ಭಾನುವಾರ, ಮೇ 9, 2021
27 °C

`ಐದು ವರ್ಷ ನಾನೇ ಮುಖ್ಯಮಂತ್ರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಐದು ವರ್ಷ ಅಧಿಕಾರದಲ್ಲಿ ಇರುತ್ತೇನೆ. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸುವುದು ಅನುಮಾನ ಎಂದಿದ್ದರು. ಜೆಡಿಎಸ್‌ನ ವೈ.ಎಸ್.ವಿ.ದತ್ತ ಕೂಡ ವಚನಗಳ ಮೂಲಕ ಸಿದ್ದರಾಮಯ್ಯ ಅವರನ್ನು ಚುಚ್ಚಿದ್ದರು.ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡಿದ ಸಿದ್ದರಾಮಯ್ಯ, `ನಾನು ಹಿಂದೆ ಜನತಾದಳದಲ್ಲಿ ಇದ್ದಿದ್ದು ನಿಜ. ಆದರೆ, ಈಗ ನಾನು ನೂರಕ್ಕೆ ನೂರು ಕಾಂಗ್ರೆಸ್ಸಿಗ. ನನ್ನ ಪ್ರಕಾರ ಕಾಂಗ್ರೆಸ್‌ನಲ್ಲಿ ಇದ್ದವರೇ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ದೇವೇಗೌಡರು ಕೂಡ ಹಿಂದೆ ಕಾಂಗ್ರೆಸ್‌ನಲ್ಲಿದ್ದರು' ಎಂದು ಹೇಳಿದರು.ಇದಕ್ಕೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ `ದೇವೇಗೌಡರು ಇದ್ದ ಕಾಂಗ್ರೆಸ್ ಬೇರೆ' ಎಂದರು. ಆಗ ಸಿದ್ದರಾಮಯ್ಯ ಅವರು `ನಾನು ಕೂಡ ಈಗಿರುವ ಜನತಾದಳದಲ್ಲಿ ಇರಲಿಲ್ಲ' ಎಂದು ತಿರುಗೇಟು ನೀಡಿದರು.`2007ರಲ್ಲಿ ಕಾಂಗ್ರೆಸ್ ಸೇರಿದೆ. ಮೂರು ಬಾರಿ ಆ ಪಕ್ಷದ ಚಿಹ್ನೆ ಮೇಲೆ ಗೆದ್ದು ಶಾಸನ ಸಭೆಗೆ ಬಂದಿದ್ದೇನೆ. ಇಷ್ಟಾದರೂ ಸರ್ಕಾರದಲ್ಲಿ ಇರುವವರೆಲ್ಲ ಜನತಾ ಪರಿವಾರದವರು ಎಂದು ಎತ್ತಿಕಟ್ಟುವ ಪ್ರಯತ್ನ ನಡೆದಿದೆ. ಈ ವಿಷಯದಲ್ಲಿ ಪ್ರತಿಪಕ್ಷಗಳ ಸದಸ್ಯರು ಸಫಲ ಆಗುವುದಿಲ್ಲ. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ' ಎಂದು ಅವರು ಹೇಳಿದರು.`ಐದು ವರ್ಷ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ಮಾದರಿ ರಾಜ್ಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೇರೆ ರಾಜ್ಯದವರು ಕೂಡ ನಮ್ಮನ್ನು ನೋಡಿ ಅನುಕರಣೆ ಮಾಡುವ ಹಾಗೆ ಕೆಲಸ ಮಾಡುತ್ತೇನೆ' ಎಂದು ಅಭಯ ನೀಡಿದರು.ಸ್ಪರ್ಧಿಸಲ್ಲ: ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದು ಪುನರುಚ್ಚರಿಸಿದ ಅವರು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಎಂದರು.ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಂದ ಮೇಲೆ ರಾಜ್ಯಸಭೆಗೆ ಹೋಗಬಹುದು ಎಂದು ಬಿಜೆಪಿಯ ಸಿ.ಟಿ.ರವಿ ಕಿಚಾಯಿಸಿದರು. ಅದಕ್ಕೂ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, `ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್, ರಾಜ್ಯಪಾಲ.... ಯಾವುದಕ್ಕೂ ಹೋಗುವುದಿಲ್ಲ. ನನ್ನ ಮಾತಿಗೆ ನಾನು ಬದ್ಧ' ಎಂದರು. ಪಕ್ಷದ ಹೈಕಮಾಂಡ್ ಹೇಳಿದರೆ ಏನು ಮಾಡುತ್ತೀರಾ ಎಂದು ಸದಸ್ಯರೊಬ್ಬರು ಕೇಳಿದಾಗ `ನನಗೆ ಬೇಡ ಅಂದರೆ ಅವರ‌್ಯಾಕೆ ಒತ್ತಾಯ ಮಾಡುತ್ತಾರೆ' ಎಂದು ಮರುಪ್ರಶ್ನೆ ಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.