ಭಾನುವಾರ, ಜನವರಿ 26, 2020
31 °C

ಐಪಿಎಲ್‌: ಫೆ.12ಕ್ಕೆ ಆಟಗಾರರ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ ಐಎಎನ್‌ಎಸ್‌): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ-20 ಕ್ರಿಕೆಟ್‌ನ 2014ರ ಋತುವಿನ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಮುಂದಿನ ಫೆಬ್ರುವರಿ 12 ರಂದು ನಡೆಯಲಿದೆ. ‘2014ರ ಐಪಿಎಲ್‌ನ ಹರಾಜು ಪ್ರಕ್ರಿಯೆ ಫೆ. 12 ರಂದು ನಡೆಯಲಿದೆ.

ಅಗತ್ಯ ಎನಿಸಿದರೆ ಫೆ. 13 ರಂದೂ ಮುಂದುವರಿಯಲಿದೆ. ಹರಾಜು ನಡೆ ಯಲಿರುವ ತಾಣವನ್ನು ಸದ್ಯದಲ್ಲೇ ಪ್ರಕಟಿಸಲಾಗು ವುದು’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ನಡೆದ ಐಪಿಎಲ್‌ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟಗಾರರ ಜೊತೆಗಿನ ಒಪ್ಪಂದದ ನಿಯಮ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಹರಾಜಿಗೆ ಮುನ್ನ ಐದು ಮಂದಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು  ಫ್ರಾಂಚೈಸ್‌ಗಳಿಗೆ ನೀಡಲಾಗಿದೆ. ‘2013ರ ಋತುವಿನಲ್ಲಿ ತನ್ನ ತಂಡದಲ್ಲಿದ್ದ ಐದು ಆಟಗಾರರ ಜೊತೆ ಒಪ್ಪಂದ ಮಾಡಿ ಕೊಳ್ಳುವ ಅವಕಾಶವನ್ನು ನೀಡಲಾಗಿದೆ. 2013 ರ ಋತುವಿನಲ್ಲಿ ಆಡಲು ಲಭ್ಯರಿಲ್ಲದ ಮತ್ತು ಬದಲಿ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಂಡವರ ಜೊತೆಯೂ ಒಪ್ಪಂದ ಮಾಡಿಕೊಳ್ಳಬಹುದು’ ಎಂದು ಪ್ರಕಟಣೆ ತಿಳಿಸಿದೆ. ಫ್ರಾಂಚೈಸ್‌ಗಳು ಮುಂಚಿತವಾಗಿಯೇ ತನ್ನಲ್ಲಿ ಉಳಿಸಿಕೊಂಡ ಆಟಗಾರರನ್ನು ಹೊರತುಪಡಿಸಿ ಇತರ ಎಲ್ಲ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ.ಒಂದು ತಂಡ ಗರಿಷ್ಠ 27 ಹಾಗೂ ಕನಿಷ್ಠ 16 ಆಟಗಾರರನ್ನು ಹೊಂದಿರಬೇಕು. 27 ಆಟಗಾರರಲ್ಲಿ ವಿದೇಶದ ಒಂಬತ್ತು ಮಂದಿಯನ್ನು ಕೊಂಡುಕೊಳ್ಳುವ ಅವಕಾಶವಿದೆ. ಆದರೆ ಅಂತಿಮ ಇಲೆವೆನ್‌ನಲ್ಲಿ ಈಗ ಇರುವ ನಿಯಮದಂತೆ ನಾಲ್ಕು ವಿದೇಶಿ ಆಟಗಾರರು ಮಾತ್ರ ಆಡಲು ಸಾಧ್ಯ. ಹರಾಜಿನಲ್ಲಿ ಆಟಗಾರರ ಖರೀದಿಗೆ ಒಂದು ಫ್ರಾಂಚೈಸ್ ಗರಿಷ್ಠ ₨ 60 ಕೋಟಿ ಮೊತ್ತ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಕನಿಷ್ಠ ₨ 36 ಕೋಟಿ ವ್ಯಯಿಸಬೇಕು.ಫ್ರಾಂಚೈಸ್‌ ತನ್ನಲ್ಲೇ ಉಳಿಸಿಕೊಳ್ಳುವ ಐವರು ಆಟಗಾರರಿಗೆ ಕ್ರಮವಾಗಿ ₨ 12.5, ₨ 9.5, ₨ 7.5, ₨5.5 ಹಾಗೂ ₨ 4 ಕೋಟಿ ಬೆಲೆ ನಿಗದಿಪಡಿಸಲಾಗಿದೆ. ಅಂದರೆ, ಫ್ರಾಂಚೈಸ್‌ವೊಂದು ತಂಡದಲ್ಲಿ ಐದು ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಒಟ್ಟು ₨ 39 ಕೋಟಿ ಮೊತ್ತ ಖರ್ಚು ಮಾಡುವುದು ಅನಿವಾರ್ಯ.

ಹಾಗಾದಲ್ಲಿ ಇಂತಹ ಫ್ರಾಂಚೈಸ್‌ಗಳು ಹರಾಜಿನಲ್ಲಿ ಇತರ 22 ಆಟಗಾರರನ್ನು ಕೊಳ್ಳಲು ₨ 21 ಕೋಟಿ  ಮಾತ್ರ ಖರ್ಚು ಮಾಡಬೇಕು. ಐಪಿಎಲ್‌ ಆಡಳಿತ ಮಂಡಳಿ ಈ ಬಾರಿ ಹರಾಜಿನಲ್ಲಿ ‘ರೈಟ್‌ ಟು ಮ್ಯಾಚ್‌’ ಎಂಬ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಹರಾಜಿನಲ್ಲಿ ಪಾಲ್ಗೊಳ್ಳ ಬಯಸುವ 19 ವರ್ಷ ವಯಸ್ಸಿನೊಳಗಿನ ಆಟಗಾರ ಪ್ರಥಮ ದರ್ಜೆ ಅಥವಾ ಲಿಸ್ಟ್‌ ‘ಎ’ ಪಂದ್ಯದಲ್ಲಿ ಆಡಿರಬೇಕು.

ಪ್ರತಿಕ್ರಿಯಿಸಿ (+)