಮಾಡುತ್ತಿದ್ದರು. ಅದೇ ಹಣದಲ್ಲಿ ಶಿಕ್ಷಣ ಪೂರೈಸಿದರು. ಏಷ್ಯಾದಲ್ಲಿಯೇ ಪುರಾತನ ಕಾಲೇಜು ಎನಿಸಿಕೊಂಡಿರುವ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ‘ಡಿ’ ದರ್ಜೆಯ ಸಹಾಯಕರಾಗಿ ಕೆಲಸ ಆರಂಭಿಸಿ, ಮುಂಬೈನ ಕಾನೂನು ಸಲಹಾ ಕೇಂದ್ರದಲ್ಲಿ ಗುಮಾಸ್ತರಾದರು. ಹೀಗೆ ವಿವಿಧೆಡೆ ಸಣ್ಣಪುಟ್ಟ ಕೆಲಸ ಮಾಡುತ್ತಾ 1974ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 1991ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು.2003ರ ಆಗಸ್ಟ್‌ನಲ್ಲಿ ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ನ್ಯಾ. ಕಪಾಡಿಯಾ, ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2010ರ ಮೇ 12ರಂದು ಅಲ್ಲಿಯೇ 38ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು. 2012ರ ಸೆಪ್ಟೆಂಬರ್‌ 20ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಮೂಲಕ ಸುಪ್ರೀಂ ಕೋರ್ಟ್‌ಗೆ ಇಲ್ಲಿಯವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕ ಅವಧಿಯವರೆಗೆ ಸೇವೆ ಸಲ್ಲಿಸಿದ ನಾಲ್ಕನೇ ನ್ಯಾಯಮೂರ್ತಿ ಎನಿಸಿಕೊಂಡರು.ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆಗೆ ಅವರು ಗುಜರಾತ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಜನರಲ್‌ ಕೌನ್ಸಿಲ್‌ನ ಅಧ್ಯಕ್ಷರಾಗಿ ಹಾಗೂ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದ ‘ವಿಸಿಟರ್‌’ ಆಗಿಯೂ ಸೇವೆ ಸಲ್ಲಿಸಿದ್ದರು. ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ನ್ಯಾ. ಕಪಾಡಿಯಾ ಕಳೆದ ಸೋಮವಾರದಂದು (ಜ.4) ನಿಧನರಾದರು. ವಿವಿಧ ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿ ಹಾಗೂ ಮುಖ್ಯ ನ್ಯಾಯಮೂರ್ತಿಯಾಗಿ 22 ವರ್ಷಗಳ ಕಾಲ ಯಾವುದೇ ಕಳಂಕ ಹೊತ್ತುಕೊಳ್ಳದೇ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು.(ಲೇಖಕ ಸಹಾಯಕ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ) -ನಿರೂಪಣೆ: ಸುಚೇತನಾ ನಾಯ್ಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.